ಫ್ಯಾಕ್ಟ್‌ಚೆಕ್ : ಚುನಾವಣಾ ಫಲಿತಾಂಶದ ಬೆನ್ನಲ್ಲೆ ಕೋಮು ಸಾಮರಸ್ಯ ಕದಡುವ ನಕಲಿ ವಿಡಿಯೋ ವೈರಲ್

ಕರ್ನಾಟಕ ವಿಧಾನಸಭಾ ಚುನಾವಣೆ ಮುಗಿದು ಫಲಿತಾಂಶ ಕೂಡ ಹೊರ ಬಂದಿದ್ದು, ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ 135 ಸ್ಥಾನಗಳಿಸಿ ಅಧಿಕಾರದ ಗದ್ದುಗೆ ಏರಲು ಎಲ್ಲಾ ಸಿದ್ದತೆ ನಡೆಸುತ್ತಿರುವ ಬೆನ್ನಲ್ಲೆ, ಕೋಮು ಸಾಮಾರಸ್ಯಕ್ಕೆ ಧಕ್ಕೆ ತರುವಂತಹ ವಿಡಿಯೋವೊಂದು ಸಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.

ಬೆಳಗಾವಿಯಲ್ಲಿ ಕೆಲವು ಯುವಕರು ಪಾಕಿಸ್ತಾನದ ಪರವಾಗಿ ಘೋಷಣೆಗಳನ್ನು ಕೂಗಿದ್ದಾರೆ ಎಂದು ಪ್ರತಿಪಾದಿಸಿ ವಿಡಿಯೋ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ. ಹಾಗೆಯೇ ಭಟ್ಕಳದಲ್ಲಿ ಪಾಕಿಸ್ತಾನದ ಧ್ವಜವನ್ನು ಪ್ರದರ್ಶಿಸಲಾಗಿದೆ ಎಂದು ಪ್ರತಿಪಾದಿಸಿ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

“ಪಾಕಿಸ್ತಾನ ಜಿಂದಾಬಾದ್,ಘೋಷಣೆ ಕೂಗಿ ಭಟ್ಕಳ ಮತ್ತು ಬೆಳಗಾವಿಯಲ್ಲಿ ಕಾಂಗ್ರೆಸ್ ಬೆಂಬಲಿಗರ ಸಂಭ್ರಮಾಚಾರಣೆ, ನಾವು ಕಾಂಗ್ರೆಸ್ ವಿರೋಧಿಸುವುದು ಇದಕ್ಕೇ , ಆದರೆ ಜನರಿಗೆ ಜಾತಿ ರಾಜಕಾರಣ, ಉಚಿತಗಳು ಇಷ್ಟ ಆದರೆ ಯಾರು ಏನು ಮಾಡಲು ಬರುವುದಿಲ್ಲ” ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ.
ಕೇವಲ ರಾಜ್ಯದಲ್ಲಿ ಕಾಂಗ್ರೆಸ್ ಗೆದ್ದಿದ್ದಕ್ಕೆ ಬೆಳಗಾವಿಯಲ್ಲಿ ಪಾಕಿಸ್ತಾನದ ಪರ ವಾತಾವರಣ ನಿರ್ಮಾಣವಾಗಿದೆ ಹಿಂದೂಗಳ ಒಗಟ್ಟಿನ ಕೊರತೆಯ ಪರಿಣಾಮ ಇವತ್ತು ಈ ದಿನ ನೋಡಬೇಕಾಗಿದೆ. ಭಾರತದಲ್ಲಿ ಇದ್ದಕೊಂಡು ಪಾಕಿಸ್ತಾನ ಜಿಂದಾಬಾದ್ ಅನ್ನೋ ಪಾಪಿಗಳನ್ನ ಸರ್ಕಾರ ಬಂಧಿಸಬೇಕು ಎಂಬ ಹೇಳಿಕೆಯೊಂದಿಗೆ ಮತ್ತೊಂದು ಪೋಸ್ಟ್‌ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುತ್ತಿದೆ.
ಬೆಳಗಾವಿಯಲ್ಲಿ ಸಂಭ್ರಮಾಚರಣೆ ವೇಳೆ “ಪಾಕಿಸ್ತಾನ್‌ ಜಿಂದಾಬಾದ್‌ ಘೋಷಣೆ” ಕೂಗಲಾಗಿದೆ ಎಂಬ ವಿಡಿಯೋ ವೈರಲ್‌ ಆಗಿದೆ ಎಂದು ಕನ್ನಡ ನ್ಯೂಸ್ ಎಂಬ ಫೇಸ್‌ಬುಕ್ ಪೇಜ್‌ವೊಂದರಲ್ಲಿ ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ : ಘಟನೆ-1
ವಾಸ್ತವವೇನು?
ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಸೀಫ್​​ (ರಾಜು) ಸೇಠ್​​ ಗೆಲುವಿನ ಸಂಭ್ರಮದಲ್ಲಿ ಪಾಲ್ಗೊಂಡ ಕೆಲ ಬೆಂಬಲಿಗರು “ಪಾಕಿಸ್ತಾನ್​​ ಜಿಂದಾಬಾದ್​” ಘೋಷಣೆ ಕೂಗಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ  ವಿಡಿಯೋವನ್ನು ಪರಿಶೀಲಿಸಿದಾಗ, ಇದು ನಕಲಿ ವಿಡಿಯೋ ಎಂದು ತಿಳಿದು ಬಂದಿದೆ.
ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿರುವ ಗೆದ್ದಿರುವ ಕಾಂಗ್ರೆಸ್ ಅಭ್ಯರ್ಥಿ  ಆಸಿಫ್ (ರಾಜು) ಸೇಠ್ ವೈರಲ್ ವಿಡಿಯೋವನ್ನು ನಕಲಿ ಎಂದು ಸ್ಪಷ್ಟಪಡಿಸಿದ್ದಾರೆ.”ಇದು ನಕಲಿ ವಿಡಿಯೋ. ನಾನು ಅದರ ವಾಸ್ತವತೆಯನ್ನು ಪರಿಶೀಲಿಸಿದ್ದೇನೆ. ಕೆಲ ಯುವಕರು ಪಾಕಿಸಾನ್ ಜಿಂದಾಬಾದ್ ಎಂದು ಘೋಷಣೆ ಕೂಗುತ್ತಿರುವಂತೆ ಕಿಡಿಗೇಡಿಗಳು ವಿಡಿಯೋಗೆ ವಾಯ್ಸ್ ಬೈಟ್ ಸೇರಿಸಿದ್ದಾರೆ. ಇಂತಹ ಪ್ರಚಾರಗಳನ್ನು ನಂಬಬೇಡಿ ಎಂದು ನಾನು ಜನರನ್ನು ಒತ್ತಾಯಿಸುತ್ತೇನೆ” ಎಂದು ಸೇಟ್ ತಮ್ಮ ವೀಡಿಯೊ ಸಂದೇಶದ ಮೂಲಕ ತಿಳಿಸಿದ್ದಾರೆ.

”ನನ್ನ ಪ್ರತಿಷ್ಠೆಯನ್ನು ಹಾಳುಮಾಡಲು ನನ್ನ ವಿರೋಧಿಗಳು ಈ ವಿಡಿಯೋವನ್ನು ಪ್ರಸಾರ ಮಾಡುತ್ತಿರುವುದು ದುರದೃಷ್ಟಕರ. ಇದಕ್ಕಾಗಿ ನಾನು ಯಾವುದೇ ರಾಜಕೀಯ ಪಕ್ಷ ಅಥವಾ ನಾಯಕ ಅಥವಾ ಗುಂಪನ್ನು ದೂಷಿಸುವುದಿಲ್ಲ. ಇದಕ್ಕೆ ನನ್ನ ಪ್ರತಿಕ್ರಿಯೆ ”ಜೈ ಹಿಂದ್” ಮತ್ತು ”ಭಾರತ್ ಮಾತಾ ಕೀ ಜೈ”” ಎಂದು ಹೇಳಿದ್ದಾರೆ.

”ಕೆಲವರು ಈ ರೀತಿ ಮಾಡಲು ಯತ್ನಿಸಿರುವುದು ನನಗೆ ತೀವ್ರ ನೋವಾಗಿದೆ. ಭಾರತ ನನ್ನ ದೇಶವಾಗಿದ್ದು, ಯಾರಾದರೂ ಅಪಮಾನ ಮಾಡಲು ಯತ್ನಿಸಿದರೆ ನಾನು ಸಹಿಸುವುದಿಲ್ಲ. ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ, ಇದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಮಾತ್ರ ಮನವಿ ಮಾಡುತ್ತೇನೆ” ಎಂದಿದ್ದಾರೆ.

”ನಿಮ್ಮ ಶಾಸಕನಾಗಿ ನಾನು ನಗರದ ಯಾವುದೇ ಪ್ರದೇಶದ ಜನರ ನಡುವೆ ತಾರತಮ್ಯ ಮಾಡುವುದಿಲ್ಲ ಎಂದು ಭರವಸೆ ನೀಡುತ್ತೇನೆ. ನನಗೆ ಮತ ನೀಡಿದವರು ಮತ್ತು ಮತ ಹಾಕದವರು ಎಂಬ ಭೇದಭಾವ ಮಾಡುವುದಿಲ್ಲ. ಎಲ್ಲಾ ಕ್ಷೇತ್ರಗಳಲ್ಲಿ ಸಮಾನವಾಗಿ ಎಲ್ಲಾ ಕಲ್ಯಾಣ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತೇನೆ” ಎಂದರು.

”2018 ರಲ್ಲಿ, ದುಷ್ಕರ್ಮಿಗಳು ಇದೇ ರೀತಿಯ ಘೋಷಣೆಯನ್ನು ಎತ್ತಿರುವ ವೀಡಿಯೊವನ್ನು ಪ್ರಸಾರ ಮಾಡಿದ್ದರು. ಬಿಜೆಪಿ ನಾಯಕರಾದ ಅನಿಲ್ ಬೆನಕೆ ಮತ್ತು ಸಂಜಯ ಪಾಟೀಲ ಅವರು ತಮ್ಮ ಚುನಾವಣಾ ಭಾಷಣಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಫಿರೋಸ್ ಸೇಟ್ ಅವರನ್ನು ಸೋಲಿಸಲು ಬಳಸಿಕೊಂಡರು. ಆನಂತರ  ಡೆಪ್ಯುಟಿ ಕಮಿಷನರ್ ರಚಿಸಿದ ಸಮಿತಿಯು ಆ ವೀಡಿಯೊವನ್ನು ಡಾಕ್ಟರೇಟ್ ಮಾಡಿರುವುದು ಪತ್ತೆಯಾಯಿತು” ಎಂದು ತಿಳಿಸಿದರು.

ಘಟನೆ -2
ಭಟ್ಕಳದಲ್ಲಿ ಕಾಂಗ್ರೆಸ್ ಗೆದ್ದ ನಂತರ ಪಾಕ್ ಧ್ವಜ ಹಾರಿಸಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋ ಪೋಸ್ಟ್‌ಅನ್ನು ಪರಿಶೀಲಿಸಿದಾಗ,  ಕಾಂಗ್ರೆಸ್ ಬೆಂಬಲಿಗರು ಪ್ರದರ್ಶಿಸಿದ್ದಾರೆ ಎನ್ನಲಾದ ಧ್ವಜ ಪಾಕಿಸ್ತಾನದಲ್ಲ ಎಂದು ತಿಳಿದು ಬಂದಿದೆ.
ವಾಸ್ತವವೇನು?

ಭಟ್ಕಳ-ಹೊನ್ನಾವರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ, ಭಟ್ಕಳ ಶಂಶುದ್ದೀನ್ ವೃತ್ತದಲ್ಲಿ ಹಸಿರು, ಕೇಸರಿ ಬಾವುಟ ಹಿಡಿದು ಕಾಂಗ್ರೆಸ್ ಬೆಂಬಲಿಗರು ವಿಜಯೋತ್ಸವ ಆಚರಿಸಿದರು. ಆದರೆ ಪಾಕಿಸ್ತಾನ ಧ್ವಜ ಹಾರಿಸಿದ್ದಾರೆ, ಮುಸ್ಲಿಂ ಧ್ವಜ ಹಾರಿಸಿದ್ದಾರೆ ಎಂಬ ವಾಟ್ಸಾಪ್ ಬರಹಗಳು ಎಲ್ಲೆಡೆ ಹರಿದಾಡಿದ್ದವು. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್‌ರವರು ಭಟ್ಕಳದಲ್ಲಿ ಹಾರಿಸಲಾದ ಧ್ವಜ ಪಾಕಿಸ್ತಾನದ ಧ್ವಜವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕಾಂಗ್ರೆಸ್ ಬೆಂಬಲಿಗರು ಬಳಸಿದ ಧ್ವಜ ಪಾಕಿಸ್ತಾನದ ಧ್ವಜ ಅಲ್ಲ, ವಾಸ್ತವವಾಗಿ ಅಲ್ಲಿದ್ದ ವ್ಯಕ್ತಿಗಳು ತಮ್ಮ ಸ್ವಂತ ವಿವೇಚನೆಯಿಂದ ಧಾರ್ಮಿಕ ಧ್ವಜ ಬಳಸಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಇದು ಪಾಕಿಸ್ತಾನದ ಧ್ವಜ ಅಲ್ಲ ಎಂದು ಸ್ಥಳದಲ್ಲಿದ್ದ ಅಧಿಕಾರಿಗಳು ಈಗಾಗಲೇ ದೃಢಪಡಿಸಿದ್ದರಿಂದ ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ ಅಥವಾ ಕ್ರಮ ಕೈಗೊಂಡಿಲ್ಲ ಎಂದು ಅವರು ಹೇಳಿದ್ದಾರೆ.

Why do Muslims of India use the Pakistan flag in their ...

“ಸಾಮಾಜಿಕ ಮಾಧ್ಯಮ ಬಳಕೆದಾರರು ವದಂತಿಗಳನ್ನು ಹರಡಬಾರದು ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಸೂಕ್ಷ್ಮ ವಿಷಯವನ್ನು ಪೋಸ್ಟ್ ಮಾಡಬಾರದು. ಭಟ್ಕಳದಲ್ಲಿ ಹಾರಿಸಿದ್ದು ಕೇಸರಿ, ಹಸಿರು ಧಾರ್ಮಿಕ ಧ್ವಜವೇ ಹೊರತು ಪಾಕಿಸ್ತಾನದ ಧ್ವಜ ಅಲ್ಲ ಎಂಬುದನ್ನು ನಾವು ದೃಢಪಡಿಸಿದ್ದೇವೆ. ಹಾಗಾಗಿ ಕೋಮು ಗಲಭೆಯನ್ನು ಉಂಟುಮಾಡುವ ಯಾವುದೇ ತಪ್ಪು ಮಾಹಿತಿಗಳನ್ನು ಹಂಚಿಕೊಳ್ಳದಂತೆ ನಾವು ಸಾಮಾಜಿಕ ಮಾಧ್ಯಮ ಬಳಕೆದಾರರಲ್ಲಿ ವಿನಂತಿಸುತ್ತೇವೆ” ಎಂದು ಅವರು ಹೇಳಿದ್ದಾರೆ.

ಕೆಲವು ಬೆಂಬಲಿಗರು ವಿಜಯೋತ್ಸವ ರ್ಯಾಲಿಗೆ ಕೇಸರಿ ಧ್ವಜಗಳನ್ನು ತಂದಿದ್ದರಿಂದ ಹಿಂದೂಗಳು ಮತ್ತು ಮುಸ್ಲಿಮರ ನಡುವೆ ಐಕ್ಯತೆಯನ್ನು ಬಿಂಬಿಸಲು ಕೆಲವು ಮುಸ್ಲಿಂ ಬೆಂಬಲಿಗರು ಹಸಿರು ಬಾವುಟವನ್ನು ಹಿಡಿದು ರ್ಯಾಲಿಗೆ ಸೇರಿದರು. ಅದಕ್ಕೂ ಮುನ್ನ ಅಲ್ಲಿ ಅಂಬೇಡ್ಕರ್ ಭಾವಚಿತ್ರ ಇರುವ ನೀಲಿ ಬಾವುಟಗಳು ಇದ್ದವು. ಇದು ವಾಸ್ತವವಾಗಿ ಕಾಂಗ್ರೆಸ್ ಅಭ್ಯರ್ಥಿಯ ಗೆಲುವನ್ನು ಖಾತ್ರಿಪಡಿಸುವಲ್ಲಿ ಎಲ್ಲಾ ಸಮುದಾಯಗಳು ಶ್ರಮಿಸಿವೆ ಎಂಬ ಸಂದೇಶ ನೀಡುವುದಕ್ಕಾಗಿ ಆ ರೀತಿ ನಡೆದಿದೆ ಎಂದು ವಾರ್ತಾಭಾರತಿ ವರದಿ ಮಾಡಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶದಲ್ಲಿ ಕಾಂಗ್ರೆಸ್‌ಗೆ ಬಹುಮತ ಬಂದ ಬೆನ್ನಲ್ಲೆ ಇಂತಹ ಕೋಮು ದ್ವೇಷ ಹರಡುವ ಫೇಕ್ ವಿಡಿಯೋಗಳು ವೈರಲ್ ಆಗಿದ್ದು, ಮುಂದಿನ ದಿನಗಳಲ್ಲಿ ಕೆಲವು ಬಲಪಂಥೀಯ ಪ್ರತಿಪಾದಕ ಸಾಮಾಜಿಕ ಮಾಧ್ಯಮಗಳಲ್ಲಿ ಇಂತಹ ವಿಡಿಯೋಗಳು ಹೆಚ್ಚು ವೈರಲ್ ಆಗುವ ಸಾಧ್ಯತೆ ಇದ್ದು ಇವುಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕಾಗಿದೆ.
ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ

ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ದೆಹಲಿ ಸರ್ಕಾರಿ ಶಾಲೆಗಳನ್ನು ಮದರಸವನ್ನಾಗಿ ಪರಿವರ್ತಿಸಿದರೆ ಅರವಿಂದ್ ಕೇಜ್ರಿವಾಲ್?


ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights