ಫ್ಯಾಕ್ಟ್‌ಚೆಕ್ : BJP ಗೆ ಓಟು ಹಾಕಿದಕ್ಕೆ ಆಟೋ ಚಾಲಕನ ಮೇಲೆ ದಾಳಿ ನಡೆದಿದ್ದು ನಿಜವೇ?
ಇತ್ತೀಚೆಗೆ ನಡೆದ 2023ರ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ BJP ಗೆ ಮತಹಾಕಿದ್ದಾನೆ ಎಂಬ ಕಾರಣಕ್ಕೆ ಆಟೋ ಚಾಲಕ ಹರೀಶ್ ರಾವ್ ಗೋರ್ಪಡೆ ಎಂಬುವವರನ್ನು ಥಳಿಸಿ ಆತನ ಆಟೋವನ್ನು ಜಖಂ ಗೊಳಿಸಲಾಗಿದೆ ಎಂದು ಹಲವು ಸುದ್ದಿ ಮಾಧ್ಯಮಗಳು ವರದಿ ಮಾಡಿದ್ದವು.
ಹರೀಶ್‌ರಾವ್ ಎಂಬ ಆಟೋ ಚಾಲಕ ಮತ್ತು ನಜ್ರು, ಅಬ್ರಾರ್ ಅಲಿಯಾಸ್ ಇಡ್ಲಿ ಹಾಗೂ ಮತ್ತೊಬ್ಬ ಯುವಕನ ನಡುವೆ ಚುನಾವಣೆ ಸಂಬಂಧ ಮಾತುಕತೆ ನಡೆದಿದೆ. ಈ ವೇಳೆಯಲ್ಲಿ ನೀನು ಯಾರಿಗೆ ಮತ ಹಾಕಿದ್ದಿ ಎಂದು ನಜ್ರು ಕೇಳಿದ್ದಾನೆ. ಹರೀಶ್ ರಾವ್ ಬಿಜೆಪಿಗೆ ಎಂದು ತಿಳಿಸಿದ್ದಾರೆ. ತಕ್ಷಣವೇ ನಜ್ರು ಮತ್ತು ಇತರರು ಹರೀಶ್ ರಾವ್ ಅವರನ್ನು ಥಳಿಸಿದ್ದಲ್ಲದೇ, ಆಟೋವನ್ನು ಕೂಡ ಜಖಂಗೊಳಿಸಿದರು ಎಂದು ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ. ಈ ಸುದ್ದಿ ನಿಜವೇ ಎಂದು ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಆರಂಭಿಕ ಸುದ್ದಿ ವರದಿಗಳ ಪ್ರಕಾರ (ಇಲ್ಲಿ, ಇಲ್ಲಿ ಮತ್ತು ಇಲ್ಲಿ), ವೀಡಿಯೊದಲ್ಲಿ ಕಾಣಿಸಿಕೊಂಡಿರುವ ಆಟೋ ಚಾಲಕ ಹರೀಶ್ ರಾವ್, ತಮ್ಮ ಆಟೋಗೆ ಹಾನಿಯಾದ ಬಗ್ಗೆ ದೂರು ನೀಡಲು ಶಿವಮೊಗ್ಗ ಜಿಲ್ಲಾ ಎಸ್ಪಿ ಕಚೇರಿಗೆ ತೆರಳಿದರು, ಕೆಲವು ಅಪರಿಚಿತರು ಮತದಾನಕ್ಕಾಗಿ ತಮ್ಮ ವಾಹನದ ಮೇಲೆ ದಾಳಿ ಮಾಡಿದ್ದಾರೆ ಎಂದು ಹೇಳಿದ್ದಾರೆ. ಬಿಜೆಪಿ. ಎಸ್ಪಿ ಕಚೇರಿಯಲ್ಲಿ ಹಾಜರಿದ್ದ ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಅವರು ಹರೀಶ್ ಅವರಿಗೆ ವಾಹನ ದುರಸ್ತಿ ಹಾಗೂ ವೈದ್ಯಕೀಯ ವೆಚ್ಚಕ್ಕಾಗಿ ₹20 ಸಾವಿರ ಆರ್ಥಿಕ ನೆರವು ನೀಡಿದ್ದಾರೆ ಎಂದು ವರದಿಯಾಗಿದೆ.
ಬಿಜೆಪಿಗೆ ಮತ ಹಾಕಿದ್ದಕ್ಕೆ ಅನ್ಯಕೋಮಿನ ಮೂವರು ಹಲ್ಲೆ ನಡೆಸಿ, ಆಟೋ ಜಖಂಗೊಳಿಸಿದ್ದಾರೆ ಎಂದಿದ್ದ ಚಾಲಕ ಹರೀಶ್ ರಾವ್ ಉಲ್ಟಾ ಹೊಡೆದಿದ್ದಾನೆ. ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಬಳಿ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಬಳಿ ತನಗೆ ರಕ್ಷಣೆ ನೀಡಬೇಕು ಎಂದು ಹರೀಶ್ ರಾವ್ ಮನವಿ ಮಾಡಿಕೊಂಡಿದ್ದನು.
ವಯುಕ್ತಿಕ ಕಾರಣಕ್ಕೆ ನಡೆದ ಜಗಳ
ಬಿಜೆಪಿ ಗೆ ಮತ ಹಾಕಿದೆನೆಂದು ನನ್ನ ಮೇಲೆ ಹಲ್ಲೆ ನಡೆಸಿ ನನ್ನ ಆಟೋವನ್ನು ಜಖಂಗೊಳಿಸಿದ್ದಾರೆ ಎಂದು ಹರೀಶ್ ಅಳಲು ತೋಡಿಕೊಂಡಿದ್ದರು. ಈ ವೇಳೆ ಈಶ್ವರಪ್ಪ ಸೂಕ್ತ ನ್ಯಾಯ ಕೊಡಿಸುವ ಭರವಸೆ ನೀಡಿ 20 ಸಾವಿರ ರೂಪಾಯಿ ಹಣದ ಸಹಾಯ ಮಾಡಿದ್ದರು. ಪೊಲೀಸರು ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಬೆನ್ನಲ್ಲೇ ಆಟೋ ಚಾಲಕ ತನ್ನ ಹೇಳಿಕೆಯನ್ನು ಬದಲಿಸಿದ್ದು, ಬಿಜೆಪಿಗೆ ಮತ ಹಾಕಿದ್ದಕ್ಕಾಗಿ ನನ್ನ ಮೇಲೆ ಹಲ್ಲೆ ನಡೆದಿಲ್ಲ ಎಂದು ಹರೀಶ್ ರಾವ್ ಮಾಧ್ಯಮಗಳಿಗೆ ಸ್ಪಷ್ಟಪಡಿಸಿದರು.
ಈ ವಿಷಯ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆ ನಿಜ ಸ್ಥಿತಿ ಅರಿಯಲು ಮಹಾನಗರ ಪಾಲಿಕೆಯ ಕಾಂಗ್ರೆಸ್ ಕಾರ್ಪೊರೇಟರ್ ಹೆಚ್.ಸಿ.ಯೋಗೇಶ್ ಅವರ ನೇತೃತ್ವದ ನಿಯೋಗ ವಿನೋಬನಗರ ಠಾಣೆಗೆ ಭೇಟಿ ನೀಡಿತ್ತು. ಆಗ ಎದುರಾದ ಚಾಲಕ, ಬಿಜೆಪಿಗೆ ಮತ ಹಾಕಿದ್ದಕ್ಕಾಗಿ ತನ್ನ ಮೇಲೆ ಹಲ್ಲೆ ನಡೆದಿದೆ ಎಂದು ಹೇಳಿಕೊಂಡಿಲ್ಲ ಎಂದು ಹೇಳಿದ್ದಾರೆ.
ಬಿಜೆಪಿಗೆ ಮತ ನೀಡಿದ್ದಕ್ಕೆ ದಾಳಿಯಾಯಿತು ಎಂದು ನಾನು ಎಲ್ಲಿಯೂ ಹೇಳಿಲ್ಲ, ನಾವೆಲ್ಲ ಸ್ನೇಹಿತರು ಒಟ್ಟಿಗೆ ಮದ್ಯ ಸೇವಿಸಿದೆವು. ಸ್ನೇಹಿತರು ಮಧ್ಯೆ ಜಗಳವಾಗಿ ಆಗ ಆಟೋ ಟಾಪ್, ಗ್ಲಾಸ್ ಒಡೆದು ಹೋಗಿದೆ. ಅದಕ್ಕೆ ಕಂಪ್ಲೇಂಟ್ ಕೊಡಲು ಎಸ್‌ಪಿ ಕಚೇರಿಗೆ ಹೋಗಿದ್ದೆ. ನಾನೆಲ್ಲೂ ಬಿಜೆಪಿಗೆ ವೋಟ್ ಹಾಕಿದ್ದಕ್ಕೆ ಹೊಡೆದರು ಎಂದು ಹೇಳಿಲ್ಲ. ಈಶ್ವರಪ್ಪ ಅವರು ದುಡ್ಡು ಕೊಟ್ಟರು. ಆದರೆ ಅದು ಎಷ್ಟಿತ್ತು ಎಂದು ಗೊತ್ತಿಲ್ಲ. ಅದನ್ನು ಯಾರೋ ಜೇಬಿನಿಂದ ಎತ್ತಿಕೊಂಡು ಹೋಗಿದ್ದಾರೆ ಎಂದು ಆಟೋ ಚಾಲಕ ಹರೀಶ್ ರಾವ್ ಹೇಳಿಕೆ ನೀಡಿದ್ದಾರೆ. ಅಮೀರ್ ಎಂಬ ವ್ಯಕ್ತಿ ಈ ದಾಳಿಯನ್ನು ರಾಜಕೀಯ ಪ್ರೇರಿತ ಎಂದು ಹೇಳಿದ್ದು, ಆ ಹೇಳಿಕೆ ನನ್ನದಲ್ಲ ಎಂದು ಹರೀಶ್ ಸ್ಪಷ್ಟೀಕರಣದ ನೀಡಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ವಯಕ್ತಿಕ ಕಾರಣಗಳಿಗೆ ಹರೀಶ್ ರಾವ್ ಮತ್ತು ಸ್ನೇಹಿತರ ನಡುವೆ ನಡೆದ ಜಗಳವನ್ನು ರಾಜಕೀಯ ಪ್ರೇರಿತ ಮತ್ತು ಕೋಮು ಹಿನ್ನಲೆಯಲ್ಲಿ ವರದಿ ಮಾಡಲಾಗಿತ್ತು. ಆದರೆ ನಂತರ ಸ್ವತಃ ಹರೀಶ್ ರಾವ್ ಗೋರ್ಪಡೆ ಮಾಧ್ಯಮದವರ ಮುಂದೆ ಸ್ಪಷ್ಟನೆ ನೀಡಿ ನಾನು ಎಲ್ಲಿಯೂ BJP ಗೆ ಓಟು ಹಾಕಿದಕ್ಕೆ ನನ್ನ ಮೇಲೆ ಹಲ್ಲೆಯಾಗಿದೆ ಎಂದು ಹೇಳಿಲ್ಲ ಎಂದು ತಿಳಿಸುವ ಮೂಲಕ ವದಂತಿಗಳಿಗೆ ತೆರೆ ಎಳೆದರು.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಕಾಂಗ್ರೆಸ್ ತನ್ನ ವಿಜಯೋತ್ಸವವನ್ನು ಗೋ ಹತ್ಯೆ ಮೂಲಕ ಆಚರಿಸಿದೆ ಎಂದು ಸುಳ್ಳು ಸುದ್ದಿ ಹಂಚಿಕೊಂಡ ಬಲಪಂಥೀಯರು