ಉಪಚುನಾವಣೆಗೆ ಇಂದಿನಿಂದ ನೀತಿಸಂಹಿತೆ ಜಾರಿ : ಇಂದಿನಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ
ಡಿ. 5ರಂದು ಯಶವಂತಪುರ, ಕೆ.ಆರ್.ಪುರ, ಶಿವಾಜಿನಗರ, ಮಹಾಲಕ್ಷ್ಮೀಲೇಔಟ್, ಹುಣಸೂರು, ಕೆ.ಆರ್. ಪೇಟೆ, ಗೋಕಾಕ್, ಅಥಣಿ, ಕಾಗವಾಡ, ರಾಣೆಬೆನ್ನೂರು, ಯಲ್ಲಾಪುರ, ವಿಜಯನಗರ, ಹಿರೇಕೆರೂರು, ಹೊಸಕೋಟೆ, ಚಿಕ್ಕಬಳ್ಳಾಪುರ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದೆ.
ಕರ್ನಾಟಕ ಉಪ ಚುನಾವಣೆಗೆ ಇನ್ನು 25 ದಿನಗಳು ಬಾಕಿ ಇವೆ. 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಇಂದಿನಿಂದ ನೀತಿಸಂಹಿತೆ ಜಾರಿಯಾಗಲಿದೆ. ಇಂದಿನಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯೂ ಶುರುವಾಗಲಿದೆ.
ಉಪ ಚುನಾವಣೆಗಳಿಗೆ ನಾಮಪತ್ರ ಸಲ್ಲಿಸಲು ನ. 18 ಕೊನೆಯ ದಿನ. ಒಟ್ಟು 17 ಕ್ಷೇತ್ರಗಳ ಶಾಸಕರನ್ನು ಸ್ಪೀಕರ್ ಆಗಿದ್ದ ರಮೇಶ್ ಕುಮಾರ್ ಅನರ್ಹಗೊಳಿಸಿದ್ದರು. ಆದರೆ, ರಾಜರಾಜೇಶ್ವರಿನಗರ ಮತ್ತು ಮಸ್ಕಿ ಕ್ಷೇತ್ರಗಳನ್ನು ಹೊರತುಪಡಿಸಿ 15 ಕ್ಷೇತ್ರಗಳಿಗೆ ಡಿಸೆಂಬರ್ ಮೊದಲ ವಾರದಲ್ಲಿ ಚುನಾವಣೆ ನಡೆಯಲಿದೆ. ಡಿ. 5ರಂದು ಚುನಾವಣೆ ನಡೆಯಲಿದ್ದು, ಡಿ. 9ರಂದು ಫಲಿತಾಂಶ ಪ್ರಕಟವಾಗಲಿದೆ.
ಇಂದಿನಿಂದ ನೀತಿಸಂಹಿತೆ ಜಾರಿ:-
ಇಂದಿನಿಂದ 15 ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣಾ ನೀತಿಸಂಹಿತೆ ಜಾರಿಗೆ ಬರಲಿದೆ. ಇಡೀ ಜಿಲ್ಲೆಯ ಬದಲಿಗೆ ಚುನಾವಣೆ ನಡೆಯುವ ಕ್ಷೇತ್ರಕ್ಕೆ ಮಾತ್ರ ನೀತಿ ಸಂಹಿತೆ ಅನ್ವಯವಾಗುತ್ತದೆ. ನೀತಿ ಸಂಹಿತೆ ಇಡೀ ಜಿಲ್ಲೆಗೆ ಅನ್ವಯಿಸಿದರೆ ಅಭಿವೃದ್ಧಿ ಕಾರ್ಯಗಳಿಗೆ ತೊಂದರೆಯಾಗುತ್ತದೆ ಎಂದು ಮಾರ್ಪಾಡು ಮಾಡಲಾಗಿದೆ. ನ. 18ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿದೆ. ಈ ಹಿಂದೆ ಚುನಾವಣೆ ಘೋಷಣೆಯಾದಾಗ 29 ಮಂದಿ ನಾಮಪತ್ರ ಸಲ್ಲಿಸಿದ್ದರು. ಅದನ್ನು ಕೂಡ ಮಾನ್ಯ ಮಾಡಲಾಗುವುದು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ತಿಳಿಸಿದ್ದಾರೆ.