ಇಂದು ಅಯೋಧ್ಯೆ ತೀರ್ಪು ಪ್ರಕಟ ಹಿನ್ನೆಲೆ : ರಾಜ್ಯದಾದ್ಯಂತ ಕಟ್ಟೆಚ್ಚರ – ಶಾಲಾ ಕಾಲೇಜುಗಳಿಗೆ ರಜೆ..!

ಇಂದು 10.30ಕ್ಕೆ ಸುಪ್ರಿಂ ಕೋರ್ಟ್ ನಿಂದ ಅಯೋಧ್ಯೆ ತೀರ್ಪು ಪ್ರಕಟ ಹಿನ್ನೆಲೆ ರಾಜ್ಯದಾದ್ಯಂತ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿದೆ.

ರಾಮನಗರ‌ :-

ರೇಷ್ಮೆ ನಾಡು ರಾಮನಗರ‌ ಜಿಲ್ಲೆಯಾದ್ಯಂತ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿದ್ದು,  5 ಕೆ ಎಸ್ ಆರ್ ಪಿ ತುಕುಡಿ ಸೇರಿದಂತೆ 6 ಡಿಎಆರ್ ತುಕುಡಿ ನಿಯೋಜನೆ ಮಾಡಲಾಗಿದೆ. ಕಳೆದ ರಾತ್ರಿಯಿಂದಲೇ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಜಾರಿಗೊಳಿಸಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿದೆ ಎಂದು ರಾಮನಗರ ಎಸ್ಪಿ ಅನೂಪ್ ಎ ಶೆಟ್ಟಿ ಮಾಹಿತಿ ನೀಡಿದ್ದಾರೆ.

ವಿಜಯಪುರ :-

ವಿಜಯಪುರ ಜಿಲ್ಲೆಯಲ್ಲಿ ಎಲ್ಲ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈಗಾಗಲೇ ಸರ್ವ ಧರ್ಮದ ಮುಖಂಡರೊಂದಿಗೆ ಸಭೆ ನಡೆಸಿರುವ ಪೊಲೀಸರು ಅಹಿತಕರ ಘಟನೆ ನಡೆಯದಂತೆ ಗುಂಪುಗಾರಿಕೆಗೆ ಮಾಡುವಂತಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಜಿಲ್ಲಾದ್ಯಂತ 3 ಕೆ ಎಸ್ ಆರ್ ಪಿ, 700 ಜನ ಪೊಲೀಸ್ ಸಿಬ್ಬಂದಿ, 10 ಡಿಆರ್ ತುಕಡಿ ನಿಯೋಜನೆ ಮಾಡಿರುವ ಪೊಲೀಸರು ಸಾಮಾಜಿಕ ಜಾಲ ತಾಣಗಳ ಮೇಲೆ ನಿಗಾ ವಹಿಸಿದ್ದಾರೆ. ಜೊತೆಗೆ ತೀರ್ಪು ಹಿನ್ನೆಲೆಯಲ್ಲಿ ಪೊಲೀಸರ ರಜೆ ಕೂಡ ರದ್ದು ಮಾಡಲಾಗಿದೆ ಎಂದು ವಿಜಯಪುರ ಎಸ್ಪಿ ಪ್ರಕಾಶ ಅಮ್ರಿತ್ ನಿಕ್ಕಮ್ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ. ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪದವಿ ಪರೀಕ್ಷೆ ಕೂಡ ಮುಂದೂಡಲಾಗಿದೆ.

ಶಿವಮೊಗ್ಗ :-

ಅಯೋಧ್ಯೆ ತೀರ್ಪು ಹಿನ್ನೆಲೆಯಲ್ಲಿ ಇಂದು ನಡೆಯಬೇಕಿದ್ದ ಪರೀಕ್ಷೆ ಮುಂದೂಡಿಕೆ ಮಾಡಲಾಗಿದೆ. ಕುವೆಂಪು ವಿಶ್ವವಿದ್ಯಾಲಯದ ವ್ಯಾಪ್ತಿಗೆ ಒಳಪಡುವ ಎಲ್ಲಾ ಪದವಿ ಪರೀಕ್ಷೆಗಳು ಮುಂದೂಡಲಾಗಿದೆ. ಇಂದು ನಡೆಯಬೇಕಿದ್ದ ಪರೀಕ್ಷೆಗಳ ಮುಂದಿನ ದಿನಾಂಕವನ್ನು ನಂತರ ಅಭ್ಯರ್ಥಿಗಳಿಗೆ ತಿಳಿಸಲಾಗುವುದು  ಎಂದು ವಿವಿಯ ಪರೀಕ್ಷಾಂಗ ಕುಲಸಚಿವ ಪ್ರೊ. ಎಂ ವೆಂಕಟೇಶ್ವರುಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೈಸೂರು :-

ಸಾಂಸ್ಕೃತಿಕ ನಗರಿ ಮೈಸೂರಿನಲ್ಲೂ ಹೈ ಅರ್ಲಟ್ ಘೋಷಣೆ ಮಾಡಲಾಗಿದೆ. ಮೈಸೂರಿನಲ್ಲಿ ಸೂಕ್ಷ್ಮ ಪ್ರದೇಶಗಳಲ್ಲಿ‌ ಭಾರಿ ಬಂದೂಬಸ್ತ್ ಮಾಡಲಾಗಿದೆ. ಮೈಸೂರಿನ ಪ್ರವಾಸಿ ತಾಣಗಳಲ್ಲು ಹೆಚ್ಚಿನ ಭದ್ರತೆ ನೀಡಲಾಗಿದೆ. ಮೈಸೂರಿನಾಧ್ಯಂತ ಅಹಿತಕರ ಘಟನೆ ನಡೆಯದಿರಲು ಪೊಲೀಸ್ ಇಲಾಖೆ ಕಟ್ಟೆಚ್ಚರ‌ ವಹಿಸಿದೆ.ಮೈಸೂರು ನಗರ ಪೊಲೀಸ್ ಕಮಿಷನರ್ ಕೆ.ಟಿ.ಬಾಲಕೃಷ್ಣ ನೇತೃತ್ವದಲ್ಲಿ 3500 ಪೊಲೀಸರು, 18 ಸಿಆರ್ ತುಕಡಿ, 4 ಕೆಆರ್ ತುಕಡಿ, ,ಶ್ವಾನದಳ, ಬಾಂಬ್ ನಿಷ್ಕ್ರಿಯ ದಳ ಸೇರಿದಂತೆ 3500 ಸಾವಿರ ಸಿಬ್ಬಂದಿಗಳ ನಿಯೋಜನೆ ಮಾಡಲಾಗಿದೆ.ಮೈಸೂರಿನ 12 ಕಡೆ ತಾತ್ಕಾಲಿಕ ಚಕ್ ಪೋಸ್ಟ್ ಸ್ಥಾಪನೆ ಮಾಡಲಾಗಿದೆ. ಮೈಸೂರಿಗೆ ಬರುವ ಎಲ್ಲ ವಾಹನಗಳ ತಪಾಸಣೆ ಮಾಡುವ ಮೂಲಕ, ಮಂದಿರ,‌ಮಸಿದಿಗಳ ಮುಂಭಾಗಕ್ಕೆ‌ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಜೊತೆಗೆ ಮೈಸೂರಿನ ಶಾಲಾ ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ. ಇದರಿಂದ ನಗರ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿಗಳು ಗೊಂದಲದಿಂದ ಓಡಾಡುತ್ತಿರುವ ದೃಶ್ಯಗಳು ಕಂಡುಬಂದಿವೆ.

ದಾವಣಗೆರೆ :-

ಇಂದು ನಡೆಯಬೇಕಿದ್ದ ದಾವಣಗೆರೆ ವಿವಿಯ ಪರೀಕ್ಷೆಗಳು ಮುಂದೂಡಲಾಗಿದೆ ಎಂದು ವಿವಿ ಮೌಲ್ಯಮಾಪನ ಕುಲಸಚಿವ ಡಾ.ಅನಿತಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಾಸನ :-
ಹಾಸನ ಜಿಲ್ಲೆಯಲ್ಲಿ ಶಾಂತಿ ಕಾಪಾಡುವಂತೆ ಜಿಲ್ಲಾಧಿಕಾರಿ ಆರ್,ಗಿರೀಶ್ ಮನವಿ ಮಾಡಿದ್ದಾರೆ. ಹಾಸನ ಜಿಲ್ಲೆಯಾದ್ಯಂತ ಎಲ್ಲೆಡೆ ಬಾರೀ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳು ಮುಚ್ಚುವಂತೆ ಆದೇಶ ಹೊರಡಿಸಲಾಗಿದೆ.ಜೊತೆಗೆ ಮದ್ಯದಂಗಡಿಗಳನ್ನು ಮುಚ್ಚುವಂತೆ ಆದೇಶ ಹೊರಡಿಸಲಾಗಿದೆ. ಆಯಕಟ್ಟಿನ ಜಾಗಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು,  ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿಗೆ ಜಿಲ್ಲಾಧಿಕಾರಿ ಗಿರೀಶ್ ರಿಂದ ಆದೇಶ ಹೊರಡಿಸಲಾಗಿದೆ.  ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆ, ಪಟ್ಟಣ ಪಂಚಾಯತಿ, ನಗರಸಭೆ, ಪುರಸಭೆ, ಗ್ರಾಮ ಪಂಚಾಯತ್ ಗಳಿಗೂ ಇಂದು ಬೆಳಗ್ಗೆಯಿಂದ ನಾಳೆ ಬೆಳಿಗ್ಗೆವರೆಗೆ 144 ಸೆಕ್ಷನ್ ಜಾರಿ ಇರಲಿದೆ ಎಂದು ಹೇಳಲಾಗಿದೆ.

ಚಿಕ್ಕಮಗಳೂರು :-

ಕಾಫಿನಾಡು ಚಿಕ್ಕಮಗಳೂರಿನಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಇನಾಂ ದತ್ತಾತ್ರೇಯ ಪೀಠ ಸೇರಿದಂತೆ ಎಲ್ಲೆಡೆ ಖಾಕಿ ಕಟ್ಟೆಚ್ಚರ ವಹಿಸಲಾಗಿದ್ದು,  ಜಿಲ್ಲೆಯಾದ್ಯಂತ 2000ಕ್ಕೂ ಅಧಿಕ ಪೊಲೀಸರ ನಿಯೋಜನೆ ಮಾಡಲಾಗಿದೆ. ರಾತ್ರಿಯಿಂದಲೇ ನಗರದಲ್ಲಿ ಪೊಲೀಸರ ನಿರಂತರ ಬೀಟ್ ಜೊತೆಗೆ ಮದ್ಯ ಮಾರಾಟ, ಸಾಗಾಟ ನಿಷೇಧ ಮಾಡಲಾಗಿದೆ. ಇಂದು ನಡೆಯಬೇಕಿದ್ದ ಕುವೆಂಪು ವಿವಿ ಪರೀಕ್ಷೆಗಳು ಮುಂದೂಡಿಕೆ ಮಾಡಲಾಗಿದೆ.

ಕೊಪ್ಪಳ :-

ಕೊಪ್ಪಳ ಜಿಲ್ಲೆಯಲ್ಲಿ 144 ಜಾರಿ ಮಾಡಲಾಗಿದೆ. ಇಂದು ಬೆಳಿಗ್ಗೆ 6 ಗಂಟೆಯಿಂದ ನಾಳೆ ಬೆಳಿಗ್ಗೆ 6 ಗಂಟೆ ತನಕ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಆದೇಶ ಹೊರಡಿಸಿದ್ದಾರೆ. ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದ್ದು, ಯಾವುದೇ ಸಭೆ ಸಮಾರಂಭ ಮಾಡದಂತೆ ಆಟೋ ಮೂಲಕ ಪ್ರಚಾರ ಮಾಡಲಾಗುತ್ತಿದೆ. ಜೊತೆಗೆ ಮಸೀದಿ, ದೇವಸ್ಥಾನ ಸೂಕ್ಷ್ಮ ಪ್ರದೇಶ ಬಳಿ ಪೊಲೀಸ್ ಸರ್ಪಗಾವಲು ನಿಯೋಜಿಸಲಾಗಿದೆ.

 ಹುಬ್ಬಳ್ಳಿ- ಧಾರವಾಡ :-
ಅವಳಿ ನಗರಾದದ್ಯಂತ ವ್ಯಾಪಕ ಭದ್ರತೆ ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ‌ವ144ರ ಅಡಿಯಲ್ಲಿ ನಿಷೇದಾಜ್ಞೆ ಜಾರಿಗೊಳಿಸಲಾಗಿದೆ. ಕಮ್ಯುನಲ್ ಗೂಂಡಾಗಳ ಮೇಲೆ‌ ತೀವ್ರ ನಿಗಾ ವಹಿಸಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಸಿಬ್ಬಂಧಿ ನೇಮಿಸಿ, ಕಟ್ಟೆಚ್ಚರ ಇರಿಸಲಾಗಿದೆ. ಜೊತೆಗೆ ವಿಜಯೋತ್ಸವ, ಪ್ರತಿಭಟನೆ, ಮೆರವಣಿಗೆಗಳಿಗೆ ನಿರ್ಬಂಧ ಹೇರಲಾಗಿದೆ. ಅವಳಿ ನಗರದಾದ್ಯಂತ ಸಾರಾಯಿ ಮಾರಾಟ ನಿಷೇಧಿಸಲಾಗಿದೆ. ತೀರ್ಪು ಏನೇ ಬಂದರೂ ಸಕಾರಾತ್ಮಕವಾಗಿ ಸ್ವೀಕರಿಸಬೇಕು.
ಸಾರ್ವಜನಿಕರು ಶಾಂತಿ, ಸೌಹಾರ್ಧತೆಯಿಂದ ವರ್ತಿಸಬೇಕೆಂದು ಪೊಲೀಸ್ ಆಯುಕ್ತ ಆರ್. ದಿಲೀಪ್  ಮನವಿ ಮಾಡಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights