ಕಾಂಗ್ರೆಸ್ ಹೇಳುವಂತೆ ಮೋದಿಗೆ ಜನ ಟೊಮೆಟೊ, ಕಲ್ಲಿನಿಂದ ಹೊಡಿತಿಲ್ಲ, ಮತಗಳಿಂದ ಹೊಡಿತಾ ಇದ್ದಾರೆ – ಸವದಿ
15 ದಿನ ಮುಂಚೆಯೇ ಕೊಪ್ಪಳಕ್ಕೆ ಬರಬೇಕಿತ್ತು. ಬೆಳಗಾವಿ ಭಾಗದಲ್ಲಿ ಪ್ರವಾಹ ಬಂದ ಕಾರಣ ತಡವಾಗಿದೆ. ಸರಕಾರದ ಅನಯದಾನ ಸದುಪಯೋಗ ಆಗಿದೆಯೋ ಇಲ್ವೊ ಅನ್ನೋದನ್ನ ಪರಿಶೀಲಿಸ್ತಿನಿ ಎಂದು ಕೊಪ್ಪಳದಲ್ಲಿಂದು ಉಪಮುಖ್ಯಮಂತ್ರಿ, ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ.
ಲೋಪ-ದೋಷಗಳ ಬಗ್ಗೆ ಚರ್ಚಿಸ್ತೇನೆ. ಜಿಲ್ಲೆಯ ಅಭಿವೃದ್ಧಿಗಾಗಿ ಪ್ರತಿ ತಿಂಗಳಿಗೆ ಒಮ್ಮೆ ಜಿಲ್ಲಾ ಪ್ರವಾಸ ಮಾಡ್ತಿನಿ. ಭಗವಂತನಲ್ಲಿ ಜಾಸ್ತಿ ಕೊಡಬೇಡ ಅಂತ ಪ್ರಾರ್ಥಿಸೋಣ. ಮೊದಲ ಕಂತಿನ ನೆರೆ ಪರಿಹಾರ ಈಗಾಗಲೇ ಬಂದಿದೆ. ಎರಡನೇ ಹಂತದ ಪರಿಹಾರವೂ ಶೀಘ್ರ ಬರುತ್ತೆ. ಕೇಂದ್ರದ ನೆರೆ ಪರಿಹಾರಕ್ಕೆ ದಾರಿ ಕಾಯದೇ ರಾಜ್ಯದ ಬೊಕ್ಕಸದ 3ಸಾವಿರ ಕೋಟಿ ರೂಪಾಯಿಗಳನ್ನು ವಿನಿಯೋಗಿಸಲಾಗ್ತಿದೆ. ಶಿವರಾಜ ತಂಗಡಗಿ ಸೋಲಿನ ಆಘಾತದಿಂದ ಭ್ರಮ ನಿರಸನಗೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಸರಿ ಹೋಗ್ತಾರೆ. ಕಾಂಗ್ರೆಸ್ನವರು ಹತ್ತು ವರ್ಷಗಳಿಂದ ಮೋದಿಗೆ ಟೊಮೆಟೊ, ಕಲ್ಲಿನಿಂದ ಹೊಡಿತಾರೆ ಜನ ಅಂತ ಹೇಳ್ತಾನೆ ಇದಾರೆ. ಜನ ಮಾತ್ರ ಮೋದಿಗೆ ಮತಗಳಿಂದ ಹೊಡಿತಾ ಇದಾರೆ ಎಂದು ಟಾಂಗ್ ಕೊಟ್ಟಿದ್ದಾರೆ.
ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ಕೊಡಲು ನಾವು ಉತ್ಸುಕರಾಗಿದ್ದೇವೆ. ಇವತ್ತಲ್ಲ ನಾಳೆ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ಬರುತ್ತೆ. ವೀರ ಸಾವರ್ಕರ್ ಸ್ವಾತಂತ್ರ್ಯ ಸೇನಾನಿ. ಅವರಿಗೆ ಭಾರತ ರತ್ನ ಪ್ರಶಸ್ತಿ ಕೊಡಲು ಯಾಕೆ ವಿರೋಧ? ಅನರ್ಹ ಶಾಸಕರು ಇನ್ನೂ ಬಿಜೆಪಿ ಸೇರಿಲ್ಲ. ಅವರು ಪಕ್ಷಕ್ಕೆ ಬಂದ ನಂತರ ಅವರಿಗೆ ಸ್ಥಾನಮಾನಗಳನ್ನು ನೀಡುವ ಕುರಿತು ಯೋಚಿಸಲಾಗುವುದು. ನಾನು ಭವಿಷ್ಯ ಹೇಳಲ್ಲ, ಕೆಲವರು ಭವಿಷ್ಯ ಹೇಳ್ತಿರ್ತಾರೆ. ಸಿದ್ದರಾಮಯ್ಯ ನವೆಂಬರ್ನಲ್ಲಿ ಸರಕಾರ ಬೀಳುತ್ತೆ ಅಂತ ಅವರು ಭವಿಷ್ಯ ಹೇಳಿದ್ದಾರೆ. ಇನ್ನೂ ಮೂರೂವರೆ ವರ್ಷ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿ ಇರುತ್ತೆ. ಮುಂದಿನ ಚುನಾವಣೆಯಲ್ಲೂ ಬಿಜೆಪಿ 5ವರ್ಷಗಳ ಅವಧಿಗೆ ಅಧಿಕಾರಕ್ಕೆ ಬರುತ್ತೆ. ಬೆಳೆವಿಮೆ ವಿಚಾರದಲ್ಲಿ ಅಧಿಕಾರಿಗಳ ಸಣ್ಣಪುಟ್ಟ ಲೋಪದೋಷ ಇವೆ. ವಿಮಾ ಕಂಪನಿಗಳ ತಪ್ಪು ಇದೆ. ರೈತರಿಗೆ ಸಂಕಷ್ಟ ತಂದೊಡ್ಡುವ ವಿಮಾ ಕಂಪನಿಗಳನ್ನು ಕಪ್ಪು ಪಟ್ಟಿಗೆ ಸೇರಿಸ್ತೇವೆ ಎಂದಿದ್ದಾರೆ ಡಿಸಿಎಂ ಸವದಿ.