FACT CHECK | ಬಾಂಗ್ಲಾದೇಶದ ಘಟನೆಯನ್ನು ದೆಹಲಿಯದ್ದು ಎಂದು ತಪ್ಪಾಗಿ ಹಂಚಿಕೆ
ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಅದರಲ್ಲಿ ಬುಲ್ಡೋಜರ್ ರಿಕ್ಷಾವನ್ನು ದ್ವಂಸ ಮಾಡುತ್ತಿರುವುದು ಕಾಣಬಹುದಾಗಿದೆ. ಅದೇ ಸಮಯದಲ್ಲಿ, ವೀಡಿಯೊದಲ್ಲಿ, ರಿಕ್ಷಾ ಚಾಲಕ ಅಳುತ್ತಾ ತನ್ನ ರಿಕ್ಷಾವನ್ನು ಉಳಿಸಲು ಪ್ರಯತ್ನಿಸುತ್ತಿರುವುದು ಮತ್ತು ಅವನ ಸುತ್ತಮುತ್ತಲಿನ ಜನರಿಂದ ಸಹಾಯ ಕೇಳುತ್ತಿರುವುದು ಕಂಡುಬರುತ್ತದೆ. ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಈ ರಿಕ್ಷಾವನ್ನು ಕೆಡವಿದೆ ಎಂಬ ಹೇಳಿಕೆಯೊಂದಿಗೆ ಈ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ.

ಇದೇ ರೀತಿಯ ಪ್ರತಿಪಾದನೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ವಿಡಿಯೋವನ್ನು ಹಂಚಿಕೊಂಡಿದ್ದು, ಈ ಘಟನೆ ದೆಹಲಿಯಲ್ಲಿ ನಡೆದಿದೆಯೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲಿಸಲು ವೈರಲ್ ವಿಡಿಯೋವಿನ ವಿವಿಧ ಕೀ ಫ್ರೇಮ್‌ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ಯೂಟ್ಯೂಬ್ ಚಾನೆಲ್ ಒಂದರಲ್ಲಿ ವೈರಲ್ ವಿಡಿಯೋವಿನ ಮೂಲ ವಿಡಿಯೋವನ್ನು ಅಪ್‌ಲೋಡ್ ಮಾಡಿರುವುದು ಲಭ್ಯವಾಗಿದೆ. ಇದರಲ್ಲಿ ಬಾಂಗ್ಲಾದೇಶದ ಸುದ್ದಿ ವೆಬ್‌ಸೈಟ್ ಢಾಕಾ ಟ್ರಿಬ್ಯೂನ್‌ನ ಲೋಗೋ ಕಂಡು ಬಂದಿದೆ.
ಇದರ ಆಧಾರದ ಮೇಲೆ ಮತ್ತಷ್ಟು ಸರ್ಚ್ ಮಾಡಿದಾಗ, ಢಾಕಾ ಟ್ರಿಬ್ಯೂನ್‌ನ ಯೂಟ್ಯೂಬ್ ಚಾನೆಲ್ ಸಂಪೂರ್ಣ ಮಾಹಿತಿಯೊಂದಿಗೆ ಮೇ 14, 2025 ರಂದು ವಿಡಿಯೋ ಅಪ್‌ಲೋಡ್ ಮಾಡಿರುವುದು ಲಭ್ಯವಾಗಿದೆ. ಇದರ ಪ್ರಕಾರ , ‘ಢಾಕಾ ನಾರ್ತ್ ಸಿಟಿ ಕಾರ್ಪೊರೇಷನ್ (DNCC) ಮುಖ್ಯ ರಸ್ತೆಯಲ್ಲಿ ವಾಹನ ಚಲಾಯಿಸಿದ್ದಕ್ಕಾಗಿ ಆಟೋರಿಕ್ಷಾಗಳನ್ನು ಬುಲ್ಡೋಸರ್ ಬಳಸಿ ಧ್ವಂಸ ಮಾಡಿದೆ” ಎಂದು ಉಲ್ಲೇಖಿಸಿರುವುದು ಸ್ಪಷ್ಟವಾಗಿ ಕಂಡು ಬಂದಿದೆ.
ಇನ್ನು ಕೆಲವು ವರದಿಗಳಲ್ಲಿ ಮುಖ್ಯ ರಸ್ತೆಗೆ ಆಟೋರಿಕ್ಷಾಗಳ ಪ್ರವೇಶಕ್ಕೆ ನಿಷೇಧವಿದೆ, ಆದರೂ ಕೆಲ ಚಾಲಕರು ಮುಖ್ಯರಸ್ತೆಗೆ ಆಟೋಕಿಕ್ಷಾವನ್ನು ಆಗಾಗ ತರುತ್ತಿದ್ದರು, ಹೀಗಾಗಿ ಕ್ರಮಕ್ಕೆ ಮುಂದಾದ ಢಾಕಾ ನಾರ್ತ್ ಸಿಟಿ ಕಾರ್ಪೊರೇಷನ್ (DNCC) ಮುಖ್ಯ ರಸ್ತೆಯಲ್ಲಿ ವಾಹನ ಚಲಾಯಿಸಿದ್ದಕ್ಕಾಗಿ ಅವುಗಳನ್ನು ಧ್ವಂಸ ಮಾಡಿದ್ದಾರೆ, ಆದರೆ ಇದು ವಿವಾದ ಉಂಟಾಗುತ್ತಿದ್ದಂತೆ ಢಾಕಾ ನಾರ್ತ್ ಸಿಟಿ ಕಾರ್ಪೊರೇಷನ್ ಆಡಳಿತಾಧಿಕಾರಿ ಮೊಹಮ್ಮದ್ ಎಜಾಜ್ ಮೂವರು ಆಟೋರಿಕ್ಷಾ ಚಾಲಕರಿಗೆ ಪರಿಹಾರವನ್ನು ಘೋಷಿಸಿರುವ ಕುರಿತು ಮಾಹಿತಿ ಲಭ್ಯವಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ‘ಢಾಕಾ ನಾರ್ತ್ ಸಿಟಿ ಕಾರ್ಪೊರೇಷನ್ (DNCC) ಮುಖ್ಯ ರಸ್ತೆಯಲ್ಲಿ ವಾಹನ ಚಲಾಯಿಸಿದ್ದಕ್ಕಾಗಿ ಆಟೋರಿಕ್ಷಾಗಳನ್ನು ಬುಲ್ಡೋಸರ್ ಬಳಸಿ ಧ್ವಂಸ ಮಾಡಿದ ಘಟನೆಯನ್ನು ದೆಹಲಿಯದ್ದು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ದಾಳಿಗೊಳಗಾದ ಪಾಕ್‌ನ ರಾವಲ್ಪಿಂಡಿ ಕ್ರೀಡಾಂಗಣ ಎಂದು AI ಫೋಟೊ ಹಂಚಿಕೆ

