FACT CHECK | ವಿಮಾನ ದುರಂತದಲ್ಲಿ ಸ್ವಲ್ಪವೂ ಹಾನಿಯಾಗದ ಸ್ಥಿತಿಯಲ್ಲಿ ಕುರಾನ್ ಪತ್ತೆಯಾಗಿದೆಯೇ?
ಜೂನ್ 12 ರ ಮಧ್ಯಾಹ್ನ ಅಹಮದಾಬಾದ್ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ಅಪಘಾತದ ನಂತರ, ಸಾಮಾಜಿಕ ಮಾಧ್ಯಮದಲ್ಲಿ ಒಂದು ವೀಡಿಯೊ ಸಾಕಷ್ಟು ವೈರಲ್ ಆಗುತ್ತಿದೆ, ಅದರಲ್ಲಿ ಈ ವಿಮಾನ ಅಪಘಾತದಲ್ಲಿ ಇಡೀ ವಿಮಾನ ಸುಟ್ಟುಹೋಗಿದ್ದರೂ, ವಿಮಾನದಲ್ಲಿದ್ದ ಕುರಾನ್ ಗೆ ಏನು ಹಾನಿಯಾಗಿಲ್ಲ ಎಂದು ಹೇಳಲಾಗುತ್ತಿದೆ.

ಫೇಸ್ಬುಕ್ ಬಳಕೆದಾರರು ವೀಡಿಯೊವನ್ನು ಹಂಚಿಕೊಂಡು, ‘‘ಎಲ್ಲ ಸುಟ್ಟು ಕರಕಲ್ ವಾದರು ಪವಿತ್ರ ಕುರಾನ್ ಮಾತ್ರ ಹೆಂಗೆ ಇದೆ ನೋಡಿ..!’’ ಎಂದು ಬರೆದುಕೊಂಡಿದ್ದಾರೆ.ವೈರಲ್ ವೀಡಿಯೊದಲ್ಲಿ ಓರ್ವ ವ್ಯಕ್ತಿ ಅವಶೇಷಗಳ ಮಧ್ಯೆ ಕುರಾನ್ ಅನ್ನು ತೆರೆದು ತೋರಿಸುವುದನ್ನು ಕಾಣಬಹುದು.
ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವಿಡಿಯೋವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಸಂಬಂಧಿತ ಕೀವರ್ಡ್ಗಳನ್ನು ಬಳಸಿಕೊಂಡು ಗೂಗಲ್ ಸರ್ಚ್ ಮಾಡಿದಾಗ, 2025 ರ ಜೂನ್ 12 ರಂದು ಅಹಮದಾಬಾದ್ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ಅಪಘಾತದ ಅವಶೇಷಗಳಲ್ಲಿ ಕುರಾನ್ ಕಂಡುಬಂದಿದೆ ಎಂದು ದೃಢೀಕರಿಸುವ ಯಾವುದೇ ವಿಶ್ವಾಸಾರ್ಹ ವರದಿಗಳು ಕಂಡುಬಂದಿಲ್ಲ. ಆದಾಗ್ಯೂ, ಘಟನೆಯ ನಂತರ ಭಗ್ನಾವಶೇಷಗಳಲ್ಲಿ ಭಗವದ್ಗೀತೆ ಸುರಕ್ಷಿತವಾಗಿ ಸಿಕ್ಕಿದೆ ಎಂಬ ಹಲವಾರು ವರದಿಗಳು ಲಭ್ಯವಾಗಿವೆ. ಅದನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.
ವಿಡಿಯೋವನ್ನು ಮತ್ತಷ್ಟು ತನಿಖೆಗೆ ಒಳಪಡಿಸಿದಾಗ, ಇಡೀ ವೀಡಿಯೊವನ್ನು ನೋಡಿದ ನಂತರ ಇದು ವಿಮಾನದ ವಿಡಿಯೋ ಅಲ್ಲ ಬದಲಾಗಿ ಒಂದು ಕೋಣೆಯಲ್ಲಿ ಚಿತ್ರೀಕರಿಸಿದ ವಿಡಿಯೋ ಎಂದು ಸ್ಪಷ್ಟವಾಗಿ ಗೋಚರಿಸುತ್ತದೆ.

ಹೀಗಾಗಿ ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ ತೆಗೆದುಕೊಂಡು ಗೂಗಲ್ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ಮಾರ್ಚ್ 2025 ರ ಅದೇ ದೃಶ್ಯಗಳನ್ನು ಒಳಗೊಂಡ ಹಲವಾರು ಸಾಮಾಜಿಕ ಮಾಧ್ಯಮ ಪೋಸ್ಟ್ಗಳು ಲಭ್ಯವಾಗಿವೆ, ಇದು ಜೂನ್ 12, 2025 ರ ಏರ್ ಇಂಡಿಯಾ ಅಪಘಾತಕ್ಕೂ ಮೊದಲು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗಿರುವುದು ಕಂಡುಬಂದಿದೆ. ಪೋಸ್ಟ್ಗಳಲ್ಲಿ ಒಂದು ವೀಡಿಯೊ ಲಿಬಿಯಾದಿಂದ ಬಂದಿದೆ ಎಂದು ಹೇಳಲಾಗಿದೆ.
ವೀಡಿಯೊವನ್ನು ಮೂಲತಃ ಯಾವಾಗ ಮತ್ತು ಎಲ್ಲಿ ಚಿತ್ರೀಕರಿಸಲಾಗಿದೆ ಎಂಬುದನ್ನು ನಾವು ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಾಗದಿದ್ದರೂ, ಲಭ್ಯವಿರುವ ಪುರಾವೆಗಳ ಪ್ರಕಾರ ಇದು ಜೂನ್ 12, 2025 ರಂದು ಅಹಮದಾಬಾದ್ನಲ್ಲಿ ಏರ್ ಇಂಡಿಯಾ ವಿಮಾನ ಅಪಘಾತಕ್ಕೂ ಮೊದಲು ಆನ್ಲೈನ್ನಲ್ಲಿ ಪೋಸ್ಟ್ ಮಾಡಲಾಗಿತ್ತು ಎಂದು ದೃಢಪಡಿಸುತ್ತದೆ.
ಒಟ್ಟಾರೆಯಾಗಿ ಹೇಳುವುದಾದರೆ, ಜೂನ್ 2025 ರ ಅಹಮದಾಬಾದ್ ವಿಮಾನ ಅಪಘಾತದ ಅವಶೇಷಗಳಲ್ಲಿ ಕುರಾನ್ ಗೆ ಏನು ಹಾನಿಯಾಗದ ರೀತಿಯಲ್ಲಿ ಪತ್ತೆಯಾಗಿದೆ ಎಂದು ಸಂಬಂಧವಿಲ್ಲದ ಹಳೆಯ ವಿಡಿಯೋವನ್ನು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ವಿಜಯ್ ರೂಪಾನಿಯವರ ಮೃತದೇಹದ ಎಂದು ಈಜಿಪ್ಟಿನ ಮಮ್ಮಿಯ ಫೋಟೊ ಹಂಚಿಕೆ

