ಪ್ರಕಾಶ್ ಪಡುಕೋಣೆಯವರ ಜೊತೆಗಿನ ನೆನಪುಗಳು: ಚಂದ್ರಮೌಳಿ ಕಣವಿ

[ಜೂನ್ 10 ಕರ್ನಾಟಕ ಕಂಡ ಅತ್ಯುತ್ತಮ ಬ್ಯಾಡ್ಮಿಂಟನ್ ಪಟು ಪ್ರಕಾಶ್ ಪಡುಕೋಣೆ ಅವರ ಜನ್ಮದಿನ. ಈ ನೆನಪಿನಲ್ಲಿ ಕ್ರೀಡಾ ಬರಹಗಾರ ಮತ್ತು ಕಾಮೆಂಟೇಟರ್ ಚಂದ್ರಮೌಳಿ ಕಣವಿ ಅವರು ಪ್ರಕಾಶ್ ಅವರ ಜೊತೆಗಿನ ತಮ್ಮ ಒಡನಾಟವನ್ನು ಮೆಲುಕು ಹಾಕಿದ್ದಾರೆ]

ಪ್ರಕಾಶ ಎಂದರೆ ಬೆಳಕು. ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಬ್ಯಾಡ್ಮಿಂಟನ್  ದೀವಿಗೆ ಆದವರು ಪ್ರಕಾಶ್. 1980ರಲ್ಲಿ ವಿಶ್ವದಲ್ಲಿ ಅತ್ಯಂತ ಪ್ರತಿಷ್ಠಿತ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಪ್ರಕಾಶ್‍ಗಿಂತ ಮುನ್ನ ಏಷಿಯಾ ಪದಕ ಪಡೆದಿದ್ದ ದಿನೇಶ್ ಖನ್ನ, ಸುರೇಶ್ ಗೋಯೆಲ್, ಟೆನ್ನಿಸ್ ಬಿಟ್ಟು ಬ್ಯಾಡ್ಮಿಂಟನ್ ಚಾಂಪಿಯನ್ ಆದ ನಂದು ನಟೇಕರ್ ಹೆಸರುವಾಸಿಯಾಗಿದ್ದರೂ, ನಿಜವಾಗಿ ಪ್ರಭಾವ ಬೀರಿದ್ದು ಪ್ರಕಾಶ್ ಅವರ ಅಮೋಘ touch play, ಮೋಡಿ ಮಾಡುವ net tribles, ಅವರ ಸ್ಟಾಮಿನ, ತಾಳ್ಮೆ, ಬುದ್ಧಿವಂತಿಕೆ ಮತ್ತು ಈ ಎಲ್ಲದರ ಸಮಾಗಮ. ಅವರ ಮೃದುವಾದ ಮತ್ತು ಹಿತಮಿತವಾದ ಮಾತು, ಕ್ರೀಡಾ ಮನೋಭಾವ (ಯಾರನ್ನು 15-0 ಸೋಲಿಸುತ್ತಿರಲಿಲ್ಲ), ಸ್ನೇಹಪರ ನಡವಳಿಕೆ, ಸ್ಛುರಧೂಪ ವ್ಯಕ್ತಿತ್ವ ಎಲ್ಲರನ್ನು ಸೂಜುಗಲ್ಲಿನಂತೆ ಆಕರ್ಷಿಸುತ್ತಿತ್ತು. ಆಗಿನ ಭಿನ್ನವಾದ ಸ್ಕೋರ್ ವ್ಯವಸ್ಥೆಯ ಆಲ್ ಇಂಗ್ಲೆಂಡ್ ಸ್ಪರ್ಧೆಯಲ್ಲಿ, ಮೊದಲು ಅವರ ಹೀರೊ ಇಂಡೋನೇಷಿಯಾದ  ರೂಡಿ ಹಾರ್ಟೋನೋ  ನಂತರ ಫೈನಲ್ಸ್ ನಲ್ಲಿ ಶಕ್ತಿಶಾಲಿ ಲೀ ಸ್ವೀ ಕಿಂಗ್ ಅವರನ್ನು ಸದೆ ಬಡೆದಾಗ ವಿಶ್ವವೇ ಬೆರಗಾಯಿತು. 1981ರಲ್ಲಿ ವಿಶ್ವಕಪ್ ಗೆದ್ದಮೇಲೆ, ಇನ್ನೂ ಗುಣಮಟ್ಟ ಹೆಚ್ಚಿಸಿಕೊಳ್ಳಲು, ಗೆಳೆಯ ಹಾಗು ಮತ್ತೊಬ್ಬ ಚಾಂಪಿಯನ್  ಮಾರ್ಟರ್ ಫ್ರಾಸ್ಟ್ ಜೊತೆಗೇ ತರಬೇತಿಗೆ ಡೆನ್ಮಾರ್ಕ್ ಗೆ ಹೋದರು.ಇಲ್ಲಿದ್ದಿದ್ದರೆ, ಬರೀ ಅಭಿನಂದನಾ ಸಮಾರಂಭಗಳಿಗೆ ಹೋಗುತ್ತಿರಬೇಕಿತ್ತು. ಆದರೆ ಅವರು ಒಬ್ಬ ಸ್ಪೂರ್ತಿದಾಯಕ ಕ್ರೀಡಾಪಟುವಾಗಿ  ಮುಂದುವರೆದರು. ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ಇವರ ಅತಿ ದೊಡ್ಡ ಅಭಿಮಾನಿ.

ಬೆಂಗಳೂರಿನ ಕೆನರಾ ಯೂನಿಯನ್ ಮದುವೆ ಹಾಲ್‍ನಲ್ಲಿ ಆಡಿ ಬೆಳೆದ ಪ್ರಕಾಶ್‍ರ ಮೊದಲ ಗುರು ತಂದೆ, ಶಿಸ್ತಿನ ಸಿಪಾಯಿ. ಕರ್ನಾಟಕ ಸಂಸ್ಥೆಯ ಕಾರ್ಯದರ್ಶಿ ರಮೇಶ್ ಪಡುಕೋಣೆ. ನನಗೆ ಕೆನರಾ ಯೂನಿಯನ್ ಚಾರಿಟಬಲ್ ಟ್ರಸ್ಟ್ ನ ಪ್ರಕಾಶ್ ಕ್ರೀಡಾಂಗಣಕ್ಕೆ, ಅಜೀವ ಸದಸ್ಯತ್ವ ಕೊಟ್ಟು ಆಡಲು ಹುರಿದುಂಬಿಸಿ, ಅನೇಕ ಸ್ವಾರಸ್ಯಕರ ಘಟನೆಗಳನ್ನು ವಿವರಿಸಿದವರು ರಮೇಶ್. ಈಗಿರುವ ಆಟದಲ್ಲಿ ಹಣ, ಪ್ರಾಯೋಜನೆ ಮತ್ತು ಜನಪ್ರಿಯತೆಗೆ ಹೋಲಿಸಿದರೆ ಆಗಿನ ಕಾಲ ವಿಭಿನ್ನ. ಕಥೆ ಕೇಳಿ ನನಗೆ ವ್ಯಥೆ, ಸಂತೋಷ ಎರಡೂ ಆಯಿತು. 1971ರ ಆದಿಯಲ್ಲಿ  17 ವರ್ಷದ ಪ್ರಕಾಶ್ ಕಿರಿಯ ರಾಷ್ಟ್ರೀಯ ಚಾಂಪಿಯನ್ ಆದರು. ಕೆಲವು ತಿಂಗಳ ನಂತರ ಮದರಾಸಿನಲ್ಲಿ ನಡೆದ ಹಿರಿಯ ರಾಷ್ಟ್ರೀಯ ಚಾಂಪಿಯನ್ ಶಿಪ್ ಗೆ ಹಣದ ಕೊರತೆ ಇದ್ದುದ್ದರಿಂದ, ಅಣ್ಣ ಪ್ರದೀಪ್ ಅವರಿಗೆ ಮಾತ್ರ ರಮೇಶ್ ಟಿಕೆಟ್ ಮುಂಗಡ ಕಾಯ್ದಿರಿಸಲು ಸಾಧ್ಯವಾಗಿತ್ತು. ಈ ವಿಷಯ ತಿಳಿದ ಆಗಿನ ಶ್ರೇಷ್ಠ ಕ್ರೀಡಾ ಪೋಷಕ ಮತ್ತು ಪ್ರೋತ್ಸಾಹಿ ನೆಟ್ಟಕಲ್ಲಪ್ಪ ಅವರು ರಮೇಶ್ ಅವರಿಗೆ ಬೈದು ಪ್ರಕಾಶ್ ಮದರಾಸಿಗೆ ಹೋಗುವ ಹಾಗೆ ಸವಲತ್ತು ಒದಗಿಸಿದರು. ಆಗ ಆದದ್ದೇನು? 17 ವರ್ಷದ ಪ್ರಕಾಶ್ ದಾಖಲೆ ಸ್ಥಾಪಿಸಿದರು. ಒಂದೇ ವರ್ಷದಲ್ಲಿ ಕಿರಿಯ  ಹಾಗೂ  ಹಿರಿಯ ರಾಷ್ಟ್ರೀಯ ಚಾಂಪಿಯನ್ ಆದರು. ಎಲ್ಲರಿಗೂ ಚೆಳ್ಳೆಹಣ್ಣು ತಿನ್ನಿಸಿದ್ದ ದೇವಿಂದರ್ ಅಹುಜಾ ಅಂತಿಮ ಪಂದ್ಯದಲ್ಲಿ ಪ್ರಕಾಶ್ ಗೆ ಶರಣರಾದರು.

ಜೂನಿಯರ್ ಚಾಂಪಿಯನ್ ಶಿಪ್ ಆದ ನಂತರ 1971ರಲ್ಲಿ ಪ್ರಕಾಶ್ ನನ್ನ ಹುಟ್ಟೂರು ಧಾರವಾಡದಲ್ಲಿ ಅಂತರ ವಿಶ್ವವಿದ್ಯಾಲಯ ಪಂದ್ಯಾವಳಿ ಆಡಲು ಬಂದರು. ನಮ್ಮ ಕರ್ನಾಟಕ ವಿಶ್ವವಿದ್ಯಾಲಯದ ವಿರುದ್ಧ ಆಡುವಾಗ, ನಮ್ಮ ಪ್ರಾದೇಶಿಕ ಹೀರೊ ಗುರುನಾಥ್ ದೇಶಪಾಂಡೆ ಅವರ ಎದುರು ಮೊದಲ ಗೇಮ್ ಸೋತರೂ ತಮ್ಮ ಕಟ್ಟುನಿಟ್ಟಾದ ದೃಢಕಾಯದ ನೆರವಿನಿಂದ ಮುಂದಿನ ಎರಡು ಗೇಮ್ ಗೆದ್ದು ನಮ್ಮನ್ನು ನಿರಾಶೆಗೊಳಿಸಿದರು. ಅವರದ್ದು ಎಷ್ಟು ಸರಳತೆಯೆಂದರೆ ಅವರು ಬೆಂಗಳೂರು ವಿಶ್ವವಿದ್ಯಾಲಯದ ಬ್ಲೇಜರ್ ಹಾಗೂ ಹವಾಯ್ ಚಪ್ಪಲಿ ಹಾಕಿಕೊಂಡು ಬಂದಿದ್ದರು. ಪಂದ್ಯಕ್ಕೆ ಮುಂಚೆ ವಾರ್ಮಪ್ ಮಾಡುವಾಗ ಅವರು ನಮ್ಮ ಸಂಕೀರ್ಣದಲ್ಲಿ ಸಂಕೀರ್ಣದಲ್ಲಿ ಬ್ಯಾಸ್ಕೆಟ್ ಬಾಲ್ ಆಡುತ್ತಿದ್ದರು. ಆಗ ನಾನು ಹೋಗಿ ಆಟೋಗ್ರಾಫ್ ತೆಗೆದುಕೊಂಡೆ. ನನ್ನ ಸಹ ಆಟಗಾರ ಹೆಗಡೆ “ಎನೋ ನಿನ್ನ ವಯಸ್ಸಿನ ಆಟಗಾರನಿಂದ ಆಟೋಗ್ರಾಫ್ ತೆಗೆದುಕೊಂಡೆಯಲ್ಲೊ” ಎಂದು ಗೇಲಿ ಮಾಡಿದ್ದು ನೆನಪಿದೆ. ಆದರೆ ನಂತರದ ದಶಕಗಳಲ್ಲಿ ನಮ್ಮ ಒಡನಾಟ ಇಷ್ಟು ಬೆಳೆಯುತ್ತದೆ ಎಂಬುದರ ಕಲ್ಪನೆ ನನಗಿರಲಿಲ್ಲ. ಬೆಂಗಳೂರಿಗೆ ನಾನು ಬಂದ ಮೇಲೆ ದೂರದರ್ಶನದ ಪರವಾಗಿ ಕಾಮೆಂಟ್ರಿ ಹೇಳಲು ಪ್ರಕಾಶ್‌ ಅವರು ನಡೆಸುವ ಪಂದ್ಯಾವಳಿಗೆ ಹೋಗುತ್ತಿದೆ. ನಂತರ ದೂರದರ್ಶನ ನನಗೆ ಪ್ರಕಾಶ್ ಅಕಾಡೆಮಿ ಕುರಿತು ಸಾಕ್ಷ್ಯಚಿತ್ರ ಮಾಡಲು ಹೇಳಿದಾಗ ಖುಷಿ ಪಟ್ಟೆ. ಪ್ರಕಾಶ್ ಮಾಧ್ಯಮಗಳು ಎಮ್ದರೆ ಬಹಳ ನಾಚಿಕೆ ಸ್ವಭಾವದವರು. ಅವರು ಕ್ಯಾಮರಾ ಎದುರು ಮಾತನಾಡಲು ಕೂಡ ಹಿಂಜರಿಯುತ್ತಿದ್ದರು. ಈಗ ಅವರ ಮಗಳು ದೀಪಿಕಾ ಬಾಲಿವುಡ್ ಸೂಪರ್ ಸ್ಟಾರ್. ಎರಡನೆ ಮಗಳು ಅನುಶಾ ಎಲ್ಲ ಕ್ರೀಡೆಗಳಲ್ಲೂ ಭಾಗವಹಿಸಿ, ಕ್ರಿಕೆಟ್ ಕೂಡ ಆಡಿ, ಈಗ ಗಾಲ್ಫ್ ನಲ್ಲಿ ಮುಂದುವರೆಯುತ್ತಿದ್ದಾರೆ.

ಯಲಹಂಕದ ಹತ್ತಿರ ಈಗ ಪ್ರಕಾಶ್‌ ದ್ರಾವಿಡ್ ಅಕಾಡೆಮಿಯಲ್ಲಿ ಅನೇಕರು ತರಬೇತಿ ಪಡೆಯುತ್ತಿದ್ದಾರೆ. ಪ್ರಕಾಶ್ ಪಡಿಕೋಣೆ ಕ್ರೀಡಾ ವ್ಯವಸ್ಥಾಪಕ ಸಂಸ್ಥೆ ಪರವಾಗಿ ಬೆಂಗಳೂರಿನಲ್ಲಿ ಅನೇಕ ಶಿಬಿರಗಳನ್ನು ನಡೆಸುತ್ತಿದ್ದರೂ, ವೈಯಕ್ತಿಕವಾಗಿ ಪ್ರಕಾಶ್ ಅವರಿಗೆ ಎಲ್ಲೆಡೆ ಹೋಗಲು ಆಗುತ್ತಿಲ್ಲವೆಂಬುದು ಖೇದಕರ. ಗೋಪಿಚಂದರೊಂದಿಗೆ ಮುನಿಸಿಕೊಂಡು ಬಂದ ಸೈನಾ ನೆಹ್ವಾಲ್ ಗೆ ಆಶ್ರಯ ಮತ್ತು ತರಬೇತಿ ನೀಡಿದರು. ಈಗ ಉದಯೋನ್ಮುಖ ತಾರೆ ಲಕ್ಷ್ಯ ಸೇನ್ ಅವರಿಗೆ ಬಹಳ ಜಾಗೂರಕತೆಯಿಂದ ಅವಕಾಶ ನೀಡುತ್ತಿದ್ದಾರೆ.

65 ವರ್ಷವಾದರೂ ಇನ್ನೂ ಹುಡುಗರಂತೆ ಕಾಣುವ ಪ್ರಕಾಶ್‌ ಮಿತ ಭಾಷಿಯಾದರೂ ಅವರ ಪ್ರತಿ ಮಾತಿಗೆ ಮಾತಿಗೆ ತೂಕವಿದೆ. ಇಂಥ ಮಹಾನ್ ಕ್ರೀಡಾಪಟುವಿನ 65ನೇಯ ಹುಟ್ಟುಹಬ್ಬ ಜೂನ್‌ ಹತ್ತರಂದು ಈ ಸಂಗತಿಗಳನ್ನು ಮತ್ತೆ ಮೆಲೆಕು ಹಾಕುವಂತೆ ಮಾಡಿತು.

–  ಚಂದ್ರಮೌಳಿ ಕಣವಿ, ಕ್ರೀಡಾ ಕಾಮೆಂಟೇಟರ್ ಮತ್ತು ಕನ್ನಡದಲ್ಲಿ ಕ್ರೀಡೆಯ ಬಗ್ಗೆ ನಿಯತವಾಗಿ ಬರೆದಿದ್ದಾರೆ.

Spread the love

Leave a Reply

Your email address will not be published. Required fields are marked *