ಫ್ಯಾಕ್ಟ್‌ಚೆಕ್ : ಕರ್ನಾಟಕದಲ್ಲಿ ಕಾಂಗ್ರೆಸ್ ಗೆದ್ದಿದ್ದಕ್ಕೆ ಪಾಕ್ ಪ್ರಧಾನಿ ಅಭಿನಂದನೆ ಸಲ್ಲಿಸಿದ್ದಾರೆ ಎಂದು ಸುಳ್ಳು ಪೋಸ್ಟ್‌ ಹಂಚಿಕೆ

ಕರ್ನಾಟಕದಲ್ಲಿ ಕಾಂಗ್ರೆಸ್‌ ಬಹುಮತ ಪಡೆದು ಅಭೂತ ಪೂರ್ವ ಗೆಲುವು ದಾಖಲಿಸಿದೆ. ಈ ಐತಿಹಾಸಿಕ ಗೆಲುವಿನ ಹಿನ್ನಲೆಯಲ್ಲಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ಕಾಂಗ್ರೆಸ್ ಪಕ್ಷವನ್ನು ಅಭಿನಂದಿಸಿದ್ದಾರೆ ಎಂಬ ಸ್ಕ್ರೀನ್‌ಶಾಟ್ ಪೋಸ್ಟ್‌ವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.

‘ಕಾಂಗ್ರೆಸ್ ಅನ್ನು ಆರಿಸಿದ ಕರ್ನಾಟಕದ ಜನರಿಗೆ ಹೃದಯಪೂರ್ವಕ ಧನ್ಯವಾದಗಳು. ಕಾಂಗ್ರೆಸ್ ಹಾಗೂ ನಮ್ಮ ಎಸ್‌ಡಿಪಿಐ ಜೊತೆಗೂಡಿ ಭಾರತದಲ್ಲಿ ಇಸ್ಲಾಂ ಸದೃಢಗೊಳಿಸಲು ಕೆಲಸ ಮಾಡಲಿವೆ ಹಾಗೂ ಕರ್ನಾಟಕದ ಸಾರ್ವಭೌಮತೆಯನ್ನು ಕಾಪಾಡಲಿವೆ ಎಂಬ ಆಶಾಭಾವ ಇದೆ’ ಎಂದು ಮೇ 13ರಂದು ಷರೀಫ್ ಟ್ವೀಟ್ ಮಾಡಿದ್ದಾರೆ ಎಂದು ಹೇಳಲಾಗಿದೆ. ಈ ಟ್ವೀಟ್‌ಅನ್ನು ಹಲವರು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವ ಮೂಲಕ ಸಖತ್ ಅದ್ದು ಮಾಡಿತ್ತು.

ಹಾಗಿದ್ದರೆ ಈ ವೈರಲ್ ಪೋಸ್ಟ್‌ನಲ್ಲಿ ಹೇಳಿರುವಂತೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ಕಾಂಗ್ರೆಸ್ ಪಕ್ಷವನ್ನು ಅಭಿನಂದಿಸಿದ್ದು ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸಲು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರ ಟ್ವಿಟರ್‌ಅನ್ನು ಸರ್ಚ್ ಮಾಡಿದಾಗ, ವೈರಲ್ ಪೋಸ್ಟ್‌ನಲ್ಲಿ ಉಲ್ಲೇಖವಾಗಿರುವ ಪಾಕ್ ಪ್ರಧಾನಿ ಮಾಡಿದಾರೆ ಎನ್ನಲಾದ ಅಭಿನಂದನಾ ಟ್ವೀಟ್ ನಕಲಿ ಎಂದು ತಿಳಿದು ಬಂದಿದೆ.

ಶೆಹಬಾಜ್ ಷರೀಫ್ ಅವರ ಟ್ವಿಟರ್ ಪ್ರೊಫೈಲ್​​ನಲ್ಲಿ ಮೇ 13ರಂದು ಅವರು ಕೇವಲ ಮೂರು ಟ್ವೀಟ್‌ಗಳನ್ನು ಮಾತ್ರ ಮಾಡಿದ್ದಾರೆ. ಅವುಗಳಲ್ಲಿ ಯಾವುದೂ ಕರ್ನಾಟಕ ಚುನಾವಣೆಗೆ ಸಂಬಂಧಿಸಿಲ್ಲ. ಶಹಬಾಜ್ ಷರೀಫ್ ಅವರು ಮೇ 13ರಂದು ಮೂರು ಟ್ವೀಟ್‌ಗಳನ್ನು ಮಾಡಿದ್ದು, ಅವುಗಳಲ್ಲಿ ಕರ್ನಾಟಕದ ಚುನಾವಣೆ ಬಗ್ಗೆ ಯಾವುದೇ ಉಲ್ಲೇಖ ಇಲ್ಲ ಎಂದು ‘ಬೂಮ್’ ವರದಿ ಮಾಡಿದೆ.

ಅವರ ಹೆಸರಿನಲ್ಲಿ ಸೃಷ್ಟಿಸಲಾಗಿರುವ ನಕಲಿ ಟ್ವೀಟ್‌ನ ಸ್ಕ್ರೀನ್‌ಶಾಟ್‌ ಅನ್ನು, @BHKtweets ಹೆಸರಿನ ಟ್ವಿಟರ್‌ ಖಾತೆಯಲ್ಲಿ ಮೇ 13ರ ಸಂಜೆ 4 ಗಂಟೆಗೆ ಅಪ್‌ಲೋಡ್ ಮಾಡಲಾಗಿತ್ತು. ರಾತ್ರಿ 10 ಗಂಟೆಯ ವೇಳೆಗೆ ಇದನ್ನು ತೆಗೆದುಹಾಕಲಾಗಿತ್ತು. ಷರೀಫ್ ಕುರಿತಂತೆ ಹಲವು ನಕಲಿ ಟ್ವೀಟ್‌ಗಳನ್ನು ಇದೇ ಖಾತೆಯಲ್ಲಿ ಈ ಹಿಂದೆ ಪ್ರಕಟಿಸಲಾಗಿತ್ತು. ಷರೀಫ್ ಅವರು ಶುಭಕೋರಿದ್ದು ನಿಜ ಎಂದು ಭಾವಿಸಿದ ಸಾಮಾಜಿಕ ಜಾಲತಾಣ ಬಳಕೆದಾರರು ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಳ್ಳುತ್ತಿದ್ದಾರೆ ಎಂದು ಬೂಮ್ ವರದಿ ಮಾಡಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಪಾಕ್ ಪ್ರಧಾನಿ ಕಾಂಗ್ರೆಸ್ ಅನ್ನು ಅಭಿನಂದಿಸುತ್ತಿರುವ ಬಗ್ಗೆ ಭಾರತ ಮತ್ತು ಪಾಕಿಸ್ತಾನದ ಯಾವುದೇ ಮಾಧ್ಯಮಗಳಲ್ಲಿ ವರದಿಯಾಗಲಿ ಸುದ್ದಿಯಾಗಲಿ ಪತ್ತೆಯಾಗಿಲ್ಲ. ಹಾಗಾಗಿ ಇದೊಂದು ತಿರುಚಿದ ಟ್ವೀಟ್ ಎಂಬುದು ಸ್ಪಷ್ಟವಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಕಾಂಗ್ರೆಸ್‌ ಬಹುಮತದ ಮೂಲಕ ಅಧಿಕಾರಕ್ಕೆ ಬರುತ್ತದೆ ಎಂದು ತಿಳಿಯುತ್ತಿದ್ದಂತೆ ಹಲವು ಬಲಪಂಥೀಯ ಮತ್ತು BJP ಬೆಂಬಲಿತ ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪಾಕ್ ಪರ ಘೋಷಣೆ, ಪಾಕ್ ಧ್ವಜ ಪ್ರದರ್ಶನ, ಪಾಕ್ ಪ್ರಧಾನಿಯಿಂದ ಕಾಂಗ್ರೆಸ್‌ಗೆ ಅಭಿನಂದನೆ ಮತ್ತು ಗೋ ಹತ್ಯೆ ಮೂಲಕ ವಿಜಯೋತ್ಸವವನ್ನು ಆಚರಿಸಿದ ಕಾಂಗ್ರೆಸ್‌ ಎಂಬಂತಹ ಸುಳ್ಳು ಸುಳ್ಳು ಸುದ್ದಿಗಳನ್ನು ಹರಿಯಬಿಡಲಾಗುತ್ತಿದೆ. ಇವುಗಳ ಬಗ್ಗೆ ಎಚ್ಚರವಿರಲಿ

ಕೃಪೆ : ಬೂಮ್

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಕಾಂಗ್ರೆಸ್ ತನ್ನ ವಿಜಯೋತ್ಸವವನ್ನು ಗೋ ಹತ್ಯೆ ಮೂಲಕ ಆಚರಿಸಿದೆ ಎಂದು ಸುಳ್ಳು ಸುದ್ದಿ ಹಂಚಿಕೊಂಡ ಬಲಪಂಥೀಯರು


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights