ಯಾರು ಏನೇ ಹೇಳಲಿ, ಮುಂದಿನ ಮೂರೂವರೆ ವರ್ಷ ಬಿಎಸ್ ವೈನೇ ಸಿಎಂ – ಬಾಬುರಾವ್ ಚಿಂಚನಸೂರ
ರಾಜ್ಯ ಬಿಜೆಪಿಯಲ್ಲಿ ಅಸಮಾಧಾನದ ಹೊಗೆಯೆದ್ದು, ಶಾಸಕರು ಪ್ರತ್ಯೇಕವಾಗಿ ಸಭೆಗಳನ್ನು ನಡೆಸುತ್ತಿದ್ದಾರೆ. ಕುಮಠಳ್ಳಿ ಹೇಳಿದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡೋದಾಗಿ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಯಾರು ಏನೇ ಹೇಳಿದರೂ ಯಡಿಯೂರಪ್ಪ ಅವರನ್ನು ಸಿಎಂ ಕುರ್ಚಿಯಿಂದ ಇಳಿಸಲಾಗಲ್ಲ ಎಂದು ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಹೇಳಿದ್ದಾರೆ.
ಕಲಬುರ್ಗಿ – ಯಾರು ಏನೇ ಹೇಳಲಿ ಮುಂದಿನ ಮೂರೂವರೆ ವರ್ಷ ಯಡಿಯೂರಪ್ಪ ಅವರೇ ಸಿಎಂ ಆಗಿ ಮುಂದುವರೀತಾರೆ ಎಂದು ಮಾಜಿ ಸಚಿವ ಹಾಗೂ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರ ಅಭಿಪ್ರಾಯಪಟ್ಟಿದ್ದಾರೆ. ಕಲಬುರ್ಗಿಯಲ್ಲಿ ಮಾತನಾಡಿದ ಚಿಂಚನಸೂರ, ಒಂದು ಮನೆ ಎಂದ ಮೇಲೆ ಸಣ್ಣಪುಟ್ಟ ವ್ಯತ್ಯಾಸಗಳಿರುತ್ತೆ. ಇದೆಲ್ಲ ಅಣ್ಣ-ತಮ್ಮದಿರ ನಡುವಿನ ಭಿನ್ನಾಭಿಪ್ರಾಯವಿದ್ದಂತೆ ಎಂದಿದ್ದಾರೆ.
ಕುಮಠಳ್ಳಿ, ರಮೇಶ್ ಜಾರಕಿಹೊಳಿ, ಬೇರೆಯವರು ಏನೇ ಹೇಳಲಿ. ಜಾರಕಿಹೊಳಿಯೂ ನಮ್ಮ ಸಹೋದರನಿದ್ದಂತೆ. ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡೋ ಕೆಲಸ ಮಾಡಲ್ಲ. ಕೆಲ ಭಿನ್ನಾಭಿಪ್ರಾಯಗಳಿದ್ದರೂ ಅವಧಿ ಪೂರ್ಣವಾಗೋವರೆಗೂ ಯಡಿಯೂರಪ್ಪ ಸಿಎಂ ಆಗಿ ಮುಂದುವರೀತಾರೆ. ಯಡಿಯೂರಪ್ಪ ಮುತ್ಸದಿ ನಾಯಕರಾಗಿದ್ದು, ಅವರ ನಾಯಕತ್ವ ನಮಗೆ ದೊಡ್ಡ ಆಸ್ತಿ ಇದ್ದಂತೆ. ಅವರೇ ಸಿಎಂ ಆಗಿ ಮುಂದುವರೀತಾರೆ. ಈ ನಿಟ್ಟಿನಲ್ಲಿ ಹೈಕಮಾಂಡ್ ತೀರ್ಮಾನ ಸುಪ್ರೀಂ ಆಗಿರುತ್ತೆ ಎಂದರು.
ವಿಕಾಸ ಸೌಧದಲ್ಲಿ ಪ್ರತ್ಯೇಕ ಕಛೇರಿ ಬೇಡಿಕೆಯಿಟ್ಟಿಲ್ಲ…
ಬೆಂಗಳೂರಿನ ವಿಕಾಸಸೌಧದಲ್ಲಿ ಪ್ರತ್ಯೇಕ ಕಛೇರಿ ಬೇಡಿಕೆ ಇಟ್ಟಿಲ್ಲ ಎಂದು ಬಾಬುರಾವ್ ಚಿಂಚನಸೂರ ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ. ತಂದೆ-ತಾಯಿ, ಮಕ್ಕಳಿಲ್ಲದ ತನಗೆ ಸಮಾಜದ ಜವಾಬ್ದಾರಿ ವಹಿಸೋ ನಿಟ್ಟಿನಲ್ಲಿ ಸಿಎಂ ಯಡಿಯೂರಪ್ಪ ಅವರು ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷನನ್ನಾಗಿ ಮಾಡಿದ್ದಾರೆ. ಆ ಹುದ್ದೆಯನ್ನು ನಾನು ಬಯಸಿದ್ದಿಲ್ಲವಾದರೂ ನಮ್ಮ ಸಮಾಜದ ಮೇಲಿನ ಗೌರವದಿಂದ ನನಗೆ ಕೊಟ್ಟಿದ್ದಾರೆ. ಇರೋವರೆಗೂ ಕೋಲಿ-ಕಬ್ಬಲಿಗ ಸಮಾಜದ ಕಲ್ಯಾಣಕ್ಕೆ ಶ್ರಮಿಸುತ್ತೇನೆಯೇ ಹೊರತು, ಪ್ರತ್ಯೇಕ ಕಛೇರಿ, ಕೋಣೆಗಳಿಗಾಗಿ ಬೇಡಿಕೆ ಇಡೋ ಕೆಲಸ ಮಾಡಲ್ಲ ಎಂದಿದ್ದಾರೆ.
ಕೋಲಿಗೆ ಎಸ್.ಟಿ. ಮೀಸಲಾತಿಗೆ ಕಾಲ ಸನ್ನಿಹಿತ….
ಕೋಲಿ ಸಮಾಜಕ್ಕೆ ಎಸ್.ಟಿ. ಮೀಸಲಾತಿ ಸಿಗೋ ಕಾಲ ಸನ್ನಿಹಿತವಾಗಿದೆ ಎಂದು ಇದೇ ಸಂದರ್ಭದಲ್ಲಿ ಬಾಬುರಾವ್ ಚಿಂಚನಸೂರ ಅಭಿಪ್ರಾಯಪಟ್ಟಿದ್ದಾರೆ. ಬಜೆಟ್ ಅಧಿವೇಷನ ಮುಗೀತಿದ್ದಂತೆಯೇ ದೆಹಲಿಗೆ ನಿಯೋಗ ಕೊಂಡೊಯ್ಯಲಾಗುತ್ತಿದೆ. ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ನಿಯೋಗ ಕೊಂಡೊಯ್ದು, ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ಬುಡಕಟ್ಟು ಸಚಿವರನ್ನು ಭೇಟಿ ಮಾಡಲಿದ್ದೇನೆ. ಹತ್ತಾರು ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ಕೋಲಿ ಸಮಾಜಕ್ಕೆ ಅನ್ಯಾಯವಾಗಿದೆ. ಹೀಗಾಗಿ ಕೋಲಿ ಸಮಾಜಕ್ಕೆ ಎಸ್.ಟಿ. ಸ್ಥಾನಮಾನ ಕೊಡಿಸಲೆಂದೇ ಯಡಿಯೂರಪ್ಪ ಮತ್ತೊಮ್ಮೆ ಸಿಎಂ ಆಗಿದ್ದಾರೆ. ಬಿಜೆಪಿ ಸರ್ಕಾರದಿಂದ ಎಸ್.ಟಿ. ಮೀಸಲಾತಿ ಸಿಗೋ ಕಾಲ ಸನ್ನಿಹಿತವಾಗಿದೆ ಎಂದಿದ್ದಾರೆ.