FACT CHECK | ಮುಸ್ಲಿಂ ಯುವಕರಿಂದ ಲವ್ ಜಿಹಾದ್‌ ಎಂದು ಸ್ಕ್ರಿಪ್ಟೆಡ್ ವಿಡಿಯೋ ಹಂಚಿಕೆ

ಹಿಂದೂ ಗುರುತುಗಳೊಂದಿಗೆ ಮುಸ್ಲಿಂ ಯುವಕರು ಹಿಂದೂ ಯುವತಿಯರನ್ನು ವಂಚಿಸಿ, ಲವ್ ಜಿಹಾದ್‌ ಜಾಲ ಹೆಣೆಯುತ್ತಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ.

ವಾಟ್ಸಪ್ ನಲ್ಲಿ ಕಂಡುಬಂದ ಮೆಸೇಜ್ ನಲ್ಲಿ “ ಮುಸ್ಲಿಂ ಯುವಕರು ತಾನು ಹಿಂದೂ ಎಂದು ಹುಡುಗಿಯರನ್ನು ನಂಬಿಸಲು ಕೈಗಳಿಗೆ ದೇವರ ನೂಲು, ಉಂಗುರ, ಬಳೆ, ಮುಂತಾದ ಹಿಂದೂ ಗುರುತುಗಳನ್ನು ಧರಿಸಿಕ್ಕೊಂಡು ಹಿಂದೂ ಹುಡುಗಿಯರನ್ನು ಈ ಸೋಷಿಯಲ್ ಮೀಡಿಯಾ ಅಥವಾ ಇನ್ನಿತರ ಕೆಲವೊಂದು ತಂತ್ರ ಬಳಸಿ ಲವ್ ಜಿಹಾದ್ ಗೆ ಪ್ರಯತ್ನಿಸುತ್ತಿರುವುದು ಅತೀ ಹೆಚ್ಚಾಗಿ ಕಂಡು ಬರುತ್ತಿದೆ” ಎಂಬ ಬರವಣಿಗೆಯೊಂದಿಗೆ ಹಂಚಿಕೊಳ್ಳಲಾಗಿದೆ.

ಈ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಪೊಲೀಸರು ಯುವತಿಯೊಬ್ಬಳೊಂದಿಗೆ ಇದ್ದ ಯುವಕನನ್ನು ವಿಚಾರಣೆ ಮಾಡುವುದು ಮತ್ತು ಆತನ ಐಡಿ ಕಾರ್ಡ್ ಕೇಳುವುದು, ತನ್ನ ಹೆಸರನ್ನು ಆತ ರವಿ ಎಂದಿದ್ದು, ಐಡಿ ಕಾರ್ಡ್ ನಲ್ಲಿ ಸಲೀಮ್ ಎಂದಿರುವುದನ್ನು ಪೊಲೀಸ್‌ ಪತ್ತೆ ಮಾಡುವ ದೃಶ್ಯವಿದೆ. ಒಟ್ಟು 4.42 ನಿಮಿಷದ ವೀಡಿಯೋದಲ್ಲಿ ಯುವಕ ಹಿಂದೂ ಎಂದು ಹೇಳಿ ವಂಚಿಸಿರುವುದನ್ನು ಪೊಲೀಸರು ಭೇದಿಸುವ ವಿಚಾರವಿದೆ.

ಇದನ್ನು ವಾಟ್ಸಾಪ್‌ಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಇನ್‌ಸ್ಟಾಗ್ರಾಂನಲ್ಲಿರುವ monty_deepak_sharma_ಎಂಬ ಖಾತೆ ಲಭ್ಯವಾಗಿದ್ದು, ಇದರಲ್ಲಿ ವೈರಲ್ ವೀಡಿಯೋವನ್ನು ಹೋಲುವ ವೀಡಿಯೋವನ್ನು ಕಂಡಿದ್ದೇವೆ. ಇದನ್ನು ಜುಲೈ 24, 2025ರಂದು ಪೋಸ್ಟ್ ಮಾಡಲಾಗಿದೆ.

ಇದೇ ಖಾತೆಯಲ್ಲಿ ವಿವಿಧ ರೀತಿಯ ವೀಡಿಯೋಗಳು ಇರುವುದನ್ನು ಕಂಡಿದ್ದೇವೆ. ಈ ಇನ್‌ಸ್ಟಾಗ್ರಾಂ ಖಾತೆಯಲ್ಲಿದ್ದ ಫೇಸ್‌ಬುಕ್ ಖಾತೆಯ ಲಿಂಕ್ ಅನ್ನು ಅನುಸರಿಸಿ ನಾವು monty_deepak_sharma_ ಫೇಸ್‌ಬುಕ್ ಖಾತೆಯನ್ನೂ ನೋಡಿದ್ದೇವೆ. ಇಲ್ಲೂ ವೈರಲ್ ವೀಡಿಯೋ ಹೋಲುವ ವೀಡಿಯೋವನ್ನು ಜುಲೈ 27, 2025 ನೋಡಿದ್ದೇವೆ.

ಆ ಬಳಿಕ ನಾವು ಬಳಕೆದಾರರ ಖಾತೆಯಲ್ಲಿರುವ ಮಾಹಿತಿಯನ್ನು ಪರಿಶೀಲಿಸಿದ್ದು, ಅವರು ತಾವೊಬ್ಬ ಕಂಟೆಂಟ್ ಕ್ರಿಯೇಟರ್, ಟಿವಿ ಆರ್ಟಿಸ್ಟ್ ಎಂದು ಬರೆದುಕೊಂಡಿರುವುದನ್ನು ನೋಡಿದ್ದೇವೆ. ಈ ಖಾತೆಯಲ್ಲೂ ವಿವಿಧ ಸ್ಕ್ರಿಪ್ಟೆಡ್ ವೀಡಿಯೋಗಳು ಇರುವುದನ್ನು ನೋಡಬಹುದು.

ಹೆಚ್ಚಿನ ಮಾಹಿತಿಗಾಗಿ ನಾವು ವೀಡಿಯೋ ಪೋಸ್ಟ್ ಮಾಡಿದ monty_deepak_sharma_ ಅವರನ್ನು ಸಂಪರ್ಕಿಸಲು ಯತ್ನಿಸಿದ್ದೇವೆ. ಅವರ ಪ್ರತಿಕ್ರಿಯೆ ಬಂದ ಬಳಿಕ ನಾವು ಈ ಲೇಖನವನ್ನು ಪರಿಷ್ಕರಿಸಲಿದ್ದೇವೆ.

ಒಟ್ಟಾರೆಯಾಗಿ ಹೇಳುವುದಾದರೆ, ಹಿಂದೂ ಗುರುತುಗಳೊಂದಿಗೆ ಮುಸ್ಲಿಂ ಯುವಕರು ಹಿಂದೂ ಯುವತಿಯರನ್ನು ವಂಚಿಸಲು ಜಾಲ ಹೆಣೆಯುತ್ತಿದ್ದಾರೆ ಎಂಬಂತೆ ಹಂಚಿಕೊಳ್ಳಲಾದ ವಿಡಿಯೋ ನಿಜವಾದ್ದಲ್ಲ, ಇದು ಸ್ಕ್ರಿಪ್ಟೆಡ್ ವೀಡಿಯೋ ಎಂಬುದು ಸ್ಪಷ್ಟವಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಮಹಿಳೆಯರು ಬಟ್ಟೆ ಬದಲಾಯಿಸುವುದನ್ನು ಸೆರೆ ಹಿಡಿದಿದಕ್ಕೆ ಸಾಧುಗಳ ಮೇಲೆ ಹಲ್ಲೆ ಎಂಬುದು ಸುಳ್ಳು


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights