ಫ್ಯಾಕ್ಟ್‌ಚೆಕ್ : ಕಾಂಗ್ರೆಸ್ ಬೆಂಬಲಿಗರು ಪೊಲೀಸರಿಗೆ ಬೆದರಿಕೆ ಹಾಕಿದ್ದು ನಿಜವೇ?
ಪೊಲೀಸರಿಗೆ ಬೆದರಿಕೆ ಹಾಕುತ್ತಿರುವ ಕಾಂಗ್ರೆಸ್‌ನ ಬೆಂಬಲಿಗರು ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಈ ಪೋಸ್ಟ್ ವೈರಲ್ ಆಗಿದೆ.
https://twitter.com/NMukherjee6/status/1658422996057608192?ref_src=twsrc%5Etfw%7Ctwcamp%5Etweetembed%7Ctwterm%5E1658422996057608192%7Ctwgr%5E27ec4821517485fdfda0fc5b062eec4b26607d8e%7Ctwcon%5Es1_&ref_url=https%3A%2F%2Ftv9kannada.com%2Fnational%2Ffact-check-congress-supporters-threaten-karnataka-police-viral-video-rak-582641.html
ಮುಸ್ಲಿಂ ವೇಷದಲ್ಲಿರುವ ವ್ಯಕ್ತಿಯೊಬ್ಬರು ಪೊಲೀಸರಿಗೆ ಬೆದರಿಕೆ ಹಾಕುತ್ತಿರುವ ದೃಶ್ಯವೊಂದು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗತ್ತಿದೆ. ಇದೇ ವಿಡಿಯೋವನ್ನು ಅನೇಕ ಸಾಮಾಜಿಕ ಮಾಧ್ಯಮದ ಬಳಕೆದಾರರು ಇದೇ ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋದ ಕೀ ಫ್ರೇಮ್‌ಗಳ ಸಹಾಯದಿಂದ ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಸೆಪ್ಟೆಂಬರ್ 20, 2018 ರಂದು ಮಾಡಿದ ಫೇಸ್‌ಬುಕ್ ನಲ್ಲಿ ಪೋಸ್ಟ್ ಮಾಡಲಾದ ವೈರಲ್ ವಿಡಿಯೊದ ದೀರ್ಘ ಆವೃತ್ತಿ ಲಭ್ಯವಾಗಿದೆ. ಈ ವಿಡಿಯೊ ಚೋಪ್ಡಾ ಬಸ್ ನಿಲ್ದಾಣದ್ದು,ಇದು 3 ವರ್ಷಗಳ ಹಿಂದಿನದು. ಹಣ್ಣು ಮಾರುವವನಿಗೆ ಪೊಲೀಸ್ ಹೊಡೆದಿದ್ದು, ಈ ವಿಷಯದಲ್ಲಿ ನಡೆದ ವಾಗ್ವಾದ ಇದು ಎಂದು ಬಳಕೆದಾರರೊಬ್ಬರು ಹೇಳಿದ್ದಾರೆ.
2018ರಲ್ಲಿ ಮಹಾರಾಷ್ಟ್ರದ ಚೋಪ್ಡಾ ಬಸ್ ನಿಲ್ದಾಣದ ವ್ಯಾಪ್ತಿಯಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ಶ್ರೀಕಾಂತ್ ಗಂಗುರ್ಡೆ ಅವರನ್ನು ಅಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಯಿತು. ಅವರು ಬಸ್ ನಿಲ್ದಾಣದೊಳಗೆ ಹಣ್ಣಿನ ಅಂಗಡಿ ಇಟ್ಟಿದ್ದ ವ್ಯಕ್ತಿಯೊಬ್ಬರನ್ನು ದೂರ ಹೋಗುವಂತೆ ಹೇಳಿದ್ದರು, ಆ ಪ್ರದೇಶವು ವಿಶೇಷ ಚೇತನರಿಗೆ ಮೀಸಲಾಗಿದ್ದ ಕಾರಣಕ್ಕೆ ಪೊಲೀಸರ ಜತೆ ವ್ಯಾಪಾರಿ ಜಗಳವಾಡಿದ್ದಾರೆ ಎಂದು ಆಲ್ಟ್‌ನ್ಯೂಸ್ ವರದಿ ಮಾಡಿದೆ.
ಅಲ್ಟ್‌ನ್ಯೂಸ್‌ನೊಂದಿಗೆ ಮಾತನಾಡಿರುವ ಚೋಪ್ಡಾ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳು ಘಟನೆಯು 2018ರದ್ದು ಮತ್ತು ಚೋಪ್ಡಾ ಬಸ್ ನಿಲ್ದಾಣದಲ್ಲಿ ಸಂಭವಿಸಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಶ್ರೀಕಾಂತ್ ಗಂಗುರ್ಡೆ ಅವರು ಕರ್ತವ್ಯದಲ್ಲಿದ್ದಾಗ ತೊಂದರೆ ನೀಡಿದವರ ವಿರುದ್ಧ ಐಪಿಸಿ ಸೆಕ್ಷನ್ 353 (ಸಾರ್ವಜನಿಕ ನೌಕರನ ಕರ್ತವ್ಯ ನಿರ್ವಹಣೆಯನ್ನು ತಡೆಯಲು ಹಲ್ಲೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು ಪ್ರಕರಣ ಇನ್ನು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.
ಒಟ್ಟಾರೆಯಾಗಿ ಹೇಳುವುದಾದರೆ, 2018ರಲ್ಲಿ ಮಹಾರಾಷ್ಟ್ರದ ಚೋಪ್ಡಾ ಬಸ್ ನಿಲ್ದಾಣದಲ್ಲಿ ನಡೆದ ಘಟನೆಯನ್ನು ಕರ್ನಾಟಕದಲ್ಲಿ ಕಾಂಗ್ರೆಸ್ ಬೆಂಬಲಿಗರು ಪೊಲೀಸರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಕೋಮು ದ್ವೇಷದ ಹಿನ್ನಲೆಯಲ್ಲಿ ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ: ಫ್ಯಾಕ್ಟ್‌ಚೆಕ್ : ಕರ್ನಾಟಕದಲ್ಲಿ ಕಾಂಗ್ರೆಸ್ ಗೆದ್ದಿದ್ದಕ್ಕೆ ಪಾಕ್ ಪ್ರಧಾನಿ ಅಭಿನಂದನೆ ಸಲ್ಲಿಸಿದ್ದಾರೆ ಎಂದು ಸುಳ್ಳು ಪೋಸ್ಟ್ ಹಂಚಿಕೆ