ನಾಯಿಗೆ ಗೌರವ ಡಾಕ್ಟರೇಟ್ ನೀಡಿದ ವಿಶ್ವವಿದ್ಯಾನಿಲಯ!
ಕೊರೊನಾ ಲಾಕ್‌ಡೌನ್ ಅವಧಿಯಲ್ಲಿ 2020ರ ಸಾಲಿನ ಆನ್‌ಲೈನ್‌ನಲ್ಲಿ ಪದವಿ ಪೂರ್ಣಗೊಳಿಸಿದವರಿಗೆ ಪದವಿ ಪ್ರದಾನ ಸಮಾರಂಭದಲ್ಲಿ ಎಂಟು ವರ್ಷದ ಶ್ವಾನ ಮೂಸ್‌ಗೆ ಪಶುವೈದ್ಯಕೀಯ ಔಷಧದಲ್ಲಿ ಗೌರವ ಡಾಕ್ಟರೇಟ್ ನೀಡಲಾಯಿತು. ಈ ವಿಷಯವನ್ನು ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಹೇಳಿಕೆಯಲ್ಲಿ ತಿಳಿಸಿದೆ.
ಡಾ. ಮೂಸ್ ಅನಾರೋಗ್ಯದಿಂದ ಬಳಲುತ್ತಿದ್ದರೂ, ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ ಸಹಾಯ ಮಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ. ಹಲವು ಕಾರ್ಯಕ್ರಮಗಳಲ್ಲಿ ತನ್ನ ಸೇವೆ ಸಲ್ಲಿಸಿದ್ದಕ್ಕಾಗಿ ವಿಶ್ವವಿದ್ಯಾಲಯ ಮೂಸ್ ಸೇವೆ ಪರಿಗಣಿಸಿ ಡಾಕ್ಟರೇಟ್ ನೀಡಿದೆ. ಲ್ಯಾಬ್ರಡಾರ್ ರಿಟ್ರೈವರ್ ಶ್ವಾನ 2014 ರಿಂದ ವಿಶ್ವವಿದ್ಯಾಲಯದಲ್ಲಿದ್ದು, ಕುಕ್ ಕೌನ್ಸೆಲಿಂಗ್ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುವ ನಾಲ್ಕು ನಾಯಿಗಳಲ್ಲಿ ಇದು ಸಹ ಒಂದಾಗಿದೆ.
ಮೂಸ್ ಅನಾರೋಗ್ಯದ ಹೊರತಾಗಿಯೂ ವಿಶ್ವವಿದ್ಯಾಲಯದ ಆವರಣದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಮಾನಸಿಕ ಸಮಸ್ಯೆ ಎದುರಿಸುತ್ತಿರುವ ವಿದ್ಯಾರ್ಥಿಗಳನ್ನು ಉಲ್ಲಾಸಿತರಾಗಿಸುತ್ತಿದೆ. ಕ್ಯಾಂಪಸ್‌ನಲ್ಲಿರುವ ಎಲ್ಲ ವಿದ್ಯಾರ್ಥಿಗಳು ಮೂಸ್‌ನನ್ನು ಇಷ್ಟಪಡುತ್ತಾರೆ ಎಂದು ವಿಶ್ವವಿದ್ಯಾಲಯದ ಅನಿಮಲ್ ಅಸಿಸ್ಟೆಡ್ ಥೆರಪಿ ಕಾರ್ಯಕ್ರಮದ ಸಲಹೆಗಾರ ಡೇವಿಸ್ ಹೇಳಿದ್ದಾರೆ.
ಡಾ. ಮೂಸ್‌ಗೆ ಇತ್ತೀಚೆಗೆ ಪ್ರಾಸ್ಟೇಟ್ ಕ್ಯಾನ್ಸರ್ ಇರುವುದು ಪತ್ತೆಯಾಗಿದ್ದು, ತೀವ್ರ ಅನಾರೋಗ್ಯದ ನಡುವೆಯೂ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ ಸಹಾಯ ಮಾಡುತ್ತಿದೆ. ಚಿಕಿತ್ಸೆಯ ಭಾಗವಾಗಿ, ಮೂಸ್ ವಿಕಿರಣ ಮತ್ತು ಕೀಮೋಥೆರಪಿಗೆ ಒಳಗಾಗುತ್ತಿದೆ. ಆದರೂ, ಸದಾ ಉತ್ಸಾಹದಿಂದ ಆರೋಗ್ಯವಂತ ಪ್ರಾಣಿಯಂತೆ ಕಾಣಿಸುತ್ತದೆ ಅವರು ಹೇಳುತ್ತಾರೆ.

