ಬಿಜೆಪಿಗೆ ಚಿಂತಕರು ಬೇಕಿಲ್ಲ – ಹಂತಕರ ಪಡೆ ಬೇಕಿದೆ – ಸಿದ್ಧನಗೌಡ ಪಾಟೀಲ ಕಿಡಿ

ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್.ದೋರೆಸ್ವಾಮಿ ವಿರುದ್ಧ ಅವಹೇಳನಕಾರಿ ಮಾತನಾಡಿದ ಶಾಸಕ‌ ಬಸನಗೌಡ ಪಾಟೀಲ್ ಯತ್ನಾಳ ರಾಜಿನಾಮೆಗೆ ‌ಆಗ್ರಹಿಸಿ ಕಲಬುರ್ಗಿಯಲ್ಲಿ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಕಲಬುರ್ಗಿಯ ಜಗತ್ ವೃತ್ತದಿಂದ ಟೌನಹಾಲ್ ವರೆಗೆ ದೊರೆಸ್ವಾಮಿ ಅವರು ನಮ್ಮ ಹೆಮ್ಮೆ‌ ಎಂಬ ಭಾವಚಿತ್ರ ಹಿಡಿದು ಮೆರವಣಿಗೆ ಮಾಡುತ್ತಾ, ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು. ಶಾಸಕ ಯತ್ನಾಳ ಹಾಗೂ ಬಿಜೆಪಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದೆ ಇರುವ ಆರ್.ಎಸ್.ಎಸ್ ಮತ್ತು ಬಿಜೆಪಿ ನಾಯಕರಿಗೆ ದೊರೆಸ್ವಾಮಿ ಅವರ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ ಎಂದರು. ದೊರೆಸ್ವಾಮಿ ಬಗ್ಗೆ ಅವಹೇಳನಕಾರಿ ಮಾತನಾಡುತ್ತಿದ್ದರೂ, ಬಿಜೆಪಿ ನಾಯಕರು ಮಾತ್ರಾ ಯತ್ನಾಳ ವಿರುದ್ದ ಯಾವುದೆ ಕ್ರಮ ಕೈಗೊಳ್ಳದೆ ಹೇಳಿಕೆಯನ್ನು ಸಮರ್ಥಿಸಿಕೋಳ್ಳುತ್ತಿದ್ದಾರೆ. ಕೂಡಲೇ ಯತ್ನಾಳ ವಿರುದ್ದ ಕ್ರಮ ಕೈಗೊಳ್ಳಬೇಕು, ದೊರೆಸ್ವಾಮಿ ವಿರುದ್ದ ಅವಹೇಳನಕಾರಿ ಹೇಳಿಕೆಗಳಿಗೆ ಕಡಿವಾಣ ಹಾಕಬೇಕೆಂದು ಆಗ್ರಹಿಸಿದರು. ಸಿಪಿಐ ಮುಖಂಡ ಸಿದ್ಧನಗೌಡ ಪಾಟೀಲ, ಜನವಾದಿ ಮಹಿಳಾ ಸಂಘಟನೆಯ ಕೆ.ನೀಲಾ, ಸಾಹಿತಿ ಆರ್.ಕೆ.ಹುಡಗಿ ಮತ್ತಿತರರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

ಬಿಜೆಪಿಗೆ ಚಿಂತಕರ ಬೇಕಿಲ್ಲ, ಹಂತಕರ ಪಡೆ ಮಾತ್ರ ಬೇಕಿದೆ ಎಂದು ಸಿಪಿಐ ಮುಖಂಡ ಸಿದ್ಧನಗೌಡ ಪಾಟೀಲ ಆರೋಪಿಸಿದ್ದಾರೆ. ಕಲಬುರ್ಗಿಗೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಪೌರತ್ವ ವಿರೋಧಿ ಹೋರಾಟ ನೆಪಮಾಡಿಕೊಂಡು ದೇಶದ ಮೂಲಭೂತ ಸಮಸ್ಯೆಗಳನ್ನು ಬದಿಗೆ ಸರಿಸುವ ಕೆಲಸ ಬಿಜೆಪಿಯಿಂದ ನಡೆದಿದೆ. ದೇಶಾದ್ಯಂತ ಭಯ ಹುಟ್ಟಿಸೋ ಕೆಲಸ ನಡೆದಿದೆ ಎಂದು ಕಿಡಿಕಾರಿದರು.

ಆಡಳಿತವನ್ನು ಮತ್ತು ಆಡಳಿತಾರೂಢ ಪಕ್ಷವನ್ನು ಪ್ರಶ್ನೆಯೇ ಮಾಡಬಾರದೆಂಬ ವಾತಾವರಣ ಸೃಷ್ಟಿಸಲಾಗುತ್ತಿದೆ. ಕೇಂದ್ರ ಸರ್ಕಾರ ಜನರ ದಿಕ್ಕು ತಪ್ಪಿಸೋ ಕೆಲಸ ಮಾಡ್ತಿದೆ. ದೇಶ ಅಭಿವೃದ್ಧಿಯಾಗಬೇಕಾದ್ರೆ ಚಿಂತಕರ ಪಡೆ ಅವಶ್ಯ. ಚಿಂತಕರಿಂದಲೇ ದೇಶ ನಡೆಯುತ್ತದೆ. ಆದ್ರೆ ಬಿಜೆಪಿಗೆ ಚಿಂತಕರ ಪಡೆ ಬೇಕಿಲ್ಲ. ಅವರಿಗೆ ಹಂತಕರ ಪಡೆ ಮಾತ್ರ ಬೇಕಿದೆ. ಅದಕ್ಕಾಗಿಯೇ ಫ್ಯೂಡಲ್ ರಾಜಕಾರಣಿಗಳನ್ನು ಎತ್ತಿಕಟ್ಟುವ ಕೆಲಸ ನಡೆದಿದೆ. ದೊರೆಸ್ವಾಮಿ ವಿರುದ್ಧ ಬಸನಗೌಡ ಪಾಟೀಲರನ್ನ ಎತ್ತಿಕಟ್ಟಲಾಗುತ್ತಿದೆ ಎಂದರು.

ಯತ್ನಾಳರ ಹೇಳಿಕೆಯನ್ನು ಪ್ರಹ್ಲಾದ್ ಜೋಷಿ, ಈಶ್ವರಪ್ಪ ಮತ್ತಿತರ ಹಿರಿಯ ನಾಯಕರು ಸಮರ್ಥಿಸುತ್ತಾರೆ. ಆ ಮೂಲಕ ಆರಾಜಕತೆ ಸೃಷ್ಟಿಸಲು ಯತ್ನಿಸಲಾಗುತ್ತಿದೆ. ದೊರೆಸ್ವಾಮಿ ಅವರನ್ನು ಟೀಕಿಸುವ ಹಕ್ಕಿದೆ. ಹಾಗೆಂದು ಟೀಕಿಸೋ ಭರದಲ್ಲಿ ಪಾಕಿಸ್ತಾನ್ ಏಜೆಂಟ್ ಇತ್ಯಾದಿಯಾಗಿ ಬಾಯಿಗೆ ಬಂದಂತೆ ಮಾತನಾಡೋದು ಸರಿಯಲ್ಲ. ಬಸನಗೌಡ ಪಾಟೀಲರಂತಹ ಫ್ಯೂಡಲ್ ರಾಜಕಾರಣಿಯನ್ನು ದೊರೆಸ್ವಾಮಿ ಅಂತಹ ಸ್ವಾತಂತ್ರ್ಯ ಹೋರಾಟಗಾರರ ವಿರುದ್ಧ ಎತ್ತಿಕಟ್ಟಲಾಗ್ತಿದೆ. ಆ ಮೂಲಕ ಹಂತಕರ ಪಡೆಯನ್ನು ಬೆಳೆಸುತ್ತಿದ್ದಾರೆ ಎಂದು ಸಿದ್ಧನಗೌಡ ಪಾಟೀಲ ಕಿಡಿಕಾರಿದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights