ಹಳ್ಳಿ ಮಾತು-8: ಸಂಕಟದ ಗ್ರಾಮೀಣ ಜೀವನವನ್ನು ಹಿಂಡುತ್ತಿರುವ ಮೈಕ್ರೋ ಫೈನಾನ್ಸ್ ದೈತ್ಯರು

ಬಸವಣ್ಣನವರ ಸುಪ್ರಸಿದ್ಧ ನುಡಿ ‘ಕಾಯಕವೇ ಕೈಲಾಸ’, ಈಗ ಕಾಯಕವೇ ಕೈ ಸಾಲ ಎಂಬಂತಾಗಿದೆ. ಗ್ರಾಮೀಣ ಕುಟುಂಬಗಳ ದುಡಿಮೆ, ಸಾಲ ಪಡೆಯುವ ಆರ್ಹತೆಗೆ ಹಾಗೂ ಸಾಲ ತೀರುವಳಿಯ ಪ್ರಯತ್ನಕ್ಕೆ ಮೀಸಲಾಗಿರುವುದು ವ್ಯಂಗ್ಯವಾಗಿದ್ದರೂ ಕಟು ಸತ್ಯ. ದುಬಾರಿ ಜೀವನ ವೆಚ್ಚದ, ಅತಿ ಕಡಿಮೆ ಕೂಲಿಯ ಅತಂತ್ರ ಜೀವನದ ಬಹುತೇಕ ಗ್ರಾಮೀಣ ಶ್ರಮಜೀವಿಗಳ ಜೀವನಾಧಾರ ಸಾಲವೇ ಆಗಿದೆ ಎಂಬುದೇ ಜಾಗತೀಕರಣ ಧೋರಣೆಗಳ ಕೊಡುಗೆ.

ದಿನನಿತ್ಯ ಜೀವನದ ಪ್ರತಿಯೊಂದು ಆಗು-ಹೋಗುಗಳು ಸಾಲದ ಮೇಲೆಯೇ ನಿಂತಿದೆ. ಬೇಸಾಯದ ವೆಚ್ಚ ಮಾತ್ರವೇ ಅಲ್ಲ; ಜೀವನದ ವೆಚ್ಚವೂ ಕೂಡ. ಇಂತಹ ಪರಿಸ್ಥಿತಿಯ ಗ್ರಾಮೀಣ ಜನ ಜೀವನವನ್ನು ತಮ್ಮ ವ್ಯವಹಾರದ ಅವಕಾಶವಾಗಿ ಕಂಡ ಮೈಕ್ರೋ ಫೈನಾನ್ಸ್ ಕಂಪನಿಗಳು ಅಥವಾ ಕಿರು ಹಣಕಾಸು ಸಂಸ್ಥೆಗಳು ದೊಡ್ಡ ಪ್ರಮಾಣದಲ್ಲಿ ಲಗ್ಗೆ ಇಟ್ಟಿವೆ.

ಸಾಂಸ್ಥಿಕ ಸಾಲ ವ್ಯವಸ್ಥೆಯಿಂದ ಆನಾದಿ ಕಾಲದಿಂದಲೂ ಹೊರಗಿದ್ದ ಬಡ ರೈತ-ಕೃಷಿಕೂಲಿಕಾರ ಮತ್ತಿತರ ದೈಹಿಕ ದುಡಿಮೆಗಾರ ವರ್ಗಗಳು ತಮ್ಮ ಹಣಕಾಸು ಅಗತ್ಯಗಳಿಗಾಗಿ ಗ್ರಾಮೀಣ ಶ್ರೀಮಂತರ ಲೇವಾದೇವಿ ವ್ಯವಹಾರವನ್ನೇ ಅವಲಂಬಿಸಿದ್ದವು . ವಾರ್ಷಿಕ ಶೇಕಡಾ 36 ರಿಂದ ಶೇಕಡಾ 120 ರವರೆಗಿನ ಬಡ್ಡಿದರಗಳನ್ನು ವಿಧಿಸುತ್ತಿದ್ದ ಬಹುತೇಕ ವಾರ್ಷಿಕ ಕಂತಿನ ಈ ಸಾಲಗಳು ಬಲ ಪ್ರಯೋಗ, ದಬ್ಬಾಳಿಕೆ ಮುಂತಾದ ದೌರ್ಜನ್ಯ ಕ್ರಮಗಳಿಂದ ಬಡವರ ದುಡಿಮೆ ಮತ್ತು ಆಸ್ತಿಗಳನ್ನು ದೋಚುತ್ತಿದ್ದವು. ಜಾಗತೀಕರಣ ಕಾಲದಲ್ಲಿ ಕೃಷಿಯೇತರ ವೃತ್ತಿಗಳ ಬೆಳವಣಿಗೆಯಿಂದಾಗಿ, ಗ್ರಾಮ ಕೇಂದ್ರಿತವಾಗಿದ್ದ ಪಾಳೇಗಾರಿ ಲೇವಾದೇವಿ ಶೋಷಣೆಯಿಂದ ಹೊರ ಜಿಗಿಯುವ ಅವಕಾಶ ಸೃಷ್ಟಿಯಾಯಿತು. ಆದರೆ ವ್ಯಾಪಕವಾಗಿ ಬೆಳೆದ ಬೆಲೆ ಏರಿಕೆ ಜೀವನವನ್ನು ಸುಸ್ಥಿತಿಗೊಳಿಸಲಿಲ್ಲ. ಕೊಳ್ಳುವ ಶಕ್ತಿ ತುಂಬಾ ಹೀನಾಯವಾಗಿದ್ದ ಗ್ರಾಮೀಣ ಜನತೆಯೇ ತುಂಬಿದ್ದ ಪರಿಸ್ಥಿತಿಯಲ್ಲೂ ಗ್ರಾಮೀಣ ಸರಕು ಮಾರುಕಟ್ಟೆಯನ್ನು ವಿಸ್ತರಿಸಲು ಮಹಿಳಾ ಗುಂಪುಗಳನ್ನು ಸ್ಥಾಪಿಸಿ ಅವರ ಸಣ್ಣ ಉಳಿತಾಯಗಳನ್ನು ಒಂದೆಡೆ ಕ್ರೋಢೀಕರಿಸಿ ಅಗತ್ಯ ಇರುವವರಿಗೆ ಸಾಲ ನೀಡುವ ಆಲೋಚನೆಯನ್ನು ಜನಪ್ರಿಯಗೊಳಿಸಲಾಯಿತು. ಈ ಆಲೋಚನೆಯ ಆವಿಷ್ಕಾರ ತೃತೀಯ ಜಗತ್ತಿನ ಬಡ ದೇಶವಾದ ಬಾಂಗ್ಲಾದೇಶದ ಮಹಮ್ಮದ್ ಯೂನಸ್ ರವರದು. ಇವರ ಮೈಕ್ರೋ ಕ್ರೆಡಿಟ್ ಥಿಯರಿ ನೊಬೆಲ್ ಪುರಸ್ಕಾರವನ್ನು ಗಳಿಸಿಕೊಟ್ಟಿದೆ.

ಹೀಗೆ ಗ್ರಾಮೀಣ ಸರಕು ಮಾರುಕಟ್ಟೆಯನ್ನು ವಿಸ್ತರಿಸಲು ಅಗತ್ಯವಾದ ಸಂರಚನಾ ಹೊಂದಾಣಿಕೆ ನಿರ್ಮಿಸಲು ಸರ್ಕಾರಗಳ ಧೋರಣೆಗಳ ಬೆಂಬಲ ದೊರೆಯಿತು. ಎಸ್ ಎಂ ಕೃಷ್ಣರವರ ಸರ್ಕಾರದ ಸ್ತ್ರೀ ಶಕ್ತಿ ಸಂಘಗಳ ರಚನೆ, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಗಳ ಜಂಟಿ ಬಾಧ್ಯತಾ ಸಾಲ ನೀಡಿಕೆಗಾಗಿ ಮಹಿಳಾ ಸ್ವ ಸಹಾಯ ಗುಂಪುಗಳು ಅಸ್ತಿತ್ವಕ್ಕೆ ಬಂದವು. ಇವುಗಳ ಉಳಿತಾಯ ಹಣ ಬ್ಯಾಂಕ್ ಗಳಿಗೆ ಹರಿದು ಬಂತು. ಒಂದು ಸಾವಿರ ಮಾತ್ರ ಸಾಲ ಪಡೆದು ಗೊತ್ತಿದ್ದವರಿಗೆ 50 ಸಾವಿರ ಸಾಲ ಸಿಗಲಾರಂಭಿಸಿತು. ಈ ರೀತಿ ಸಾಲ ಮರು ಪಾವತಿ ಶೇಕಡಾ 90 ಕ್ಕಿಂತ ಹೆಚ್ಚಿನ ರಿಕವರಿ ದರ ಇದ್ದುದ್ದು ಹಲವು ಯಶೋಗಾಥೆಗಳಾಗಿ ಬಿಂಬಿಸಲ್ಪಟ್ಟಿತು.

ಕೊಳ್ಳುಬಾಕ ಸಂಸ್ಕೃತಿಯ ಉತ್ತೇಜನದಿಂದಾಗಿ ಕ್ರಮೇಣ ಸಾಲದ ಬೇಡಿಕೆ ಹೆಚ್ಚುತ್ತಾ ಹೋಯಿತು. ಈ ಕ್ಷೇತ್ರದಲ್ಲಿ ಅಪಾರ ಲಾಭ ಗಳಿಸುವ ಅವಕಾಶದಿಂದಾಗಿ ಮೈಕ್ರೋ ಫೈನಾನ್ಸ್ ಕಂಪನಿಗಳು ತಲೆ ಎತ್ತಿದವು. ಸಾಲದ ಬೇಡಿಕೆ ತಣಿಸುವ ಅಮಿಷ ಒಡ್ಡಿ ವ್ಯವಸ್ಥಿತವಾಗಿದ್ದ ಸ್ವ ಸಹಾಯ ಗುಂಪು ಮತ್ತು ಸ್ತ್ರೀ ಶಕ್ತಿ ಗುಂಪುಗಳ ಮೇಲೆ ಧಾಳಿ ನಡೆಸಿ ತಮ್ಮದೇ ಗ್ರಾಹಕ ಗುಂಪುಗಳನ್ನು ರಚಿಸಿದವು. ಈ ಗುಂಪುಗಳನ್ನು ರಚಿಸುವ ಮುಂದಾಳುಗಳಿಗೆ ಕಮಿಷನ್ ರುಚಿ ತೋರಿಸಿದವು. ಮನೆ ಬಾಗಿಲ ಬಳಿ ಹೋಗಿ ಸಾಲ ವಿತರಿಸುವ, ಮನೆಯಿಂದಲೇ ಸಾಲ ಮರು ಪಾವತಿ ಕಂತುಗಳನ್ನು ಸಂಗ್ರಹಿಸುವ ಮೈಕ್ರೋ ಫೈನಾನ್ಸ್ ಕಂಪನಿಗಳ ಸಿಬ್ಬಂದಿ ಜಾಲದಿಂದಾಗಿ ಬಹುಬೇಗ ಜನಪ್ರಿಯವಾದವು.

ಸ್ಥಳೀಯ ಸಂಸ್ಥೆಗಳು ಹಾಗೂ ಸ್ಥಳೀಯ ಸಹಕಾರ ಸಂಘಗಳ ಮೂಲಕ ಗ್ರಾಮೀಣ ಜನರ ಸಾಲದ ಅಗತ್ಯಗಳನ್ನು ನೋಡಿಕೊಳ್ಳುವ, ಸಾಲ ವಿತರಣೆ ಮೇಲೆ ಯಾವುದೇ ನಿಯಂತ್ರಣ ಸಾಧಿಸುವ ವ್ಯವಸ್ಥೆ ಇಲ್ಲದ ಅವಕಾಶವನ್ನು ಕಬ್ಬಿನ ಗದ್ದೆಗೆ ಕಾಡಾನೆ ನುಗ್ಗಿದಂತೆ ಮೈಕ್ರೋ ಫೈನಾನ್ಸ್ ಕಂಪನಿಗಳು ಬಳಸಿಕೊಳ್ಳುತ್ತಿವೆ.

ವ್ಯವಹಾರವನ್ನು ಹೆಚ್ಚಿಸಿಕೊಳ್ಳುವ ಪೈಪೋಟಿಗೆ ಬಿದ್ದ ಮೈಕ್ರೋ ಫೈನಾನ್ಸ್ ಕಂಪನಿಗಳು ಕಡಿಮೆ ಆದಾಯದ ದುಡಿಮೆಯ ಮಹಿಳೆಯರನ್ನು ವಿಪರೀತ ಕಷ್ಟ-ಕಿರುಕಳುಕ್ಕೆ ಒಳಗಾಗುವಂತೆ ಮಾಡಿವೆ. ದುಡಿಮೆಯೇ ಇಲ್ಲದ ಕೋವಿಡ್ 19 ರ ಲಾಕ್ ಡೌನ್ ಪರಿಸ್ಥಿತಿ ಗ್ರಾಮೀಣ ಮಹಿಳೆಯರನ್ನು ಗೋಳು ಹುಯ್ದುಕೊಳ್ಳುತ್ತಿವೆ. “ಮಂಡ್ಯ ಜಿಲ್ಲೆ ಒಂದರಲ್ಲೇ ಸುಮಾರು 83 ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಒಟ್ಟಾರೆ ವಾರ್ಷಿಕ ಹತ್ತು ಸಾವಿರ ಕೋಟಿ ರೂಗಳ ಹೆಚ್ಚಿನ ವಹಿವಾಟು ನಡೆಸುತ್ತಿವೆ” ಎನ್ನುತ್ತಾರೆ ಪೌರ ಕಾರ್ಮಿಕ ಮುಖಂಡ ಎಂ ಬಿ ನಾಗಣ್ಣ.

ಹಲಾಲ್ ಲಾಭದ ಹೆಸರಲ್ಲಿ ದುಡ್ಡು ...

20 ಜನರಿರುವ ಒಂದು ಗುಂಪನ್ನು ರಚಿಸುವ ಈ ಸಂಸ್ಥೆಗಳು ಐದು ಜನರ ನಾಲ್ಕು ಒಳಗುಂಪುಗಳಾಗಿ ವರ್ಗೀಕರಿಸುತ್ತವೆ. ಈ ಐದು ಜನರಿಗೆ ಒಟ್ಟಾರೆ ಗುಂಪು ಸಾಲ ನೀಡಿ ಪರಸ್ಪರರನ್ನು ಜಾಮೀನುದಾರರನ್ನಾಗಿಸುತ್ತವೆ. ವಾರದ ಕಂತಾದರೆ ವಾರಕ್ಕೆ, ತಿಂಗಳ ಕಂತಾದರೆ ತಿಂಗಳಿಗೆ ಈ ಐದು ಜನರ ತಲಾ ಕಂತು ಹಣವನ್ನು ಒಟ್ಟುಗೂಡಿಸಿ ಜಮೆ ಮಾಡಬೇಕಿರುತ್ತದೆ. ಇವರಲ್ಲಿ ಯಾರಾದರೂ ಒಬ್ಬರು ಕಂತು ಪಾವತಿಸದಿದ್ದರೆ ಉಳಿದ ನಾಲ್ಕು ಜನರು ಹೊಂದಿಸಿ ಒಟ್ಟಾರೆ ಐದು ಜನರ ಕಂತುಗಳನ್ನು ಪಾವತಿಸಬೇಕಿರುತ್ತದೆ. ಒಳಗುಂಪಿನ ಮರು ಪಾವತಿಯು ಅದೇ ಗುಂಪಿನ ಇನ್ನೊಂದು ಒಳಗುಂಪಿನ ಸಾಲದ ಅರ್ಜಿಯ ಇತ್ಯರ್ಥಕ್ಕೆ ಅರ್ಹತೆಯಾಗಿರುವುದರಿಂದ ಸಾಲ ಮರು ಪಾವತಿಸುವಂತೆ ಗುಂಪು ಒತ್ತಡ ಇರುತ್ತದೆ. ಈ ರೀತಿ ಸಾಲ ವಸೂಲಾತಿ ವ್ಯವಸ್ಥೆ ಇದೆ. ಯಾರಾದರೂ ಒಬ್ಬರು ಸಾಲ ಮರು ಪಾವತಿಸದೇ ಇದ್ದರೇ ಎಲ್ಲರೂ ಆಕೆ ಮನೆಗೆ ಹೋಗಿ ಸಾಲ ವಸೂಲು ಮಾಡಿಕೊಂಡು ಮೈಕ್ರೋ ಫೈನಾನ್ಸ್ ಸಿಬ್ಬಂದಿಗೆ ಜಮೆ ಮಾಡುತ್ತಾರೆ. ಇದು ಗ್ರಾಮೀಣ ಜನತೆಯ ಸಾಮರಸ್ಯ-ಸಹಬಾಳ್ವೆಯ ಸಂಸ್ಕೃತಿಯನ್ನು ವಿರೂಪಗೊಳಿಸಿ ಕಣ್ಣಿಗೆ ಕಾಣುವ ಕಷ್ಟಕ್ಕೆ ಕುರುಡಾಗಿ ತಮ್ಮದೇ ಕುಟುಂಬದ ಮಹಿಳೆಯರಿಂದ ಸಾಲ ವಸೂಲಿ ಮಾಡುವ ಕುಕೃತ್ಯಕ್ಕೆ ತೊಡುಗುವಂತೆ ಮಾಡಿದೆ.

ಬಿ ಎಸ್ ಎಸ್, ಎಸ್ ಕೆ ಎಸ್, ಗ್ರಾಮೀಣ ಕೂಟ, ಉಜ್ಜೀವನ್ ಮುಂತಾದ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಮಂಡ್ಯ ಜಿಲ್ಲೆಗೆ ಕಾಲಿಟ್ಟ ಎಷ್ಟೋ ವರ್ಷಗಳ ನಂತರ ಮಂಡ್ಯ ಜಿಲ್ಲೆ ಪ್ರವೇಶಿಸಿದ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮೈಕ್ರೋ ಫೈನಾನ್ಸ್ ಸಂಸ್ಥೆ ಈಗ ಮಾರ್ಕೆಟ್ ಲೀಡರ್ ಆಗಿದೆ. ಧರ್ಮಸ್ಥಳ ಸಂಸ್ಥೆ ಸೇರಿ ಕೆಲವು ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಸಾಲ ಪಡೆಯುವ ಅರ್ಹತೆ ಗಳಿಸಲು ಉಳಿತಾಯ ಹಣ ನೀಡುವಂತೆ ಷರತ್ತು ವಿಧಿಸುತ್ತವೆ. ವಾರಕ್ಕೆ ಹತ್ತು ರೂ, ಇಪ್ಪತ್ತು ರೂನಂತೆ ಗುಂಪಿನ ಪ್ರತಿಯೊಬ್ಬರೂ ಈ ಸಂಸ್ಥೆಗಳಿಗೆ ಉಳಿತಾಯ ಹಣ ನೀಡಬೇಕು. ಹೀಗೆ ಕನಿಷ್ಠ ಮೂರು ತಿಂಗಳು ಉಳಿತಾಯ ಹಣ ಜಮೆಯಾದ ನಂತರ ಹತ್ತು ಸಾವಿರ ಸಾಲ ನೀಡುತ್ತವೆ. ಹೀಗೆ ತಲಾ ಕನಿಷ್ಠ 120 ರೂ ನಂತೆ 20 ಜನರ ಉಳಿತಾಯದ ಹಣ 2400 ರೂ ಆಗುತ್ತದೆ. ಈ ಹಣಕ್ಕೆ ಬಡ್ಡಿ ಇಲ್ಲ. ಹೀಗೆ ಹತ್ತು ಗ್ರಾಮಗಳ ಉಳಿತಾಯದ ಹಣವನ್ನೇ ಹನ್ನೊಂದನೇ ಗ್ರಾಮಕ್ಕೆ ಸಾಲ ನೀಡಬಹುದು.

ಇವುಗಳು ನೀಡುವ ಸಾಲದ ಬಡ್ಡಿ ದರ ಕಡಿಮೆ ಏನೂ ಇಲ್ಲ. ಶೇಕಡಾ 18 ರಿಂದ ಶೇಕಡಾ 24 ರವರೆಗೂ ವಾರ್ಷಿಕ ಬಡ್ಡಿಯನ್ನು ಸಾಲದ ಕೊನೆ ಕಂತು ಮುಕ್ತಾಯವಾಗುವ ಅವಧಿಯವರೆಗೂ ಲೆಕ್ಕ ಹಾಕಿ ಅಸಲಿನ ಜೊತೆ ಸೇರಿಸಿ ಸಮಾನ ಕಂತುಗಳಾಗಿ ವಿಂಗಡಿಸುತ್ತಾರೆ. ಇ ಎಸ್ ಎ ಎಪ್ ಸ್ಮಾಲ್ ಫೈನಾನ್ಸ್ ನ ಈ ಉದಾಹರಣೆ ನೋಡಿ, 45 ಸಾವಿರ ರೂ ಅಸಲನ್ನು 24 ತಿಂಗಳ ಮರು ಪಾವತಿ ಅವಧಿಗೆ ಶೇಕಡಾ 23.50 ವಾರ್ಷಿಕ ಬಡ್ಡಿ ದರದಂತೆ 12841 ರೂ ಬಡ್ಡಿ ಲೆಕ್ಕ ಹಾಕಿದ್ದಾರೆ. ಸಾಲವನ್ನು ಜುಲೈ ಒಂದನೇ ತಾರೀಖು ಪಡೆದಿದ್ದರೆ ಆಗಸ್ಟ್ ಒಂದನೇ ತಾರೀಖಿಗೆ ಮೊದಲ ಕಂತನ್ನು ಮರು ಪಾವತಿಸಬೇಕು. ಮೇಲಿನ ಅಸಲು ಮತ್ತು ಬಡ್ಡಿಗೆ ಮೊದಲ ಕಂತಿನ ಹಣ 2370 ರೂ ಇದ್ದು 23 ನೇ ತಿಂಗಳ ತನಕ 2370 ರೂ ಅನ್ನು ಸಮಾನ ಕಂತಾಗಿ ಪಾವತಿಸಿ ಹೆಚ್ಚುವರಿಯಾಗಿ ಉಳಿಯುವ ಹಣ ಸೇರಿಸಿ 24 ನೇ ಕಂತಿನಲ್ಲಿ 3331 ರೂ ಅನ್ನು ಪಾವತಿಸಬೇಕಿರುತ್ತದೆ. ಇದಲ್ಲದೆ ಸಂಸ್ಕರಣ ಶುಲ್ಕ ಸಾಲದ ಮೊತ್ತಕ್ಕೆ ಅನುಸಾರವಾಗಿ ಪಾವತಿಸಬೇಕು. ಈ ಉದಾಹರಣೆಯಲ್ಲಿ 45 ಸಾವಿರ ರೂ ಸಾಲಕ್ಕೆ ಸಂಸ್ಕರಣ ಶುಲ್ಕ 675 ರೂ ಹಾಗೂ ಸರ್ವಿಸ್ ಶುಲ್ಕ 122 ರೂ ಒಟ್ಟು 797 ರೂಗಳನ್ನು ಸಂಗ್ರಹಿಸಲಾಗಿದೆ.

The Effects of Demonetisation on Microfinance in India - Rhetoriq

ಈ ಅವಧಿಯಲ್ಲಿ ಸಾಲ ಪಡೆದವರು ಮರಣ ಹೊಂದಿದರೆ ಸಾಲ ಮನ್ನಾಕ್ಕಾಗಿ ವಿಮೆ ಪ್ರಿಮಿಯಮ್ ಸಂಗ್ರಹಿಸಲಾಗುತ್ತೆ. ಈ ಮೊತ್ತವು ಐವತ್ತು ಸಾವಿರ ಸಾಲಕ್ಕೆ 250 ರೂ ನಿಂದ 400 ರೂ ತನಕ ಇದೆ. ಸಾಲದ ಮರುಪಾವತಿಯು ಎರಡು ವರ್ಷ ಇದ್ದರೆ ಎರಡು ಸಾರಿ ಪಾವತಿಸಬೇಕಿದೆ. ಇದು ಕಡ್ಡಾಯ. ವಾರದಲ್ಲೇ ಮರು ಪಾವತಿ ಆಗುವ ಅಸಲಿಗೂ ವಾರ್ಷಿಕ ಬಡ್ಡಿಯನ್ನೇ ವಸೂಲು ಮಾಡುವುದು, ಉಳಿತಾಯ ಹಣ ಎಂದು ಸಂಗ್ರಹಿಸುವ ಮೊತ್ತ, ಸಂಸ್ಕರಣ-ಸರ್ವಿಸ್ ಶುಲ್ಕ, ವಿಮೆ ಮೊತ್ತ ಇವೆಲ್ಲವನ್ನೂ ಲೆಕ್ಕಹಾಕಿದರೆ ಪ್ರತಿಯೊಂದು ಮೈಕ್ರೋ ಫೈನಾನ್ಸ್ ಗಳೂ ಕನಿಷ್ಠ ಶೇಕಡಾ 36 ರಿಂದ ಶೇಕಡಾ 60 ರವರೆಗೂ ವಾರ್ಷಿಕ ಬಡ್ಡಿ ದರ ವಿಧಿಸುತ್ತವೆ. ಧರ್ಮಸ್ಥಳ ದಂತಹ ಮೈಕ್ರೋ ಫೈನಾನ್ಸ್ ಸಂಸ್ಥೆ ಕಡಿಮೆ ಬಡ್ಡಿ ದರದ ರಾಷ್ಟ್ರೀಕೃತ ಬ್ಯಾಂಕ್ ಸಾಲವನ್ನು ಜನರಿಗೆ ಹೆಚ್ಚಿನ ಬಡ್ಡಿ ದರಕ್ಕೆ ವಿತರಿಸುವ ಮೂಲಕ ತನ್ನ ವ್ಯವಹಾರವನ್ನು ವ್ಯಾಪಕವಾಗಿ ವಿಸ್ತರಿಸಿದೆ. ಸಾಲ ವಿತರಿಸುವಾಗ ದೇವರ ಹೆಸರಿನಲ್ಲಿ ಮರು ಪಾವತಿಸುವ ಪ್ರಮಾಣ ಮಾಡಿಸಿಕೊಳ್ಳುತ್ತದೆ.

ಗ್ರಾಮೀಣಾಭಿವೃದ್ಧಿ, ಜನರ ಜೀವನವನ್ನು ಸುಧಾರಿಸುವುದು ಮುಂತಾದ ಹೆಸರಿನಲ್ಲಿ ಸರ್ಕಾರದ ಯೋಜನೆಗಳನ್ನು ಕೊಳ್ಳೆ ಹೊಡೆಯುವ ಈ ಸಂಸ್ಥೆಗಳು ಯಾವುದೇ ನಿಯಂತ್ರಣದಲ್ಲಿ ಇಲ್ಲ. ಸಣ್ಣ ಸಣ್ಣ ಸಾಲವೆಂಬ ದೊಡ್ಡ ವ್ಯವಹಾರವನ್ನು ನಡೆಸುತ್ತಿವೆ. 2000 ನೇ ಇಸವಿಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ಕೇವಲ ಐದಾರು ಇದ್ದ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಸುಮಾರು 83 ರಷ್ಟಿದ್ದು, ಹತ್ತು ಸಾವಿರ ಕೋಟಿ ರೂಗೂ ಹೆಚ್ಚಿನ ವಹಿವಾಟು ನಡೆಸುತ್ತಿವೆ ಎಂದರೆ ಇವುಗಳ ಬೆಳವಣಿಗೆಯ ವೇಗವನ್ನು ಅಂದಾಜಿಸಬಹುದು.

ಬಜಾಜ್, ಎಲ್&ಟಿ ಯಂತಹ ದೈತ್ಯ ಕಂಪನಿಗಳಿಂದ ಹಿಡಿದು ಮಣಪ್ಪುರಂ, ಮುತ್ತೋಟ್ ನಂತಹ ಹಣಕಾಸು ಸಂಸ್ಥೆಗಳವರೆಗೆ ಚಾಚಿರುವ ಈ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಕಂಪನಿ, ಸೊಸೈಟಿ, ಟ್ರಸ್ಟ್ ಮುಂತಾದ ಹೆಸರುಗಳಲ್ಲಿ ವ್ಯವಹಾರ ಮಾಡುತ್ತಿವೆ. ದೊಡ್ಡ ದೊಡ್ಡ ಕಾರ್ಪೊರೇಟ್ ದೈತ್ಯ ಸಂಸ್ಥೆಗಳು, ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ಹೆಸರಿನಲ್ಲಿ ತೆರಿಗೆ ವಂಚಿಸಿ ಈ ಸಂಸ್ಥೆಗಳ ಮೂಲಕ ಮರು ಹೊಡಿಕೆ ಮಾಡಿ ಲಾಭ ಗಳಿಸುತ್ತಿವೆ. ಗ್ರಾಹಕರನ್ನೇ ಮರು ಪಾವತಿ ವಸೂಲಾತಿಗೆ ಬಳಸಿಕೊಳ್ಳುವ ಮೂಲಕ ಬಲವಂತದ ಸಾಲ ವಸೂಲಾತಿ ಮಾಡುತ್ತಿವೆ. ಹೀಗೆ ಹಿಂಸೆಯಿಂದ ನೊಂದ ರೈತ-ಕೃಷಿಕೂಲಿಕಾರ ಮತ್ತಿತರ ದೈಹಿಕ ದುಡಿಮೆಗಾರರು, ಮಹಿಳೆಯರು ಆತ್ಮಹತ್ಯೆ ಗೆ ಈಡಾಗಿದ್ದಾರೆ. ಎಷ್ಟೋ ಕಡೆ ಮರುಪಾವತಿಸದ ಮಹಿಳೆಯ ಮನೆಗೆ ಅದೇ ಗುಂಪಿನ ಮಹಿಳೆಯರು ನುಗ್ಗಿ ಕೋಳಿ – ಕುರಿ ಮುಂತಾದ ಜಾನುವಾರುಗಳನ್ನು ಹಿಡಿದು ಮಾರಾಟ ಮಾಡಿ ಕಂತು ಪಾವತಿಸಿರುವ ಉದಾಹರಣೆಗಳು ಬಹುತೇಕ ಗ್ರಾಮಗಳಲ್ಲಿ ಸಿಗುತ್ತವೆ.

Scrips of PE-backed gold loan firms rocket after proposed RBI ...

ಪ್ರತಿಯೊಬ್ಬರು ಕನಿಷ್ಠ ಮೂರು ಸಂಸ್ಥೆಗಳಲ್ಲಿ ಸಾಲ ಪಡೆದಿದ್ದಾರೆ. ಕೆಲವರು 12 ಕ್ಕೂ ಹೆಚ್ಚು ಸಾಲ ಪಡೆದಿರುವುದು ಉಂಟು. ಒಂದೇ ಕುಟುಂಬದ ಸದಸ್ಯರು ಏಕಕಾಲದಲ್ಲಿ ಬೇರೆ ಬೇರೆ ಮೈಕ್ರೋ ಫೈನಾನ್ಸ್ ಗುಂಪುಗಳಲ್ಲಿ ಸಾಲ ಪಡೆದಿರುವುದು ಉಂಟು. ಹೀಗೆ ಹೆಚ್ಚು ಹೆಚ್ಚು ಸಾಲ ನೀಡಿ ಹೆಚ್ಚು ಹೆಚ್ಚು ವ್ಯವಹಾರ ದಾಖಲಿಸುವ ಮೈಕ್ರೋ ಫೈನಾನ್ಸ್ ಕಂಪನಿಗಳ ದುರಾಸೆ ಈಗ ಮಹಿಳೆಯರ, ಗ್ರಾಮೀಣ ಕುಟುಂಬಗಳ ಜೀವ ಹಿಂಡುತ್ತಿವೆ. ಸಾಲದ ಕಂತು ಮರುಪಾವತಿಸುವ ವಿಷಯ ಕೌಟುಂಬಿಕ ದೌರ್ಜನ್ಯಕ್ಕೂ ಕಾರಣವಾಗುತ್ತಿದೆ. ಮರುಪಾವತಿಸುವ ಒತ್ತಡಕ್ಕೆ ಸಿಕ್ಕ ಸಿಕ್ಕವರ ಹತ್ತಿರ ಹಣ ಕೇಳಿ ಮರ್ಯಾದೆಗೆ ಕುಂದು ತಂದುಕೊಂಡ ಘಟನೆಗಳು ನಡೆಯುತ್ತಿವೆ. ಹೀಗೆ ಗ್ರಾಮೀಣ ಜನತೆಯ ಘನತೆಯ ಬದುಕಿಗೆ ಮಾರಕವಾಗಿರುವ ಈ ಕಿರು ಹಣಕಾಸು ಸಂಸ್ಥೆಗಳನ್ನು ಶಾಸನದ ಮೂಗುದಾರ ಹಾಕಿ ನಿಯಂತ್ರಿಸಿ ಶೋಷಣೆ ತಪ್ಪಿಸುವ ಕೆಲಸ ತುರ್ತಾಗಿ ಆಗಬೇಕಿದೆ.

“ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಕಾರ್ಯವ್ಯಾಪ್ತಿ, ವಹಿವಾಟು ಪ್ರಮಾಣ, ಬಡ್ಡಿ ದರ, ಸಾಲ ವಿತರಿಸುವ ವಿಧಾನ, ವಸೂಲಾತಿ ಪ್ರಕ್ರಿಯೆ ಇವುಗಳನ್ನು ನಿಯಂತ್ರಿಸುವ ಹಾಗೂ ನೈಸರ್ಗಿಕ ವಿಕೋಪ, ದುಡಿಮೆ – ಆದಾಯ ನಷ್ಟ ಮುಂತಾದ ಪರಿಸ್ಥಿತಿಗಳಲ್ಲಿ ಅಗತ್ಯ ಸಾಲ ಮನ್ನಾ ಪ್ರಕ್ರಿಯೆ ನಡೆಸಲು  ಅವಕಾಶ ಇರುವ ಸಮಗ್ರ ಶಾಸನವನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಅಂಗೀಕರಿಸಬೇಕಾದ ಅಗತ್ಯವಿದೆ” ಎನ್ನುತ್ತಾರೆ ಕರ್ನಾಟಕ ಪ್ರಾಂತ ರೈತ ಸಂಘದ ಮಂಡ್ಯ ಜಿಲ್ಲಾ ಸಂಚಾಲಕ ಟಿ.ಎಲ್ ಕೃಷ್ಣೇಗೌಡ.

ಕೋವಿಡ್ 19 ರ ಲಾಕ್ ಡೌನ್ ನ ಸಂಕಷ್ಟದಿಂದ ಉದ್ಬವವಾಗಿರುವ ವಿಶೇಷ ಪರಿಸ್ಥಿತಿಯಿಂದ ಗ್ರಾಮೀಣ ಜನ ಜೀವನವನ್ನು, ಮಹಿಳೆಯರ ಘನತೆಯನ್ನು ಕಾಪಾಡಲು ಸಾಲ ಮನ್ನಾ ಒಂದೇ ಪರಿಹಾರ ಎನ್ನುವ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ರಾಜ್ಯಾಧ್ಯಕ್ಷೆ ದೇವಿ, ಎಲ್ಲಾ ಮೈಕ್ರೋ ಫೈನಾನ್ಸ್, ಸ್ತ್ರೀ ಶಕ್ತಿ, ಸ್ವ ಸಹಾಯ ಸಂಘಗಳ ಎಲ್ಲಾ ಸಾಲಗಳನ್ನು ಬಡ್ಡಿ ಸಮೇತವಾಗಿ ಮನ್ನಾ ಮಾಡಬೇಕೆಂದು ಆಗ್ರಹಿಸುತ್ತಾರೆ.

ಇಪ್ಪತ್ತು ಲಕ್ಷ ಕೋಟಿ ರೂಗಳ ಆತ್ಮ ನಿರ್ಭರ್ ಪ್ಯಾಕೇಜ್ ನ ನರೇಂದ್ರ ಮೋದಿ ರವರಿಗೆ, ಈ ಗ್ರಾಮೀಣ ಬಡ ಮಹಿಳೆಯರ ಕೂಗು ತಲುಪುವುದೇ?

 

(ಎಲ್ಲ ಅಭಿಪ್ರಾಯಗಳು ಲೇಖಕರದ್ದೆ)

  • ಟಿ ಯಶವಂತಮದ್ದೂರು ತಾಲೂಕಿನ ತೊರೆಶೆಟ್ಟಿಹಳ್ಳಿಯಲ್ಲಿ ವಾಸವಾಗಿರುವ ಯಶವಂತ್‌, ಹೊಸ ತಲೆಮಾರಿನ ಸಾಮಾಜಿಕ ಕಾರ್ಯಕರ್ತರ ಪೈಕಿ ಮುಂಚೂಣಿಯಲ್ಲಿರುವ ಗುಂಪಿನಲ್ಲಿ ಅಷ್ಟು ಸದ್ದು ಮಾಡದೇ ಕೆಲಸ ಮಾಡಿಕೊಂಡು ಹೋಗುತ್ತಿದ್ದಾರೆ. ವಿದ್ಯಾರ್ಥಿಯಾಗಿದ್ದಾಗಿನಿಂದಲೂ ಸಕ್ರಿಯವಾಗಿರುವ ಅವರು ಈ ಸದ್ಯ ಪ್ರಾಂತ ರೈತ ಸಂಘದ ಸಂಘಟಕರು. ಬೇರು ಮಟ್ಟದ ಬೆಳವಣಿಗೆಗಳನ್ನು ಜಾಗತಿಕ ರಾಜಕೀಯಾರ್ಥಿಕತೆಯ ಹಿನ್ನೆಲೆಯಲ್ಲಿ ವಿಶ್ಲೇಷಿಸುವ ಯಶವಂತ್‌ ತುಂಬಾ ಗಂಭೀರವಾಗಿ ಬರೆದುಬಿಡುತ್ತಾರೆ ಎಂಬ ಆತಂಕವನ್ನು ಹೋಗಲಾಡಿಸುವಂತೆ ಈ ಸರಣಿ ಬರೆಯುತ್ತಿದ್ದಾರೆ.
  • ನಿಮ್ಮ ಪ್ರತಿಕ್ರಿಯೆಗಳನ್ನು ಈ ಈಮೇಲ್ ಐಡಿಗಳಿಗೆ [email protected] ,  [email protected] ಕಳುಹಿಸಿ ಅಥವಾ 9448572764 ವಾಟ್ಸ್ ಆಪ್ ನಂಬರ್ ಗೆ ಕಳುಹಿಸಿ.

 


ಇದನ್ನೂ ಓದಿಹಳ್ಳಿ ಮಾತು-7: ರೈತಾಪಿ ದುಡಿಮೆ ದೋಚಲು ಖಾಸಗಿ ಸಕ್ಕರೆ ಉದ್ಯಮಿಗಳ ಹುನ್ನಾರ

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights