ಜಗ್ಗಿ ವಾಸುದೇವ್ ಸಂಗ್ರಹಿಸಿರುವ ಹಣದ ಲೆಕ್ಕ ಕೊಡಲು ಹೈಕೋರ್ಟ್ ಆದೇಶ…
’ಕಾವೇರಿ ಕೂಗು’ ಅಭಿಯಾನಕ್ಕಾಗಿ ಸಾರ್ವಜನಿಕರಿಂದ ಕೋಟ್ಯಂತರ ರೂಪಾಯಿ ಸಂಗ್ರಹ ಮಾಡಿರುವ ಇಶಾ ಫೌಂಡೇಶನ್ ಸ್ಥಾಪಕ ಜಗ್ಗಿ ವಾಸುದೇವ್ ಅಫಿಡವಿಟ್ ಮೂಲಕ ಎಷ್ಟು ಹಣ ಸಂಗ್ರಹಿಸಿದ್ದಾರೆ ಮತ್ತು ಯಾವೆಲ್ಲಾ ವಿಧಾನಗಳ ಮೂಲಕ ಸಂಗ್ರಹಿಸಲಾಗಿದೆ ಎಂಬುದನ್ನು ಬಹಿರಂಗಪಡಿಸಬೇಕೆಂದು ಕರ್ನಾಟಕ ಹೈಕೋರ್ಟ್ ಆದೇಶಿಸಿದೆ.
ಆಧ್ಯಾತ್ಮಕ ಸಂಘಟನೆಯಾದ ಕಾರಣಕ್ಕೆ ಯಾರೂ ಕೂಡ ಕಾನೂನಿಗಿಂತ ಮಿಗಿಲಲ್ಲ ಎಂದು ಒತ್ತಿ ಹೇಳಿದ ಮುಖ್ಯ ನ್ಯಾಯಮೂರ್ತಿ ಅಭಯ್ ಓಕ ಮತ್ತು ಹೇಮಂತ್ ಚಂದನ್ಗೌಡರ್ ಅವರಿದ್ದ ಪೀಠ, ಜಗ್ಗಿ ವಾಸುದೇವ್ ಸಂಗ್ರಹಿಸಿರುವ ಹಣದ ಲೆಕ್ಕ ಕೊಡಬೇಕು ಎಂದು ತಾಕೀತು ಮಾಡಿದೆ.
ಕಾವೇರಿ ಕೂಗು ಯೋಜನೆಗೆ ಯಾವ ಕಾರಣಕ್ಕೂ ಸಾರ್ವಜನಿಕರಿಂದ ಹಣ ಸಂಗ್ರಹಿಸಬಾರದು ಎಂದು ವಕೀಲ ಎ.ವಿ. ಅಮರನಾಥನ್ ಸಲ್ಲಿಸಿದ ಸಾರ್ವಜನಿಕ ಹಿತರಕ್ಷಣಾ ಅರ್ಜಿಯ ವಿಚಾರಣೆ ನಡೆಸಿದ ಪೀಠ ಈ ತೀರ್ಮಾನಕ್ಕೆ ಬಂದಿದೆ.
ಯಾರಾದರೂ ಜನರಿಗೆ ಅರಿವು ಮೂಡಿಸಿದರೆ ಅದನ್ನು ನಾವು ಸ್ವಾಗತಿಸುತ್ತೇವೆ. ಆದರೆ ಅದರ ನೆಪದಲ್ಲಿ ಜನರಿಂದ ಒತ್ತಾಯಪೂರ್ವಕವಾಗಿ ಹಣ ಸಂಗ್ರಹಿಸುವುದನ್ನು ಒಪ್ಪುವುದಿಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ.
ಈ ಹಣ ಸಂಗ್ರಹಣೆಯ ವಿಚಾರದಲ್ಲಿ ಯಾವುದೇ ತನಿಖೆ ನಡೆಸದೇ, ಕೈಕಟ್ಟಿ ಕೂತಿರುವ ರಾಜ್ಯಸರ್ಕಾರವನ್ನು ಸಹ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ರಾಜ್ಯಸರ್ಕಾರದ ಹೆಸರಿನಲ್ಲಿ ಯಾರಾದರೂ ಜನರಿಂದ ಒತ್ತಾಯಪೂರ್ವಕವಾಗಿ ಹಣ ಸಂಗ್ರಹಣೆ ಮಾಡತ್ತಿದ್ದಾರೆ ಎಂಬ ದೂರು ಬಂದರೆ ಅದನ್ನು ತನಿಖೆ ಮಾಡುವುದು, ಸಮಸ್ಯೆ ಬಗೆಹರಿಸುವುದು ನಿಮ್ಮ ಕರ್ತವ್ಯವಲ್ಲವೇ ಎಂದು ಸರ್ಕಾರವನ್ನು ಪ್ರಶ್ನಿಸಿದೆ.
ಸರ್ಕಾರವು ಬಲವಂತವಾಗಿ ಹಣ ವಸೂಲಿ ಮಾಡುತ್ತಿರುವುದರ ಬಗ್ಗೆ ನಮಗೆ ಯಾವುದೇ ದೂರುಗಳು ಬಂದಿಲ್ಲ ಮತ್ತು ಸರ್ಕಾರಿ ಜಾಗದಲ್ಲಿ ಫೌಂಡೇಶನ್ ಕೆಲಸ ಮಾಡಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿತು.
ಮಾಡುತ್ತಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ವಿಚಾರಣೆಯಿಂದ ನ್ಯಾ.ಎಸ್.ಆರ್.ಕೃಷ್ಣಕುಮಾರ್ ಹಿಂದೆ ಸರಿದಿದ್ದಾರೆ. ’ಕಾವೇರಿ ಕೂಗು’ ಹೆಸರಲ್ಲಿ ಈಶ ಫೌಂಡೇಶನ್ ಸುಮಾರು ೨೫೩ ಕೋಟಿ ಸಸಿ ನೆಡುವ ಅಭಿಯಾನ ಹಮ್ಮಿಕೊಂಡಿದೆ. ಅದಕ್ಕಾಗಿ ಒಂದು ಸಸಿಗೆ ೪೨ ರೂ.ಗಳಂತೆ ಜನರಿಂದ ೧೦,೬೨೬ ಕೋಟಿ ರೂ. ಸಂಗ್ರಹಿಸಲಾಗುತ್ತಿದೆ ಎಂದು ವಕೀಲ ಎ.ವಿ.ಅಮರನಾಥನ್ ಅರ್ಜಿ ಸಲ್ಲಿಸಿದ್ದರು.
ಈ ಅಭಿಯಾನವು ತಲಕಾವೇರಿಯಿಂದ ತಿರುವರೂರಿನವರೆಗೆ ಕಾವೇರಿ ನದಿಗೆ ಅಡ್ಡಲಾಗಿ ಮರಗಳನ್ನು ಬೆಳೆಸುವ ಯೋಜನೆ ಹೊಂದಿದ್ದು, ಇದಕ್ಕಾಗಿ 253 ಕೋಟಿ ಸಸ್ಯಗಳನ್ನು ಸಂಗ್ರಹಿಸುವ ಗುರಿ ಹೊಂದಿದೆ. ಇದಕ್ಕಾಗಿ ಪ್ರತಿ ಮರಕ್ಕೆ 42 ರೂ. ಸಂಗ್ರಹಿಸುತ್ತಿದ್ದು ಇದು 10,626 ಕೋಟಿ ರೂ. ಆಗುತ್ತದೆ ಎಂದು ಅರ್ಜಿದಾರರ ವಕೀಲ ಎ.ವಿ. ಅಮರನಾಥನ್ ಹೈಕೋರ್ಟ್ ಗೆ ತಿಳಿಸಿದ್ದಾರೆ.
ಅರ್ಜಿದಾರ ವಕೀಲ ಎ.ವಿ.ಅಮರನಾಥನ್, ಸಸಿ ನೆಡುವುದಕ್ಕೆ ಆಕ್ಷೇಪವಿಲ್ಲ. ಆದರೆ ಸರ್ಕಾರಿ ಜಮೀನಿನಲ್ಲಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಸಸಿ ನೆಡಲು ಜನರಿಂದ ಸಾವಿರಾರು ಕೋಟಿ ರೂ. ಸಂಗ್ರಹ ಮಾಡುತ್ತಿರುವುದಕ್ಕೆ ವಿರೊಧವಿದೆ ಎಂದು ಹೇಳಿದ್ದರು.
ಸಮಾನತೆ ಮತ್ತು ನ್ಯಾಯದ ಹಿತದೃಷ್ಟಿಯಿಂದ ‘ಕಾವೇರಿ ಕೂಗು ಯೋಜನೆ’ಗಾಗಿ ಸಾರ್ವಜನಿಕರಿಂದ ಯಾವುದೇ ಹಣವನ್ನು ಸಂಗ್ರಹಿಸಬಾರದು ಎಂದು ಈ ಹಿಂದೆ ಕರ್ನಾಟಕ ಹೈಕೋರ್ಟ್ ಜಗ್ಗಿ ವಾಸುದೇವ್ ನೇತೃತ್ವದ ಇಶಾ ಫೌಂಡೇಶನ್ಗೆ ನಿರ್ದೇಶನ ನೀಡಿತ್ತು.
ಪಿಐಎಲ್ ಪ್ರಕಾರ, ಕಾವೇರಿ ನದಿಗೆ ಅಡ್ಡಲಾಗಿ ತಲಕಾವೆರಿಯಿಂದ ತಿರುವರೂರುವರೆಗೆ ಮರಗಳನ್ನು ನೆಡಲು ಇಶಾ ಪ್ರತಿಷ್ಠಾನ ಯೋಜಿಸುತ್ತಿದೆ. ಅದಕ್ಕಾಗಿ 639.1 ಕಿ.ಮೀ ಉದ್ದ ತಲಕಾವೆರಿಯಿಂದ ತಿರುವರೂರುವರೆಗೆ ತನ್ನ ಬೈಕ್ ರ್ಯಾಲಿಯನ್ನು ಪ್ರಾರಂಭಿಸಿದೆ. “ಕಾವೇರಿ ಜಲಾನಯನ ಪ್ರದೇಶಕ್ಕೆ ಸಂಬಂಧಿಸಿದಂತೆ ಅಧ್ಯಯನಗಳನ್ನು ನಡೆಸಿದೆ ಎಂದು ಫೌಂಡೇಶನ್ ಹೇಳುತ್ತದೆ. ಆದರೆ ಅದರ ವರದಿಯನ್ನು ರಾಜ್ಯಕ್ಕೆ ಸಲ್ಲಿಸಬೇಕಾಗಿತ್ತು. ತಾವು ಮಾಡಿದ ಅಧ್ಯಯನಗಳನ್ನು ಚರ್ಚಿಸಿದ ನಂತರ ರಾಜ್ಯವು ಅನುಮೋದನೆ ನೀಡಬೇಕು. ಆದರೆ ಅಂತಹ ಯಾವುದೇ ಪ್ರಕ್ರಿಯೆಯನ್ನು ಕೈಗೊಳ್ಳಲಾಗುವುದಿಲ್ಲ. ರಾಜ್ಯದಿಂದ ಸರಿಯಾದ ಅನುಮೋದನೆ ಪಡೆಯದೆ ಯಾವುದೇ ಖಾಸಗಿ ಸಂಸ್ಥೆಗೆ ಸರ್ಕಾರಿ ಜಮೀನಿನಲ್ಲಿ ಯಾವುದೇ ಕೆಲಸ ಮಾಡಲು ಅನುಮತಿ ನೀಡಲಾಗುವುದಿಲ್ಲ ಎಂದು ಅರ್ಜಿದಾರರು ವಾದಿಸಿದ್ದಾರೆ.