ವಿಧಾನ ಪರಿಷತ್‌ಗೆ ಬಿಜೆಪಿಯಿಂದ 123 ಆಕಾಂಕ್ಷಿಗಳು; ಹೆಚ್.ವಿಶ್ವನಾಥ್‌, ಎಂಟಿಬಿ ನಾಗರಾಜ್ ಕಥೆಯೇನು?

ರಾಜ್ಯಸಭೆ ಚುನಾವಣೆಯ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಬಿಜೆಪಿ ಹೈಕಮಾಂಡ್‌ ರಾಜ್ಯ ಬಿಜೆಪಿಗೆ ಶಾಕ್‌ ಕೊಟ್ಟಿತ್ತು. ರಾಜ್ಯ ಬಿಜೆಪಿ ನಾಯಕರು ಆಯ್ಕೆ ಮಾಡಿದ್ದ ಹೆಸರುಗಳನ್ನು ತಿರಸ್ಕರಿಸಿ, ಬಿಜೆಪಿ ಕಾರ್ಯಕರ್ತರಿಗೆ ಅವಕಾಶ ನೀಡಿತ್ತು.

ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳು ಮಲ್ಲಿಕಾರ್ಜುನ ಖರ್ಗೆ ಮತ್ತು ದೇವೇಗೌಡರಿಗೆ ಟಿಕೆಟ್‌ ನೀಡಿದ್ದ ಹಿನ್ನೆಲೆಯಲ್ಲಿ ಈ ಎರಡೂ ಪಕ್ಷಗಳು ಕಾರ್ಯಕರ್ತರಿಗೆ ಮಣೆ ಹಾಕುವುದಿಲ್ಲ. ಬಿಜೆಪಿಯು ಕಾರ್ಯಕರ್ತರ ಕೈಬಿಡುವುದಿಲ್ಲ ಎಂದು ತೋರಿಸಿಕೊಳ್ಳುವ ಉದ್ದೇಶವೂ ಇದರಲ್ಲಿತ್ತು ಎಂದು ಹೇಳಲಾಗುತ್ತಿದೆ.

ಅದೇನೇ ಇರಲಿ, ರಾಜ್ಯಸಭೆ ಚುನಾವಣೆಯಲ್ಲಾದ ಬದಲಾವಣೆಯ ಶಾಕ್‌ ನಿಂದ ಇನ್ನೂ ಹೊರಬರದ ರಾಜ್ಯ ಬಿಜೆಪಿಯು ಮತ್ತೊಂದು ಶಾಕ್‌ಗೆ ಒಳಗಾಗಬಹುದಾದ ಸಾಧ್ಯತೆಗಳಿವೆ. ಜೂನ್ 29ರಂದು ನಡೆಯಕಲಿರುವ ವಿಧಾನ ಪರಿಷತ್ ಚುನಾವಣೆಗೆ ರಾಜ್ಯ ಬಿಜೆಪಿ ಕೋರ್‌ ಕಮಿಟಿಯನು ಅಭ್ಯರ್ಥಿಗಳ ಪಟ್ಟಿಯನ್ನು ತಯಾರಿಸಿದೆ.

ಬಿಜೆಪಿಯು ವಿಧಾನ ಪರಿಷತ್‌ಗೆ ವಿಧಾನಸಭೆಯಿಂದ 04 ಮಂದಿ ಹಾಗೂ 05 ಮಂದಿ ನಾಮನಿರ್ದೇಶನ ಮಾಡುವ ಅವಕಾಶವನ್ನು ಹೊಂದಿದೆ. ಒಟ್ಟೂ ಈ 09 ಸದಸ್ಯತ್ವಕ್ಕಾಗಿ 123 ಜನ ಆಕಾಂಕ್ಷಿಗಳು ಕಾದು ಕುಳಿತಿದ್ದಾರೆ.

ಅಲ್ಲದೆ, ಮೈತ್ರಿ ಸರ್ಕಾರವನ್ನು ಉರುಳಿಸಿ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ನೆರವಾದ ಹಳ್ಳಿಹಕ್ಕಿ ಹೆಚ್‌.ವಿಶ್ವನಾಥ್‌, ಆರ್ ಶಂಕರ್ ಮತ್ತು ಎಂಟಿಬಿ ನಾಗರಾಜ್ ಅವರನ್ನು ಹಾಗೂ  ಕಲಬುರಗಿ ಸಂಸದ ಡಾ. ಉಮೇಶ್ ಜಾಧವ್ ಅವರ ಪುತ್ರ ಅರವಿಂದ್ ಜಾಧವ್ ಗಾಗಿ ಚಿಂಚೋಳಿ ವಿಧಾನ ಸಭಾ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದ ಸುನೀಲ್ ವಲ್ಯಾಪುರೆ ಅವರನ್ನು ಪರಿಷತ್ ಗೆ ಆರಿಸಿ ಕಳುಹಿಸುವ ಹೊಣೆಗಾರಿಕೆ ಮುಖ್ಯಮಂತ್ರಿ ಯಡಿಯೂರಪ್ಪ ಮೇಲಿದೆ.

Karnataka Bypoll Results: ಎಂಟಿಬಿ ನಾಗರಾಜ್, ಹೆಚ್ ...

ಈ ಕಾರಣಕ್ಕಾಗಿ ಇವರನ್ನು ಒಳಗೊಂಡಂತೆ 12ಕ್ಕೂ ಹೆಚ್ಚು ಮಂದಿ ಅಭ್ಯರ್ಥಿಗಳ ಪಟ್ಟಿಯನ್ನು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಸಿಎಂ ಬಿಎಸ್ ಯಡಿಯೂರಪ್ಪ  ಉನ್ನತ ನಾಯಕರುಗಳ ನಿರ್ದೇಶನದಂತೆ ಶಾರ್ಟ್ ಲಿಸ್ಟ್ ಮಾಡಿ ಕಳಿಸಿದ್ದಾರೆ. ಆದರೂ ಹೈಕಮಾಂಡ್‌ ಏನು ನಿರ್ಧಾರ ಮಾಡುತ್ತದೆ ಎಂಬ ಆತಂಕ ಅವರಲ್ಲಿದೆ.

ಹೈಕಮಾಂಡ್‌ ಫೈನಲ್‌ ಮಾಡಲಾಗುವ ಅಭ್ಯರ್ಥಿಗಳಲ್ಲಿ ತಮ್ಮ ನಾಲ್ಕು ಮಂದಿಅಭ್ಯರ್ಥಿಗಳಿಗೆ ಅವಕಾಶ ನೀಡಬೇಕು, ನಾಮ ನಿರ್ದೇಶನಗೊಳ್ಳುವ ಐದು ಸ್ಥಾನವನ್ನು ಪಕ್ಷದ ಕಾರ್ಯಕರ್ತರಿಗೆ ನೀಡಬೇಕೆಂದು ಯಡಿಯೂರಪ್ಪ ಕೇಳಿದ್ದಾರೆ ಎನ್ನಲಾಗಿದೆ.

ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಭಾರತಿ ಶೆಟ್ಟಿ, ಮಾಜಿ ಶಾಸಕ ಸೊಗಡು ಶಿವಣ್ಮ, ಮಾಲೀಕ್ಯ ಗುತ್ತೇದಾರ್,ಮಹೇಶ್ ತೆಂಗಿನಕಾಯಿ, ನಿರ್ಮಲ್ ಕುಮಾರ್ ಸುರಾನಾ, ಎನ್ ಶಂಕರಪ್ಪ ಮತ್ತು ಪ್ರತಾಪ್ ಸಿಂಹ ನಾಯಕ್ ಅವರ ಹೆಸರುಗಳನ್ನು ಅಭ್ಯರ್ಥಿಗಳ ಪಟ್ಟಿಯಲ್ಲಿ ಶಿಫಾರಸ್ಸು ಮಾಡಲಾಗಿದೆ.

ಸಂಸದೀಯ ಮಂಡಳಿಯೂ ರಾಜ್ಯಘಟಕ ಕಳಿಸಿದ ಪಟ್ಟಿಯನ್ನು ಪುರಸ್ಕರಿಸಬಹುದು ಅಥವಾ ತಿರಸ್ಕತಗೊಳಿಸಬಹುದು. ಹಾಗಾಗಿ ಅಂತರಾಳದಲ್ಲಿ ಏನೇನಿದೆ ಎಂಬುದನ್ನು ತಿಳಿದುಕೊಂಡು ಅದರಂತೆ ಪಟ್ಟಿ ಸಿದ್ದಪಡಿಸಬೇಕೆಂದು ಕೋರ್ ಕಮಿಟಿ ಸದಸ್ಯರು ಅಭಿಪ್ರಾಯ ಪಟ್ಟಿದ್ದಾರೆ ಎಂದು ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ.

ಬಿಜೆಪಿಯು ವಿಧಾನ ಪರಿಷತ್‌ಗೆ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಿಸಲು ಸಿದ್ದವಾಗಿದೆ. ಆದರೆ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಇನ್ನೂ ತಮ್ಮ ಅಭ್ಯರ್ಥಿಗಳು ಯಾರು ಎಂದು ಸೂಚಿಸಿಲ್ಲ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights