FACT CHECK | ಪೂರಿ ಜಗನ್ನಾಥ ರಥದ ಕೆಳಗೆ ಮುಸ್ಲಿಂ ಮಹಿಳೆಯೊಬ್ಬರು ನಮಾಜ್ ಮಾಡಿದ್ದಾರೆ ಎಂದು ಹಂಚಿಕೊಳ್ಳಲಾದ ವಿಡಿಯೋದ ಅಸಲೀಯತ್ತೇನು?

ಒಡಿಶಾದ ಪುರಿಯಲ್ಲಿ ಜಗನ್ನಾಥ, ಬಲಭದ್ರ ಮತ್ತು ದೇವಿ ಸುಭದ್ರಾ ಅವರ ರಥಯಾತ್ರೆಯ ಸಂದರ್ಭದಲ್ಲಿ ಜನಸಂದಣಿ ಹೆಚ್ಚಾಗಿದ್ದರಿಂದ ಕಾಲ್ತುಳಿತ ಸಂಭವಿಸಿ 600 ಕ್ಕೂ ಹೆಚ್ಚು ಭಕ್ತರು ಅಸ್ವಸ್ಥಗೊಂಡ ವರದಿಯಾಗಿತ್ತು. ರಥಯಾತ್ರೆಯ ‘ಪಹಾರಿ’ ಸಮಾರಂಭದ ಸಂದರ್ಭದಲ್ಲಿ ಗಜಪತಿ ದಿವ್ಯ ಸಂಘದೇವ್ ಅವರ ಅರಮನೆಯ ಬಳಿ ಜನಸಮೂಹ ಜಮಾಯಿಸಿತ್ತು. ಜನಸಂದಣಿಯನ್ನು ನಿಯಂತ್ರಿಸಲು ಆಡಳಿತಕ್ಕೆ ತೊಂದರೆಯಾಗುತ್ತಿತ್ತು. ಈ ಸಮಯದಲ್ಲಿ ಭಕ್ತರಲ್ಲಿ ಗೊಂದಲ ಉಂಟಾಗಿ ಇದ್ದಕ್ಕಿದ್ದಂತೆ ನೂಕುನುಗ್ಗಲಿಗೆ ಕಾರಣವಾಗಿ ಕಾಲ್ತುಳಿತ ಸಂಭವಿಸಿತು. ಇದರಿಂದಾಗಿ, ಕೆಲವು ಭಕ್ತರು ಪ್ರಜ್ಞೆ ತಪ್ಪಿದರು ಎಂದು ಹೇಳಲಾಗಿದೆ.

ಈ ಮಧ್ಯೆ ಪೂರಿ ಜಗನ್ನಾಥ ರಥದ ಕೆಳಗೆ ಮುಸ್ಲಿಂ ಮಹಿಳೆಯೊಬ್ಬರು ನಮಾಜ್ ಮಾಡುತ್ತಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗತ್ತಿದೆ.ಸುಳ್ಳು ಸುದ್ದಿ ಖ್ಯಾತಿಯ ಪೋಸ್ಟ್‌ ಕಾರ್ಡ್‌ ಕನ್ನಡ ವಿಡಿಯೋವೊಂದನ್ನು ಹಂಚಿಕೊಂಡು, “ಶಾಕಿಂಗ್: ಪೂರಿ ಜಗನ್ನಾಥ ರಥದ ಅಡಿಯಲ್ಲಿ ನಮಾಜ್ ಮಾಡಿದ ಜಿಹಾದಿ ಮಹಿಳೆ ಹಿಂದೂಗಳ ಮೌನ & ತಾಳ್ಮೆ ಖಂಡಿತಾ ಒಳ್ಳೆಯದಲ್ಲ, ಅದು ನಮ್ಮ ಅವನತಿಗೆ ಕಾರಣವಾಗಲಿದೆ” ಎಂಬ ಬರಹದೊಂದಿಗೆ ಪೋಸ್ಟ್‌ ಮಾಡಲಾಗಿದೆ.

ರಥಯಾತ್ರೆಯ ಸಮಯದಲ್ಲಿ ದೇವದೂಷಣೆ! ಪುರಿಯ ಜಗನ್ನಾಥ ರಥದ ಕೆಳಗೆ ನಮಾಜ್ ಮಾಡುತ್ತಿದ್ದ ಮಹಿಳೆ ಸಿಕ್ಕಿಬಿದ್ದಿದ್ದಾಳೆ. ಹಿಂದೂಗಳ ತಾಳ್ಮೆಯನ್ನು ಪರೀಕ್ಷಿಸುವುದು ಸಾಕು. ಅವಳನ್ನು ಇನ್ನೂ ಏಕೆ ಬಂಧಿಸಲಾಗಿಲ್ಲ @odisha_police ? ಎಂದು ಬಾಲಾ ಎಂಬ ಎಕ್ಸ್‌ ಬಳಕೆದಾರರು ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

ಇದೇ ರೀತಿಯಹೇಳಿಕೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್‌ಅನ್ನು ಹಂಚಿಕೊಂಡಿದ್ದು, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯಂತೆ ಮುಸ್ಲಿಂ ಮಹಿಳೆಯೊಬ್ಬರು ಪೂರಿ ಜಗನ್ನಾಥ ರಥದ ಕೆಳಗೆ ನಮಾಜ್ ಮಾಡಿದ ಘಟನೆ ನಡೆದಿರುವುದು ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಮುಸ್ಲಿಂ ಮಹಿಳೆಯೊಬ್ಬರು ಪೂರಿ ಜಗನ್ನಾಥ ರಥದ ಕೆಳಗೆ ನಮಾಜ್ ಮಾಡಿದ ಘಟನೆ ನಡೆದಿರುವುದು ನಿಜವೇ ಎಂದು ಪರಿಶೀಲಿಸಲು ಇದಕ್ಕೆ ಸಂಬಂಧಿಸಿದ ಯಾವುದಾದರೂ ಸುದ್ದಿ ವರದಿಗಳು ಪ್ರಕಟವಾಗಿವೆಯೇ ಎಂದು ತಿಳಿಯಲು ಕೀ ವರ್ಡ್‌ಗಳನ್ನು ಬಳಸಿಕೊಂಡು ಗೂಗಲ್ ಸರ್ಚ್ ಮಾಡಿದಾಗ ಮಾಧ್ಯಮಗಳಲ್ಲಿ ಅಂತಹ ಯಾವುದೇ ಸುದ್ದಿ ಪ್ರಕಟವಾಗಿರುವ ಮಾಹಿತಿ ಲಭ್ಯವಾಗಿಲ್ಲ.

ಸಾಮಾಜಿಕ ಮಾಧ್ಯಮಗಳ ವೇದಿಕೆಯಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿರುವ ವಿಡಿಯೋವನ್ನು ಆಲ್ಟ್‌ನ್ಯೂಸ್‌ನ ಫ್ಯಾಕ್ಟ್‌ಚೆಕ್ಕರ್ ಮೊಹಮದ್ ಜುಬೇರ್ ಹಂಚಿಕೊಂಡು ಇದು ಸುಳ್ಳು ಮತ್ತು ನಕಲಿ ಪೋಸ್ಟ್‌ ಎಂದು ಟ್ವೀಟ್‌ ಮಾಡಿದ್ದಾರೆ. ಅಲ್ಲದೆ ಈ ಘಟನೆಯ ಪೂರ್ಣ ವಿಡಿಯೋವನ್ನು ಹಂಚಿಕೊಂಡಿದ್ದು ರಥದ ಕೆಳಗಿದ್ದ ಮಹಿಳೆ ಹಿಂದೂ ಆಗಿದ್ದು ರಥದ ಕೆಳೆಗೆ ಪ್ರಾರ್ಥನೆ ಮಾಡಲು ನನಗೂ ಅವಕಾಶ ಕೊಡಿ ಎಂದು ವಾದ ಮಾಡುತ್ತಿರುವುದನ್ನು ಕೇಳಬಹುದು.

ಜಗನ್ನಾಥ ರಥದ ಕೆಳಗೆ ಕಾಣುವ ಹಿಂದೂ ಮಹಿಳಾ ಭಕ್ತರೊಬ್ಬರು ನಮಾಜ್ ಮಾಡುತ್ತಿರುವ ವಿಡಿಯೋವನ್ನು, ಮುಸ್ಲಿಂ ಮಹಿಳೆಯೊಬ್ಬರು ರಥದ ಕೆಳಗೆ ನಮಾಜ್ ಮಾಡುತ್ತಿದ್ದಾರೆ ಎಂಬ ಸುಳ್ಳು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಇಲ್ಲಿ ಪೂರ್ಣ ವಿಡಿಯೋ ಲಭ್ಯವಿದೆ. ಮಹಿಳೆಯೊಬ್ಬರು ಮತ್ತೊಬ್ಬ ಮಹಿಳೆಗೆ ಅಲ್ಲಿ ಕುಳಿತುಕೊಳ್ಳಲು ಅವಕಾಶ ನೀಡಲಾಗಿದೆ ಎಂದು ವಾದಿಸುತ್ತಿರುವುದನ್ನು ಕಾಣಬಹುದು, ನಂತರ ಅವರು, “ನೀವು ಅವರಿಗೆ ಅವಕಾಶ ನೀಡಿದರೆ, ನನಗೇಕೆ ಅವಕಾಶ ನೀಡಬಾರದು” ಎಂದು ಕೇಳುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.

ಅಲ್ಲದೆ, ಮುಸ್ಲಿಂ ಮಹಿಳೆಯರು ನಮಾಜ್ ಮಾಡುವಾಗ ಶಿರಸ್ತ್ರಾಣ/ಮುಸುಕು ಧರಿಸುತ್ತಾರೆ. ಅಲ್ಲದೆ, ಅವರು ನಮಾಜ್ ಮಾಡುವ ರೀತಿಗೂ, ವಿಡಿಯೋದಲ್ಲಿ ಮಹಿಳೆ ಮಾಡುತ್ತಿರುವ ವಿಧಾನಕ್ಕೂ ಸಾಕಷ್ಟು ವ್ಯತ್ಯಾಸವಿದೆ..ಕೆಲವು ಬಲಪಂಥೀಯ ಸಾಮಾಜಿಕ ಮಾಧ್ಯಮಗಳ ಹ್ಯಾಂಡಲ್‌ಗಳು ಹೆಚ್ಚಿನ ವಿವ್ಸ್‌ ಮತ್ತು ಹಣ ಗಳಿಕೆಗಾಗಿ ಸುಳ್ಳು ನಿರೂಪಣೆಯೊಂದಿಗೆ ಹಿಂದೂ ಮಹಿಳೆಯರನ್ನು ಬಳಸಿಕೊಳ್ಳುವದನ್ನು ನಿಲ್ಲಿಸಬೇಕು ಎಂದು ಬರೆದುಕೊಂಡಿದ್ದಾರೆ.

ಪೂರಿ ಜಗನ್ನಾಥ ದೇವರ ರಥದ ಕೆಳಗೆ ಮಹಿಳೆಯೊಬ್ಬರು ಪ್ರಾರ್ಥನೆ ಮಾಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಪ್ರಸಾರವಾಗುತ್ತಿರುವಂತೆ ಮುಸ್ಲಿಂ ಮಹಿಳೆಯೊಬ್ಬಳನ್ನು ನಮಾಜ್ ಮಾಡುತ್ತಿಲ್ಲ. ಅಲ್ಲಿ ಕುಳಿತುಕೊಳ್ಳಲು ಹೇಳಲಾಗಿದೆ ಎಂದು ವರದಿಯಾಗಿರುವ ಹಿಂದೂ ಮಹಿಳೆಯೊಬ್ಬರು ಅದರ ಬಗ್ಗೆ ವಾದಿಸುತ್ತಿರುವುದು ಕಂಡುಬಂದಿದೆ. ಬಲಪಂಥೀಯ ಸಾಮಾಜಿಕ ಮಾಧ್ಯಮ ಖಾತೆಗಳು ರಥದ ಕೆಳಗೆ ನಮಾಜ್ ಮಾಡುತ್ತಿರುವ ಮಹಿಳೆ ಮುಸ್ಲಿಂ ಎಂದು ತಪ್ಪಾಗಿ ಹೇಳಿಕೊಂಡಿವೆ, ಆದರೆ ಇದು ಸುಳ್ಳು.

ವಿಡಿಯೋದಲ್ಲಿರುವ ಮಹಿಳೆ “ನೀವು ಅವರಿಗೆ ಅವಕಾಶ ನೀಡಬಹುದಾದರೆ, ನನಗೆ ಏಕೆ ಅವಕಾಶ ನೀಡಬಾರದು?” ಎಂದು ವಾದಿಸುವುದನ್ನು ಕೇಳಬಹುದು. ಹಾಗಾಗಿ ಮುಸ್ಲಿಂ ಮಹಿಳೆಯೊಬ್ಬರು ರಥದ ಕೆಳಗೆ ನಮಾಜ್ ಮಾಡುತ್ತಿದ್ದಾರೆ ಎಂಬ ಹೇಳಿಕೆ ಸುಳ್ಳು   ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವನ್ನು ಎಡಿಟ್‌ ಮಾಡಿ ತಪ್ಪಾಗಿ ಹಂಚಿಕೊಳ್ಳಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಪೂರಿ ಜಗನ್ನಾಥ ರಥದ ಕೆಳಗೆ ಮುಸ್ಲಿಂ ಮಹಿಳೆಯೊಬ್ಬರು ನಮಾಜ್ ಮಾಡುತ್ತಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹೇಳಲಾಗುತ್ತಿರುವ ಹೇಳಿಕೆಗಳು ಸುಳ್ಳು. ವಿಡಿಯೋವೊಂದನ್ನು ಎಡಿಟ್‌ ಮಾಡುತ್ತಾ ಸುಳ್ಳು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಈ ಬಗ್ಗೆ ಯಾವುದೇ ಅಧಿಕೃತ ವರದಿಗಳಾಗಲಿ, ಪ್ರಕರಣಗಳಾಗಲಿ ಲಭ್ಯವಾಗಿಲ್ಲ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಲಕ್ನೋದ ಸಲಾಹುದ್ದೀನ್ ಮನೆಯಲ್ಲಿ ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳು ಎಂದು ಸಂಬಂಧವಿಲ್ಲದ ಫೋಟೊ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights