ಫ್ಯಾಕ್ಟ್‌ಚೆಕ್ : ಕಾಂಗ್ರೆಸ್ ತನ್ನ ವಿಜಯೋತ್ಸವವನ್ನು ಗೋ ಹತ್ಯೆ ಮೂಲಕ ಆಚರಿಸಿದೆ ಎಂದು ಸುಳ್ಳು ಸುದ್ದಿ ಹಂಚಿಕೊಂಡ ಬಲಪಂಥೀಯರು

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿದ ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ಸಂದೇಶವೊಂದು ವೈರಲ್ ಆಗುತ್ತಿದ್ದು, ಮುಸ್ಲಿಂ ಬೆಂಬಲಿಗರು ಬಿಜೆಪಿ ಧ್ವಜದ ಮೇಲೆ ಗೋಹತ್ಯೆ ಮಾಡುವ ಮೂಲಕ ಕಾಂಗ್ರೆಸ್ ವಿಜಯೋತ್ಸವವನ್ನು ಆಚರಿಸಿದ್ದಾರೆ ಎಂದು ಪ್ರತಿಪಾದಿಸಿ ಹಲವು ಬಲಪಂಥೀಯ ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

ರಾಜ್ಯದಲ್ಲಿ ಅಲ್ಪಸಂಖ್ಯಾತ ಸಮುದಾಯಗಳನ್ನು ರಾಕ್ಷಸರನ್ನಾಗಿಸುವ ಹುರುಪಿನ ಪ್ರಚಾರ ಮುನ್ನೆಲೆಗೆ ಬಂದಿದೆ. ಹತ್ಯೆಗೀಡಾದ ಹಸುವನ್ನು ಭಾರತೀಯ ಜನತಾ ಪಕ್ಷದ ಧ್ವಜದ ಮೇಲೆ ಮಲಗಿರುವ ಎರಡು ಭೀಕರ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.

“ಕರ್ನಾಟಕದಲ್ಲಿ ಖಾನ್ ಗ್ರೇಸ್ ವಿಜಯೋತ್ಸವವನ್ನು ಬಿಜೆಪಿ ಧ್ವಜದ ಮೇಲೆ ಗೋಹತ್ಯೆ ಮಾಡುವ ಮೂಲಕ ಆಚರಿಸಲಾಗುತ್ತದೆ. ನಿಜವಾದ ಭಾರತೀಯರು, ಕಾಂಗ್ರೆಸ್ ಗೆ ಬೆಂಬಲಿಸಿದ ಮಠಾಧೀಶರಿಗೆ ತಲುಪುವವರೆಗೆ ಶೇರ್ ಮಾಡೋಣ” ಎಂದು ಹಂಚಿಕೊಂಡಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಈ ಪೋಸ್ಟ್‌ ಹೆಚ್ಚು ವೈರಲ್ ಆಗುತ್ತಿದ್ದಂತೆ ಇದರ ಸತ್ಯಾಸತ್ಯತೆ ಏನೆಂದು ತಿಳಿಸುವಂತೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಏನ್‌ಸುದ್ದಿ.ಕಾಂ ವಾಟ್ಸಾಪ್‌ಗೆ ಸಂದೇಶ ಕಳುಹಿಸುವ ಮೂಲಕ ವಿನಂತಿಸಿದ್ದಾರೆ. ಹಾಗಿದ್ದರೆ ಈ ಪೋಸ್ಟ್‌ಗಳಲ್ಲಿ ಹೇಳಿರುವಂತೆ ಕಾಂಗ್ರೆಸ್ ಬಹುಮತದ ಹಿನ್ನಲೆಯಲ್ಲಿ ವಿಜಯೋತ್ಸವದ ಸಂಕೇತವಾಗಿ ಮುಸಲ್ಮಾನರು  ಬಿಜೆಪಿ ಧ್ವಜದ ಮೇಲೆ ಗೋ ಹತ್ಯೆ ಮಾಡುತ್ತಿರುವುದು ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿಹಂಚಿಕೊಳ್ಳಲಾಗಿರುವ ವಿಡಿಯೋವನ್ನು ಪರಿಶೀಲಿಸಲು ವಿಡಿಯೋದ ಕೀ ಫ್ರೇಮ್‌ಗಳನ್ನು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ,  ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖವಾಣಿ ಆರ್ಗನೈಸರ್‌ಗಾಗಿ ಕೆಲಸ ಮಾಡುವ ನಿಶಾಂತ್ ಆಜಾದ್ ಎಂಬ ವ್ಯಕ್ತಿಯಿಂದ ಜನವರಿ 31, 2022 ರಂದು ಈ ಫೋಟೋಗಳನ್ನು ಟ್ವೀಟ್ ಮಾಡಿರುವುದು ಕಂಡುಬಂದಿದೆ.

https://twitter.com/azad_nishant/status/1488115006449549318

ಫೆಬ್ರವರಿ 2, 2022 ರ ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಜನವರಿ 30, 2022 ರಂದು ಮಣಿಪುರ ವಿಧಾನಸಭಾ ಚುನಾವಣೆಯಲ್ಲಿ 60 ಸ್ಥಾನಗಳಿಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಿಸಿದ ಬೆನ್ನಲ್ಲೇ, ಈ ವೀಡಿಯೊ ಕ್ಲಿಪ್ ಅಂತರ್ಜಾಲದಲ್ಲಿ ಕಾಣಿಸಿಕೊಂಡಿತು, ವಿಡಿಯೋದಲ್ಲಿ ಕೆಲವು ಪುಂಡರು ಬಿಜೆಪಿ ಧ್ವಜವನ್ನಿಟ್ಟು ಹಸುವಿನ ಕತ್ತನ್ನು ಕೋಯ್ದು ಮಣಿಪುರದ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಮತ್ತು ಮಣಿಪುರ ಘಟಕದ ಬಿಜೆಪಿ ಅಧ್ಯಕ್ಷೆ ಶಾರದಾ ದೇವಿ ವಿರುದ್ದ ಘೋಷಣೆ ಕೂಗಿದ್ದಾರೆ ಎಂದು ವರದಿ ಮಾಡಿದೆ.

ಫೆಬ್ರವರಿ 1, 2022 ರಂದು, ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರು ಇಂಫಾಲ್ ಫ್ರೀ ಪ್ರೆಸ್ ಸುದ್ದಿ ವರದಿಯ ಸ್ಕ್ರೀನ್‌ಶಾಟ್‌ನೊಂದಿಗೆ ಟ್ವೀಟ್‌ಗೆ ಪ್ರತಿಕ್ರಿಯಿಸಿ, ಈ ಪ್ರಕರಣದಲ್ಲಿ ಭಾಗಿಯಾಗಿರುವ ಮೂವರನ್ನು ಬಂಧಿಸಲಾಗಿದೆ ಎಂದು ಹೇಳಿದರು.

ಈಶಾನ್ಯ ಮೂಲದ ಡಿಜಿಟಲ್ ಮಾಧ್ಯಮ ಔಟ್ಲೆಟ್ ಈಸ್ಟ್ ಮೊಜೊ ವರದಿಯ ಪ್ರಕಾರ, ಈ ಘಟನೆಯು 2022 ರಲ್ಲಿ ನಡೆದಿದ್ದು ವೀಡಿಯೊ ವೈರಲ್ ಆದ ಅದೇ ದಿನ ಘೋಷಿಸಲಾದ ವಿಧಾನಸಭಾ ಚುನಾವಣೆಗೆ ಬಿಜೆಪಿಯ ಅಭ್ಯರ್ಥಿಗಳ ಪಟ್ಟಿಯ ಬಗ್ಗೆ ಅಸಮಾಧಾನಗೊಂಡ ಪರಿಣಾಮ ಈ ಘಟನೆ ನಡೆದಿದೆ ಎಂದು ವರದಿ ಮಾಡಿದೆ.

ಒಟ್ಟಾರೆಯಾಗಿ ಹೇಳುವುದಾದರೆ, 2023ರ ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಸಿಕ್ಕ ಸ್ಪಷ್ಟ ಬಹುಮತದಿಂದ ಅಸಮದಾನಗೊಂಡ ಕೆಲವು ಬಲಪಂಥೀಯ ಮತ್ತು ಬಿಜೆಪಿ ಬೆಂಬಲಿತ ಸಾಮಾಜಿಕ ಮಾಧ್ಯಮಗಳ ಬಳಕೆದಾರರು 2022ರ ಮಣಿಪುರದ ಈ ಹಳೆಯ ವಿಡಿಯೋವನ್ನು ಬಳಸಿಕೊಂಡು ಸುಳ್ಳುಸುದ್ದಿಯನ್ನು ಹರಡಲಾಗಿದೆ. ವೈರಲ್ ವಿಡಿಯೋಗೂ ಕರ್ನಾಟಕಕ್ಕೂ ಸಂಬಂಧವೇ ಇಲ್ಲ.

ಮೇ 13 ಚುನಾವನಾ ಫಲಿತಾಂಶ ಹೊರಬಿದ್ದ ನಂತರ ಮೇ 16 ರಂದು ಈ ವಿಡಿಯೋವನ್ನು ಕಾಂಗ್ರೆಸ್ ಬಹುಮತದ ಹಿನ್ನಲೆಯಲ್ಲಿ ವಿಜಯೋತ್ಸವದ ಸಂಕೇತವಾಗಿ ಮುಸಲ್ಮಾನರು  ಬಿಜೆಪಿ ಧ್ವಜದ ಮೇಲೆ ಗೋ ಹತ್ಯೆ ಮಾಡುತ್ತಿದ್ದಾರೆ ಎಂಬ ಸುಳ್ಳು ಪ್ರತಿಪಾದನೆಯೊಂದಿಗೆ  ಕೋಮು ದ್ವೇಷದ ಹಿನ್ನಲೆಯಲ್ಲಿ ಹಂಚಿಕೊಂಡಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಇಂತಹ ಸುಳ್ಳು ಸುಳ್ಳು ವಿಡಿಯೋಗಳನ್ನು ಹಂಚಿಕೊಳ್ಳುತ್ತ ಸಾಮಾಜಿಕ ಸ್ವಾಸ್ಥ್ಯವನ್ನು ಹಾಳು ಮಾಡಲು ಹಲವು ಬಲಪಂಥೀಯ ಪ್ರತಿಪಾದಕ ಮತ್ತು ಫೇಕ್ ಅಕೌಂಟ್‌ಗಳ ಸೋಶಿಯಲ್ ಮೀಡಿಯಾ ಹೆಸರಿನ ಪೇಜ್‌ಗಳು ಹೆಚ್ಚು ಕಾರ್ಯಪ್ರವೃತ್ತವಾಗಿದ್ದು ಇವುಗಳನ್ನು ಪರಿಶೀಲಿಸದೆ ಹಂಚಿಕೊಳ್ಳಲು ಹೋಗಬೇಡಿ ಎಂಬುದು ಏನ್‌ಸುದ್ದಿ.ಕಾಂನ ಮನವಿ

ಕೃಪೆ: ಆಲ್ಟ್‌ನ್ಯೂಸ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಚುನಾವಣಾ ಫಲಿತಾಂಶದ ಬೆನ್ನಲ್ಲೆ ಕೋಮು ಸಾಮರಸ್ಯ ಕದಡುವ ನಕಲಿ ವಿಡಿಯೋ ವೈರಲ್


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights