ಈಗೇಕೆ ನೆನಪಾಯ್ತು ಪ್ರಧಾನ ಮಂತ್ರಿಯವರಿಗೆ ಕರ್ನಾಟಕ..? : ಹೀಗೊಂದು ಪ್ರಶ್ನೆ…

ಈಗೇಕೆ ನೆನಪಾಯ್ತು ಪ್ರಧಾನ ಮಂತ್ರಿಯವರಿಗೆ ಕರ್ನಾಟಕ..? ಹೀಗೊಂದು ಪ್ರಶ್ನೆ ಕರ್ನಾಟಕದ ಜನತೆಯಲ್ಲಿ ಕಾಡ್ತಾಯಿದೆ. ಅಷ್ಟಕ್ಕೂ ಈ ಪ್ರಶ್ನೆ ಮೂಡಿದ್ದು ಯಾಕೆ ಗೊತ್ತಾ..? ಕಷ್ಟಕ್ಕೆ ಕರಿಬೇಡ್ರಿ ಊಟಕ್ಕೆ ಮರಿಬೇಡ್ರಿ ಅಂತಾರಲ್ಲ. ಈ ಮಾತು ದೇಶದ ಪ್ರಧಾನಿಯವರು ಕರ್ನಾಟಕಕ್ಕೆ ಆಗಮಿಸ್ತಾಯಿರೋದಕ್ಕೆ ಅನ್ವಯಿಸುತ್ತೆ ಅಂತ ಗುಸು ಗುಸು ಮಾತಾಡಿಕೊಳ್ತಾಯಿದ್ದಾರೆ ಜನ. ಯಾಕೆಂದ್ರೆ ಕೇಂದ್ರದಿಂದ ಹಿಡಿದು ರಾಜ್ಯದವರೆಗೆ ಅಧಿಕಾರ ಅವರ ಕೈಲೇ ಇರೋದು ಕಣ್ರಿ ಜೋರಾಗಿ ಹೀಗೆಂದು ಮಾತಾಡಿಬಿಟ್ರೆ ನಮ್ಗೆ ಕಷ್ಟ. ಯಾಕೆ ಬೇಕು ಅಂತಾಯಿದ್ದಾರೆ ಮಂದಿ.

ಹೌದು… ಲೋಕಸಭಾ ಚುನಾವಣೆ ವೇಳೆ ಕರ್ನಾಟದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪ್ರವಾಸ ಬಲೂ ಜೋರಾಗಿತ್ತು. ಚಿತ್ರದುರ್ಗ, ಮೈಸೂರು, ಬೆಂಗಳೂರು ಹೀಗೆ ಸುಮಾರಷ್ಟು ಕಡೆ ಪ್ರಧಾನಿ ತಮ್ಮ ಪಾದವನ್ನ ಇರಿಸಿದ್ರು, ಆಯಾ ಸ್ಥಳದ ವಿಶೇಷತೆಯನ್ನ ಕನ್ನಡದಲ್ಲೇ ಹೇಳಿ ಜನರ ಮನ ಗೆದ್ರು. ಅವರಾಡಿದ ಮಾತುಗಳನ್ನ ಕೇಳಿ ಶಿಳ್ಳೆ ಹೊಡೆದ ಜನ ಬಿಜೆಪಿಗೆ ಬಹುಮತ ಕೊಟ್ಟು ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು ಕೂಡ ತಂದು ಕೊಟ್ರು. ಇದೇ ಜೋಶ್ ನಲ್ಲಿ ನಮ್ಮ ಬಿ.ಎಸ್ ವೈ ಯಡಿಯೂರಪ್ಪ ಕೂಡ ಸಿಎಂ ಪಟ್ಟಕ್ಕೆ ಬಂದು ತಿಂಗಳುಗಳು ಉರುಳುತ್ತಾ ಇವೆ.

ಚುನಾವಣೆಯಲ್ಲೇನೋ ಜನ ಬಹುಮತ ಕೊಟ್ಟು ಬಿಜೆಪಿಯನ್ನು ಗೆಲ್ಲಿಸಿದ್ರು. ನಂತ್ರ ಜನರಿಗೆ ಬಿಜೆಪಿ ಬಗ್ಗೆ ಬೇಸರ ಉಂಟಾಗಿದೆ. ಅದು ಅಂತಿಂಥ ಬೇಸರವಲ್ಲ. ಈ ಗಳಿಗೆ ಮತ್ತೊಮ್ಮೆ ಚುನಾವಣೆ ಬರಲಿ ಆಮೇಲೆ ನಾವೇನು ಅನ್ನೋದನ್ನ ಹೇಳ್ತೀವಿ ಅನ್ನುಷ್ಟು ಕೋಪ ಜನರ ನೆತ್ತಿಗೇರಿಸಿತ್ತು. ಅಷ್ಟಕ್ಕೂ ಜನರು ಇಷ್ಟೊಂದು ಕೋಪಕ್ಕೆ ಗುರಿಯಾಗಿದ್ದು ಯಾಕೆ ಗೊತ್ತಾ..? ಪ್ರವಾಹ ಕಣ್ರಿ… ಪ್ರವಾಹ… ಈ ವರ್ಷದಲ್ಲಾದ ಯಾರೂ ಕೇಳಿ ಕಂಡರಿಯದ ಭಾರೀ ಪ್ರವಾಹ…

ಎಲ್ಲಿ ನೋಡಿದರಲ್ಲಿ ನೀರು.. ಮನೆಯಲ್ಲಿ ನೀರು.. ಶಾಲೆಯಲ್ಲಿ ನೀರು.. ಹೊಲ-ಗದ್ದೆಯಲ್ಲಿ ನೀರು.. ನೀರು.. ನೀರು.. ಕರ್ನಾಟದ ಬಹುಪಾಲು ಪ್ರದೇಶಗಳು ನೀರಿನಲ್ಲಿ ಮುಳುಗಿ ಹೋಗಿತ್ತು. ಜನ ಇರಲು ಸೂರಿಲ್ಲದೆ, ತಿನ್ನಲು ಆಹಾರವಿಲ್ಲದೇ,, ಹಸು ಕಂದಮ್ಮಗಳನ್ನ ಮಡಿಲಿನಲ್ಲಿಟ್ಟುಕೊಂಡು, ವಯಸ್ಸಾದವರನ್ನ ಎತ್ತುಕೊಂಡು ಅಕ್ಷರಶ: ಬೀದಿ ಪಾಲಾಗಿ ಹೋಗಿದ್ರು.. ಕೈ ಮುಗಿತೀವಿ ಸ್ವಾಮಿ ಜಾಗ ಕೊಡಿ, ಊಟ ಕೊಡಿ… ಅಂತ ನೆರೆ ಸಂತ್ರಸ್ತರು ಬೇಡದೇ ಇರೋ ವ್ಯಕ್ತಿಗಳಿಲ್ಲ.

ನೂರಾರು ಜನ ನೀರಿಗೆ ಕೊಚ್ಚಿಹೋಗಿ ತಮ್ಮ ಪ್ರಾಣ ಕಳೆದುಕೊಂಡ್ರು. ಸಾವಿರಾರು ಮೂಕಪ್ರಾಣಿಗಳು ನರಳಿ ನರಳಿ ಜೀವ ಬಿಟ್ವು. ಈ ವೇಳೆ ತಮ್ಮ ನೆರವಿಗಾಗಿ ನೆರೆ ಸಂತ್ರಸ್ತರ ಕಣ್ಣು ಹಾದಿದ್ದು ತಾವು ಮನಸಾರೆ ಮೆಚ್ಚಿ ಗೆಲ್ಲಿಸಿದ ಬಿಜೆಪಿ ಪಕ್ಷದ ಕಡೆಗೆ. ಆಗಿನ್ನು ಬಿ.ಎಸ್ ಯಡಿಯೂರಪ್ಪನವರು ಸಿಎಂ ಸ್ಥಾನ ಅಲಂಕಾರಿಸಿದ್ರು ಅಷ್ಟೇ. ಸಚಿವ ಸಂಪುಟ ವಿಸ್ತರಣೆ ಕೂಡ ಆಗಿರಲಿಲ್ಲ. ಬಿಜೆಪಿ ಅಭ್ಯರ್ಥಿಗಳಿಗೆ ಸಚಿವರಾಗುವ ಕನಸು. ಇವರನ್ನ ಆಯ್ಕೆ ಮಾಡಿದ ಜನರಿಗೆ ತಮ್ಮ ನಾಯಕರು ಬಂದು ಪರಿಹಾರ ನೀಡ್ತಾರೆ ಅನ್ನೋ ಕನಸು. ಆದರೆ ಈ ಕನಸು ಕೇವಲ ಕನಸಾಗಿಯೇ ಉಳಿತು.

ಇಲ್ಲೇ… ಇದೇ ಸಂದರ್ಭದಲ್ಲಿ ನೋಡಿ ಜನ ಬಿಜೆಪಿ ವಿರುದ್ಧ ಕೆಂಡ ಕಾರೋದಕ್ಕೆ ಶುರು ಮಾಡಿದ್ದು. ಚುನಾವಣೆ ಪ್ರಚಾರಕ್ಕೆಂದು ಬಂದ ಮೋದಿ ಅವರು ಪ್ರವಾಹದಲ್ಲಿ ನರಳಿದ ಜನರ ನೋವನ್ನು ಕೇಳಲು ಬರ್ತಾರೆ ಅಂತ ಬಹುದೊಡ್ಡ ಆಸೆಯನ್ನಿಟ್ಟುಕೊಂಡಿದ್ರು ಜನ. ಆದರೆ ಆ ಆಸೆ ಕೊನೆಗೂ ಈಡೇರಲೇ ಇಲ್ಲ. ಯಾಕೆಂದ್ರ ಮೋದಿ ಅವರು ಈ ವೇಳೆ ವಿದೇಶದ ಪ್ರವಾಸದಲ್ಲಿ ಬ್ಯೂಸಿ ಆಗಿದ್ರು. ಕೆಲವೊಂದಿಷ್ಟು ಬಿಜೆಪಿ ನಾಯಕರುಗಳು “ ಮೋದಿ ಅವರು ದೇಶದ ಪ್ರಧಾನಿಗಳು. ಎಲ್ಲಾ ಸಮಯದಲ್ಲಿ ಬರಲು ಆಗುವುದಿಲ್ಲ. ಅವರಿಗೆ ಅವರದ್ದೇ ಆದ ಕೆಲಸಗಳಿರುತ್ತವೆ. ಎಲ್ಲಾ ಸಂದರ್ಭದಲ್ಲಿ ಅವರನ್ನು ನಿರೀಕ್ಷಿಸಕೂಡದು” ಎನ್ನುವ ಮಾತುಗಳನ್ನ ಹೇಳಿ ಜನರ ಬಾಯಿ ಮುಚ್ಚಿಸಿದ್ರು. ಅಷ್ಟೇ ಅಲ್ಲ ಸ್ವತ: ತಾವೇ ಕೇಂದ್ರ ಸರ್ಕಾರಕ್ಕೆ ಪರಿಹಾರ ನೀಡಲು ಮನವಿ ಕೂಡ ಮಾಡ್ತೀವಿ ಅಂದ್ರು” ಪರಿಹಾರಕ್ಕಾಗಿ ಸಿಎಂ ಯಡಿಯೂರಪ್ಪನವರು ದೆಹಲಿಯತ್ತ 2-3 ಬಾರಿ ಪ್ರಯಾಣ ಮಾಡಿದ್ದು ಆಯ್ತು. ಪರಿಹಾರ ಕೊಟ್ರು ಅನ್ನೋ ಮಾತು ಕೇಳಿ ಬಂತೇ ವಿನ:. ಯಾರಿಗೆ ತಲುಪಿತು ಅನ್ನೊದು ಮಾತ್ರ ಗೊತ್ತಾಗಲೇ ಇಲ್ಲ. ಮೋದಿ ಅವರು ಒಂದು ಕಡೆ ಇರಲಿ ರಾಜ್ಯದಲ್ಲಿ ಬಹುಮತ ಪಡೆದು ಆರಿಸಿ ಬಂದ ನಾಯಕರುಗಳು ಕೂಡ ಈ ಬಗ್ಗೆ ಜನರನ್ನ ತೃಪ್ತಿ ಪಡಿಸಲಿಲ್ಲ.

ಪ್ರವಾಹದ ವಿಚಾರವೇ ಮುಂದೆ ರಾಜಕೀಯ ಕೆಸರೆರೆಚಾಟಕ್ಕೆ ಸಿಲುಕಿ, ಪರಿಹಾರ ಕೊಟ್ಟಿದ್ದೇವೆ ಅಂತ ಬಿಜೆಪಿ ನಾಯಕರುಗಳು, ಕೊಟ್ಟಿಲ್ಲ ಜನ ಸಾಯಿತಾಯಿದ್ದಾರೆಂದು ಕಾಂಗ್ರೆಸ್-ಜೆಡಿಎಸ್ ನಾಯಕರು. ಹೀಗೆ ವಾಗ್ವಾದಗಳು ಕೂಡ ನಡೆದು ಹೋದ್ವು. ಪರಿಹಾರ ಕೊಟ್ಟಿದ್ದು ನಿಜವೋ..? ಕೊಡದೇ ಇದ್ದಿದ್ದು ನಿಜವೋ..? ಆದರೆ ಜನ ಮಾತ್ರ ಪ್ರವಾಹದ ಸಂಕಷ್ಟದಿಂದ ಇಂದಿಗೂ ಕೂಡ ಹೊರಬರಲಾಗುತ್ತಿಲ್ಲ ಅನ್ನೋದು ಮಾತ್ರ ಸುಳ್ಳಲ್ಲ.

ಪ್ರವಾಹದ ಉಂಟಾಗಿ ಕೆಲವು ತಿಂಗಳು ಕಳೆದು ಹೋಗಿವೆ. ಆದರೆ ಈಗ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ತುಮಕೂರಿಗೆ ಬರುತ್ತಾರೆಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಅಷ್ಟಕ್ಕೂ ಮೋದಿ ಅವರು ನಾಳೆ ತುಮಕೂರಿಗೆ ಆಗಮಿಸುತ್ತಿರುವುದು ಕಿಸಾನ್ ಸಮ್ಮಾನ್ ಯೋಜನೆ ಅನುಷ್ಠಾನ ಹಾಗೂ ಕೃಷಿ ಕರ್ಮಣ್ ಪ್ರಶಸ್ತಿ ಪ್ರಧಾನ ಕಾರ್ಯಕ್ರಮಕ್ಕೆ.

ಹೀಗಾಗಿ ದೇಶದೆಲ್ಲೆಡೆ ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿಸಿ ಪ್ರತಿಭಟನೆಗಳು ಜೋರಾಗಿ ನಡೆದಿವೆ. ಆದರೆ ಕರ್ನಾಟದಲ್ಲಿ ಮಾತ್ರ ಈ ಬಗ್ಗೆ ವಿರೋಧಗಳು ಅಷ್ಟಾಗಿ ಕಂಡು ಬರ್ತಾಯಿಲ್ಲ. ಹೀಗಾಗಿ ಕರ್ನಾಟಕದಲ್ಲಿ ಪ್ರಚಾರ ಮಾಡಲು ಆಗಮಿಸುತ್ತಿದ್ದಾರೆ ಅನ್ನೋ ಮಾತಿದೆ.

ಆದರೂ ಪ್ರಧಾನಿ ಮೋದಿಗೆ ತುಮಕೂರಿನಲ್ಲಿ ರೈತರ ವಿರೋಧದ ಬಿಸಿ ತಟ್ಟಲಿದೆ. ಡಾ ಸ್ವಾಮಿನಾಥನ್ ವರದಿ ಅನುಷ್ಠಾನಕ್ಕೆ ವಿಳಂಬ ನೀತಿ ಅನುಸರಿಸುತ್ತಿರುವ ಮೋದಿ ಸರ್ಕಾರದ ನಡೆ ಖಂಡಿಸಿ ಹಾಗೂ ರೈತರ ವಿವಿಧ ಬೇಡಿಕೆಗಳನ್ನ ಮುಂದಿಟ್ಟುಕೊಂಡು ನಾಳೆಯ ಪ್ರಧಾನಿ ಕಾರ್ಯಕ್ರಮದಲ್ಲಿ ರಾಜ್ಯ ರೈತ ಸಂಘದ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಕಪ್ಪುಬಟ್ಟೆ ಧರಿಸಿ ಪ್ರತಿಭಟನೆಗೆ ನಿರ್ಧರಿಸಿದ್ದಾರೆ.

ಒಟ್ಟಿನಲ್ಲಿ ನಾಳೆ ಮೋದಿ ತುಮಕೂರಿಗೆ ಆಗಮಿಸುತ್ತಿರುವುದಕ್ಕೆ ರೈತರು ಪ್ರತಿಭಟನೆಗೆ ಮುಂದಾದ್ರೆ, ಕಾರ್ಯಕ್ರಮಕ್ಕೆ ವೇದಿಕೆ ಸಜ್ಜುಗೊಳ್ಳುತ್ತಿದೆ. ರಾಜ್ಯದ ಜನರ ಸಂಕಷ್ಟಗಳಿಗೆ ಪ್ರಧಾನಿಯವರು ಕಿವಿಗೊಡ್ತಾರಾ..? ಯಾವುದಾದರು ಬದಲಾವಣೆಗಾಳಾಗುವ ನಿರೀಕ್ಷೆಗಳನ್ನು ಇಟ್ಟುಕೊಳ್ಳಬಹುದಾ..? ಅನ್ನೋದನ್ನ ಕಾದು ಮಾತ್ರ ನೋಡಬೇಕಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights