ಭಾರತದಲ್ಲಿ ಕೊರೊನ ಹರಡುವುದಕ್ಕೆ ತಬ್ಲೀಗಿ ಜಮಾತ್ ಕಾರಣ ಎನ್ನುವುದಕ್ಕೆ ಸಾಕ್ಷ್ಯವಿಲ್ಲ: ವಿಜ್ಞಾನಿಗಳ ಒಕ್ಕೂಟ
ಕೊರೊನ ಸಾಂಕ್ರಾಮಿಕದ ಸಮಯದಲ್ಲಿ ಸುಳ್ಳು ಸುದ್ದಿಗಳು ಮತ್ತು ಅವೈಜ್ಞಾನಿಕ ಸಂಗತಿಗಳ ವಿರುದ್ಧ ಹೋರಾಡಿ ಸರಿಯಾದ ತಿಳುವಳಿಕೆಯನ್ನು ಮೂಡಿಸಲು ಸುಮಾರು 65 ಭಾರತೀಯ ವಿಜ್ಞಾನಿಗಳು ಅಂತರ್ಜಾಲದಲ್ಲಿ ಕೋವಿಡ್-19ಗೆ ವಿಜ್ಞಾನಿಗಳ ಪ್ರತಿಕ್ರಿಯೆ (https://indscicov.in/) ಎಂಬ ವೇದಿಕೆಯನ್ನು ಸೃಷ್ಟಿಸಿಕೊಂಡು ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಡುತ್ತಿರುವ ತಪ್ಪು ಮಾಹಿತಿಗಳ ವಿರುದ್ಧ ಹೊರಾಡುತ್ತಿರುವುದಲ್ಲದೆ, ಇಂಗ್ಲಿಶ್ ಮತ್ತು ಕೆಲವು ಭಾರತೀಯ ಭಾಷೆಗಳಲ್ಲಿ ಕೊರೊನ ಸಾಂಕ್ರಾಮಿಕದ ಬಗ್ಗೆ ಹಲವು ವಿಷಯಗಳನ್ನು ಸರಳವಾಗಿ ಜನರಿಗೆ ತಿಳಿಸಲು ಮುಂದಾಗಿದೆ.
ಈಗ ಈ ಬಳಗ ಭಾರತದಲ್ಲಿ ಕೊರೊನ ಹರಡಲು ಮಾರ್ಚ್ ಕೊನೆಯಲ್ಲಿ ದೆಹಲಿಯಲ್ಲಿ ನಡೆದ ತಬ್ಲೀಗಿ ಜಮಾತ್ ಸಮಾವೇಶವೆ ಕಾರಣ ಎಂದು ಹರಡುತ್ತಿರುವ ಮಾಹಿತಿಯ ವಿರುದ್ಧ ಸಾರ್ವಜನಿಕ ಹೇಳಿಕೆಯನ್ನು ಪ್ರಕಟಿಸಿದೆ. ಈ ಹೇಳಿಕೆ ಇಂತಿದೆ.
“ಕಳೆದ ಕೆಲವು ದಿನಗಳಿಂದ ಹಲವು ಪ್ರಮುಖ ಮಾಧ್ಯಮ ವ್ಯಕ್ತಿಗಳು ಮತ್ತು ರಾಜಕಾರಣಿಗಳು ಭಾರತದಲ್ಲಿ ಕೋವಿಡ್-19 ಸಾಂಕ್ರಾಮಿಕ ಹರಡಲು ಮಾರ್ಚ್ 13 ರಂದು ದೆಹಲಿಯಲ್ಲಿ ನಡೆದ ತಬ್ಲೀಗಿ ಜಮಾತ್ ಕಾರ್ಯಕ್ರಮ ಕಾರಣ ಎಂದು ಹೇಳುತ್ತಿದ್ದಾರೆ. ಆದರೆ ಈಗ ಸಿಕ್ಕಿರುವ ಮಾಹಿತಿಯ ಪ್ರಕಾರ ಅಂತಹ ಊಹೆಯನ್ನು ಪುರಸ್ಕರಿಸಲು ಸಾಧ್ಯವಿಲ್ಲ.
ಈ ಸಾಂಕ್ರಾಮಿಕಕ್ಕೆ ಕೋಮು ಬಣ್ಣ ನೀಡುವುದನ್ನು ನಾವು ಬಲವಾಗಿ ಖಂಡಿಸುತ್ತೇವೆ. ಯಾವುದೇ ಪ್ರಕರಣಗಳನ್ನು ಜನಾಂಗೀಯ, ಧಾರ್ಮಿಕ ಅಥವಾ ಸಾಂಸ್ಕೃತಿಕವಾಗಿ ದಾಖಲಿಸಿಕೊಳ್ಳುವುದು ಸರಿಯಲ್ಲ ಎಂದು ನಾವು ವಿಶ್ವ ಆರೋಗ್ಯ ಸಂಸ್ಥೆಯ ಗಮನಕ್ಕೆ ತರಲು ಬಯಸುತ್ತೇವೆ. ಕೋವಿಡ್-19 ಹರಡುವುದಕ್ಕೆ ಯಾವುದೇ ಸಮುದಾಯವನ್ನು ಅಥವಾ ಯಾವುದೇ ಪ್ರದೇಶವನ್ನು ಲೇಬಲ್ ಮಾಡಬೇಡಿ ಎಂದು ಆರೋಗ್ಯ ಸಚಿವಾಲಯ ನೀಡಿರುವ ಹೇಳಿಕೆಯನ್ನೇ ಇದು ಪ್ರತಿಧ್ವನಿಸುತ್ತದೆ.
ಆ ಕಾರ್ಯಕ್ರಮವನ್ನು ರದ್ದುಗೊಳಿಸದೆ ತಬ್ಲೀಗಿ ಜಮಾತ್ ತಪ್ಪು ಮಾಡಿದೆ ಎಂದು ನಾವು ನಂಬಿದ್ದೇವೆ ಆದರೆ ಕೇಂದ್ರ ಮತ್ತು ದೆಹಲಿ ಸರ್ಕಾರಗಳ ಆಡಳಿತದಲ್ಲಿ ಆಗಿರುವ ತಪ್ಪುಗಳನ್ನು ಇಲ್ಲಿ ಗುರುತಿಸಬೇಕು. ಇದು ಮೊದಲೇ ಪೂರ್ವ ಅನುಮತಿ ಪಡೆದ ಕಾರ್ಯಕ್ರಮ ಆಗಿದ್ದರಿಂದ ಈಗಾಗಲೇ ಸೋಂಕಿದ್ದ ದೇಶಗಳಿಂದ ವಿದೇಶಿಗರು ಆಗಮಿಸಿ ಭಾಗವಹಿಸುತ್ತಿದ್ದಾರೆ ಎಂಬ ಎಚ್ಚರಿಕೆ ಸರ್ಕಾರದ ಕೆಲವು ಆಡಳಿತ ಸಂಸ್ಥೆಗಳಿಗೆ ಗೊತ್ತಿರಬೇಕಿತ್ತು.
ಭಾರತವೂ ಸೇರಿದಂತೆ ಹಲವು ದೇಶಗಳಲ್ಲಿ ಸೂಪರ್ ಹರಡಿಕೆಯ ಕಾರ್ಯಕ್ರಮಗಳು ಜರುಗಿವೆ. ಉದಾಹರಣೆಗೆ ಒಬ್ಬ ರೋಗಿ (ಈಗ ಮೃತರಾಗಿದ್ದಾರೆ) ಪಂಬಾಬಿನ 20 ಹಳ್ಳಿಗಳಲ್ಲಿ 40,000 ಜನರನ್ನು ಪ್ರತ್ಯೇಕಗೊಳಿಸಲು ಕಾರಣವಾದರು. ಇಂತಹ ಕಾರ್ಯಕ್ರಮಗಳಲ್ಲಿ ಸೋಂಕಿಗೆ ಒಳಗಾಗುವಾರು ಮತ್ತು ಯಾವುದೇ ಉದ್ದೇಶವಿಲ್ಲದೆ ಅದನ್ನು ಹರಡಲು ಕಾರಣವಾಗುವವರು ಈ ಸಾಂಕ್ರಾಮಿಕದ ಸಂತ್ರಸ್ತರು ಕೂಡ. ಅವರನ್ನು ಮಾತ್ರ ಗುರಿಯಾಗಿಸಿ ದಾಳಿ ಮಾಡಬಾರದು.
ಈವರೆಗೂ ಸೋಂಕು ಪ್ರಕರಣಗಳು ಧೃಢಪಟ್ಟಿರುವುದಕ್ಕಿಂತಲೂ ಹೆಚ್ಚು ಜನರಿಗೆ ದೇಶದಾದ್ಯಂತ ಸೋಂಕು ತಗಲಿರುವ ಸಾಧ್ಯತೆ ಇದೆ ಎಂದು ನಂಬಲಾಗಿದೆ. ಆದುದರಿಂದ ಇಡೀ ಭಾರತದಲ್ಲಿ ಸೋಂಕು ಹರಡುವುದಕ್ಕೆ ಈ ಕಾರ್ಯಕ್ರಮ ಬೀರಿರುವ ಪರಿಣಾಮ MoHFW ಬಿಡುಗಡೆ ಮಾಡಿರುವ ಸಂಖ್ಯೆಗಿಂತ ಬಹಳ ಕಡಿಮೆ.
ಈ ಕಾರ್ಯಕ್ರಮದಲ್ಲಿ ಭಾಗಿಯಾದವರು ಮತ್ತು ಅವರು ಸಂಪರ್ಕಿಸಿದವರ ಎಷ್ಟು ಜನರ ಮೇಲೆ ಪರೀಕ್ಷೆ ನಡೆಸಲಾಗಿದೆ ಎಂದು ನಿಖರ ಸಂಖೆಯನ್ನು ಸರ್ಕಾರ ಬಿಡುಗಡೆ ಮಾಡಿಲ್ಲ. ಆದುದರಿಂದ ಈ ಪ್ರಕರಣದಲ್ಲಿ ಪಾಸಿಟಿವ್ ಬಂದಿರುವ ಸಂಖ್ಯೆಯನ್ನು ಸಾಮಾನ್ಯವಾಗಿ ಇಡೀ ಜನಸಂಖ್ಯೆಯ ಮೇಲೆ ನಡೆಸಿರುವ ಪರೀಕ್ಷೆಗೆ ಹೇಗೆ ಹೊಲಿಸಬಹುದು ಗೊತ್ತಿಲ್ಲ. ಆದುದರಿಂದ ಸರ್ಕಾರ ಈ ಅಂಕಿ ಅಂಶಗಳನ್ನು ಬಿಡುಗಡೆ ಮಾಡಬೇಕೆಂದು ಆಗ್ರಹಿಸುತ್ತೇವೆ.
ಆದುದರಿಂದ ಹೆಚ್ಚೆಚ್ಚು ಮಾಹಿತಿ ಸಂಗ್ರಹಿಸಿ – ಹೆಚ್ಚುಚ್ಚು ಪರೀಕ್ಷೆ ಮಾಡಿ – ಪಾರದರ್ಶಕವಾಗಿ ಸಾರ್ವಜನಿಕರ ಜೊತೆಗೆ ಮಾಹಿತಿ ಹಂಚಿಕೊಳ್ಳಬೇಕೆಂದು” ಆಗಹಿಸುತ್ತೇವೆ.” ಎಂದು ಪ್ರಕಟಿಸಲಾಗಿದೆ.
1. We note the fact that a large number of positive cases have emerged associated with the #TablighiJamaath meeting in Delhi is very likely because those who attended the gathering and their contact networks were specifically tested in large numbers.
— IndSciCOVID (@IndSciCOVID) April 5, 2020
ದೇಶದ ಪ್ರತಿಷ್ಟಿತ ಐ ಐ ಟಿ, ಐ ಐ ಎಸ್ ಇ ಆರ್, ಟಿ ಐ ಎಫ್ ಆರ್, ಎನ್ ಸಿ ಬಿ ಎಸ್, ಅಶೋಕ ವಿಶ್ವವಿದ್ಯಾಲಯ ಮತ್ತಿತರ ವಿಜ್ಞಾನ ಸಂಸ್ಥೆಗಳಿಂದ ವಿಜ್ಞಾನ, ತಂತ್ರಜ್ಞಾನ ಮತ್ತು ಗಣಿತ ಕ್ಷೇತ್ರಗಳಿಂದ ಪರಿಣಿತರನ್ನು ಹೊಂದಿರುವ ಈ ವೇದಿಕೆ ಈ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಇನ್ನಾದರೂ ಮಾಧ್ಯಮಗಳು ಈ ಪ್ರಕರಣಕ್ಕೆ ತೆರೆ ಎಳೆಯುತ್ತವೆಯೇ ಕಾದು ನೋಡಬೇಕು. ಮುಂದಿನ ದಿನಗಳಲ್ಲಿ ಈ ವೇದಿಕೆಗೆ ಇನ್ನಷ್ಟು ಪರಿಣಿತರು ಸೇರಿಕೊಳ್ಳುವ ಭರವಸೆಯನ್ನು ಸದರಿ ಸದ್ಯಸ್ಯರು ವ್ಯಕ್ತಪಡಿಸಿದ್ದಾರೆ.

