FACT CHECK | ಅಹಮದಾಬಾದ್ನ ಏರ್ ಇಂಡಿಯಾ ವಿಮಾನ ದುರಂತದ ವಿಡಿಯೋ ಎಂದು ಸಂಬಂಧವಿಲ್ಲದ ವಿಡಿಯೋ ಹಂಚಿಕೆ
ಅಹಮದಾಬಾದ್ ನಿಂದ ಲಂಡನ್ ಗ್ಯಾಟ್ವಿಕ್ ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ಜೂನ್ 12 2025ರಂದು ಪತನಗೊಂಡಿತ್ತು. ಈ ಅಪಘಾತ ಸಂಭವಿಸಿದ ಸ್ಥಳದ ಸಿಸಿಟಿವಿ ದೃಶ್ಯಾವಳಿಗಳು ಎಂದು ಹೇಳಿಕೊಳ್ಳುವ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿವೆ.

ಫೇಸ್ಬುಕ್ ಬಳಕೆದಾರರೊಬ್ಬರು ವಿಡಿಯೋವೊಂದನ್ನು ಹಂಚಿಕೊಂಡಿದ್ದು ‘‘ವಿಮಾನ ಡಿಕ್ಕಿ ಹೊಡೆಯುವ ಭೀಕರ ದೃಶ್ಯ ಹಾಗೂ ಸ್ಪೋಟದ ತೀವ್ರತೆ ಎಷ್ಟಿತ್ತು ಎಂಬುದನ್ನು ನೋಡಿ’’ ಎಂದು ಬರೆದುಕೊಂಡು ಸಿಸಿಟಿವಿ ದೃಶ್ಯಾವಳಿಗಳನ್ನು ಪೋಸ್ಟ್ ಮಾಡಿದ್ದಾರೆ.
ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ಇಲ್ಲಿ, ಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ? ನಿಜವಾಗಿಯೂ ಈ ದೃಶ್ಯಗಳು ಅಹಮದಾಬಾದ್ ವಿಮಾನ ದುರಂತಕ್ಕ ಸಂಬಂಧಿಸಿದೆಯೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋವನ್ನು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, ‘ರಘೇಬ್ ಹರ್ಬ್ ವಿಶ್ವವಿದ್ಯಾಲಯ ಆಸ್ಪತ್ರೆ’ ಎಂದು ಬರೆಯಲಾದ ಪಠ್ಯವನ್ನು ಸಂಪಾದಿಸಿರುವುದು ಕಂಡುಬಂದಿದೆ. ಇದೇ ಆಧಾರದಲ್ಲಿ ಕೀವರ್ಡ್ ಸರ್ಚ್ ಮಾಡಿದಾಗ, ಆಸ್ಪತ್ರೆಯ ಅಧಿಕೃತ ಫೇಸ್ಬುಕ್ ಪೇಜ್ ಲಭ್ಯವಾಗಿದೆ. ಇದು ಸ್ಫೋಟದ ಸಿಸಿಟಿವಿ ದೃಶ್ಯಗಳ ವಿಸ್ತೃತ ದೃಶ್ಯವನ್ನು ಒಳಗೊಂಡಿದೆ. ಜೂನ್ 12 ರ ವಿಮಾನ ಅಪಘಾತಕ್ಕೂ ಹಲವು ತಿಂಗಳುಗಳ ಮೊದಲು ಅಂದರೆ ಫೆಬ್ರವರಿ 5 ರಂದು ಈ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ.
ನವೆಂಬರ್ 5, 2024 ರಂದು ಪ್ರಕಟವಾದ ದಿಸ್ ಈಸ್ ಬೈರುತ್ ವರದಿಯು ದಕ್ಷಿಣ ಲೆಬನಾನ್ನ ಟೌಲ್ನಲ್ಲಿರುವ ಶೇಖ್ ರಘೇಬ್ ಹರ್ಬ್ ವಿಶ್ವವಿದ್ಯಾಲಯ ಆಸ್ಪತ್ರೆಯ ಬಳಿ ಇಸ್ರೇಲಿ ಮಿಲಿಟರಿ ದಾಳಿಯಿಂದಾಗಿ ವ್ಯಾಪಕ ಹಾನಿಯನ್ನುಂಟುಮಾಡಿವೆ ಎಂದು ದೃಢಪಡಿಸುತ್ತದೆ. ಇದರ ಜೊತೆಗೆ, ಅಕ್ಟೋಬರ್ 21, 2024 ರ ಎಕ್ಸ್ ಪೋಸ್ಟ್ನಲ್ಲಿ ಟೌಲ್ನಲ್ಲಿರುವ ಆಸ್ಪತ್ರೆಯ ಪಾರ್ಕಿಂಗ್ ಪ್ರದೇಶದ ಬಳಿ ನಡೆದ ದಾಳಿಯಲ್ಲಿ ಬೆಂಕಿ ಮತ್ತು ವಿನಾಶ ಸಂಭವಿಸಿದೆ ಎಂದು ಉಲ್ಲೇಖಿಸಲಾಗಿದೆ.
ಆಸ್ಪತ್ರೆಯ ಒಳಾಂಗಣ ಮತ್ತು ಪಾರ್ಕಿಂಗ್ ಸ್ಥಳದಲ್ಲಿ ಸ್ಫೋಟವನ್ನು ತೋರಿಸುವ ವೈರಲ್ ವಿಡಿಯೋ ಅಹಮದಾಬಾದ್ನದ್ದಲ್ಲ. ಇದನ್ನು ಏರ್ ಇಂಡಿಯಾ ಅಪಘಾತಕ್ಕೆ ತಿಂಗಳುಗಳ ಮೊದಲು ಲೆಬನಾನ್ನಲ್ಲಿ ಚಿತ್ರೀಕರಿಸಿರಬಹುದು. ಹಾಗಾಗಿ ವೈರಲ್ ಆಗಿರುವ ಈ ವಿಡಿಯೋ ಜೂನ್ 12 ರ ಅಹಮದಾಬಾದ್ ಏರ್ ಇಂಡಿಯಾ ಅಪಘಾತಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟವಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಯುದ್ದದ ಹಳೆಯ ವಿಡಿಯೋವನ್ನು ಅಹಮದಾಬಾದ್ನ ವಿಮಾನ ದುರಂತದ ವಿಡಿಯೋ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | AC ಯಲ್ಲಿನ ದೋಷದಿಂದಾಗಿ ಅಹಮದಾಬಾದ್ ವಿಮಾನ ದುರಂತ ಸಂಭವಿಸಿತ್ತೇ?

