ಬಿಸಿ ಪಾಟೀಲ್ ಗೆ ಮತದಾರರು ತಕ್ಕ ಪಾಠ ಕಲಿಸಿ : ಡಿಕೆ ಶಿವಕುಮಾರ್
ಹಿರೇಕೆರೂರು ಕ್ಷೇತ್ರದಲ್ಲಿ ಜನರು, ಸರ್ಕಾರಿ ಅಧಿಕಾರಿಗಳನ್ನು ಕ್ರೂರವಾಗಿ ನೋಡುವ ಬಿಸಿ ಪಾಟೀಲ್ ಗೆ ಮತದಾರರು ತಕ್ಕ ಪಾಠ ಕಲಿಸಬೇಕು ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಹಿರೇಕೆರೂರು ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬನ್ನಿಕೋಡ್ ಪರ ಭಾನುವಾರ ಪ್ರಚಾರ ನಡೆಸಿದ ಡಿಕೆ ಶಿವಕುಮಾರ್, ಯಡಿಯೂರಪ್ಪನವರ ವಿರುದ್ಧ ಆಮೀಷದ ಆರೋಪ ಮಾಡಿದ ಬಿಸಿ ಪಾಟೀಲ್ ಇಂದು ನಿಮ್ಮ ಸ್ವಾಭಿಮಾನ ಮಾರಿ ಅದೇ ಯಡಿಯೂರಪ್ಪನವರ ಹಿಂದೆ ಹೋಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಈ ವೇಳೆ ಅವರು ಹೇಳಿದ್ದಿಷ್ಟು…
ಕಳೆದ ವರ್ಷ ಚುನಾವಣೆಯಲ್ಲಿ ಯಾರಿಗೂ ಬಹುಮತ ಬಾರದಿದ್ದಾಗ ಆತುರದಲ್ಲಿ ಬಿಎಸ್ ಯಡಿಯೂರಪ್ಪ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರನ್ನು ಸೆಳೆದರು. ಆಗ ಶ್ರೀರಾಮುಲು ಹಾಗೂ ಬಿಸಿ ಪಾಟೀಲ್ ನಡುವಣ ಟೆಲಿಫೋನ್ ಸಂಭಾಷಣೆ ನಿಮಗೆಲ್ಲಾ ಗೊತ್ತಿದೆ.
ಅಂದು ರಾತ್ರಿಯೇ ಬಿಸಿ ಪಾಟೀಲ್ ಸೇರಿದಂತೆ ಕಾಂಗ್ರೆಸ್ ನಾಯಕರು ಸುಪ್ರೀಂಕೋರ್ಟ್ ಮೆಟ್ಟಿಲೇರಿದೆವು. ರಾತ್ರಿ 2 ಗಂಟೆಗೆ ನಮ್ಮ ಅರ್ಜಿ ನೋಡಿದ ನ್ಯಾಯಾಲಯ 24 ಗಂಟೆ ಒಳಗೆ ಬಹುಮತ ಸಾಬೀತುಪಡಿಸಲು ಸೂಚಿಸಿತು. ಈ ಸಂದರ್ಭದಲ್ಲಿ ಬಿಜೆಪಿ ಒಡ್ಡಿದ್ದ ಆಮಿಷದ ಬಗ್ಗೆ ಬಿಸಿ ಪಾಟೀಲ್ ಅವರೇ ಸಾಕಷ್ಟು ಹೇಳಿಕೆ ನೀಡಿದ್ದಾರೆ. ಈಗ ಮಂತ್ರಿಗಿರಿಯ ಆಸೆಗೆ ನಿಮ್ಮ ಮತವನ್ನು ಮಾರಿಕೊಂಡಿದ್ದಾರೆ. ನಿಮ್ಮ ಮತ, ಸ್ವಾಭಿಮಾನ ಮಾರಿಕೊಂಡವರನ್ನು ನೀವು ಮತ್ತೆ ಆಯ್ಕೆ ಮಾಡುತ್ತೀರಾ?
ಈ ಭಾಗದ ಜನ ಸುಸಂಸ್ಕೃತರು, ಬುದ್ಧಿವಂತರು. ಮೋಸ ಮಾಡಿದವರಿಗೆ ಪಾಠ ಕಲಿಸುವವರು. ಯಡಿಯೂರಪ್ಪನವರು ತರಾತುರಿಯಲ್ಲಿ ಅಧಿಕಾರಕ್ಕೆ ಬಂದ್ರಲ್ಲ, ನಿಮಗಾಗಿ ಏನು ಮಾಡಿದರು? ನೀವು ಕೈಜೋಡಿಸಿದ ಮಹದಾಯಿ ವಿಚಾರದಲ್ಲಿ ಕೇಂದ್ರ ಸರ್ಕಾರದಿಂದ ಒಂದು ನೋಟಿಫಿಕೇಶನ್ ತರಲು ಸಾಧ್ಯವಾಗಲಿಲ್ಲ. ಜನರ ಸಮಸ್ಯೆಗೆ ಸ್ಪಂದಿಸಲು ಸಾಧ್ಯವಾಗದಿದ್ದ ಮೇಲೆ ನಿಮಗೆ ಅಧಿಕಾರ ಏಕೆ ಬೇಕು ಯಡಿಯೂರಪ್ಪನವರೆ? ಲೋಕಸಭೆ ಚುನಾವಣೆಯಲ್ಲಿ ಜನ ಆರಿಸಿ ಕಳುಹಿಸಿದರಲ್ಲ, 25 ಸಂಸದರು ಪ್ರಧಾನಿ ಜತೆ ಕೂತು ಒತ್ತಡ ಹೇರಿ ನೋಟಿಫಿಕೇಶನ್ ಹೊರಡಿಸಲು ಐದು ನಿಮಿಷ ಸಾಕು. ಇದರಿಂದ ಈ ಭಾಗದ ಜನರ ಕುಡಿಯೋ ನೀರಿನ ಸಮಸ್ಯೆ ಒಂದು ಹಂತಕ್ಕೆ ಪರಿಹಾರವಾಗುತ್ತದೆ. ನ್ಯಾಯಾಧಿಕರಣ ಕೊಟ್ಟಿರುವ ಅಲ್ಪ ಪಾಲನ್ನು ಬಳಸಿಕೊಳ್ಳಲು ಮನಸ್ಸು ಮಾಡದಿದ್ದರೆ ನಿಮ್ಮ ಸರ್ಕಾರ ಯಾರಿಗೆ ಬೇಕು ಸ್ವಾಮಿ?
ಯಡಿಯೂರಪ್ಪ ಹಾಗೂ ಗೃಹ ಸಚಿವರು ಗುಪ್ತಚರ ಮಾಹಿತಿ ನೋಡಿ ದಂಗಾಗಿದ್ದಾರೆ. ಜನ ಅನಾರ್ಹರನ್ನು ಮನೆಗೆ ಕಳುಹಿಸುತ್ತಾರೆ ಅಂತಾ ಗೊತ್ತಾಗುತ್ತಿದ್ದಂತೆ ಕಂತೆಗಟ್ಟಲೆ ಹಣ ಬರುತ್ತಿದೆ. ಮತದಾರರೆ ಅವರು ಎಷ್ಟೇ ದುಡ್ಡು ಕೊಟ್ಟರೂ ತೆಗೆದುಕೊಳ್ಳಿ ಬಿಡಬೇಡಿ. ಮತವನ್ನು ಕಾಂಗ್ರೆಸ್ ಗೆ ಹಾಕಿ. ಬಿಜೆಪಿ ನೋಟು ಕಾಂಗ್ರೆಸ್ ಗೆ ವೋಟು, ಬಿಸಿ ಪಾಟೀಲ್ ನೋಟು ಬನ್ನಿಕೋಡ್ ಗೆ ವೋಟು ಅನ್ನೋದನ್ನು ಮರೆಯಬೇಡಿ.
ಈ ಸಂದರ್ಭದಲ್ಲಿ ಯಡಿಯೂರಪ್ಪನವರನ್ನು ಬೈಯೋದು ಬೇಡ ಅವರ ಆಸೆಯಂತೆ ನಾಲ್ಕು ತಿಂಗಳು ಸಿಎಂ ಆಗಿದ್ದಾರೆ. ಅವರ ಹೈಕಮಾಂಡ್ ಬಳಿ ಐದಾರು ತಿಂಗಳ ಬೇಡಿಕೆ ಇಟ್ಟಿದ್ದಾರೆ. ಅವರ ಅಂತಿಮ ಘಟ್ಟದಲ್ಲಿ ಟೀಕೆ ಮಾಡೋದು ಬೇಡ.
ನಾವೆಲ್ಲ ಸಂವಿಧಾನವೇ ಮೊದಲು ಎಂದು ನಂಬಿರೋರು. ಆದರೆ ದೇಶದಲ್ಲಿ ಏನಾಗುತ್ತಿದೆ? ಲೋಕಸಭೆಯಲ್ಲಿ ದೊಡ್ಡ ಬಹುಮತ ಇದ್ದರೂ ಸಣ್ಣ ಪುಟ್ಟ ರಾಜ್ಯಗಳಲ್ಲಿ ವಿರೋಧ ಪಕ್ಷವನ್ನು ಅಧಿಕಾರದಲ್ಲಿ ನೋಡಲು ಸಹಿಸಿಕೊಳ್ಳುತ್ತಿಲ್ಲ. ಇದು ಯಾವ ಪ್ರಜಾಪ್ರಭುತ್ವ?
ಮಹಾರಾಷ್ಟ್ರದಲ್ಲಿ ಏನಾಯ್ತು ಅಂತಾ ನೀವೇ ನೋಡಿದ್ದೀರಿ. ಚುನಾವಣೆ ವೇಳೆ ಶಿವಸೇನೆ ಜತೆ ಮಾಡಿಕೊಂಡ ಮಾತನ್ನು ಉಳಿಸಿಕೊಳ್ಳದ ಬಿಜೆಪಿ ಅಡ್ಡ ದಾರಿ ಹಿಡಿಯಿತು. ಅರ್ಧದಷ್ಟು ಅಧಿಕಾರ ಕೇಳಿದ ಶಿವಸೇನೆಯನ್ನೇ ದೂರವಿಟ್ಟು, ರಾತ್ರೋರಾತ್ರಿ ಸಚಿವ ಸಂಪುಟ ಸಭೆ ನಡೆಸದೇ ರಾಷ್ಟ್ರಪತಿ ಆಳ್ವಿಕೆ ತೆರವು ಮಾಡಿ ಬಿಜೆಪಿ ಸರ್ಕಾರ ಮಾಡಿತು. ಬೆಳಗ್ಗೆ ಪತ್ರಿಕೆಯಲ್ಲಿ ಮೂರು ಪಕ್ಷಗಳಿಂದ ಸರ್ಕಾರ ರಚನೆ ಅರ್ಜಿ ಸಲ್ಲಿಕೆ ಸುದ್ದಿ ಓದುತ್ತಿದ್ದರೆ, ಟಿವಿಯಲ್ಲಿ ಬಿಜೆಪಿ ಸರ್ಕಾರ ಮಾಡುತ್ತಿದೆ. ಇದು ಯಾವ ರೀತಿಯ ರಾಜಕೀಯ? ಇಲ್ಲಿ ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯಿತಿ, ಸಂಘ ಸಂಸ್ಥೆ ಸದಸ್ಯರು ಇದ್ದೀರಿ ಇಂತಹ ರಾಜಕಾರಣ ಎಲ್ಲಾದ್ರೂ ಉಂಟೆ? ದೇಶದ ಮಾನವನ್ನು ಬಿಜೆಪಿ ವಿಶ್ವ ಮಟ್ಟದಲ್ಲಿ ಹರಾಜಾಕುತ್ತಿದೆ.