ಯಾವುದೇ ಧರ್ಮಕ್ಕೆ ಸೇರಿದ ಜನರು ಭಯಪಡುವ ಅಗತ್ಯವಿಲ್ಲ – ಅಮಿತ್ ಶಾ
ಯಾವುದೇ ಧರ್ಮಕ್ಕೆ ಸೇರಿದ ಜನರು ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ಭಯಪಡುವ ಅಗತ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅಭಯ ನೀಡಿದ್ದಾರೆ. ಪೌರತ್ವ (ತಿದ್ದುಪಡಿ)ಮಸೂದೆಯಿಂದ ನೆರೆಯ ದೇಶಗಳಿಂದ ಇಷ್ಟು ದಿನ ಕಿರುಕುಳ ಅನುಭವಿಸುತ್ತಿದ್ದ ಮುಸ್ಲಿ ಮೇತರ ಅಲ್ಪಸಂಖ್ಯಾತರಿಗೆ ಈ ಮಸೂದೆ ಮುಕ್ತಿ ನೀಡಲಿದೆ ಎಂದು ಅವರು ಹೇಳಿದ್ದಾರೆ.
ಮೋದಿ ಸರ್ಕಾರ ಖಂಡಿತವಾಗಿಯೂ ದೇಶಾದ್ಯಂತ ರಾಷ್ಟ್ರೀಯ ನಾಗರಿಕ ದಾಖಲಾತಿ (ಎನ್ಆರ್ಸಿ) ಜಾರಿಗೆ ತರುತ್ತದೆ. ಇದು ಜಾರಿಗೆ ಬಂದಾಗ ಮಾತ್ರ ಒಬ್ಬರೇ ಒಬ್ಬರು ಅಕ್ರಮ ವಲಸಿಗರು ದೇಶದಲ್ಲಿ ಉಳಿಯುವುದಿಲ್ಲ ಎಂದು ಗೃಹ ಸಚಿವರು ಸ್ಪಷ್ಟಪಡಿಸಿದರು. ಕೇಂದ್ರ ಸರ್ಕಾರದ ಉದ್ದೇಶಿತ ಮಸೂದೆ ಕುರಿತು ಲೋಕಸಭೆಯಲ್ಲಿ ನಿನ್ನೆ ಮಧ್ಯರಾತ್ರಿ ಅಂಗೀಕಾರಕ್ಕೆ ಮುನ್ನ ಸುದೀರ್ಘ ಚರ್ಚೆ ನಡೆಯಿತು.
ಈ ಸಂದರ್ಭದಲ್ಲಿ ಸದನಕ್ಕೆ ವಿವರಣೆ ನೀಡಿದ ಅಮಿತ್ ಶಾ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಆಫ್ಘಾನಿಸ್ತಾನದ ಮುಸ್ಲಿಮೇತರ ನಿರಾಶ್ರಿತರಿಗೆ (ಇಂದು ಜೈನ್, ಬೌದ್ಧ, ಸಿಖ್, ಪಾರ್ಸಿ ಮತ್ತು ಕ್ರೈಸ್ತರು) ನಾಗರಿಕತ್ವ ನೀಡುವ ಪೌರತ್ವ ತಿದ್ದುಪಡಿ ಮಸೂದೆಯಿಂದ ಇಲ್ಲಿನ ಅಲ್ಪಸಂಖ್ಯಾತರಿಗೆ ತೊಂದರೆಯಾಗುತ್ತದೆ. ಅವರ ಮೇಲೆ ಕಿರುಕುಳ ನೀಡಲಾಗುತ್ತದೆ ಎಂಬ ಭಯವನ್ನು ಬಿಡಬೇಕು. ಅಕ್ರಮ ವಲಸಿಗರು ಮತ್ತು ಈ ಮೂರು ದೇಶಗಳಿಂದ ಧಾರ್ಮಿಕ ಕಿರುಕುಳ ಅನುಭವಿಸಿ ಇಲ್ಲಿಗೆ ಆಶ್ರಯ ಪಡೆಯಲು ಬಂದಿರುವವರ ಮಧ್ಯೆ ವ್ಯತ್ಯಾಸಗಳಿವೆ ಎಂದು ಅವರು ಸ್ಪಷ್ಟೀಕರಣ ನೀಡಿದರು.
1947ರಲ್ಲಿ ಭಾರತ ಧರ್ಮದ ಆಧಾರದ ಮೇಲೆ ವಿಭಜನೆಯಾಗಿರದಿದ್ದರೆ ಇಂದು ಪೌರತ್ವ ತಿದ್ದುಪಡಿ ಮಸೂದೆಯ ಅಗತ್ಯವಿರುತ್ತಿರಲಿಲ್ಲ. 1951ರಲ್ಲಿ ಭಾರತದಲ್ಲಿ ಶೇ.9.8ರಷ್ಟಿದ್ದ ಮುಸ್ಲಿಂ ಜನಸಂಖ್ಯೆ 2011ರಲ್ಲಿ ಶೇ.14.8ಕ್ಕೆ ಏರಿಕೆಯಾಗಿದೆ. ಅದೇ ಹಿಂದೂ ಧರ್ಮೀಯರ ಸಂಖ್ಯೆ 1951ರಲ್ಲಿದ್ದ ಶೇ.84ರಿಂದ 2011ಕ್ಕೆ ಶೇಕಡಾ 79ಕ್ಕೆ ಇಳಿಕೆಯಾಗಿದೆ ಎಂದು ಅಮಿತ್ ಶಾ ಅಂಕಿಅಂಶ ನೀಡಿದರು.
ಮೋದಿ ಸರ್ಕಾರದ ಧರ್ಮವೊಂದೇ ಅದು ಸಂವಿಧಾನ. ನಿರಾಶ್ರಿತರನ್ನು ಕಾಪಾಡುವ ಹಲವು ಕಾನೂನುಗಳು ಇರುವುದರಿಂದ ಭಾರತಕ್ಕೆ ನಿರಾಶ್ರಿತರ ನೀತಿಯ ಅವಶ್ಯಕತೆಯಿಲ್ಲ ಎಂದು ಅಮಿತ್ ಶಾ ಘೋಷಿಸಿದರು.