Categories
Breaking News District State

ಕಳಸಾ ಬಂಡೂರಿ ವಿಚಾರದಲ್ಲಿ ಮತ್ತೆ ಅನ್ಯಾಯ- ಕೇಂದ್ರ ಸಚಿವರಿಗೆ ಬಹಿರಂಗ ಪತ್ರ ಬರೆದ ಹೋರಾಟಗಾರ…!

ಕಳಸಾ ಬಂಡೂರಿ ಯೋಜನೆ ವಿಚಾರದಲ್ಲಿ ಉತ್ತರ ಕರ್ನಾಟಕ ಜನರ ಹೋರಾಟಕ್ಕೆ ಬೆಲೆ ಇಲ್ಲದಂತಾಗಿದೆ. ಕೇಂದ್ರ ಸರ್ಕಾರ ರಾಜ್ಯದ ಮೇಲೆ ನಿರಂತರವಾಗಿ ಮಲತಾಯಿ ಧೋರಣೆ ಅನುಸರಿಸಿದೆ. ಕಳಸಾ ಬಂಡೂರಿ ವಿಚಾರದಲ್ಲಿ ಎಲ್ಲವೂ ಮುಗಿತು ನ್ಯಾಯಾಧೀಕರಣ ತೀರ್ಪು ಸಹ ಬಂತು. ಇನ್ನೇನು ಕಾಮಗಾರಿ ಆರಂಭವಾಗಿ ಬೆಳಗಾವಿ, ಧಾರವಾಡ, ಗದಗ ಹಾಗೂ ಬಾಗಲಕೋಟೆ ಜಿಲ್ಲೆ ಜನರಿಗೆ ಅನಕೂಲ ಆಗಲಿದೆ ಎಂದೇ ರೈತರು ನೀರಿಕ್ಷಿಸಿದ್ದರು.

ಆದರೇ ಸದ್ಯ ಯೋಜನೆ ಪೂರ್ಣಗೊಳಿಸಲು ಅರಣ್ಯ ವ್ಯಾಪ್ತಿಯಲ್ಲಿ ಕಾಮಗಾರಿ ನಡೆಸಬೇಕಿದೆ. ಈ ಮೊದಲು ಅನುಮತು ನೀಡಿದ್ದ ಕೇಂದ್ರ ಅರಣ್ಯ ಇಲಾಖೆ ಸದ್ಯ ಅನುಮತಿಯನ್ನು ಅಮಾನತ್ತಿನಲ್ಲಿ ಇಟ್ಟು ಆದೇಶ ಹೊರಡಿಸಿದೆ. ಈ ಆದೇಶ ಉತ್ತರ ಕರ್ನಾಟಕ ಜನರ ಕೆಂಗಣ್ಣಿಗೆ ಗುರಿಯಾಗಿದೆ.

ಕಳಸಾ ಬಂಡೂರಿ ಹಾಗೂ ಮಹದಾಯಿ ಯೋಜನೆಯಿಂದ ಹುಬ್ಬಳ್ಳಿ- ಧಾರವಾಡ ಸೇರಿ ಅನೇಕ ಪಟ್ಟಣಗಳ ಕುಡಿಯುವ ನೀರಿನ ಸಮಸ್ಯೆ ಇತ್ಯರ್ಥವಾಗಲಿದೆ. ಆದರೇ ಯೋಜನೆ ಪೂರ್ಣಕ್ಕೆ ಅನೇಕ ವಿಘ್ನಗಳು ಎದುರಾಗುತ್ತಲೇ ಇವೆ. ಈ ಭಾಗದ ಜನರ ಹೋರಾಟಕ್ಕೆ ಸರ್ಕಾರ ಯಾವುದೇ ಮಣೆ ಹಾಕದೇ ಇರೋದು ಆಕ್ರೋಶಕ್ಕೆ ಕಾರಣವಾಗಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸರ್ಕಾರದಲ್ಲಿ ಹುಬ್ಬಳ್ಳಿ ಸಂಸದ ಪ್ರಲ್ಹಾದ್ ಜೋಶಿ, ಬೆಳಗಾವಿ ಸಂಸದ ಸುರೇಶ ಅಂಗಡಿ ಸಹ ಸಚಿವರಾಗಿದ್ದಾರೆ. ಇಬ್ಬರಿಗೂ ಪರಿಸರ ಇಲಾಖೆ ನೀಡಿರೋ ತಡೆಯ ಬಗ್ಗೆ ಮಾಹಿತಿಯೆ ಇಲ್ಲವೆ. ಈ ಬಗ್ಗೆ ಪ್ರಧಾನಿ ಬಳಿ ಇಬ್ಬರು ಸಚಿವರು ಮಾತನಾಡಲಿದ್ದಾರೆ ಎಂಬ ನಿರೀಕ್ಷೆಗಳು ಜನರಲ್ಲಿ ಇವೆ. ಆದರೇ ಇಬ್ಬರು ಸಚಿವರು ಮೌನ ವಹಿಸಿದ್ದು, ಇದೀಗ ಬೆಳಗಾವಿಯ ಕನ್ನಡ ಪರ ಹೋರಾಟಗಾರ ಅಶೋಕ ಚಂದರಗಿ ಬಹಿರಂಗ ಪತ್ರ ಬರೆದು ತರಾಟೆಗೆ ತೆಗೆದುಕೊಂಡಿದ್ದಾರೆ. ಜತೆಗೆ ಇಬ್ಬರು ಕೇಂದ್ರ ಸಚಿವರಿಗೆ 10 ಪ್ರಶ್ನೆಗಳನ್ನು ಕೇಳಿದ್ದಾರೆ. ಈ ಪತ್ರ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದೆ. ಇನ್ನಾದರೂ ಪ್ರಧಾನಿ ಬಳಿ ಇಬ್ಬರು ಸಚಿವರು ಯೋಜನೆ ಬಗ್ಗೆ ಮಾತನಾಡಲಿದ್ದಾರೆ ಎಂಬ ಬಗ್ಗೆ ಕಾದು ನೋಡಬೇಕು.

Categories
Breaking News District Political State

ಜನರಿಗೆ ಬಹಿರಂಗ ಪತ್ರ ಬರೆದು ಮತಯಾಚನೆ ಮಾಡಿದ ಹೆಚ್.ವಿಶ್ವನಾಥ್…

ಬಿಜೆಪಿಯವರು ಹಣ ಕೊಟ್ಟು ಮತಯಾಚನೆ ಮಾಡುತ್ತಿದ್ದಾರೆ ಎನ್ನುವ ಆರೋಪದಿಂದ ಮನನೊಂದು ಹುಣಸೂರಿನ ಬಿಜೆಪಿ ಅಭ್ಯರ್ಥಿ ಹೆಚ್.ವಿಶ್ವನಾಥ್ ಜನರಿಗೆ ಬಹಿರಂಗ ಪತ್ರ ಬರೆದು ಮತಯಾಚನೆ  ಮಾಡಿದ್ದಾರೆ.

ಹುಣಸೂರಿನ ಬನ್ನಿಕುಪ್ಪೆಯಲ್ಲಿ ಅನರ್ಹ ಶಾಸಕ ಹೆಚ್.ವಿಶ್ವನಾಥ್ ಮಾತನಾಡಿ, ಪ್ರಚಾರದಲ್ಲಿ ಆದ ಅಪಪ್ರಚಾರದಿಂದ ನೊಂದು ಮೊನ್ನೆ ರಾತ್ರಿ ಪತ್ರ ಬರೆದೆ. ಅದು ನಾನೇ ಖುದ್ದಾಗಿ ಬರೆದಿರುವ ಪತ್ರ. ಮೊನ್ನೆ ರಾತ್ರಿ ಬರೆದು ನಿನ್ನೆ ಮುದ್ರಿಸಿ‌ ಇಂದು ಜನರಿಗೆ ತಲುಪಿಸುತ್ತಿದ್ದೇನೆ. ಇದು ನನ್ನ ಕರ್ತವ್ಯ ಕೂಡ. ನಾನೋಬ್ಬ ಸಾಹಿತಿ ಕಾಗಕ್ಕ‌ಗುಬ್ಬಕ್ಕ‌ಕಥೆ ಬರೆಯುವವನು ನಾನಲ್ಲ. ಮನಸ್ಸಿನ ಮಾತು ಬರೆಯುವ ಲೇಖಕ ನಾನು. ಹೀಗಾಗಿ ಎಲ್ಲವನ್ನು ಜನರಿಗೆ ಹೇಳಲು ಪತ್ರ ಬರೆದಿದ್ದೇನೆ ಎಂದು ಬಿಜೆಪಿಯಿಂದ ಹಣ ಹಂಚಿಕೆ ಆರೋಪಕ್ಕೆ ವಿಶ್ವನಾಥ್ ಪ್ರತಿಕ್ರಿಯೆ ನೀಡಿದ್ದಾರೆ.

ಹಣ ಹಂಚಲು ನನ್ನ‌ಬಳಿ ಹಣ ಇಲ್ಲ. ಹಾಗಾಗಿ ನಾನು‌ ಕಂಡಿರುವ ಕನಸು ಹಂಚುತ್ತಿದ್ದೇನೆ. ಜೆಡಿಎಸ್‌ ಕಾಂಗ್ರೆಸ್‌ನವರಿಗೆ ಕನಸು ಕಾಣುವುದೇ ಗೊತ್ತಿಲ್ಲ. ಹೀಗಾಗಿ ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡ್ತಿದ್ದಾರೆ ಎಂದು ಕಿಡಿ ಕಾರಿದರು.

 

Categories
Breaking News National

ಪ್ರೇಮ ಪತ್ರ ಬರೆದ 3ನೇ ತರಗತಿ ಬಾಲಕರು : ಕೈ-ಕಾಲು ಬೆಂಚ್‌ಗೆ ಕಟ್ಟಿ ಶಿಕ್ಷೆ…!

ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಶಾಲೆಯೊಂದರಲ್ಲಿ ಪ್ರೇಮ ಪತ್ರ ಬರೆದಿದ್ದಕ್ಕೆ ಇಬ್ಬರು ಬಾಲಕರ ಕೈ-ಕಾಲುಗಳನ್ನು ಬೆಂಚ್‌ಗೆ ಕಟ್ಟಿ ಶಿಕ್ಷಿಸಲಾಗಿದೆ. ಇದಕ್ಕೆ ಸಾಮಾಜಿಕ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದು, ಮುಖ್ಯೋಧ್ಯಾಯಿನಿ ವಿರುದ್ಧ ಇಲಾಖೆ ಕ್ರಮಕೈಗೊಂಡು, ಮೊಕದ್ದಮೆ ಹೂಡಬೇಕು ಎಂದು ಒತ್ತಾಯಿಸಿದ್ದಾರೆ.

ಕದಿರಿ ನಗರದ ಶಾಲೆಯ ಐದು ಮತ್ತು ಮೂರನೇ ತರಗತಿಯ ಇಬ್ಬರು ಮಕ್ಕಳ ಕೈ ಮತ್ತು ಕಾಲುಗಳನ್ನು ಬೆಂಚ್‌ಗೆ ಕಟ್ಟಲಾಗಿತ್ತು. ಮಕ್ಕಳನ್ನು ಕಟ್ಟಿಹಾಕಲು ಕಾರಣ ನೀಡಿರುವ ಅಧ್ಯಾಪಕಿ, ಇಬ್ಬರೂ ಇತರ ಮಕ್ಕಳ ವಸ್ತುಗಳನ್ನು ಕದ್ದಿದ್ದರು ಮತ್ತು ಪ್ರೇಮಪತ್ರ ಬರೆದಿದ್ದರು ಎಂದು ದೂರಿದ್ದಾರೆ.

ಮಗುವಿನ ತಾಯಿಯೇ ಅವರನ್ನು ಕಟ್ಟಿದ್ದಾರೆಂದು ಆಕೆ ಸ್ಪಷ್ಟನೆ ನೀಡಿದ್ದರೂ, ಶಾಲೆಯೊಳಗೆ ಇಂತಹ ಘಟನೆ ನಡೆಯಲು ಅವಕಾಶ ನೀಡಿದ್ದೇಕೆ ಎಂಬ ಬಗ್ಗೆ ಅವರು ವಿವರಿಸಿಲ್ಲ. ಇಲಾಖೆ ತನಿಖೆಗೆ ಆದೇಶಿಸಿದೆ.

Categories
Breaking News Featured National Political

ಅಮಿತ್ ಶಾಗೆ ಪತ್ರ ಬರೆದ ಕಾಶ್ಮೀರದ ಮಾಜಿ ಸಿಎಂ ಮಗಳು ಇಲ್ತೀಜಾ ಜಾವೇದ್

“ಕಾಶ್ಮೀರಿ ಜನರನ್ನು ಪ್ರಾಣಿಗಳಂತೆ ಪಂಜರದಲ್ಲಿ ಕೂಡಿಹಾಕಲಾಗಿದೆ ಮತ್ತು ಮೂಲಭೂತ ಮಾನವ ಹಕ್ಕುಗಳಿಂದ ವಂಚಿಸಲಾಗಿದೆ” ಎಂದು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರ ಮಗಳಾದ ಇಲ್ತೀಜಾ ಜಾವೇದ್ ಆರೋಪಿಸಿದ್ದು ಈ ಕುರಿತು ಅಮಿತ್ ಶಾಗೆ ಪತ್ರ ಬರೆದಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರನ್ನು ಬಂಧಿಸಿದ ಮರುದಿನವೇ ನನ್ನನ್ನು ಬಂಧಿಸಲಾಗಿದೆ ಎಂದು ಅವರು ತಮ್ಮ ಎರಡನೇ ಧ್ವನಿ ಸಂದೇಶವನ್ನು ಬಿಡುಗಡೆ ಮಾಡಿದ್ದಾರೆ. ಇಲ್ತಿಜಾ ಜಾವೇದ್ ಅವರು ಗೃಹ ಸಚಿವ ಅಮಿತ್ ಷಾಗೆ ಪತ್ರ ಬರೆದಿದ್ದು, ಅವರು ಮತ್ತೆ ಮಾಧ್ಯಮಗಳೊಂದಿಗೆ ಮಾತನಾಡಿದರೆ “ಭೀಕರ ಪರಿಣಾಮಗಳ ಎದುರಿಸಬೇಕಾದಗುತ್ತದೆ ಎಂದು ಬೆದರಿಕೆ ಹಾಕಲಾಗುತ್ತಿದೆ” ಎಂದು ಆರೋಪಿಸಿದ್ದಾರೆ.

ಕಾಶ್ಮೀರದ ವಿಶೇಷ ಸ್ಥಾನಮಾನ ತೆಗೆದುಹಾಕಿ ಹನ್ನೆರಡನೇ ದಿನಕ್ಕೆ ಕಾಲಿಡುತ್ತಿದ್ದಂತೆ, ಮುಖ್ಯವಾಹಿನಿಯ ರಾಜಕೀಯ ನಾಯಕರು ಇನ್ನೂ ಬಂಧನದಲ್ಲಿದ್ದಾರೆ. ಇಬ್ಬರು ಮಾಜಿ ಮುಖ್ಯಮಂತ್ರಿಗಳಾದ ಮೆಹಬೂಬ ಮುಫ್ತಿ ಮತ್ತು ಒಮರ್ ಅಬ್ದುಲ್ಲಾ ಬಂಧಿತರಾಗಿದ್ದಾರೆ.

“ಇಂದು ದೇಶದ ಉಳಿದ ಭಾಗವು ಭಾರತದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದ್ದರೆ, ಕಾಶ್ಮೀರಿಗಳನ್ನು ಪ್ರಾಣಿಗಳಂತೆ ಪಂಜರ ಇಡಲಾಗಿದೆ ಮತ್ತು ಮೂಲಭೂತ ಮಾನವ ಹಕ್ಕುಗಳಿಂದ ವಂಚಿತವಾಗಿದೆ” ಎಂದಿರುವ ಅವರು ನನ್ನನ್ನು ನೋಡಲು ಯಾರು ಬರುತ್ತಿದ್ದಾರೆ, ಅವರನ್ನು ಒಳಗೆ ಬಿಡದೇ ಕಳುಹಿಸಲಾಗುತ್ತಿದೆ. ಅವರು ಯಾರೆಂದು ಸಹ ನನಗೆ ಹೇಳುತ್ತಿಲ್ಲ. ನನ್ನನ್ನು ಮನೆಯಿಂದ ಹೊರಬರಲು ಬಿಡುತ್ತಿಲ್ಲ ಎಂದು ಅವರು ದೂರಿದ್ದಾರೆ.

ತನ್ನ ಬಂಧನದ ಬಗ್ಗೆ ವಿವರಣೆ ಕೇಳಲು ಗೃಹ ಸಚಿವರಿಗೆ ಬರೆದ ಪತ್ರದಲ್ಲಿ, ಭದ್ರತಾ ಸಿಬ್ಬಂದಿಯು ನನ್ನ ಮಾಧ್ಯಮ ಸಂದರ್ಶನಗಳು ನನ್ನ ಬಂಧನಕ್ಕೆ ಕಾರಣವೆಂದು ಉಲ್ಲೇಖಿಸಿದ್ದಾರೆ. “ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವಾಗಿ ಇಲ್ಲಿ ನಾಗರಿಕನಿಗೆ ಮಾತನಾಡಲು ಹಕ್ಕಿಲ್ಲವೇ?” ಎಂದು ಪ್ರಶ್ನಿಸಿದ್ದಾರೆ… ನಿಮ್ಮ ವಿರುದ್ಧ ಸತ್ಯವನ್ನು ಹೇಳಿದ್ದಕ್ಕಾಗಿ ನನ್ನನ್ನು ಯುದ್ಧ ಅಪರಾಧಿಯಂತೆ ಪರಿಗಣಿಸಲಾಗುತ್ತಿದೆ ಎಂದು ಆಡಿಯೊ ಸಂದೇಶದೊಂದಿಗೆ ಬಿಡುಗಡೆಯಾದ ಪತ್ರದಲ್ಲಿ ಹೇಳಿದ್ದಾರೆ.

“ನನ್ನನ್ನು ಅಪರಾಧಿಯಂತೆ ಪರಿಗಣಿಸಲಾಗುತ್ತಿದೆ ಮತ್ತು ನಾನು ನಿರಂತರ ಕಣ್ಗಾವಲಿನಲ್ಲಿದ್ದೇನೆ. ಕಾಶ್ಮೀರಿಗಳ ಜೊತೆಗೆ ನನ್ನ ಜೀವನಕ್ಕೂ ಬೆದರಿಕೆಯಿದೆ” ಎಂದು ಅವರು ಆಡಿಯೋ ಸಂದೇಶದಲ್ಲಿ ವಿವರಿಸಿದ್ದಾರೆ.

ಕಳೆದ ಭಾನುವಾರ ಮಧ್ಯರಾತ್ರಿ ನ್ಯಾಷನಲ್ ಕಾನ್ಫರೆನ್ಸ್ ಮುಖಂಡ ಒಮರ್ ಅಬ್ದುಲ್ಲಾ ಅವರೊಂದಿಗೆ ಮೆಹಬೂಬಾ ಮುಫ್ತಿ ಅವರನ್ನು ಬಂಧಿಸಿ ಶ್ರೀನಗರದ ಮನೆಯಿಂದ ಮರುದಿನ ಹತ್ತಿರದ ಸರ್ಕಾರಿ ಅತಿಥಿ ಗೃಹಕ್ಕೆ ಕರೆದೊಯ್ಯಲಾಯಿತು. ಈಗ ಅವರನ್ನು ಗೃಹಬಂಧನದಲ್ಲಿರಿಸಿದ್ದು ಜೈಲು ಖೈದಿಗಳಿಗೆ ಕೊಡುವ ಊಟ ಕೊಡಲಾಗುತ್ತಿದೆ ಎಂದು ವರದಿಯಾಗಿದೆ.

ಅದೇ ರೀತಿ ಐಎಎಸ್ ಅಧಿಕಾರಿಯಾಗಿದ್ದ ರಾಜಕಾರಣಿ ಷಾ ಫಾಸಲ್ ಅವರನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಬುಧವಾರ ಬಂಧಿಸಿ ಶ್ರೀನಗರಕ್ಕೆ ಕಳುಹಿಸಲಾಯಿತು, ಅಲ್ಲಿ ಅವರನ್ನು ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿ ಗೃಹಬಂಧನದಲ್ಲಿರಿಸಲಾಗಿದೆ. ಅವರು ಯಾವಾಗ ಬಿಡುಗಡೆಯಾಗುತ್ತಾರೆ ಎಂಬುದು ಇನ್ನೂ ತಿಳಿದುಬಂದಿಲ್ಲ.

ಕಳೆದ ವಾರ ತನ್ನ ಮೊದಲ ಆಡಿಯೊ ಸಂದೇಶದಲ್ಲಿ, ಇಲ್ತಿಜಾ ಜಾವೇದ್ ತನ್ನ ತಾಯಿಗೆ ವಕೀಲರು ಅಥವಾ ಪಕ್ಷದ ಕಾರ್ಯಕರ್ತರೊಡನೆ ಮಾತನಾಡಲು ಸಹ ಅವಕಾಶ ನೀಡದೆ, ಏಕಾಂತದ ಬಂಧನದಲ್ಲಿಟ್ಟಿದ್ದಾರೆ ಎಂದು ಆರೋಪಿಸಿದ್ದರು.

ಸಂಪೂರ್ಣ ಸಂವಹನ ಕಡಿತದ ಭಾಗವಾಗಿ, ಕಾಶ್ಮೀರ ಕಣಿವೆಯಲ್ಲಿ ಫೋನ್ ಸೇವೆಗಳು ಮತ್ತು ಇಂಟರ್ನೆಟ್ ಸಂಪರ್ಕಗಳನ್ನು ಸ್ಥಗಿತಗೊಳಿಸಲಾಗಿದೆ ಮತ್ತು ಕರ್ಫ್ಯೂ ತರಹದ ನಿರ್ಬಂಧಗಳು ಜಾರಿಯಲ್ಲಿವೆ. ಉನ್ನತ ಅಧಿಕಾರಿಗಳು ಸಂವಹನ ನಡೆಸಲು ಉಪಗ್ರಹ ಫೋನ್‌ಗಳನ್ನು ಬಳಸುತ್ತಿದ್ದಾರೆ.

Categories
Breaking News District State

ನನ್ನ ಸಾಲ ಮನ್ನಾ ಮಾಡಬೇಡಿ, ಸರ್ಕಾರದ ಋಣ ನನಗೆ ಬೇಡ : ಸಿಎಂಗೆ ಪತ್ರ ಬರೆದ ರೈತ

ಚಿಕ್ಕಮಂಗಳೂರು : ನನ್ನ ಸಾಲವನ್ನು ಮನ್ನಾ ಮಾಡಬೇಡಿ ಎಂದು ಚಿಕ್ಕಮಂಗಳುರಿನ ರೈತ ಸಿಎಂ ಕುಮಾರಸ್ವಾಮಿಗೆ ಪತ್ರ ಬರೆದಿದ್ದಾರೆ…

ನನ್ನ ಸಾಲವನ್ನು ಮನ್ನಾ ಮಾಡಬೇಡಿ ನನ್ನ ಸಾಲವನ್ನು ನಾನೇ ತಿರಿಸಿಕೊಳ್ಳುತ್ತೇನೆ. ಸಾಲಮನ್ನಾ ಮಾಡಿದ್ರೆ ನನ್ನ ಸ್ವಾಭಿಮಾನಕ್ಕೆ ದಕ್ಕೆ ಬರುತ್ತೆ, ನಾಣು ಸರ್ಕಾರದ ಋಣದಲ್ಲಿ ಇರಲು ಇಷ್ಟ ಇಲ್ಲ ಹಾಗಾಗಿ ನನ್ನ ಸಾಲ ಮನ್ನಾ ಮಾಡೋದು ಬೇಡ ಎಂದು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ರೈತನೊಬ್ಬ ಸಿಎಂ ಕುಮಾರಸ್ವಾಮಿಗೆ ಹಾಗೂ ಜಿಲ್ಲಾಡಳಿತಕ್ಕೆ ಪತ್ರದ ಮೂಲಕ ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ.

ಚಿಕ್ಕಮಂಗಳೂರು  ಜಿಲ್ಲೆಯ ಮೂಡಿಗೆರೆ ತಾಲೂಕಿನ ಕರಗೋಡು ಗ್ರಾಮದ ಅಮರನಾಥ ಸರ್ಕಾರಕ್ಕೆ ಪತ್ರ ಬರೆದ ರೈತ.  ಸಿಎಂ ಕುಮಾರಸ್ವಾಮಿ ಇತ್ತೀಚಿಗೆ ರೈತರ ಎರಡು ಲಕ್ಷದ ವರೆಗಿನ ಸಾಲ ಮನ್ನಾ ಮಾಡೋದಾಗಿ ಘೋಷಣೆ ಮಾಡಿದ್ದರು. ಸಾಲ ಮನ್ನಾ ಘೋಷಣೆ ಹಿನ್ನೆಲೆ ನನ್ನ ಆತ್ಮಸಾಕ್ಷಿಗೆ ನಿಮ್ಮ ಸಾಲ ಮನ್ನಾ ಒಪ್ಪುವುದಿಲ್ಲ ಹಾಗಾಗಿ ನನಗೆ ಸಾಲ ಮಾಡೋದು ಬೇಡ ಅದರ ಬದಲು ನಾವು ಬೆಳೆದ ಬೆಳಗೆ ಸರಿಯಾದ ಹಣ ದೊರೆಯುವಂತೆ ಮಾಡಿ ಎಂದು ರೈತ ಅಮರನಾಥ ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ.

ನನ್ನ ಸ್ವಾಭಿಮಾನಕ್ಕೆ ಧಕ್ಕೆ ಉಂಟಾಗುತ್ತದೆ, ನನ್ನ ಸಾಲವನ್ನು ಮನ್ನಾ ಮಾಡಬೇಡಿ, ನನಗೆ ಸರ್ಕಾರದ ಋಣ ಬೇಡ, ಸರ್ಕಾರ ಸಾಲದಿಂದ ನನ್ನ ಹೆಸರು ಕೈ ಬಿಡುವಂತೆ ಒತ್ತಾಯಿಸಿ ಸಿಎಂಗೆ ಪತ್ರ ಬರೆದಿದ್ದಾರೆ.

ಕರಗೋಡು ಗ್ರಾಮದಲ್ಲಿ ಸ.ನಂ,8ರಲ್ಲಿ 11 ಎಕರೆ ಜಮೀನು ಹೊಂದಿದ್ದ ಅಮರನಾಥ, 2016 ರಲ್ಲಿ ಕರ್ನಾಟಕ ಬ್ಯಾಂಕ್ ನಲ್ಲಿ ನಾಲ್ಕು ಲಕ್ಷ ಸಾಲ ಮಾಡಿದ್ದರು.  ಬಡ ರೈತರ ಸಾಲ ಮನ್ನಾ ಮಾಡಲು ಯಾವುದೇ ಅಭ್ಯಂತರವಿಲ್ಲ ಎಂದ  ಅಮರನಾಥ್ ತಿಳಿಸಿದ್ದಾರೆ

 

Categories
Breaking News District State

ಅಮಿತ್ ಶಾ ಮಂಗಳೂರು ಭೇಟಿ ಹಿನ್ನೆಲೆ : ಹತ್ಯೆಯಾದ ವಿನಾಯಕ ಬಾಳಿಗಾ ಕುಟುಂಬಸ್ಥರಿಂದ ಶಾಗೆ ಪ್ರಶ್ನೆಗಳ ಸುರಿಮಳೆ

ಮಂಗಳೂರು :  ನಾಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮಂಗಳೂರಿಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ದುಷ್ಕರ್ಮಿಗಳಿಂದ ಹತ್ಯೆಯಾಗಿದ್ದ ಆರ್‌ಟಿಐ ಕಾರ್ಯಕರ್ತ ವಿನಾಯಕ್‌ ಬಾಳಿಗಾ ಕುಟುಂಬಸ್ಥರು ಅಮಿತ್ ಅವರಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಅಮಿತ್ ಶಾಗೆ ಅವರಿಗೆ ಸಾಕಷ್ಟು ಪ್ರಶ್ನೆಗಳನ್ನು ಕೇಳಲಾಗಿದ್ದು, ಬಿಜೆಪಿ ಪಕ್ಷ  ಚುನಾವಣಾ ಪ್ರಚಾರದ ವೇಳೆ ಹತ್ಯೆಯಾದ ಕಾರ್ಯಕರ್ತರ ಬಗ್ಗೆ ಉಲ್ಲೇಖಿಸುತ್ತೆ. ಆದ್ರೆ ಬಿಜೆಪಿ ಕಾರ್ಯಕರ್ತ ವಿನಾಯಕ್  ಬಾಳಿಗಾ ಹೆಸರನ್ನೇಕೆ ಸೇರಿಸಿಲ್ಲ.ವಿನಾಯಕ್ ಬಾಳಿಗಾ ಬಿಜೆಪಿ, ಆರ್.ಎಸ್.ಎಸ್ ಕಾರ್ಯಕರ್ತನಾದರೂ ಕೊಲೆ ವಿರುದ್ಧ ಯಾಕೆ ಪ್ರತಿಭಟನೆ ಮಾಡಿಲ್ಲ . ಜಿಲ್ಲಾ ಸಂಸದರು ಹಾಗೂ ಬಿಜೆಪಿ ಮುಖಂಡರು ಬಾಳಿಗಾ ಮನೆಗೆ ಯಾಕೆ ಭೇಟಿ ನೀಡಿಲ್ಲ  ಎಂದು ಪ್ರಶ್ನಿಸಿದ್ದಾರೆ.


ಕೊಲೆಯಾದ ಇತರ ಕಾರ್ಯಕರ್ತರಿಗೆ ಸಿಕ್ಕ ಸಾಂತ್ವಾನ,ಸಹಕಾರ ಬಾಳಿಗಾ ಕುಟುಂಬಕ್ಕೆ ಯಾಕಿಲ್ಲ ಎಂದು ಪತ್ರದಲ್ಲಿ ಬರೆಯಲಾಗಿದ್ದು, ನಿಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಬಾಳಿಗಾ ಹತ್ಯೆ ತನಿಖೆಗೆ ವಿಶೇಷ ತನಿಖಾ ದಳ ರಚಿಸುತ್ತಾ ? ಪ್ರಕರಣದ ಪ್ರಮುಖ ಆರೋಪಿ ನರೇಶ್ ಶೆಣೈ ಸುಳ್ಳು ಪತ್ತೆ ಪರೀಕ್ಷೆಗೆ ನೀವು ಬೆಂಬಲ ಕೊಡ್ತೀರಾ ಎಂದು ಪ್ರಶ್ನಿಸಿದ್ದಾರೆ.

Categories
Breaking News National

ಇದು ನಮ್ಮ ಕರಾಳ ಸಮಯ : ಮೋದಿ ವೈಫಲ್ಯದ ಕುರಿತು ಪತ್ರ ಬರೆದ ನಿವೃತ್ತ ಅಧಿಕಾರಿಗಳು

ದೆಹಲಿ : ಕಥುವಾ ಹಾಗೂ ಉನ್ನಾವೋ ಅತ್ಯಾಚಾರ ಪ್ರಕರಣದ ಬಳಿಕ ಸರ್ಕಾರಿ ನಿವೃತ್ತ ಅಧಿಕಾರಿಗಳ 49 ಮಂದಿಯ ತಂಡವೊಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

8 ವರ್ಷದ ಬಾಲಕಿಯ ಮೇಲೆ ದೇವಸ್ಥಾನದ ಒಳಗೆ ಅತ್ಯಾಚಾರ ಮಾಡಿರುವುದನ್ನು ನೋಡಿದರೆ ಇದು ಅಪ್ರಾಮಾಣಿಕತೆಯ ಪರಮಾವಧಿ ಎಂಬುದನ್ನು ತೋರಿಸುತ್ತದೆ. ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದವು. ಆದರೆ ನಾವು ಇಂದು ಅಂಧಕಾರದಲ್ಲಿದ್ದೇವೆ ಎನಿಸುತ್ತಿದೆ. ಇದು ಹೆಣ್ಣು ಮಕ್ಕಳ ಅಸ್ತಿತ್ವದ ಬಿಕ್ಕಟ್ಟಿನ ಸಮಯ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಸರ್ಕಾರ ತನ್ನ ಹೊಣೆಗಾರಿಕೆಯನ್ನು ಅರಿಯಬೇಕಾಗಿದೆ. ನಮ್ಮ ರಾಜಕಾರಣಿಗಳು ಅಸಮರ್ಪಕರು, ದುರ್ಬಲ ಮನಸ್ಥಿತಿಯವರಾಗಿದ್ದಾರೆ. ಉನ್ನಾವೋ ಹಾಗೂ ಕಥುವಾದಲ್ಲಿ ನಡೆದಂತಹ ಘಟನೆ ಸಂಘಪರಿವಾರದಂತಹ ಸಂಘಟನೆಗಳಿಂದ ಉತ್ತೇಜಿತರಾದ ಬಹುಸಂಖ್ಯಾತರ ಹೋರಾಟದ ಫಲವಾಗಿದೆ. ಸರ್ಕಾರಿ ಇಂತಹ ಘಟನೆಗಳನ್ನು ತಡೆಯುವಲ್ಲಿ ವಿಫಲವಾಗಿದೆ. ದಲಿತರಿಗೆ, ಅಲ್ಪಸಂಖ್ಯಾತರಿಗೆ ಜೀವ ಭಯ ಕಾಡುತ್ತಿದೆ. ದೇಶದಲ್ಲಿ ಬದುಕಲು ಭಯಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಇಂತಹವರಿಗೆ ಭರವಸೆ ನೀಡುವ ಕೆಲಸದಲ್ಲಿ ವಿಫಲವಾಗಿದೆ. ಉನ್ನಾವೋ , ಕಥುವಾದಂತಹ ಘಟನೆಗಳ ಜವಾಬ್ದಾರಿ ಹೊರಲು ಯಾರಾದರೂ ಸಿದ್ಧರಿದ್ದಾರೆಯೇ ಎಂದು ಪತ್ರದಲ್ಲಿ ಪ್ರಶ್ನಿಸಲಾಗಿದೆ.

ಈ ಪತ್ರಕ್ಕೆ ಸಹಿ ಹಾಕಿದವರಲ್ಲಿ ಇಟಲಿಯ ಭಾರತದ ಮಾಜಿ ರಾಯಭಾರಿ ಕೆ.ಪಿ ಫಾಬಿಯಾನ್‌, ಮಾಜಿ ಆರೋಗ್ಯ ಕಾರ್ಯದರ್ಶಿ ಸುಜಾತಾ ರಾವ್‌, ಮಾಜಿ ವಿದೇಶಿ ವ್ಯವಹಾರಗಳ ಕಾರ್ಯದರ್ಶಿ ನರೇಶ್ವರ್‌ ದಯಾಲ್‌ ಸೇರಿದಂತೆ ಅನೇಕರು ಈ ತಂಡದಲ್ಲಿದ್ದಾರೆ.

ನಾವು ಯಾವುದಕ್ಕೂ ಸಂಬಂಧವಿಲ್ಲದ ನಾಗರಿಕರು ಎಂಬ ಹೆಸರಿನಡಿ ಈ ಪತ್ರವನ್ನು ಬರೆಯಲಾಗಿದ್ದು, ಈ ಎರಡೂ ಪ್ರಕರಣಗಳು ನಡೆದಾಗಲೂ ಮೋದಿಯವರ ಸರ್ಕಾರವಿದೆ. ನಿಮಗೆ ಎಲ್ಲಾ ರೀತಿಯ ಅಧಿಕಾರವನ್ನೂ ನೀಡಲಾಗಿದೆ. ಈ ಘಟನೆಗಳಿಗೆ ಕೇವಲ ನೀವು ಹಾಗೂ ನಿಮ್ಮ ಸರ್ಕಾರ ಹೊಣೆಯಾಗುತ್ತದೆ ಎಂದಿದ್ದಾರೆ.

 

Categories
Breaking News State

ಸಿದ್ದರಾಮಯ್ಯರವರಿಗೆ HDK ಬಹಿರಂಗ ಪತ್ರ : ಪತ್ರದಲ್ಲಿದೆ ಇಂಟರೆಸ್ಟಿಂಗ್‌ ಮಾಹಿತಿ….!!

ಮಾನ್ಯ ಸಿದ್ದರಾಮಯ್ಯನವರು ಇತ್ತೀಚೆಗೆ ಜೆಡಿಎಸ್ ಪಕ್ಷ ದೇವೇಗೌಡ ಹಾಗೂ ನನ್ನ ಬಗ್ಗೆ ಹಲವು ಬಾರಿ ಟೀಕಿಸಿದ್ದಾರೆ. ದ್ವೇಷ ಭರಿತವಾಗಿ ಮಾತನಾಡಿದ್ದಾರೆ, ಪದೇ ಪದೆ ಅಪ್ಪನಾಣೆ ಎಂಬ ಪದಬಳಕೆ ಮಾಡುತ್ತಿದ್ದಾರೆ. ಇದೆಲ್ಲಕ್ಕು ಸೂಕ್ತ ಉತ್ತರ ನೀಡಲೇ ಬೇಕಾಗಿದೆ. ಅದಕ್ಕಾಗಿ ಸಿದ್ದರಾಮಯ್ಯಗೆ ಈ ಬಹಿರಂಗ ಪತ್ರ.

ಮೊದಲನೇದಾಗಿ…ಮಾಧ್ಯಮದವರು ನನ್ನ ಪ್ರಶ್ನೆ ಎತ್ತಿದ್ದರೆ ಸಾಕು ಅವರಪ್ಪನಾಣೆ ಗೆಲ್ಲಲ್ಲ ಎಂದು ನೀವು ಉದ್ಘರಿಸುತ್ತೀರಿ.‌ ತಂದೆಯೇ ಗುರು, ಗುರುವೇ ತಂದೆ. ಇದು ಇಡೀ ಭಾರತೀಯರ ನಂಬಿಕೆ‌. ಪದೇ ಪದೇ ಅವರಪ್ಪನಾಣೆ ಎನ್ನುವ ಮೂಲಕ ನೀವು ತಂದೆ ಸ್ಥಾನದಲ್ಲಿರುವವರಿಗೆ, ಗುರುಗಳಿಗೆ, ಇಡೀ ಭಾರತೀಯರ ನಂಬುಗೆಗಳಿಗೆ ಭಂಗ ತರುತ್ತಿದ್ದೀರಿ. ನೀವಾಡುತ್ತಿರುವ ಪ್ರತೀ ಪ್ರಮಾಣಗಳು ನಿಮ್ಮ ಭವಿಷ್ಯವನ್ನೇ ಸುತ್ತುವರಿಯಲಿವೆ ಎಚ್ಚರ.
ಕಾಕತಾಳಿಯವೆಂಬಂತೆ ನನ್ನ ತಂದೆ ದೇವೇಗೌಡರು ನಿಮ್ಮ ರಾಜಕೀಯ ಗುರು. ಗುರುವಿಗೇ ಗೌರವ ಕೊಡದ, ಗುರುವಿಗೆ ನಿಷ್ಠರಲ್ಲದ ನೀವು ಜನರಿಗೆ ಗೌರವ ಕೊಡುವಿರೇ, ಜನರಿಗೆ ನಿಷ್ಠರಾಗಿರುತ್ತೀರೇ?

ಬಾಳಿ ಬದುಕಬೇಕಾದ ಯುವಕ, ನಿಮ್ಮ ಪುತ್ರ ಶ್ರೀಯುತ ರಾಕೇಶ್ ನಿಧನ ಹೊಂದಿದಾಗ ತಂದೆಯಾಗಿ ನೀವು ಪಟ್ಟ ಯಾತನೆ, ದುಃಖವನ್ನು ನೆನೆದು ಒಬ್ಬನೇ ಮಗನ ತಂದೆಯಾದ ನಾನೂ ಮಮ್ಮಲ ಮರುಗಿದ್ದೇನೆ. ನಾಡಿನ ತಂದೆ ತಾಯಿಯರೂ ದುಃಖಿಸಿದ್ದಾರೆ. ಅಂಥ ತಂದೆ ಸ್ಥಾನವನ್ನು ನೀವು ಗೇಲಿ ಮಾಡುವುದಾದರೆ, ಅಗೌರವಿಸುವುದಾದರೆ ಆಗಲಿ‌ ಬಿಡಿ. ಇದರ ಪರಾಮರ್ಶೆಯನ್ನು ನಾನು ಜನತಾ ನ್ಯಾಯಾಲಯಕ್ಕೆ ಬಿಡುತ್ತೇನೆ.

ರಾಮನಗರದಲ್ಲಿ ನನ್ನನ್ನು ಸೋಲಿಸುತ್ತೇನೆ ಎಂಬ ನಿಮ್ಮ ಮಾತುಗಳು ದ್ವೇಷ ರಾಜಕಾರಣದ ಪ್ರತೀಕ. ನಿಮ್ಮ ರಾಜಕೀಯ ಜೀವನ ಏಳ್ಗೆ ಕಂಡದ್ದೇ ಇನ್ನೊಬ್ಬರನ್ನು (ಉದಾಹರಣೆಗೆ: ಪರಮೇಶ್ವರ್) ಕುತಂತ್ರದಿಂದ ಸೋಲಿಸಿಯೇ ಅಲ್ಲವೇ? ಹಾಗಾಗಿ ಇನ್ನೊಬ್ಬರನ್ನು ಸೋಲಿಸಿಯೇ ನಿಮಗೆ ಅಭಿವೃದ್ಧಿ. ಆದರೆ ಸೋಲಲು ನಾನು ಪರಮೇಶ್ವರ್ ಅಲ್ಲ. ರಾಮನಗರ ನನ್ನ ರಾಜಕೀಯ ಜನ್ಮಭೂಮಿ. ಅಲ್ಲಿ ನೀವು ಒಂದು ದಿನವಲ್ಲ. ಒಂದು ತಿಂಗಳು ಪ್ರಚಾರ ನಡೆಸಿದರೂ ಅಲ್ಲಿನ ನನ್ನ ತಂದೆ ತಾಯಿಯರು ನನ್ನನ್ನು ಸೋಲಗೊಡರು. ಚನ್ನಪಟ್ಟಣವೂ ಕೂಡ. ನನಗೆ ಗೆಲುವು ನೀಡುವುದಕ್ಕೂ ಮೊದಲು ಅಲ್ಲಿನ ನನ್ನ ಜನ ನನ್ನನ್ನು ಮಗನಾಗಿ ಸ್ವೀಕರಿಸಿದ್ದಾರೆ. ನನ್ನ ಜನರ ನಡುವೆ ನನಗೆ ಇರುವುದು ಚುನಾವಣೆ, ರಾಜಕೀಯವನ್ನು ಮೀರಿದ ಸಂಬಂಧ. ಚುನಾವಣೆ ನಮ್ಮಿಬ್ಬರ ನಡುವೆ ನೆಪವಷ್ಟೇ. ಕ್ಷೇತ್ರದ ಜನರ ಮೇಲೆ ನನಗಿರುವ ಈ ನಿಷ್ಠೆ, ಜನರಿಗೆ ನನ್ನ ಮೇಲಿರುವ ಈ ಮಟ್ಟಿಗಿನ ವಿಶ್ವಾಸ ನಿಮಗೆ ಚಾಮುಂಡೇಶ್ವರಿಯಲ್ಲಿ ಸಿಗಲು ಸಾಧ್ಯವೇ? ಅಲ್ಲಿನ ಜನರೂ ಕೂಡ ನನ್ನನ್ನೇ ಮನೆ ಮಗನಂತೆ ಕಾಣುತ್ತಾರೆಯೇ ವಿನಾ ಉಪಚುನಾವಣೆ ನಂತರ ಇವರ ಸಹವಾಸವೇ ಬೇಡ ಎಂದು ಪಲಾಯನ ಮಾಡಿದ್ದ ನಿಮ್ಮನ್ನಲ್ಲ. ಇಷ್ಟು ಸಾಕು ನಿಮಗೆ ಚಾಮುಂಡೇಶ್ವರಿಯಲ್ಲಿ ಗೆಲುವಾಗುತ್ತದೋ ಸೋಲಾಗುತ್ತದೋ ಹೇಳಲು. ಇನ್ನು ನನ್ನ ಸೋಲಿಸಲು ಬರುವ ನಿಮಗೆ ಮುಖಭಂಗ ಖಚಿತ.

“ದೇವೇಗೌಡರು, ಕುಮಾರಸ್ವಾಮಿ ಮುಖ್ಯಮಂತ್ರಿಗಳಾಗಿದ್ದವರು. ಆಗ ಸಾಲ ಮನ್ನಾ ಮಾಡದವರು ಈಗೇಕೆ ಅದರ ಬಗ್ಗೆ ಮಾತನಾಡುತ್ತಿದ್ದಾರೆ? ಎಂಬುದು ನಿಮ್ಮ ಇನ್ನೊಂದು ಪ್ರಶ್ನೆ.
ಸ್ವಾಮಿ ಸಿದ್ದಾರಾಮಯ್ಯನವರೇ ದೇವೇಗೌಡರು ಈ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಹಣಕಾಸು ಸಚಿವರಾಗಿದ್ದ ಮಹಾನುಭಾವರಾದರೂ ಯಾರು? ತಾವೇ ಅಲ್ಲವೇ? ಹಣಕಾಸು ಸಚಿವರಾಗಿ, ಸಾಲ ಮನ್ನಾ ಮಾಡಬಹುದಾದ ಅವಕಾಶವಿದ್ದೂ, ಮಂತ್ರಿ ಮಂಡಲದ ಹಿರಿಯರಾಗಿ ತಾವೇಕೆ ದೇವೇಗೌಡರಿಗೆ ಸಾಲಮನ್ನಾದ ಕುರಿತು ಪ್ರಸ್ತಾವನೆ ಕೊಡಲಿಲ್ಲ? ಸಲಹೆ ನೀಡಲಿಲ್ಲ. ಆ ಹೊತ್ತಿಗೆ ರೈತರು ಮಾಡಿದ್ದ ಸಾಲದ ಮೇಲಿನ ಬಡ್ಡಿ ಹೊರೆ ಹೆಚ್ಚಾಗಿತ್ತು‌. ಈ ಹಿನ್ನೆಯಲ್ಲಿ ದೇವೇಗೌಡರು ಬಡ್ಡಿ ಮನ್ನಾ ಮಾಡುವಂತೆ ಅಂದಿನ ಪ್ರಧಾನಿ ಪಿ.ವಿ ನರಸಿಂಹರಾವ್ ಮೇಲೆ ಒತ್ತಡ ತಂದಿದ್ದರು. ಕಡೆಗೆ ದೆಹಲಿಯಲ್ಲಿ ಪ್ರತಿಭಟಿಸುವುದಾಗಿ ಎಚ್ಚರಿಸಿದ್ದರು. ದೇವೇಗೌಡರಿಗೆ ಮಣಿದ ಪ್ರಧಾನಿ ರೈತರ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಿದ್ದರು. ಆದರೆ ರಾಜ್ಯದ ಹಣಕಾಸು ಸಚಿವರಾಗಿದ್ದ ನೀವು ಈ ಇಡೀ ಬೆಳವಣಿಗೆಯನ್ನು ಮುಗುಂ ಆಗಿ ನೋಡುತ್ತಾ ಕುಳಿತಿದ್ದರೇ ವಿನಾ ರೈತರ ನೆರವಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಿಲ್ಲ‌. ಈಗ ನಿಮ್ಮ ಸರ್ಕಾರವೇ ಬಂದ ಮೇಲೂ ಸಾಲ ಮನ್ನ ಮಾಡಲಿಲ್ಲ. ಸಾಲ ಮನ್ನಾ ಮಾಡುವುದಾಗಿ ಘೋಷಿಸಿ, ಜಾರಿಗೆ ತರದೇ ವಂಚನೆ ಮಾಡಿದ ನಿಮ್ಮಿಂದ ಜೆಡಿಎಸ್ ಪಕ್ಷ ಸಾಲ ಮನ್ನಾದ ಬಗ್ಗೆ ಪಾಠ ಹೇಳಿಸಿಕೊಳ್ಳಬೇಕೆ. ನಿಮ್ಮ ಮಾತು ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತಿದೆ.
ನಾನು ಮುಖ್ಯಮಂತ್ರಿಯಾಗಿದ್ದ ವೇಳೆ ಸಾಲ ಮನ್ನಾ ಮಾಡಲಿಲ್ಲವೇಕೆ ಎಂಬ ನಿಮ್ಮ ಪ್ರಶ್ನೆ ಬೌದ್ಧಿಕ ದೀವಾಳಿತನದ್ದು. ನನ್ನ ಅಧಿಕಾರವಧಿಯಲ್ಲಿ ಅದೂ ಸಮ್ಮಿಶ್ರ ಸರ್ಕಾರವಿದ್ದರೂ, ಬಿಜೆಪಿಯವರು ಹಣಕಾಸು ಸಚಿವರಾಗಿದ್ದರೂ, ಎಲ್ಲರನ್ನೂ ಎದುರು ಹಾಕಿಕೊಂಡು ರೈತರ 25ಸಾವಿರ ರೂಪಾಯಿ ವರೆಗಿನ ಎಲ್ಲ ಬ್ಯಾಂಕ್​ಗಳಲ್ಲಿನ ಸಾಲ ಮನ್ನಾ ಮಾಡಿದ್ದೇನೆ. ಹಣ ಪಾವತಿಯೂ ಆಗಿದೆ. ನಿಮ್ಮ ಸರ್ಕಾರದಂತೆ ಕೇವಲ ಘೋಷಣೆಯಾಗಿಯೇ ಉಳಿಯಲ್ಲಿಲ್ಲ ನನ್ನ ಭರವಸೆ. ಕೃಷಿ ಸಾಲ ಮನ್ನಾದ ವಿಚಾರದಲ್ಲಿ ನಾಡಿನ ರೈತರು ಕುಮಾರಸ್ವಾಮಿ ಮೇಲೆ ವಿಶ್ವಾಸ ಇಡುತ್ತಾರೋ ಸಿದ್ದರಾಮಯ್ಯ ಅವರ ಮೇಲೆ ವಿಶ್ವಾಸವಿಡುತ್ತಾರೋ ಎಂಬುದನ್ನು ಈ ಚುನಾವಣೆ ನಿರ್ಧಾರ ಮಾಡಲಿದೆ.

ಜೆಡಿಎಸ್ ಪಕ್ಷದಲ್ಲಿದ್ದಿದ್ದರೆ ನಾನು ಮುಖ್ಯಮಂತ್ರಿ ಆಗಿರುತ್ತಿದ್ದೆ. ಕುಮಾರಸ್ವಾಮಿಗೆ ಅಧಿಕಾರ ಸಿಗುತ್ತಿರಲಿಲ್ಲ‌. ಮಕ್ಕಳನ್ನು ಮುಖ್ಯಮಂತ್ರಿ ಮಾಡಲೆಂದೇ ನನ್ನನ್ನು ಹೊರ ಹಾಕಲಾಯಿತು ಎಂಬುದು ಸಿದ್ದರಾಮಯ್ಯ ಆರೋಪ.
ನೀವು ಕಡೆಗೂ ಸತ್ಯ ಒಪ್ಪಿಕೊಂಡಿದ್ದೀರಿ. ಈ ಮಾತಿನೊಂದಿಗೆ “ದೇವೇಗೌಡರು ತಮ್ಮನ್ನು ಮುಖ್ಯಮಂತ್ರಿ ಸ್ಥಾನದಿಂದ ವಂಚಿಸಿದರು” ಎಂಬ ನಿಮ್ಮ ಆರೋಪವನ್ನು ಸ್ವತಃ ನೀವೇ ಸುಳ್ಳು ಎಂದು ಸಾರಿ ಹೇಳಿದ್ದೀರಿ. ಜೆಡಿಎಸ್ ಪಕ್ಷದಲ್ಲಿ ನಿಮಗೆ ಮುಖ್ಯಮಂತ್ರಿಯಾಗುವ ಅವಕಾಶಗಳೆಲ್ಲವೂ ಇದ್ದವು. ಅಂಥ ಮಾನ್ಯತೆಯನ್ನು ದೇವೇಗೌಡರೂ ಕೊಟ್ಟಿದ್ದರು ಎಂಬುದನ್ನು ನೀವೇ ಒಪ್ಪಿಕೊಂಡಿದ್ದೀರಿ. ಒಂದು ವೇಳೆ ತಾಯಿಯಂಥ ಪಕ್ಷಕ್ಕೆ ನೀವು ದ್ರೋಹ ಬಗೆಯದೇ ಇದ್ದಿದ್ದರೆ ಜೆಡಿಎಸ್ ಮೂಲಕವೇ ಮುಖ್ಯಮಂತ್ರಿ ಆಗಿರುತ್ತಿದ್ದಿರೋ ಏನೋ‌. ಆದರೆ ಪಕ್ಷ ಬಿಟ್ಟು ಹೋಗಿ ದೇವೇಗೌಡರು ನನ್ನನ್ನು ಮುಖ್ಯಮಂತ್ರಿ ಮಾಡಲಿಲ್ಲ ಎಂದು ಆರೋಪಿಸಿದ್ದು ಸರಿಯೇ?
ಇನ್ನು ನನ್ನ ವಿಚಾರ, ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಮಾಡಲು ದೇವೇಗೌಡರು ನನ್ನನ್ನು ಹೊರ ಹಾಕಿದರು ಎಂದು ನೀವು ದೊಡ್ಡ ಗಂಟಲಿನಲ್ಲಿ ಹೇಳಿದ್ದೀರಿ. ಈ ಮಾತು ಅಕ್ಷರಶಃ ಸಿದ್ದರಾಮಯ್ಯ ಅವರ ಆತ್ಮವಂಚನೆಯದ್ದೇ ವಿನಾ ಪ್ರಾಮಾಣಿಕವಾದದ್ದಲ್ಲ‌. 2004ರ ಹೊತ್ತಿಗೆ ನಾನು ಮೊದಲ ಬಾರಿಯ ಶಾಸಕ, ವಿಧಾನಸಭೆಯ ಕಡೆ ಸೀಟಿನಲ್ಲಿ ಕೂರುತ್ತಿದ್ದ ನನಗಾಗಲಿ ಅಥವಾ ದೇವೇಗೌಡರಿಗಾಗಲಿ ನನ್ನನ್ನು ಮುಖ್ಯಮಂತ್ರಿ ಮಾಡುವ ಕಿಂಚಿತ್ತು ಕಲ್ಪನೆಯೂ ಇರಲಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಪುತ್ರ ವ್ಯಾಮೋಹವಿದ್ದಿದ್ದರೆ ನನ್ನ ಸೋದರ ರೇವಣ್ಣ ಅವರೇ ಅಂದು ಉಪಮುಖ್ಯಂತ್ರಿಯಾಗಿರುತ್ತಿದ್ದರು. ಆದರೆ ದೇವೇಗೌಡರಿಗೆ ಅಂದು ಶಿಷ್ಯ ಪ್ರೇಮವಿತ್ತು. ಆ ಕಾರಣಕ್ಕೇ ಸಜ್ಜನರೆನಿಸಿಕೊಂಡಿದ್ದ ಎಂಪಿ ಪ್ರಕಾಶ್, ಸಿಂಧ್ಯಾ, ಹೊರಟ್ಟಿ, ರೇವಣ್ಣ ಅವರಂಥವರನ್ನು ಪಕ್ಕಕ್ಕಿಟ್ಟು ದೇವೇಗೌಡರು ಸಿದ್ದರಾಮಯ್ಯ ಅವರಿಗೆ ಮನ್ನಣೆ ನೀಡಿದ್ದರು. ಉಪಮುಖ್ಯಮಂತ್ರಿ ಮಾಡಿದರು‌. ಸಿಎಂ ಮಾಡಲೂ ಹೋರಾಡಿದ್ದರು. ಆದರೆ ಸಿಎಂ ಸ್ಥಾನ ಸಿಗಲಿಲ್ಲ.‌ಅದಕ್ಕೆ ಕಾರಣವೇನೆಂದು ಈಗಿನ ಅವರ ಪಕ್ಷದ ವರಿಷ್ಠರನ್ನೇ ಅವರು ಪ್ರಶ್ನಿಸಿಕೊಳ್ಳಲಿ, ದಂಡಿಸಿಕೊಳ್ಳಲಿ.
ಜೆಡಿಎಸ್ 25 ಸ್ಥಾನಗಳನ್ನೂ ಗೆಲ್ಲವುದಿಲ್ಲ ಎಂದು ಭವಿಷ್ಯ ನುಡಿದಿದ್ದೀರಿ. ಭಾಷ್ಯ ಬರೆಯಬೇಕಾದವರು ನಾಡಿನ ಜನ. ಸಿದ್ದರಾಮಯ್ಯನವರೇ ನಿಮ್ಮ ಕೈಯಲ್ಲಿ ಏನೂ ಇಲ್ಲ. ನಮ್ಮ ಪಕ್ಷದ ಗೆಲುವಿನ ಬಗ್ಗೆ ಮಾತನಾಡುವ ಮುನ್ನ ಚಾಮುಂಡೇಶ್ವರಿಯಲ್ಲಿ ನಿಮ್ಮ ಗೆಲುವಿನ ಬಗ್ಗೆ ಚಿಂತಿಸಿ.

ಇನ್ನು ಜೆಡಿಎಸ್​ ಪಕ್ಷಕ್ಕೆ ಹಾಕುವ ಪ್ರತಿಯೊಂದು ಮತವೂ ಬಿಜೆಪಿ ಬೆಂಬಲಿಸಿದಂತೆ, ಕೋಮುವಾದವನ್ನು ಬೆಂಬಲಿಸಿದಂತೆ ಎನ್ನುತ್ತೀರಿ. ಜಾತಿ, ಧರ್ಮ, ಸಮುದಾಯಗಳನ್ನು ಒಡೆಯುವುದೇ ನಿಮ್ಮ ಜಾತ್ಯತೀತತೆ. ನಾನು ಆ ಜಾತ್ಯತೀತೆಯಿಂದ ದೂರ ನಿಂತಿದ್ದೇನೆ. ಸರ್ವರ ಒಳಗೊಳ್ಳುವಿಕೆಯಷ್ಟೇ ನನ್ನ ಜಾತ್ಯತೀತತೆ. ಅದಕ್ಕು ಮಿಗಿಲಾಗಿ, ಅದಕ್ಕಿಂತ ಕಡಿಮೆ ನನಗ್ಯಾವ ಜಾತ್ಯತೀತತೆಯೂ ಗೊತ್ತಿಲ್ಲ. ನಿಮ್ಮಂಥ ಡೋಂಗಿ ಜಾತ್ಯತೀತತೆಯನ್ನಂತೂ ನನ್ನ ಬಳಿ ಬಿಟ್ಟುಕೊಂಡಿಲ್ಲ. ನಮಗೆ ಬೀಳುವ ಪ್ರತಿ ಮತ ಬಿಜೆಪಿಗೆ ಸಿಗುವ ಗೆಲುವಲ್ಲ, ಕಾಂಗ್ರೆಸ್​ನ ಸೋಲು. ಆ ಕಾರಣಕ್ಕಾಗಿಯೇ ನಮಗೆ ಮತ ನೀಡದಂತೆ ಹೋದ ಬಂದಲ್ಲೆಲ್ಲ ನೀವು ನಮ್ಮ ವಿರುದ್ಧ ಹೇಳಿಕೆ ನೀಡುತ್ತಿದ್ದೀರಿ.
ಇನ್ನೊಂದು ವಿಚಾರ ಕಾಂಗ್ರೆಸ್​ ಪಕ್ಷಕ್ಕೆ ಹಾಕುವ ಒಂದೊಂದು ಮತವೂ ರಾಜಸ್ಥಾನ, ಮಧ್ಯಪ್ರದೇಶ ವಿಧಾನಸಭೆ ಚುನಾವಣೆ, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ ಪಕ್ಷಕ್ಕೆ ಬೇಕಾದ ಖರ್ಚಿನ ಹಣವಾಗಿ ಪರಿವರ್ತನೆಯಾಗಲಿದೆ. ನಮ್ಮ‌ಜನರ ಮತ ಪಡೆದು ಅಧಿಕಾರಕ್ಕೇರುವ ಕನವರಿಕೆಯಲ್ಲಿರುವ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಟೀಂ ಮುಂದೆ ಬರಲಿರುವ ಚುನಾವಣೆಗಳಿಗಾಗಿ ರಾಜ್ಯವನ್ನು ದೋಚುವ ಯೋಜನೆ ಹಾಕಿಕೊಂಡಿದೆ. ಒಂದು ವೇಳೆ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರ ಪಡೆದಿದ್ದೇ ಆದರೆ ರಾಜ್ಯವನ್ನು ಲೂಟಿ ಮಾಡಿ ರಾಜಸ್ಥಾನ, ಮಧ್ಯಪ್ರದೇಶ ವಿಧಾನಸಭೆ ಚುನಾವಣೆ ಮತ್ತು ಲೋಕಸಭೆ ಚುನಾವಣೆಗೆ ಹಣ ಹೊಂದಿಸಿಕೊಳ್ಳಲಿದೆ. ರಾಹುಲ್ ಗಾಂಧಿಗೆ ಸಿದ್ದರಾಮಯ್ಯ ಮತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಎಟಿಎಂ ರೀತಿಯಂತಾಗಲಿದೆ. ಹಾಗಾಗಿ ರಾಜ್ಯದಲ್ಲಿ ಕಾಂಗ್ರೆಸ್ಗೆ ಹಾಕುವ ಪ್ರತಿ ಮತವೂ ಲೂಟಿಕೋರರಿಗೆ ನೀಡಿದ ಪ್ರೋತ್ಸಾಹವಾಗಲಿದೆ.

ಉತ್ತರ ಕರ್ನಾಟಕದಲ್ಲಿ ಬಸವಣ್ಣ ಎನ್ನುವ ನೀವು ಹಳೇ ಮೈಸೂರಲ್ಲಿ ಕೆಂಪೇಗೌಡ ಎನ್ನುತ್ತೀರಿ.ಆ ಇಬ್ಬರೂ ಮಹನೀಯರು ಕಾಲ, ದೇಶ, ಪ್ರಾಂತ್ಯವನ್ನು ಮೀರಿದ ವಿಶ್ವ ಮಾನವರು ಎಂಬದನ್ನು ಮರೆತು ಮತಕ್ಕಾಗಿ ಅವರ ಭಜನೆ ಮಾಡುತ್ತೀರಿ.‌ ಹೀಗಿರುವ ನಿಮ್ಮಂಥವರಿಂದ ಜಾತ್ಯತೀತತೆ, ಬದ್ಧತೆಯನ್ನು ಹೇಳಿಸಿಕೊಳ್ಳುವ ಅಗತ್ಯ ನಮಗಿಲ್ಲ.

Categories
Breaking News District

ನಮ್ಮ ಊರಿಗೆ ಶಾಲೆ ಕಟ್ಟಿಸಿಕೊಡಿ : ಪ್ರಧಾನಿ ಮೋದಿಗೆ ರಕ್ತದಲ್ಲೇ ಆರು ಪುಟ ಪತ್ರ ಬರೆದ ಯುವಕ

ವಿಜಯಪುರ : ಪಟ್ಟಣಕ್ಕೆ ಸರ್ಕಾರಿ ಪ್ರೌಢ ಶಾಲೆ ಬೇಕು ಎಂದು ಪ್ರಧಾನಿ ಮೋದಿಗೆ ಯುವಕನೊಬ್ಬ ಪತ್ರ ಬರೆದಿದ್ದಾನೆ. ವಿಜಯಪುರದ ಮುದ್ದೇ ಬಿಹಾಳ ತಾಲ್ಲೂಕಿನ ನಾಲತವಾಡ ನಿವಾಸಿ ವಿಜಯರಂಜನ ಜೋಷಿ ಪತ್ರ ಬರೆದಿದ್ದು, ಹದಿನೈದು ಸಾವಿರ ಜನಸಂಖ್ಯೆ ಇರುವ ನಾಲತವಾಡ ಪಟ್ಟಣದಲ್ಲಿ ಸರ್ಕಾರಿ ಪ್ರೌಢ ಶಾಲೆ, ಕಾಲೇಜುಗಳು ಯಾವುದೂ ಇಲ್ಲ.

ನಾಲತವಾಡದಲ್ಲಿ ಸರ್ಕಾರಿ ಪ್ರೌಢಶಾಲೆ, ಕಾಲೇಜು ನಿರ್ಮಿಸುವಂತೆ ಶಿಕ್ಷಣ ಇಲಾಖೆಗೆ, ಶಿಕ್ಷಣ ಸಚಿವರಿಗೆ ಹಾಗೂ ರಾಜ್ಯ ಸರ್ಕಾರಕ್ಕೆ ಪತ್ರ ಬರೆದರೂ ಪ್ರಯೋಜನವಾಗಿಲ್ಲ.  ಹತ್ತಾರು ಹಳ್ಳಿಗಳಿಂದ ದೂರ ಹೋಗಿ ವಿದ್ಯಾರ್ಥಿಗಳು ಕಾಲೇಜು ಕಲಿಯಲು ಆಗುತ್ತಿಲ್ಲ. ಉತ್ತರ ಕರ್ನಾಕಟಲ್ಲಿ ಬರಗಾಲ, ಬಡತನ ಇರುವುದರಿಂದ ಇಲ್ಲಿನ ಜನ ಖಾಸಗಿ ಶಾಲೆಗೆ ಕಳಿಸುವಷ್ಟು ಶ್ರೀಮಂತರಾಗಿಲ್ಲ. ಸರ್ಕಾರಿ ಶಾಲೆ ಇಲ್ಲದೆ, ಶಿಕ್ಷಣ ಸಿಗದ ಕಾರಣ ಬಾಲ್ಯ ವಿವಾಹಗಳು ಹೆಚ್ಚಾಗುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ರಾಜ್ಯ ಸರ್ಕಾರಕ್ಕೆ ಪತ್ರ ಬರೆದರೂ ಯಾವುದೇ ಪ್ರತಿಕ್ರಿಯೆ ನೀಡದ್ದರಿಂದ ನಮಗೆ ನೋವಾಗಿದೆ. ನೀವಾದರೂ ನಮ್ಮ ಸಮಸ್ಯೆಗೆ ಸ್ಪಂದಿಸುತ್ತೀರಿ ಎಂಬ ನಂಬಿಕೆ ಮೇಲೆ ಪತ್ರ ಬರೆದಿದ್ದಾರೆ.

Categories
Breaking News National

ಮೋದಿಗೆ ತಾನು ಪ್ರಧಾನಮಂತ್ರಿ ಎಂಬ ಅಹಂಕಾರ ಹೆಚ್ಚಾಗಿದೆ : ಅಣ್ಣಾ ಹಜಾರೆ

ಮುಂಬೈ : ಪ್ರಧಾನಿ ಮೋದಿ ಅವರಿಗೆ ತಾನು ಪ್ರಧಾನಿ ಎಂಬ ಅಹಂ ಇದೆ. ಅದಕ್ಕೆ ನನ್ನ ಪತ್ರಕ್ಕೆ ಪ್ರತಿಕ್ರಿಯೆ ನೀಡುತ್ತಿಲ್ಲ ಹಾಗೂ ಲೋಕಪಾಲ್‌ ಬಿಲ್‌ ಬಗ್ಗೆ ಚಕಾರವೆತ್ತುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಮಹಾರಾಷ್ಟ್ರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅಣ್ಣಾ ಹಜಾರೆ, ಜನ ಲೋಕಪಾಲ್‌ ಜಾರಿ ಸಂಬಂಧ ಮೋದಿ ನಡೆದುಕೊಳ್ಳುತ್ತಿರುವ ರೀತಿ ಸರಿಯಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಮೋದಿಗೆ ತಾನು ಪ್ರಧಾನಿ ಎಂಬ ಅಹಂ ಆವರಿಸಿಕೊಂಡಿದೆ. ಆದ್ದರಿಂದ ಪತ್ರಗಳಿಗೆ ಇದುವರೆಗೂ ಪ್ರತಿಕ್ರಿಯೆ ನೀಡಿಲ್ಲ ಎಂದಿದ್ದಾರೆ.
 ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದಾಗಿನಿಂದ ನಾನು ಅವರಿಗೆ 30ಕ್ಕೂ ಹೆಚ್ಚು ಪತ್ರಗಳನ್ನು ಬರೆದಿದ್ದೇನೆ. ಆದರೆ ಅವರು ನನ್ನ ಒಂದು ಪತ್ರಕ್ಕೂ ಪ್ರತಿಕ್ರಿಯೆ ನೀಡಿಲ್ಲ. ಮೋದಿಗೆ ಅಹಂ ಇರು ಕಾರಣಕ್ಕೇ ನನ್ನ ಪತ್ರಗಳಿಗೆ ಉತ್ತರ ಬರೆಯುತ್ತಿಲ್ಲ ಎಂದಿದ್ದಾರೆ.
ಇನ್ನು ಜನಲೋಕಪಾಲ್‌ ಮಸೂದೆ ಜಾರಿಗಾಗಿ ತಾವು ಎರಡನೇ ಸುತ್ತಿನ ಸತ್ಯಾಗ್ರಹ ನಡೆಸುವುದಾಗಿ ಹೇಳಿದ ಅಣ್ಣಾ ಹಜಾರೆ, ಮಾರ್ಚ್ 23ರಿಂದ ದೆಹಲಿಯಲ್ಲಿ ಸತ್ಯಾಗ್ರಹ ನಡೆಯಲಿದೆ. ಇದು ಹಿಂದೆಂದೂ ಕಂಡರಿಯದ ಸತ್ಯಾಗ್ರಹವಾಗಲಿದ್ದು, ಕೇಂದ್ರ ಸರ್ಕಾರಕ್ಕೆ ಇದೊಂದು ಎಚ್ಚರಿಕೆ ಗಂಟೆಯಾಗಲಿದೆ. ಯಾವುದೇ ಕಾರಣಕ್ಕೂ ಜನರ ಮತಗಳಿಸಬೇಕೆಂಬ ಕಾರಣಕ್ಕೆ ಇದನ್ನು ಮಾಡುತ್ತಿಲ್ಲ ಎಂದಿದ್ದಾರೆ.