ಫ್ಯಾಕ್ಟ್‌ಚೆಕ್ : ಮಾವಿನ ಹಣ್ಣು ತಿಂದು ತಕ್ಷಣವೇ ಕೂಲ್ ಡ್ರಿಂಕ್ಸ್ ಕುಡಿದರೆ ಸಾವು ಸಂಭವಿಸುವುದೇ?
ಬೇಸಿಗೆ ಬಂತೆಂದರೆ ಎಲ್ಲೆಲ್ಲೂ ಮಾವಿನ ಹಣ್ಣಿನದ್ದೆ ಸಾಮ್ರಾಜ್ಯ. ಮಾವು ಎಂದರೆ ಭಾರತೀಯರಿಗಂತೂ ಇಷ್ಟವಾದ ಹಣ್ಣು. ಇದು ಹಣ್ಣುಗಳ ರಾಜ ಎಂದೇ ಪ್ರಸಿದ್ಧಿ ಪಡೆದಿದೆ. ತಿನ್ನಲು ರುಚಿಕರವಷ್ಟೇ ಅಲ್ಲದೇ ಅದರ ಸುವಾಸನೆ ಮೂಗಿಗೆ ಗಂ ಎಂದು ಬಡಿಯುತ್ತದೆ. ಸಣ್ಣ ಮಕ್ಕಳಿಂದ ಹಿಡಿದು ವಯಸ್ಸಾದವರಿಗೂ ಮಾವಿನ ಹಣ್ಣು ಎಂದರೆ ಅಚ್ಚು ಮೆಚ್ಚು.ಅಂತಹ ಮಾವಿನ ಹಣ್ಣಿನ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಮಾವು ತಿಂದ ತಕ್ಷಣ ತಂಪು ಪಾನೀಯ ಸೇವಿಸಿದರೆ ಸಾವು ಸಂಭವಿಸುತ್ತದೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ವ್ಯಾಪಕವಾಗಿ ಹಂಚಕೊಳ್ಳಲಾಗುತ್ತಿದೆ. ಪ್ರವಾಸಕ್ಕೆಂದು ಚಂಡೀಗಢಕ್ಕೆ ತೆರಳುತ್ತಿದ್ದ ಪ್ರವಾಸಿಗರು ಮಾವಿನ ಹಣ್ಣುಗಳನ್ನು ತಿಂದ ತಕ್ಷಣ ಕೂಲ್ ಡ್ರಿಂಕ್ ಸೇವಿಸಿ ಅಸ್ವಸ್ಥರಾಗಿದ್ದಾರೆ. ನಂತರ ಕೆಲವೇ ನಿಮಿಷಗಳಲ್ಲಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುವ ಪೋಸ್ಟ್‌ಅನ್ನು ಫೇಸ್‌ಬುಕ್ ನಲ್ಲಿ ಹಂಚಿಕೊಂಡಿದ್ದಾರೆ.

ಮಾವು ಸಾಮಾನ್ಯವಾಗಿ ಮ್ಯಾಲಿಕ್ ಮತ್ತು ಸಿಟ್ರಿಕ್ ನಂತಹ ನೈಸರ್ಗಿಕ ಆಮ್ಲಗಳನ್ನು ಹೊಂದಿರುತ್ತದೆ (ಆಮ್ಲಗಳು). ಇವು ಮಾವಿನ ಹಣ್ಣಿನಲ್ಲಿ ಆಮ್ಲೀಯತೆಯನ್ನು ಉಂಟುಮಾಡುತ್ತವೆ. ಆದರೂ ನಿಂಬೆಯಲ್ಲಿ ಮಾವಿನಕಾಯಿಗಿಂತ ಹೆಚ್ಚು ಸಿಟ್ರಿಕ್ ಆಮ್ಲವಿರುತ್ತದೆ. ಕಾರ್ಬೊನೇಟೆಡ್ ಪಾನೀಯಗಳು ಕಾರ್ಬೊನಿಕ್ ಆಮ್ಲವನ್ನು ಹೊಂದಿರುತ್ತವೆ, ಬಾಟಲಿಯ ಮುಚ್ಚಳವನ್ನು ತೆರೆದಾಗ ಹೈಡ್ರೋಜನ್ ಮತ್ತು ಕಾರ್ಬೋನೇಟ್ ಆಗಿ ವಿಭಜನೆಯಾಗುತ್ತದೆ.
ಆದರೆ ಮಾವಿನಹಣ್ಣು ಮತ್ತು ತಂಪು ಪಾನೀಯಗಳಲ್ಲಿ ಕಂಡುಬರುವ ಸಿಟ್ರಿಕ್ ಆಮ್ಲ ಮತ್ತು ಕಾರ್ಬೊನಿಕ್ ಆಮ್ಲವು ತುಂಬಾ ದುರ್ಬಲ ಆಮ್ಲಗಳಾಗಿವೆ. ಅಲ್ಲದೆ ಎರಡು ದುರ್ಬಲ ಆಮ್ಲಗಳನ್ನು ಬೆರೆಸಿ ದ್ರಾವಣವನ್ನು ತಯಾರಿಸಬಹುದು, ಇದು ಯಾವುದೇ ಅಪಾಯವನ್ನು ಉಂಟುಮಾಡುವುದಿಲ್ಲ. ಹಾಗಾಗಿ ಮಾವಿನಹಣ್ಣು ಮತ್ತು ತಂಪು ಪಾನೀಯಗಳಲ್ಲಿ ಇರುವ ಸಿಟ್ರಿಕ್ ಆಸಿಡ್ ಮತ್ತು ಕಾರ್ಬೊನಿಕ್ ಆಸಿಡ್ ಒಟ್ಟಿಗೆ ತೆಗೆದುಕೊಂಡರೂ ಅಪಾಯಕಾರಿಯಲ್ಲ.
ಮಾವಿನ ಹಣ್ಣು ಮತ್ತು ತಂಪು ಪಾನೀಯ ಸೇವಿಸಿದರೆ ತೊಂದರೆ ಯಾರಿಗೆ?
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿರುವ ಪೋಸ್ಟ್‌ನಲ್ಲಿ ಪ್ರತಿಪಾದಿಸಿದ ಬಗ್ಗೆ ವೈದ್ಯರನ್ನು ಸಂಪರ್ಕಿಸಿ ಮಾಹಿತಿ ಪಡೆಯಾಲಾಗಿದ್ದು, ತಜ್ಞರು ಹೇಳುವಂತೆ ಮೊದಲಿಗೆ ಮಾವಿನ ಹಣ್ಣು ತಿಂದ ನಂತರ ಕೂಲ್ ಡ್ರಿಂಕ್ಸ್ ಕುಡಿದು ಸಾವನ್ನಪ್ಪಿದ ಪ್ರಕರಣಗಳು ಎಲ್ಲಿಯೂ ವರದಿಯಾಗಿಲ್ಲ. ಹಾಗಾಗಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾದ ಮಾಹಿತಿ ತಪ್ಪಾಗಿದೆ.
ಇನ್ನು ಎರಡನೆ ಅಂಶ ಒಂದು ವೇಳೆ ಮಧುಮೇಹ ರೋಗಿಗಳು ಮಾವಿನ ಹಣ್ಣು ಮತ್ತು ತಂಪು ಪಾನೀಯ ಎರಡನ್ನು ಒಂದರ ಹಿಂದೆ ಒಂದು ಸೇವಿಸುವುದರಿಂದ, ಮಾವಿನಹಣ್ಣಿನಲ್ಲಿ ಸಕ್ಕರೆ ಅಂಶ ಹೆಚ್ಚಿದ್ದು, ಜೊತೆಗೆ ತಂಪು ಪಾನೀಯಗಳಲ್ಲಿಯೂ ಸಕ್ಕರೆ ಅಂಶ ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ಇದು ಮಧುಮೇಹ ರೋಗಿಗಳಿಗೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಲು ಕಾರಣವಾಗುತ್ತದೆ. ಇದರಿಂದ ಮಧುಮೇಹಿಯೂ ಹೆಚ್ಚು ತೊಂದರೆಗೊಳಗಾಗುವ ಸಾಧ್ಯತೆ ಇರುತ್ತದೆ.
ಒಟ್ಟಾರೆಯಾಗಿ ಹೇಳುವುದಾದರೆ, ಮಾವಿನಹಣ್ಣು ತಿಂದ ತಕ್ಷಣ ತಂಪು ಪಾನೀಯವನ್ನು ಸೇವಿಸಿದರೆ ಸಾವು ಸಂಭವಿಸುತ್ತದೆ ಎಂಬುದುಕ್ಕೆ ಯಾವುದೇ ಆಧಾರಗಳಿಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಇಂದಿರಾ ಗಾಂಧಿ ಪತಿ ಫಿರೋಜ್ ಗಾಂಧಿ ಮುಸ್ಲಿಮರೇ?

