FACT CHECK | ಬಾಂಗ್ಲಾದೇಶದ ಧ್ವಜ ಮಾರುತ್ತಿದ್ದ ವ್ಯಕ್ತಿ ಮೇಲೆ ಭಾರತೀಯ ಸೈನಿಕನಿಂದ ಹಲ್ಲೆ ನಡೆದಿದೆಯೇ?
ಸಮವಸ್ತ್ರ ಧರಿಸಿದ ವ್ಯಕ್ತಿಯೊಬ್ಬ ಧ್ವಜ ಮಾರುತ್ತಿದ್ದ ಬೀದಿ ವ್ಯಾಪಾರಿಯೊಬ್ಬರ ಮೇಲೆ ಹಲ್ಲೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿದೆ. ಭಾರತೀಯ ಸೇನಾ ಅಧಿಕಾರಿಯೊಬ್ಬರು ಬಾಂಗ್ಲಾದೇಶದ ಧ್ವಜ ಮಾರುತ್ತಿದ್ದ ವ್ಯಕ್ತಿಯ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ಈ ವಿಡಿಯೋ ತೋರಿಸುತ್ತದೆ ಎಂದು ಹಲವು ಬಳಕೆದಾರರು ಹೇಳಿಕೊಳ್ಳುತ್ತಿದ್ದಾರೆ.

ಫೇಸ್‌ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಬಿಜೆಪಿ ಸಂಘದ ಅಚ್ಚುಮೆಚ್ಚಿನ ಜಿಹಾದಿಗಳು, ಬಾಂಗ್ಲಾದೇಶದ ಬಾವುಟ ಮಾರುತ್ತಿದ್ದ ಬಿಜೆಪಿ ಸಂಘದ ಮುಸ್ಲಿಂಗೆ ಒದೆ ಕೊಟ್ಟ ಭಾರತೀಯ ಸೇನೆಯ ಯೋಧ’’ ಎಂದು ಬರೆದುಕೊಂಡಿದ್ದಾರೆ. (Archive)
ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವಿಡಿಯೋವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ವಿಡಿಯೋದ ಕೀ ಫ್ರೇಮ್‌ಗಳನ್ನು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಜೂನ್ 11 ರಂದು ನ್ಯೂಸ್ 1 ಟಿವಿ ಪ್ರಕಟಿಸಿದ ‘ಸೇನೆಯು ಧ್ವಜ ಮಾರಾಟಗಾರನನ್ನು ಕಂಡುಹಿಡಿದು 1 ಲಕ್ಷ ಟಾಕಾ ದೇಣಿಗೆ ನೀಡಿದೆ!’ ಎಂಬ ಶೀರ್ಷಿಕೆಯ ಯೂಟ್ಯೂಬ್ ವಿಡಿಯೋ ಲಭ್ಯವಾಗಿದೆ.
ಜೂನ್ 12 ರಂದು ಢಾಕಾ ಪೋಸ್ಟ್ ಕೂಡ ಇದೇ ರೀತಿಯ ವೀಡಿಯೊವನ್ನು ಅಪ್‌ಲೋಡ್ ಮಾಡಿತ್ತು. ‘ಲಾಠಿ ಚಾರ್ಜ್ ಮಾಡಿದ ಧ್ವಜ ಮಾರಾಟಗಾರನಿಗೆ ಸೇನೆ 10 ಲಕ್ಷ ಟಾಕಾ ಉಡುಗೊರೆ ನೀಡಿದೆ’ ಎಂಬ ಶೀರ್ಷಿಕೆಯ ವಿಡಿಯೋ ಇದಾಗಿದೆ.
ಘಟನೆಯನ್ನು ಪರಿಶೀಲಿಸಲು, ನಾವು ಮತ್ತಷ್ಟು ಕೀವರ್ಡ್ ಸರ್ಚ್ ಮಾಡಿದಾಗ, ಜೂನ್ 12, 2025 ರ ದಿನಾಂಕದ ಅಜ್ಕೆರ್ ಪತ್ರಿಕಾದ ಸುದ್ದಿ ವರದಿ ಲಭ್ಯವಾಗಿದೆ. ಇದರಲ್ಲಿ ಈ ಘಟನೆಯ ಸಂಪೂರ್ಣ ವರದಿ ಕಂಡುಕೊಂಡಿದ್ದೇವೆ.

ವರದಿಯ ಪ್ರಕಾರ, ಢಾಕಾದ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶ vs ಸಿಂಗಾಪುರ ಫುಟ್ಬಾಲ್ ಪಂದ್ಯದ ವೇಳೆ ಈ ಘಟನೆ ಸಂಭವಿಸಿದೆ. ಕ್ರೀಡಾಂಗಣದ ಹೊರಗೆ ಜನಜಂಗಳಿ ತುಂಬಿದ್ದ ಕಾರಣ, ಬಾಂಗ್ಲಾದೇಶ ಸೇನಾ ಸಿಬ್ಬಂದಿ ಲಾಠಿ ಪ್ರಹಾರ ನಡೆಸಿ ಗುಂಪನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದರು. ಈ ಸಂದರ್ಭ ಧ್ವಜ ಮಾರುತ್ತಿದ್ದ ವ್ಯಕ್ತಿಯ ಮೇಲೂ ಹಲ್ಲೆ ನಡೆಸಲಾಗಿದೆ.
ಬಳಿಕ ಗುಲಿಸ್ತಾನ್ ಸೇನಾ ಶಿಬಿರದ ಲೆಫ್ಟಿನೆಂಟ್ ಕರ್ನಲ್ ಅಫ್ಜಲುರ್ ರೆಹಮಾನ್ ಚೌಧರಿ ಅವರು, ಈ ಘಟನೆ ಉದ್ದೇಶಪೂರ್ವಕವಲ್ಲ ಎಂದು ದೃಢಪಡಿಸಿದರು. ಸೇನೆಯು ಧ್ವಜ ಮಾರಾಟಗಾರನಿಗೆ ಕ್ಷಮೆಯಾಚಿಸಿತು ಮತ್ತು ಅವರಿಗೆ 1 ಲಕ್ಷ ಟಾಕ್ ಪರಿಹಾರವನ್ನು ನೀಡಿತು.
ವೈರಲ್ ಆಗಿರುವ ಈ ವಿಡಿಯೋವನ್ನು ಭಾರತೀಯ ಸೇನೆಗೆ ತಪ್ಪಾಗಿ ಲಿಂಕ್ ಮಾಡಲಾಗುತ್ತಿದೆ. ವಾಸ್ತವದಲ್ಲಿ, ಇದು ಬಾಂಗ್ಲಾದೇಶದ ಢಾಕಾದಲ್ಲಿ ಜನಸಂದಣಿಯನ್ನು ನಿಯಂತ್ರಿಸುವ ಸಮಯದಲ್ಲಿ ಸ್ಥಳೀಯ ಸೇನಾ ಸಿಬ್ಬಂದಿ ಧ್ವಜ ಮಾರಾಟಗಾರನಿಗೆ ಹೊಡೆದ ಘಟನೆಯನ್ನು ತೋರಿಸಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಬಾಂಗ್ಲಾದೇಶದ ಧ್ವಜವನ್ನು ಮಾರಾಟ ಮಾಡಿದ್ದಕ್ಕಾಗಿ ಭಾರತೀಯ ಸೇನಾ ಅಧಿಕಾರಿಯೊಬ್ಬ ಧ್ವಜ ಮಾರಾಟಗಾರನನ್ನು ಹೊಡೆದಿದ್ದಾನೆ ಎಂಬ ಹೇಳಿಕೆ ಸುಳ್ಳು. ಈ ಘಟನೆಗೂ ಭಾರತಕ್ಕೂ ಸಂಬಂಧವಿಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ವಿಶ್ವಸಂಸ್ಥೆಯಲ್ಲಿ ಪ್ಯಾಲೆಸ್ಟೈನ್ ಸದಾ ಪಾಕಿಸ್ತಾನದ ಪರವಾಗಿದೆ ಎಂಬುದು ಸುಳ್ಳು

