ಮಧ್ಯಪ್ರದೇಶ ವಿಶ್ವಾಸಮತಯಾಚನೆ ಪ್ರಕರಣ: ಸ್ಪಷ್ಟನೆ ಕೇಳಿ ವಿಚಾರಣೆ ಮೂಂದೂಡಿದ ಸುಪ್ರೀಂ
12 ಗಂಟೆಗಳ ಒಳಗೆ ಬಹುಮತ ಪರೀಕ್ಷೆ ನಡೆಸಬೇಕೆಂದು ಬಿಜೆಪಿ ಸುಪ್ರೀಂನಲ್ಲಿ ಮನವಿ ಮಾಡಿರುವ ಬಗ್ಗೆ ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್ ನಾಥ್ ಮತ್ತು ವಿಧಾನಸಭಾ ಕಾರ್ಯದರ್ಶಿೆ ತಮ್ಮ ನಿಲುವನ್ನು ವಿವರಿಸುವಂತೆ ಸುಪ್ರೀಂ ಕೋರ್ಟ್ ನೋಟಿಸ್ ನೀಡಿದೆ. ಅಲ್ಲದೇ ವಿಚಾರಣೆಯನ್ನು ಬುಧವಾರಕ್ಕೆ ಮೂಂದೂಡಿದೆ.
ಮಧ್ಯಪ್ರದೇಶದ ಸ್ಪೀಕರ್ ಕೊರೊನಾ ವೈರಸ್ ವಿರುದ್ಧ ಮುನ್ನೆಚ್ಚರಿಕೆ ಕ್ರಮ ಎಂದು ಉಲ್ಲೇಖಿಸಿ ವಿಧಾನಸಭೆಯನ್ನು 10 ದಿನಗಳವರೆಗೆ ಮುಂದೂಡಿದ ನಂತರ ಬಿಜೆಪಿ ನಿನ್ನೆ ಉನ್ನತ ನ್ಯಾಯಾಲಯವನ್ನು ಸಂಪರ್ಕಿಸಿತ್ತು. ಜ್ಯೋತಿರಾದಿತ್ಯ ಸಿಂಧಿಯಾ ಅವರ ಬೆಂಬಲಿಗ 22 ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿದ ನಂತರ ಕಮಲ್ ನಾಥ್ ಸರ್ಕಾರ ವಿಶ್ವಾಸಮತ ಯಾಚಿಸಲು ವಿಳಂಬ ಮಾಡುತ್ತಿದೆ ಎಂದು ಬಿಜೆಪಿ ವಾದಿಸಿದೆ.
ಇಂದಿನ ವಿಚಾರಣೆಯಲ್ಲಿ ಉನ್ನತ ನ್ಯಾಯಾಲಯವು ಮುಖ್ಯಮಂತ್ರಿ ಮತ್ತು ವಿಧಾನಸಭಾ ಕಾರ್ಯದರ್ಶಿಗೆ ನೋಟಿಸ್ ನೀಡಿ, ಅವರ ಅಭಿಪ್ರಾಯಗಳನ್ನು ತಿಳಿದುಕೊಳ್ಳಬೇಕು ಎಂದು ಹೇಳಿದೆ. ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠ ಈ ಪ್ರಕರಣವನ್ನು ನಾಳೆ ಮತ್ತೆ ವಿಚಾರಣೆ ನಡೆಸಲಿದೆ.
16 ಬಂಡಾಯ ಶಾಸಕರು ಈ ಪ್ರಕರಣದಲ್ಲಿ ಪಾರ್ಟಿಯಾಗಲು ಉನ್ನತ ನ್ಯಾಯಾಲಯವು ಅನುಮತಿ ನೀಡಿದೆ.
ಕಮಲ್ ನಾಥ್ ಅವರಿಗೆ ಬರೆದ ಪತ್ರದಲ್ಲಿ ರಾಜ್ಯಪಾಲರು “ಮಾರ್ಚ್ 17 ರೊಳಗೆ ನೀವು ವಿಶ್ವಾಸಮತ ಯಾಚಿಸದಿದ್ದರೆ, ನಿಮ್ಮ ಬಹುಮತವನ್ನು ಕಳೆದುಕೊಂಡಿದ್ದೀರಿ ಎಂದು ಭಾವಿಸಲಾಗುತ್ತದೆ.” ಎಂದಿದ್ದರು.
ಸ್ಪೀಕರ್ ಕಾರ್ಯಗಳಲ್ಲಿ ಹಸ್ತಕ್ಷೇಪ ಮಾಡುವುದು ರಾಜ್ಯಪಾಲರ ವ್ಯಾಪ್ತಿಯಲ್ಲಿ ಬರುವುದಿಲ್ಲ” ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್ ನಾಥ್ರವರು ರಾಜ್ಯಪಾಲ ಲಾಲ್ಜಿ ಟಂಡನ್ ಅವರಿಗೆ ಪತ್ರ ಬರೆದಿದ್ದಾರೆ.
ನಿನ್ನೆ ವಿಧಾನಸಭೆ ಮುಂದೂಡಲ್ಪಟ್ಟ ನಂತರ, ಬಿಜೆಪಿಯ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, “ಕೊರೊನಾ ಕೂಡ ಕಮಲ್ ನಾಥ್ ಅವರ ಸರ್ಕಾರವನ್ನು ಉಳಿಸುವುದಿಲ್ಲ. ಅವರು ಬಹುಮತವನ್ನು ಸ್ಪಷ್ಟವಾಗಿ ಕಳೆದುಕೊಂಡಿದ್ದಾರೆ, ಆದ್ದರಿಂದ ಅವರು ಇಂದು ವಿಶ್ವಾಸಮತ ಯಾಚನೆಯನ್ನು ತಪ್ಪಿಸಿದ್ದಾರೆ” ಎಂದಿದ್ದರು.