ಮಹಿಳಾ ಸಬಲೀಕರಣಕ್ಕೆ ನಾಂದಿ ಹಾಡಿದ ಕರಮ್… ಕುರುಮ್… ಜ್ವಾಳದ ರೊಟ್ಟಿ…

ಜ್ವಾಳದ ರೊಟ್ಟಿ… ಉತ್ತರ ಕರ್ನಾಟಕದ ಮಂದಿಗೆ ತುಂಬಾ ಅಚ್ಚು ಮೆಚ್ಚಿನ ಆಹಾರ. ಅಲ್ಲದೇ ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು. ಬಿಸಿ ಬಿಸಿ ರೊಟ್ಟಿ ಎಣ್ಣೆ ಬದನೆಕಾಯಿ ಪಲ್ಯ, ಉಪ್ಪಿನ ಕಾಯಿ, ಚೆಟ್ನಿ ಪುಟಿ, ಮೊಸರು ಇದ್ದುಬಿಟ್ಟರೆ ಅದಕ್ಕಿಂತ ರುಚಿಯಾದ ಊಟ ಮತ್ತೊಂದು ಇಲ್ಲ ಬಿಡಿ. ಈ ರೊಟ್ಟಿ ಚಮತ್ಕಾರವೇ ಅಂಥದ್ದು, ತಿನ್ನಲು ಸಪ್ಪಿಯಾದರೂ ಬೇಡಿಕೆ ಮಾತ್ರ ಅಧಿಕ. ಇನ್ನೂ ಖಡಕ್ ರೊಟ್ಟಿಯ ವಿಚಾರವಂತೂ ಹೇಳೋ ಹಾಗೇ ಇಲ್ಲ. ಮಕ್ಕಳಿಗೆ ಪಾಪಡ್, ದೂರದ ಊರುಗಳಲ್ಲಿ ನೆಲಸುವವರಿಗೆ ಅಮೃತ ಈ ರೊಟ್ಟಿ. ಒಂದು ಬಾರಿ ತಯಾರಿಸಿ ಒಣಗಿಸಿದರೆ ಸಾಕು ತಿಂಗಳು ಗಟ್ಟಲೆ ಸವಿಯಬಹುದು. ಹೀಗಾಗಿ ಈ ರೊಟ್ಟಿಗೆ ಬೇಡಿಕೆ ಜಾಸ್ತಿ. ರುಚಿ ಕಂಡವರು ಕಾಣಲು ಬಯಸುವವರು ಇದರ ಫ್ಯಾನ್ಸ್. ಹೀಗಾಗಿ ಕೇವಲ ಮನೆಯಲ್ಲಿ ಮಾತ್ರವಲ್ಲ ಹೊರಗಡೆ ಕೂಡ ರೊಟ್ಟಿ ಲಭ್ಯವಿರುತ್ತದೆ. ರೊಟ್ಟಿ ಮಾರಾಟಕ್ಕಾಗಿಯೇ ಹೆಚ್ಚು ಅಂಗಡಿಗಳು ತಲೆ ಎತ್ತಿವೆ.

ಮನೆಯಲ್ಲಿರುವ ಮಹಿಳೆಯರಿಗೆ ಆರ್ಥಿಕವಾಗಿ ಸಬಲೀಕರಣ ಹೊಂದುವಲ್ಲಿ ನೆರವಾಗಿದೆ ರೊಟ್ಟಿ. ಹೌದು… ಗ್ರಾಮೀಣ ಭಾಗದಲ್ಲಿ ಹೆಣ್ಣು ಅಂದ್ರೆ ಬರಿ ಅಡುಗೆ ಮಾಡೋದು, ಮಕ್ಕಳು, ಸಂಸಾರ ನೋಡಿಕೊಂಡು ಹೋಗುವವರೆ ಜಾಸ್ತಿ. ಆದರೆ ಇಂಥಹ ಸ್ಥಳದಲ್ಲಿ ರೊಟ್ಟಿ ತಯಾರಿಕೆಯನ್ನೇ ಬಂಡವಾಳವಾಗಿಸಿಕೊಂಡ ಮಹಿಳೆಯೊಬ್ಬಳು ತನ್ನೊಂದಿಗೆ ೪೦ ಜನರ ಸಂಸಾರಕ್ಕೂ ಆಸರೆಯಾಗಿದ್ದಾಳೆ.

ತೊಟ್ಟಿಲನ್ನು ತೂಗುವ ಕೈ ಜಗತ್ತನ್ನಾಳುವುದು ಎಂಬ ಮಾತಿನಂತೆ ಗ್ರಾಮೀಣ ಭಾಗದ ಮಹಿಳೆಯರಿಗೆ ತನ್ನೊಂದಿಗೆ ಬೆಳೆಯೋ ಅವಕಾಶ ಕೊಟ್ಟು ತನ್ಮೂಲಕ ಅವರನ್ನೂ ಬೆಳೆಸುತ್ತಿರುವ ಈ ತಾಯಿಯ ಹೆಸರು ಮಹಾದೇವಿ ಕಬ್ಬೂರು. ಮೂಲತಃ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಹಾರೂಗೇರಿ ಪಟ್ಟಣದವರು. ಮೊದ ಮೊದಲು ಮಹಿಳೆಯರ ಶಿಕ್ಷಣಕ್ಕೆ ಒತ್ತು ನೀಡಿದ್ದ ಮಹಾದೇವಿ ರಾತ್ರಿ ಶಾಲೆ ನಡೆಸಿ ಮಹಿಳೆಯರಿಗೆ ಅಕ್ಷರ ಜ್ಞಾನ ನೀಡುತ್ತಿದ್ದರು. ಈ ಸಮಯಲ್ಲಿ‌ ಹುಟ್ಟಿದ ಚಿಂತನೆಯೊಂದು ಈಗ ೪೦ ಜನರ ಬದುಕು ಹಸನಾಗಿಸಿದೆ ರೊಟ್ಡಿ ಮಾಡುವ ವ್ಯಾಪರ ಎಲ್ಲರ ಕೈ ಹಡಿದಿದ್ದು ಈಗ ಬೃಹತ್ ವ್ಯಾಪಾರವಾಗಿ ಬೆಳೆದಿದೆ ಅಲ್ಲದೆ ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ಅನುಕೂಲಕರ ವಾತಾವರಣ ಸೃಷ್ಟಿ ಮಾಡಿದೆ..

ಹೌದು ರಾತ್ರಿ ಶಾಲೆ ನಡೆಸುವ ಸಮಯದಲ್ಲಿ ಹುಟ್ಟಿದ ಯೋಜನೆಯೊಂದು ಇಂದು ಸಾಕಾರಗೊಂಡಿದೆ ಹಾರೂಗೇರಿ ಪಟ್ಟಣದಲ್ಲಿ ಸುಮಾರು 40 ಮನೆಗಳಲ್ಲಿ ದಿನ ಒಂದಕ್ಕೆ ಸುಮಾರು 4 ಸಾವಿರಕ್ಕೂ ಹೆಚ್ಚು ವಿವಿಧ ರೀತಿಯ ರೊಟ್ಟಿಗಳು ತಯಾರಾಗುತ್ತವೆ. ಈ ರೊಟ್ಟಿಗಳಿಗೆ ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಭಾರು ಬೇಡಿಕೆ ಇದೆ ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಬೆಂಗಳೂರು ಮುಂಬೈ ಪುಣೆಗೆ ಇಲ್ಲಿನ ರೊಟ್ಟಿಗಳು ಹೋಗುತ್ತವೆ ಅಲ್ಲದೆ ದೂರದ ಅಮೇರಿಕಾಕ್ಕೂ ಸಹ ಹಾರೂಗೇರಿ ಪಟ್ಟಣದಿಂದ ರೊಟ್ಟಿ ರಪ್ತಾಗುತ್ತಿದ್ದು ಅಮೇರಿಕದಿಂದಲೂ ಸಹ ಇಲ್ಲಿನ ರೊಟ್ಟಿಗೆ ಹೆಚ್ಚಿನ ಬೇಡಿಕೆ ಬರುತ್ತಿದೆ ಎನ್ನುತ್ತಾರೆ ರೊಟ್ಟಿ ತಯಾರಿಕಾ ಘಟಕದ ಮುಖ್ಯಸ್ಥೆ ಮಹಾದೇವಿ ಕಬ್ಬೂರು.

ಒಟ್ಟಿನಲ್ಲಿ ಗ್ರಾಮೀಣ ಭಾಗದ ಮಹಿಳೆಯರಿಗೆ ರೊಟ್ಟಿ ಮಾಡುವ ಉದ್ಯೋಗ ನೀಡಿ ಅವರೂ ಸ್ವಾವಲಭಿಯಾಗಿ ಜೀವನ ಮಾಡಲು ಮಹಾದೇವಿಯವರು ಕಾರಣರಾಗಿದ್ದಾರೆ ಬರಿ ತಾವು ಮಾತ್ರ ಬೇಳೆಯದೆ ೪೦ ಕುಟುಂಗಳಿಗೆ ಆಶ್ರಯವಾಗಿದ್ದು ಮಹಾದೇವಿ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ. ಅಷ್ಟೇ ಅಲ್ಲ ರಾಜ್ಯದಲ್ಲಿ  ರೊಟ್ಟಿ ತಯಾರಿಸಿ ಮಾರಾಕಟ್ಟೆಗಳಿಗೆ ಕಳುಹಿಸುವ ಮಹಾದೇವಿಯಂತಹ ಮಹಿಳೆಯರೂ ಈ ಪ್ರಶಂಸೆಗೆ ಭಾಜನರು.

 

 

Spread the love

Leave a Reply

Your email address will not be published. Required fields are marked *