FACT CHECK | ತಮ್ಮ 27 ನೇ ವಯಸ್ಸಿಗೆ ಹುತಾತ್ಮರಾದ ಲೆಫ್ಟಿನೆಂಟ್ ಕಿರಣ್ ಶೇಖಾವತ್! ಕಾರಣ ಏನು ಗೊತ್ತಾ?
ಕಳೆದ ತಿಂಗಳು ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ, ಭಾರತವು ‘ಆಪರೇಷನ್ ಸಿಂಧೂರ್’ ಅಡಿಯಲ್ಲಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿಕೊಂಡು ವಾಯುದಾಳಿ ನಡೆಸಿತು. ಪ್ರಸ್ತುತ ಎರಡೂ ದೇಶಗಳಲ್ಲಿ ಕದನ ವಿರಾಮ ಮುಂದುವರೆದಿದೆ. ಈ ಮಧ್ಯೆ, ಸಾಮಾಜಿಕ ಜಾಲತಾಣಗಳಲ್ಲಿ ಒಂದು ಪೋಸ್ಟ್ ವೈರಲ್ ಆಗುತ್ತಿದೆ. ಈ ಪೋಸ್ಟ್ನಲ್ಲಿ ಕಿರಣ್ ಶೇಖಾವತ್ ಎಂಬ ಮಹಿಳಾ ಅಧಿಕಾರಿ ಹುತಾತ್ಮರಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಮೇ 12 ರಂದು, 2025ಎಂದು ನ್ಯೂಸ್ ಮಿಷನ್ ಎಂಬ ಫೇಸ್ಬುಕ್ ಪೇಜ್ನಲ್ಲಿ, “ಹುತಾತ್ಮ ಮಹಿಳಾ ಅಧಿಕಾರಿ ಕಿರಣ್ ಶೇಖಾವತ್ ತಮ್ಮ 27 ನೇ ವಯಸ್ಸಿನಲ್ಲಿ ಹುತಾತ್ಮರಾಗಿದ್ದಾರೆ” ಎಂಬ ಹೇಳಿಕೆಯೊಂದಿಗೆ ಪೋಸ್ಟ್ಅನ್ನು ಹಂಚಿಕೊಂಡಿದ್ದಾರೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಪ್ರಸ್ತುತ ಉದ್ವಿಗ್ನತೆಯ ನಡುವೆ ಸಾಮಾಜಿಕ ಮಾಧ್ಯಮದಲ್ಲಿ ಕೆಲವು ಬಳಕೆದಾರರು ಇದನ್ನು ಹಂಚಿಕೊಳ್ಳುತ್ತಿದ್ದಾರೆ. ಹಾಗಿದ್ದರೆ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿರುವಂತೆ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ವೈರಲ್ ಪೋಟೊವನ್ನು ಗೂಗಲ್ ರಿವರ್ಸ್ ಇಮೇಜಸ್ನಲ್ಲಿ ಸರ್ಚ್ ಮಾಡಿದಾಗ, ಮೇ 1, 2020 ರಂದು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡ ಹಳೆಯ ಪೋಸ್ಟ್ವೊಂದು ಲಭ್ಯವಾಗಿದೆ. ಈ ಪೋಸ್ಟ್ನಲ್ಲಿ, ಮಾರ್ಚ್ 2015 ರಲ್ಲಿ, ಕಿರಣ್ ಶೇಖಾವತ್ ಅವರು ಕರ್ತವ್ಯದಲ್ಲಿದ್ದಾಗ ಗೋವಾದಲ್ಲಿ ಹುತಾತ್ಮರಾದರು ಎಂದು ಉಲ್ಲೇಖಿಸಲಾಗಿದೆ.

ಮತ್ತಷ್ಟು ಮಾಹಿತಿಗಾಗಿ ಕೀ ವರ್ಡ್ಗಳನ್ನು ಬಳಸಿಕೊಂಡು ಗೂಗಲ್ ಸರ್ಚ್ ಮಾಡಿದಾಗ, ಕಿರಣ್ ಶೇಖಾವತ್ಗೆ ಸಂಬಂಧಿಸಿದ ಹಲವು ಮಾಧ್ಯಮ ವರದಿಗಳು ಲಭ್ಯವಾಗಿವೆ. ಮಾರ್ಚ್ 29, 2015 ರ ದಿ ಎಕನಾಮಿಕ್ ಟೈಮ್ಸ್ ಸುದ್ದಿ ವರದಿಯ ಪ್ರಕಾರ, ಗೋವಾದ ಕರಾವಳಿಯಲ್ಲಿ ವಿಮಾನ ಹಾರಾಟ ತರಬೇತಿ ಸಮಯದಲ್ಲಿ ಲೆಫ್ಟಿನೆಂಟ್ ಕಿರಣ್ ಶೇಖಾವತ್ ಅವರ ವಿಮಾನ ಅಪಘಾತಕ್ಕೀಡಾಗಿದೆ ಎಂದು ಹೇಳಿದೆ. ಕೆಲವು ದಿನಗಳ ನಂತರ ಅವರ ಶವ ಪತ್ತೆಯಾಗಿತ್ತು.
Patrika.com ನಲ್ಲಿ ಪ್ರಕಟವಾದ ಹಳೆಯ ಸುದ್ದಿಯ ಪ್ರಕಾರ, “ಕಿರಣ್ 1 ಮೇ 1988 ರಂದು ರಾಜಸ್ಥಾನದ ಜುನ್ಜುನು ಜಿಲ್ಲೆಯ ಸೆಫ್ರಾಗುನ್ವರ್ ಗ್ರಾಮದಲ್ಲಿ ಜನಿಸಿದ್ದ ಕಿರಣ್, ಹರಿಯಾಣದ ಮೇವಾತ್ನ ಕುರ್ಥಲಾ ಗ್ರಾಮದ ಲೆಫ್ಟಿನೆಂಟ್ ವಿವೇಕ್ ಸಿಂಗ್ ಚೋಂಕರ್ ಅವರನ್ನು ವಿವಾಹವಾದರು. ಸೇನೆಯೊಂದಿಗೆ ಕುಟುಂಬದ ಸಂಪರ್ಕದಿಂದಾಗಿ, ಕಿರಣ್ ಬಾಲ್ಯದಿಂದಲೂ ಸೈನ್ಯಕ್ಕೆ ಸೇರುವ ಉತ್ಸಾಹವನ್ನು ಹೊಂದಿದ್ದರು. 2010 ರಲ್ಲಿ, ಅವರು ಅಂತಿಮವಾಗಿ ಇದನ್ನು ಸಾಧಿಸಿದರು. ಮದುವೆಯಾದ ಕೇವಲ ಎರಡು ವರ್ಷಗಳ ಅಂತರದಲ್ಲಿ ವಿಮಾನ ಅಪಘಾತದಲ್ಲಿ ಹುತಾತ್ಮರಾದರು.
ಭಾರತೀಯ ನೌಕಾಪಡೆಯ ವಕ್ತಾರ ಕಮಾಂಡರ್ ವಿವೇಕ್ ಮಧ್ವಾಲ್ ವಿಶ್ವಾಸ್ ನ್ಯೂಸ್ಗೆ ನೀಡಿದ ಸಂದರ್ಶನದಲ್ಲಿ, ಲೆಫ್ಟಿನೆಂಟ್ ಕಿರಣ್ ಶೇಖಾವತ್ ಅವರು ಮಾರ್ಚ್ 2015 ರಲ್ಲಿ ನಡೆದ ವಿಮಾನ ಅಪಘಾತದಲ್ಲಿ ಹುತಾತ್ಮರಾದರು ಎಂದು ಹೇಳಿದರು. ವೈರಲ್ ಪೋಸ್ಟ್ನಲ್ಲಿ ನೀಡಲಾದ ಮಾಹಿತಿಯು ಹಳೆಯದು.
ಲೆಫ್ಟಿನೆಂಟ್ ಕಿರಣ್ ಶೇಖಾವತ್ ಅವರ ತಂದೆ ವಿಜೇಂದ್ರ ಸಿಂಗ್ ಶೇಖಾವತ್ ಅವರೊಂದಿಗೆ ವಿಶ್ವಾಸ್ ನ್ಯೂಸ್ ಮಾತನಾಡಿದರು. ಕಿರಣ್ ಮಾರ್ಚ್ 2015 ರಲ್ಲಿ ನಿಧನರಾದರು. ತಮ್ಮ ಮಗಳ ಸಾವಿಗೆ ಸಂಬಂಧಿಸಿದ ಹಳೆಯ ಪೋಸ್ಟ್ಗಳನ್ನು ಕೆಲವರು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, 2015 ರಲ್ಲಿ, ಲೆಫ್ಟಿನೆಂಟ್ ಕಿರಣ್ ಶೇಖಾವತ್ ವಿಮಾನ ಅಪಘಾತದಲ್ಲಿ ನಿಧನರಾದ ಹಳೆಯ ಸುದ್ದಿಯನ್ನು, ಭಾರತ-ಪಾಕಿಸ್ತಾನ ಉದ್ವಿಗ್ನತೆಗೆ ಲಿಂಕ್ ಮಾಡಿ ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ದಾರಿ ತಪ್ಪಿಸುವಂತಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಜೈಲಿನಲ್ಲೆ ನಿಧನರಾಗಿದ್ದು ನಿಜವೇ?

