ಉಪಚುನಾವಣೆಯಲ್ಲಿ ‘ಕೈ’ಅಭ್ಯರ್ಥಿಗಳ ಹೀನಾಯ ಸೋಲು : ದಿನೇಶ್ ಗುಂಡೂರಾವ್ ರಾಜೀನಾಮೆ
ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಸೋಲಿನ ಹಿನ್ನೆಲೆಯಲ್ಲಿ ನೈತಿಕ ಹಾಗೂ ರಾಜಕೀಯ ಹೊಣೆ ಹೊತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ರವರು ರಾಜೀನಾಮೆ ನೀಡಿದ್ದಾರೆ.
ಇಂದು ಸುದ್ದಿಗೋಷ್ಟಿ ನಡೆಸಿದ ದಿನೇಶ್ ಗುಂಡೂರಾವ್, ಬೈಎಲೆಕ್ಷನ್ ಫಲಿತಾಂಶ ನೋಡಿ ನಮಗೆ ಶಾಕ್ ಆಗಿದೆ . ಜನತಾ ನ್ಯಾಯಾಲಯ ಒಳ್ಳೆಯ ತೀರ್ಪು ಕೊಡುತ್ತದೆ ಎಂದು ಭಾವಿಸಿದ್ದೆವು. ಪಕ್ಷಕ್ಕೆ ದ್ರೋಹ ಮಾಡಿದವರಿಗೆ ಶಿಕ್ಷೆ ಆಗುತ್ತೆ ಅಂತ ತಿಳಿದುಕೊಂಡಿದ್ದೆವು. ಆದರೆ, ಜನತಾ ನ್ಯಾಯಾಲಯದ ತೀರ್ಪನ್ನು ಸ್ವಾಗತಿಸುವುದಾಗಿ ತಿಳಿಸಿದರು. ಇನ್ನು ಉಪಚುನಾವಣೆಯಲ್ಲಿ ನಮ್ಮ ಪಕ್ಷದಿಂದಲೂ ಪ್ರಚಾರವನ್ನ ಜೋರಾಗಿ ನಡೆಸಲಾಗಿತ್ತು. ಸೂಕ್ತವಾದ ಅಭ್ಯರ್ಥಿಗಳನ್ನೇ ಈ ಉಪಚುನಾವಣೆಗೆ ಆಯ್ಕೆ ಮಾಡಿ ಕಳಿಸಿದ್ದೆವು. ಆದರೆ, ಜನರ ತೀರ್ಪು ಅನರ್ಹರ ಪರ ಬಂದಿದೆ. ಇದನ್ನು ಒಪ್ಪಿಕೊಳ್ಳುವುದಾಗಿ ತಿಳಿಸಿದರು.
ಇನ್ನು ಮೈತ್ರಿ ಸರ್ಕಾರವನ್ನ ಬೀಳಿಸಿದವರು ಸೋಲುತ್ತಾರೆ ಎಂಬ ನಿರೀಕ್ಷೆ ಆಗಿತ್ತು. ಆದ್ರೆ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳು ಬಯಸಿದ್ದನ್ನ ನಾವೆಲ್ಲಾ ಗೌರವಿಸ್ತೀವಿ. ನಮ್ಮ ಅಪೇಕ್ಷೆ ಮೀರಿದ ತೀರ್ಪು ಜನರಿಂದ ಬಂದಿದೆ. ನಮ್ಮ ಪಕ್ಷದ ಇಬ್ಬರು ಅಭ್ಯರ್ಥಿಗಳು ಗೆದ್ದಿದ್ದಾರೆ. ಹುಣಸೂರಿನಲ್ಲಿ ಮಂಜುನಾಥ್, ಹಾಗೂ ಶಿವಾಜಿನಗರದಲ್ಲಿ ರಿಜ್ವಾನ್ ಅರ್ಷದ್ ಗೆಲುವು ಸಾಧಿಸಿದ್ದಾರೆ. ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡರಿಗೂ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು. ಇನ್ನು ಬಿಜೆಪಿಯಿಂದ ಗೆಲುವು ಸಾಧಿಸಿರುವ 12 ಅನರ್ಹ ಶಾಸಕರಿಗೂ ನನ್ನ ಅಭಿನಂದನೆ ಎಂದರು.
ಇದೇ ವೇಳೆ, ಕಾಂಗ್ರೆಸ್ ಸೋಲು-ಗೆಲುವಿನಲ್ಲಿ ನನ್ನ ಜವಾಬ್ದಾರಿ ಇದೆ. ಹೀಗಾಗಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ದಿನೇಶ್ ಗುಂಡೂರಾವ್ ತಿಳಿಸಿದರು. ಇಂದು ಹೈಕಮಾಂಡ್ಗೆ ರಾಜೀನಾಮೆ ಕೊಟ್ಟಿರುವುದಾಗಿ ಸ್ಪಷ್ಟಪಡಿಸಿದರು…