ನಿತೀಶ್‌ ಬಿಜೆಪಿ ಜೊತೆಗಿನ ಮೈತ್ರಿ ಬಿಡಬೇಕು; ತೇಜಸ್ವಿ ಯಾದವ್‌ರನ್ನು ಮುಖ್ಯಮಂತ್ರಿ ಮಾಡಬೇಕು: ದಿಗ್ವಿಜಯ್ ಸಿಂಗ್‌

ಜೆಡಿಯು ನಾಯಕ ನಿತೀಶ್ ಕುಮಾರ್ ಅವರು ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಯನ್ನು ತ್ಯಜಿಸಬೇಕು ಮತ್ತು ಆರ್‌ಜೆಡಿ ನಾಯಕ ತೇಜಶ್ವಿ ಯಾದವ್ ಅವರನ್ನು ಮುಖ್ಯಮಂತ್ರಿಯಾಗಿ ಮಾಡಬೇಕು ಎಂದು ಕಾಂಗ್ರೆಸ್ ಹಿರಿಯ ಮುಖಂಡ ದಿಗ್ವಿಜಯ ಸಿಂಗ್ ಹೇಳಿದ್ದಾರೆ.

ಬಿಹಾರದಲ್ಲಿ ಬಿಜೆಪಿ ತನ್ನ ತಂತ್ರದೊಂದಿಗೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಪ್ರಬಲ್ಯ ಕಡಿಮೆ ಮಾಡಿದೆ ಎಂದು ಸರಣಿ ಟ್ವೀಟ್‌ಗಳಲ್ಲಿ ದಿಗ್ವಿಜಯ ಸಿಂಗ್ ಆರೋಪಿಸಿದ್ದಾರೆ.

“ಬಿಜೆಪಿ ಬಳ್ಳಿ ಇದ್ದಂತೆ, ಅದು ಮತ್ತೊಂದು ಮರದ ಬೆಂಬಲವನ್ನು ತೆಗೆದುಕೊಂಡು ಮರ ಒಣಗುತ್ತಿರುವಾಗ ಪ್ರವರ್ಧಮಾನಕ್ಕೆ ಬರುತ್ತದೆ. ನಿತೀಶ್ ಜಿ, ಲಾಲು ಯಾದವ್ ಮತ್ತು ನೀವು ಒಟ್ಟಿಗೆ ಹೋರಾಡಿದ್ದೀರಿ ಮತ್ತು ಅವರು ಜೈಲಿಗೆ ಹೋದರು. ಬಿಜೆಪಿ-ಆರ್‌ಎಸ್‌ಎಸ್ ಸಿದ್ಧಾಂತವನ್ನು ಬಿಟ್ಟು ತೇಜಸ್ವಿಯನ್ನು ಆಶೀರ್ವದಿಸಿ. ಈ ಬಳ್ಳಿ ತರಹದ ಬಿಜೆಪಿಯನ್ನು ಬಿಹಾರದಲ್ಲಿ ಬೆಳೆಯಲು ಬಿಡಬೇಡಿ” ಎಂದು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಟ್ವೀಟ್ ಮಾಡಿದ್ದಾರೆ.

ದಿಗ್ವಿಜಯ ಸಿಂಗ್ ಮಧ್ಯಪ್ರದೇಶದಲ್ಲಿ ನಡೆದ ಉಪಚುನಾವಣೆಯಲ್ಲಿ ಸೋಲು ಕಂಡಿದ್ದಾರೆ. ಮಾಜಿ ಸಹೋದ್ಯೋಗಿ ಜ್ಯೋತಿರಾಧಿತ್ಯ ಸಿಂಧಿಯಾ ಅವರು ಕಾಂಗ್ರೆಸ್‌ನಿಂದ ಗೆದ್ದು, ಮಾರ್ಚ್‌ನಲ್ಲಿ 22 ಶಾಸಕರೊಂದಿಗೆ ಕಾಂಗ್ರೆಸ್‌ನಿಂದ ಬಿಜೆಪಿಗೆ ಸೇರ್ಪಡೆಯಾಗಿ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷದ ಸರ್ಕಾರವನ್ನು ಉರುಳಿಸಿದ್ದರು.

ಜೊತೆಗೆ ದಿಗ್ವಿಜಯ ಸಿಂಗ್ ಅವರು ನಿತೀಶ್ ಕುಮಾರ್ ಅವರಿಗೆ ಬಿಹಾರವನ್ನು ತೊರೆದು ರಾಷ್ಟ್ರ ರಾಜಕೀಯಕ್ಕೆ ಪ್ರವೇಶಿಸುವಂತೆ ಸಲಹೆ ನೀಡಿದ್ದಾರೆ. “ನಿತೀಶ್ ಜಿ, ಬಿಹಾರವು ನಿಮಗೆ ಚಿಕ್ಕದಾಗಿದೆ. ನೀವು ರಾಷ್ಟ್ರ ರಾಜಕಾರಣಕ್ಕೆ ಸೇರಬೇಕು” ಎಂದಿದ್ದಾರೆ.

ಇದನ್ನೂ ಓದಿ: Bihar: ಸರಳ ಬಹುಮತ ಪಡೆದ NDA; 5ನೇ ಬಾರಿಯೂ ನಿತೀಶ್‌ ಮುಖ್ಯಮಂತ್ರಿ?

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು “ದೇಶದಲ್ಲಿ ಸಿದ್ದಾಂತಗಳ ವಿರುದ್ಧ ಹೋರಾಡುತ್ತಿರುವ ಏಕೈಕ ನಾಯಕ” ಎಂದಿದ್ದಾರೆ.

ಬಿಹಾರದಲ್ಲಿ ಬಿಜೆಪಿ ಚಿರಾಗ್ ಪಾಸ್ವಾನ್ ಅನ್ನು ನಿತೀಶ್ ವಿರುದ್ಧ ನಿಲ್ಲಿಸಿದೆ ಎಂಬ ಆರೋಪಗಳಿವೆ. 137 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ ಚಿರಾಗ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಕ್ಷ (ಎಲ್‌ಜೆಪಿ) ಕೇವಲ ಒಂದು ಸ್ಥಾನವನ್ನು ಮಾತ್ರ ಪಡೆದಿದೆ. ಆದರೆ ಜೆಡಿಯುಗೆ ಭಾರಿ ಪ್ರಮಾಣದಲ್ಲಿ ಹಾನಿಯುಂಟುಮಾಡಿದೆ. ಮೊದಲ ಬಾರಿಗೆ ಜೆಡಿಯು ಬಿಹಾರದಲ್ಲಿ ಇಷ್ಟು ಕಡಿಮೆ ಸ್ಥಾನಗಳನ್ನು ಪಡೆದಿದೆ.

ಇತ್ತ ಬಿಹಾರದಲ್ಲಿ ನಿತೀಶ್ ಕುಮಾರ್‌ ಮತ್ತೆ ಮುಖ್ಯಮಂತ್ರಿಯಾದರೆ ಅದರ ಕ್ರೆಡಿಟ್ ನಮಗೆ ಸಲ್ಲಬೇಕು ಎಂದು ಶಿವಸೇನೆ ಹೇಳಿಕೊಂಡಿದೆ. ನಿತೀಶ್‌ಗೆ ಉತ್ತಮ ಪೈಪೋಟಿ ನೀಡಿದ ಕಾರಣಕ್ಕೆ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರನ್ನು ಶಿವಸೇನೆ ಶ್ಲಾಘಿಸಿದೆ.

2019 ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಶಿವಸೇನೆಗೆ ಮುಖ್ಯಮಂತ್ರಿ ಸ್ಥಾನ ನೀಡುವ ಭರವಸೆ ನೀಡಿತ್ತು, ಆದರೆ ಆ ಮಾತನ್ನು ಉಳಿಸಿಕೊಳ್ಳದ ಕಾರಣ ಅದು ರಾಜ್ಯದಲ್ಲಿ ರಾಜಕೀಯ ನಾಟಕಕ್ಕೆ ಕಾರಣವಾಯಿತು. ಈಗ ನಿತೀತ್ ಸಿಎಂ ಆದರೆ ಅದಕ್ಕೆ ನಾವೇ ಶಿವಸೇನೆಯೇ ಕಾರಣ ಎಂದು ಉದ್ಧವ್ ಠಾಕ್ರೆ ನೇತೃತ್ವದ ಪಕ್ಷ ಹೇಳಿಕೊಂಡಿದೆ.


ಇದನ್ನೂ ಓದಿ: ಪ್ರಧಾನಿ ಮೋದಿ – ಅಮಿತ್‌ ಶಾ ಜೋಡಿಗೆ ಬೆವರಿಳಿಸಿದ ಬಿಹಾರ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights