ಪ್ರಧಾನಿ ಹಾಗೂ ಮುಖ್ಯಮಂತ್ರಿಗಳ ಹೆಸರಲ್ಲಿ ಸರ್ಕಾರವನ್ನು ಗುರುತಿಸುವುದು ರದ್ದಾಗಬೇಕು: ಹೈಕೋರ್ಟ್‌ನಲ್ಲಿ ಪಿಐಎಲ್
ಇತ್ತೀಚೆಗೆ ಹೆಚ್ಚು ಚಾಲ್ತಿಗೆ ಬಂದಿರುವಂತೆ, ಸರ್ಕಾರಗಳನ್ನು ಮುಖ್ಯಮಂತ್ರಿ ಅಥವಾ ಪ್ರಧಾನಮಂತ್ರಿ ಹೆಸರಿನಲ್ಲಿ ಉಲ್ಲೇಖಿಸುವುದು ರದ್ದಾಗಬೇಕು. ಅಂತಹ ಆಚರಣೆ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿರಲಿದೆ. ಹಾಗಾಗಿ ಈ ರೀತಿಯಲ್ಲಿ ವ್ಯಕ್ತಿ ಹೆಸರಿನಲ್ಲಿ ಸರ್ಕಾರವನ್ನು ಉಲ್ಲೇಖಿಸುವುದನ್ನು ತಡೆಯಬೇಕು ಎಂದು ಕರ್ನಾಟಕ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ.
ಭಾರತದ ಒಕ್ಕೂಟ ಸರ್ಕಾರವನ್ನು ಭಾರತ ಸರ್ಕಾರ ಅಥವಾ ಕೇಂದ್ರ ಸರ್ಕಾರ ಎಂದೂ, ರಾಜ್ಯಗಳ ಸರ್ಕಾರಗಳನ್ನು ಆಹಾ ರಾಜ್ಯ ಸರ್ಕಾರ (ಕರ್ನಾಟಕದಲ್ಲಿ ಕರ್ನಾಟಕ ಸರ್ಕಾರ) ಎಂದು ಕರೆಯುವುದು ಸಂವಿಧಾನ ಬದ್ದವಾಗಿದೆ. ಆದರೆ, ಮಾದ್ಯಮಗಳಲ್ಲಿ ಹಾಗೂ ಇತರೆ ಪ್ರಕಟಣೆಗಳಲ್ಲಿ ಮುಖ್ಯಮಂತ್ರಿ, ಪ್ರಧಾನಮಂತ್ರಿಗಳ ಹೆಸರಿನಿಂದ ಸರ್ಕಾರಗಳನ್ನು ಉಲ್ಲೇಖಿಸಲಾಗುತ್ತದೆ. ಉದಾಹರಣೆಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ, ಮುಖ್ಯಮಂತ್ರಿ ಯಡಿಯೂರಪ್ಪ ಸರ್ಕಾರ ಎಂದು ಉಲ್ಲೇಖಿಸುಲಾಗುತ್ತಿದೆ. ಇದು ಸಂವಿಧಾನಕ್ಕೆ ಬದ್ದವಾಗಿ ಜನರಿಂದ ಆರಿಸಿರುವ ಸರ್ಕಾರಗಳಿಗೆ ತೋರುವ ಅಗೌರವ ಎಂದು ತುಮಕೂರಿನ ಚೇಳೂರು ನಿವಾಸಿ ಎ. ಮಲ್ಲಿಕಾರ್ಜುನ ಎಂಬುವವರು ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಅರ್ಜಿದಾರರು ಕೇಂದ್ರ ಕಾನೂನು ಸಚಿವಾಲಯ, ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ಪ್ರೆಸ್ ಇನ್ಫಾರ್ಮೇಷನ್ ಬ್ಯೂರೋ, ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ, ರಾಜ್ಯ ಸರ್ಕಾರದ ಕಾನೂನು ಇಲಾಖೆ, ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗಳನ್ನು ಪ್ರತಿವಾದಿಗಳೆಂದು ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ಮಾದ್ಯಮಗಳಲ್ಲಿ ಮುಖ್ಯಮಂತ್ರಿ, ಪ್ರಧಾನಿಗಳ ಹೆಸರಲ್ಲಿ ಆಯಾ ಸರ್ಕಾರಗಳನ್ನು ಸಂಬೋಧಿಸುವುದು ಸಂವಿಧಾನದ ಮೂಲ ಆಶಯದ ವಿರುದ್ಧವಾಗಿದೆ. ಆದರೆ ಇತ್ತೀಚೆಗೆ ಮಾದ್ಯಮಗಳು, ಕೆಲ ಅಧಿಕಾರಿಗಳು, ಸಚಿವರೂ ಸಹ ಇದೇ ಕ್ರಮ ಅನುಸರಿಸಿದ್ದಾರೆ. ಹೀಗೆ ಸರ್ಕಾರವನ್ನು ವ್ಯಕ್ತಿಗಳ ಹೆಸರಿನೊಡನೆ ಉಲ್ಲೇಖಿಸುವುದನ್ನು ತಡೆಯಲು ಸುಗ್ರೀವಾಜ್ಞೆ ತರುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕೆಂದು ಅರ್ಜಿದಾರರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ರಾಜಸ್ಥಾನದಲ್ಲಿ ಬಿಜೆಪಿಗೆ ಬಿಕ್ಕಟ್ಟು; ಬಿಜೆಪಿ ಶಾಸಕರು ಗುಜರಾತ್ ರೆಸಾರ್ಟ್‌ಗೆ ಶಿಫ್ಟ್