FACT CHECK | ಮಾಲ್ದೀವ್ಸ್‌ನ ರಕ್ಷಣಾ ಸಚಿವಾಲಯದ ಮೇಲೆ ಪ್ರಧಾನಿ ಮೋದಿ ಚಿತ್ರ ಹಾಕಲಾಗಿತ್ತೇ?

ಮಾಲ್ಡೀವ್ಸ್‌ನ 60ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಗೌರವ ಅತಿಥಿಯಾಗಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಅಂದರೆ 2025ರ ಜುಲೈ 25, 26ರಂದು ಮಾಲ್ದೀವ್ಸ್‌ಗೆ ಭೇಟಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಮಾಲೆಯಲ್ಲಿರುವ ರಕ್ಷಣಾ ಸಚಿವಾಲಯ ಕಟ್ಟಡದ ಚಿತ್ರವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ರಕ್ಷಣಾ ಸಚಿವಾಲಯ ಕಟ್ಟಡದ ಮೇಲೆ ಮೋದಿ ಅವರ ಚಿತ್ರವಿದ್ದು, ಅವರ ಚಿತ್ರದ ಮೇಲೆ ‘ಸರೆಂಡರ್’ (ಶರಣಾಗತಿ) ಎಂದು ಬರೆಯಲಾಗಿದೆ. ‘ಇದು ಮಾಲ್ದೀವ್ಸ್ ರಕ್ಷಣಾ ಸಚಿವಾಲಯದ ಮೇಲಿನ ಚಿತ್ರವಾಗಿದ್ದು, ಇದನ್ನು ಮಾಡಿದವರು ಯಾರು’ ಎಂದು ಪೋಸ್ಟ್ ಹಂಚಿಕೊಳ್ಳುತ್ತಿರುವವರು ಪ್ರತಿಪಾದಿಸುತ್ತಿದ್ದಾರೆ.

ಇದೇ ರೀತಿಯ ಪ್ರತಿಪಾದನೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್‌ಅನ್ನು ಹಂಚಿಕೊಳ್ಳುತ್ತಿದ್ದು, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು, ವೈರಲ್ ಫೋಟೊವನ್ನು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ,  ‘ಡಿಡಿ ನ್ಯೂಸ್‌’ನ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ 2025ರ ಜುಲೈ 25ರಂದು ಪ್ರಕಟವಾಗಿದ್ದ ಚಿತ್ರ ಲಭ್ಯವಾಗಿದೆ. ‘ಮಾಲ್ಡೀವ್ಸ್‌ನ ಮಾಲೆಯಲ್ಲಿನ ರಕ್ಷಣಾ ಸಚಿವಾಲಯವು ಇಂದು ಕಂಡಿದ್ದು ಹೀಗೆ’ ಎಂದು ‘ಡಿಡಿ ನ್ಯೂಸ್’ ಅಡಿಬರಹದಲ್ಲಿ ಉಲ್ಲೇಖಿಸಿತ್ತು.

ಮಾಲ್ದೀವ್ಸ್‌ನ ರಾಷ್ಟ್ರೀಯ ಭದ್ರತಾ ಪಡೆ ಮತ್ತು ಭಾರತದ ಪ್ರಧಾನ ಮಂತ್ರಿ ಕಾರ್ಯಾಲಯದ ಅಧಿಕೃತ ಖಾತೆಗಳಲ್ಲಿನ ವಿಡಿಯೊಗಳಲ್ಲಿಯೂ ಕಟ್ಟಡದ ಮೇಲಿನ ಮೋದಿ ಅವರ ಚಿತ್ರದ ಮೇಲೆ ‘ಸರೆಂಡರ್’ ಎನ್ನುವ ಪದ ಇಲ್ಲ. ಚಿತ್ರದಲ್ಲಿ ಕೆಲವು ವ್ಯತ್ಯಾಸಗಳಿದ್ದು, ಅದನ್ನು ‘ಹೈವ್ ಮಾಡರೇಷನ್’ ಮತ್ತು ‘ವಾಸ್ ಇಟ್ ಎಐ’ ಎಂಬ ಎಐ ಪತ್ತೆ ಸಾಧನಗಳ ಮೂಲಕ ಪರಿಶೀಲಿಸಿದಾಗ, ಚಿತ್ರವನ್ನು ಎಐ ತಾಂತ್ರಿಕತೆ ಮೂಲಕ ತಿರುಚಲಾಗಿದೆ ಎನ್ನುವುದು ಸ್ಪಷ್ಟವಾಗಿದೆ.

ಮಾಲ್ಡೀವ್ಸ್ ರಾಷ್ಟ್ರೀಯ ರಕ್ಷಣಾ ಪಡೆ (MNDF) ನ ಅಧಿಕೃತ X ಖಾತೆಯು ಪ್ರಧಾನಿ ಮೋದಿಯವರ ಪ್ರವಾಸದ ಹಲವಾರು ಚಿತ್ರಗಳನ್ನು ಪೋಸ್ಟ್ ಮಾಡಿದೆ, ಅದರಲ್ಲಿ ಅವರ ಭಾವಚಿತ್ರವಿರುವ ಅದೇ ರಚನೆಯನ್ನು ಒಳಗೊಂಡಿದೆ. “ಮಾನ್ಯ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರನ್ನು ಗಣರಾಜ್ಯ ಚೌಕದಲ್ಲಿ ಗೌರವಾನ್ವಿತ ಅಧ್ಯಕ್ಷ ಡಾ. ಮೊಹಮ್ಮದ್ ಮುಯಿಝು ಅವರು ಆತ್ಮೀಯವಾಗಿ ಸ್ವಾಗತಿಸಿರುವುದನ್ನು ಕಾಣಬಹುದು. ಅಲ್ಲಿ ಅವರಿಗೆ ಮಾಲ್ಡೀವ್ಸ್‌ಗೆ ಭೇಟಿ ನೀಡಿದ್ದಕ್ಕಾಗಿ MNDF ನಿಂದ ಗಾರ್ಡ್ ಆಫ್ ಆನರ್ ನೀಡಿ ಗೌರವಿಸಲಾಯಿತು” ಎಂಬ ಪೋಸ್ಟ್ ಇದೆ.

PIB ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ (MeA) ಪತ್ರಿಕಾ ಪ್ರಕಟಣೆ ಲಭ್ಯವಾಗಿದೆ. ಜುಲೈ 25 ರ ಟಿಪ್ಪಣಿಯಲ್ಲಿ ಪ್ರಧಾನಿ ಮೋದಿ ಮತ್ತು ಮಾಲ್ಡೀವಿಯನ್ ಅಧ್ಯಕ್ಷ ಮುಯಿಝು ಅವರು ಮಾಲೆಯಲ್ಲಿ ಹೊಸ, ಆಧುನಿಕ ರಕ್ಷಣಾ ಸಚಿವಾಲಯದ ಕಟ್ಟಡವನ್ನು ಅಧಿಕೃತವಾಗಿ ಉದ್ಘಾಟಿಸಿದ್ದಾರೆ ಎಂದು ಉಲ್ಲೇಖಿಸಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಮಾಲ್ದೀವ್ಸ್‌ನ ರಕ್ಷಣಾ ಸಚಿವಾಲಯದ ಮೇಲೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಚಿತ್ರವನ್ನು ಡಿಸ್‌ಪ್ಲೇ ಮಾಡಲಾಗಿದೆ ಎಂದು ಎಡಿಟೆಡ್‌ ಮಾಡಿದ ಫೋಟೊವನ್ನು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಜಪಾನ್-ರಷ್ಯಾ ಭೂಕಂಪದ ದೃಶ್ಯ ಎಂದು ಸಂಬಧವಿಲ್ಲದ ವಿಡಿಯೋ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights