ಆರ್ಥಿಕ ಕುಸಿತ; ಕಾರ್ಮಿಕರ ಸಂಬಳ ಕಡಿತ – ಕಾರ್ಮಿಕರ ಸಂಘಟನೆಗಳು ಮಾಡಬೇಕಾಗಿದ್ದೇನು?

ದಿನಗಳುರುಳಿದಂತೆ ಭಾರತೀಯ ಕಾರ್ಮಿಕರಿಗೆ ಮತ್ತಷ್ಟು ಸಂಕಷ್ಟದ ದಿನಗಳು ಇದಿರಾಗುವ ಲಕ್ಷಣಗಳು ಗೋಚರಿಸುತ್ತಿವೆ. ಒಂದೆಡೆ ಉದ್ಯೋಗ ನಷ್ಟವಾಗುತ್ತಿದ್ದರೆ ಇನ್ನೊಂದೆಡೆ ಕೆಲಸಗಾರರಿಗೆ ಈಗ ಇರುವ ಸಂಬಳವನ್ನು ಕಡಿತಗೊಳಿಸುವ ಯತ್ನಗಳು ನಡೆಯುತ್ತಿವೆ. ಇದಕ್ಕೆಲ್ಲ ಕನ್ನಡಿ ಹಿಡಿದಂತೆ ಗಾರ್ಮೆಂಟ್ಸ್ ಮಾಲೀಕರೆಲ್ಲ ಒಟ್ಟುಗೂಡಿ ಗಾರ್ಮೆಂಟ್ಸ್ ಕಾರ್ಮಿಕರ ಸಂಬಳವನ್ನು ಕಡಿತಗೊಳಿಸಿ ಆದೇಶ ಹೊರಡಿಸುವಂತೆ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮನವಿ ಸಲ್ಲಿಸಿದ್ದಾರೆ. (ಒಂದು ವೇಳೆ ಲಾಕ್ ಡೌನ್ ಜಾರಿಯಾಗದಿದ್ದರೆ ಯಡಿಯೂರಪ್ಪನವರಿಂದ ಈ ಆದೇಶ ಹೊರಬರುತ್ತಿತ್ತೇನೋ..?)

ಹಣದುಬ್ಬರ ಏರುಗತಿಯಲ್ಲಿರುವ ಭಾರತೀಯ ಈ ಸಂದರ್ಭದಲ್ಲಿ ಸಂಬಳ ಕಡಿತಗೊಳಿಸುವ ಗಾರ್ಮೆಂಟ್ಸ್ ಮಾಲಿಕರ ಈ ಯತ್ನ ಒಳ್ಳೆಯ ಬೆಳವಣಿಗೆಯಲ್ಲ. ಎಲ್ಲ ಕಾರ್ಮಿಕ ಸಂಘಟನೆಗಳು ಇದಕ್ಕೆ ವ್ಯಾಪಕ ವಿರೋಧ ವ್ಯಕ್ತ ಪಡಿಸಿವೆ. ಬೆಲೆಯೇರಿಕೆ ನಿತ್ಯ ನಿರಂತರವಾಗಿರುವ ಸಂದರ್ಭದಲ್ಲಿ ಮಾಲಿಕ ವರ್ಗದ ನಿರ್ಧಾರ ಮಾನವ ವಿರೋದಿಯಾದದ್ದೂ ಕೂಡ. ಸಂಬಳ ಕಡಿತಗೊಳಿಸುವುದರಿಂದ ಜನರ ಕೊಳ್ಳುವ ಶಕ್ತಿ ಕುಂದಿ ಆರ್ಥಿಕತೆ ಹಿನ್ನೆಲೆ ಅನುಭವಿಸುತ್ತದೆ ಮತ್ತು ಇದು ದೀರ್ಘಾವದಿಯಲ್ಲಿ ಮಾರಕವಾದ ಪರಿಣಾಮಕ್ಕೆ ದಾರಿ ಮಾಡಿಕೊಡುತ್ತದೆ ಎಂಬ ಆತಂಕವನ್ನು ತೋಡಿಕೊಂಡಿವೆ.

ಕಾರ್ಮಿಕ ಸಂಘಟನೆಗಳ ಈ ಆತಂಕ ಸರಿಯಾದದ್ದೇ ಆಗಿದೆ. ಆದರೂ ಮಾಲೀಕ ವರ್ಗಗಳು ಏಕೆ ಈ ರೀತಿ ನಡೆದುಕೊಳ್ಳುತ್ತವೆ….? ಅವರಿಗೆ ಕಾರ್ಮಿಕರ ಕುರಿತು ಕಾಳಜಿ ಇರದಿದ್ದರೂ, ಆರ್ಥಿಕತೆಯ ಕುರಿತಾದ ಕಿಂಚಿತ್ತೂ ಜ್ಞಾನ ಪರಿಜ್ಞಾನವಾದರೂ ಇಲ್ಲವೇ…? ಇವರಿನ್ನೂ ಊಲಿಗ ಮಾನ್ಯ ಚಿಂತನೆಯಿಂದ ಹೊರಗೆ ಬಂದಿಲ್ಲವೇ…? ಈ ರೀತಿ ಕಾರ್ಮಿಕರಿಗೆ ಸಂಬಳ ಕಡಿತಗೊಳಿಸುವುದರಿಂದ ಆರ್ಥಿಕತೆಯ ಮೇಲೆ ಏನೆಲ್ಲ ಪರಿಣಾಮ ಬೀರಬಲ್ಲುದು ಎಂದು ವಿವರಿಸಿದರೆ ಅದನ್ನಾದರೂ ಕೇಳಿಸಿಕೊಳ್ಳಬಹುದಲ್ಲವೇ ಅಥವಾ ಕೇಳಿಸಿಕೊಳ್ಳಲಾರದಷ್ಟು ಮಂದ ಕಿವಿಯೇ ಇವರದ್ದು…?

ಮಾಲಿಕ ವರ್ಗದ ಅಥವಾ ಬಂಡವಾಳ ಶಾಹಿಯ ಕುರಿತು ಹೀಗೆಲ್ಲ ಯೋಚಿಸುವುದು ಅವಿವೇಕತನವಾದೀತು. ನಿಜವಾಗಿ ಹೇಳಬೇಕೆಂದರೆ ಭಾರತದ ಆರ್ಥಿಕತೆಯ ಕುರಿತಾದ ಸ್ಪಷ್ಟ ಅರಿವು-ಗ್ರಹಿಕೆ ಈ ಬಂಡವಾಳಶಾಹಿಗಳಿಗೆ ಇದೆ. ಎಲ್ಲವನ್ನೂ ವಿಶ್ಲೇಷಿಸುವ, ವಿವೇಚಿಸುವ, ವಿಮರ್ಷಿಸುವ ಶಕ್ತಿ-ಚೈತನ್ಯ ಅವರಿಗಿದೆ. ಆದರೆ ಕಾರ್ಮಿಕ ವರ್ಗ-ಕಾರ್ಮಿಕ ಮುಖಂಡರು ಗಾರ್ಮೆಂಟ್ಸ್ ಉದ್ಯಮದ ಉತ್ಪಾದನೆಗೂ ಹಾಗು ಮಾರುಕಟ್ಟೆಗೂ ಇರಬಹುದಾದ ಸಂಬಂಧವನ್ನು ಅರಿಯಬೇಕಾಗುತ್ತದೆ.

ಬಹುತೇಕ ದೇಶೀಯ ಉತ್ಪನ್ನಗಳಿಗೆ ವಿದೇಶಗಳ ಮಾರುಕಟ್ಟೆ. ಇಂದು ದೇಶೀಯ ಮಾರುಕಟ್ಟೆ ತೆರೆದುಕೊಂಡಿರುವುದು ವಿದೇಶಿ ಉತ್ಪನ್ನಗಳಿಗೆ. ಹಾಗೆ ಗಾರ್ಮೆಂಟ್ಸ್ ಉದ್ಯಮಕ್ಕೆ ಹೆಚ್ಚು ಮಾರುಕಟ್ಟೆ ಒದಗಿಸುತ್ತಿರುವುದು ಅಮೇರಿಕಾ, ಯೂರೋಪಿಯನ್ ರಾಷ್ಟ್ರಗಳು ಹಾಗು ಕೆಲ ಕೊಲ್ಲಿ ದೇಶಗಳು. ವಿದೇಶಿ ಮಾರುಕಟ್ಟೆ ಹೊಂದಿರುವ ಗಾರ್ಮೆಂಟ್ಸ್ ಉದ್ಯಮಿಗಳಿಗೆ ಭಾರತೀಯರೆಂದರೆ ಕೇವಲ ಕಾರ್ಮಿಕರು. ಅವರ ಶ್ರಮ ದೋಚುವುದೇ ಇವರ ಉದ್ಯಮ. ತನ್ನ ಗ್ರಾಹಕರಲ್ಲದವರ ಕೊಳ್ಳುವ ಶಕ್ತಿ ಹೆಚ್ಚಿರುವುದರಿಂದ ಈ ಉದ್ಯಮಿಗಳಿಗೆ ಏನೂ ಲಾಭವಿಲ್ಲ. ಇಲ್ಲಿನ ಕಾರ್ಮಿಕರನ್ನು ಎಷ್ಟು ಸಾಧ್ಯವೋ ಅಷ್ಟು ಕಡಿಮೆ ಕೂಲಿಗೆ ದುಡಿಸಿಕೊಂಡರೆ ಅದು ಅವರಿಗೆ ದೊರೆಯ ಬಹುದಾದ ಲಾಭ. ಇದೆಲ್ಲದರ ಜೊತೆಗೆ ಭಾರತಕ್ಕಿಂತಲೂ ಕಡಿಮೆ ದರದಲ್ಲಿ ಗಾರ್ಮೆಂಟ್ಸ್ ಉತ್ಪನ್ನ ಒದಗಿಸಲು ಇಂದು ಡಾಕಾ(ಬಾಂಗ್ಲ ದೇಶ)ತುದಿಗಾಲಲ್ಲಿ ನಿಂತಿರುವುದರಿಂದ ಅವರೊಂದಿಗೂ ಪೈಪೋಟಿಗೆ ಇಲಿಯ ಬೇಕಾಗಿದೆ.

ಇದು ಜಾಗತೀಕರಣ ಮತ್ತು ಬೆಳೆಯುತ್ತಿರುವ ಬಂಡವಾಳಶಾಹಿ ವ್ಯವಸ್ಥೆ ತಂದೊಡ್ಡುತ್ತಿರುವ ವೈರುದ್ಯವೂ ಆಗಿದೆ. ಪರಸ್ಪರ ಐಕ್ಯರಾಗ ಬೇಕಾದ ವಿಶ್ವದ ಕಾರ್ಮಿಕರು ತಮಗರಿವಿಲ್ಲದಂತೆ ಪರಸ್ಪರ ಪೈಪೋಟಿಗಿಳಿಯುವಂತೆ ಮಾಡುತ್ತಿದೆ. ಇಲ್ಲಿದೇಶಭಾಂದವರೆಂದರೆ ಗಾರ್ಮೆಂಟ್ಸ್, ಇಂಪೋಸಿಷ್, ವಿಪ್ರೋ, TCI, ಎಲ್ ಅಂಡ್ ಟಿ ಯಂತಹ ಉದ್ಯಮಿಗಳಿಗೆ ಕೇವಲ ಕಾರ್ಮಿಕರು ಹಾಗು ಡಿ-ಮಾರ್ಟ್, ರಿಲಯನ್ಸ್ ಫ್ರೆಶ್, ಬಿಗ್ ಬಜಾರ್, ಮೆಟ್ರೋ ಕ್ಯಾಶ್ ಅಂಡ್ ಕ್ಯಾರಿ, ಸೂಪರ್ ಮಾರ್ಕೆಟ್ಟು ಗಳಂತಹ ವ್ಯಾಪಾರಿ ಕುಳಗಳಿಗೆ ಅವರ ಮಳಿಗೆಗಳ ಮುಂದೆ ಸಾಲುಗಟ್ಟಿ ನಿಂತಿರುವ ಗ್ರಾಹಕರು ಮಾತ್ರ.

ಆದ್ದರಿಂದ ಗಾರ್ಮೆಂಟ್ಸ್ ಮಾಲೀಕರಿಗೆ ಎಷ್ಟು ಸಾಧ್ಯವೋ ಅಷ್ಟು ಕಡಿಮೆ ಕೂಲಿಗೆ ದುಡಿಸಿಕೊಳ್ಳುವುದೇ ಒಂದು ದ್ಯೇಯವಾಗಿಸಿಕೊಂಡಿರುವ ಹಾಗೂ ಯಾವುದೇ ರೀತಿಯಲ್ಲಿ ದೇಶೀಯ ಮಾರುಕಟ್ಟೆಯ ಪಲಾನುಭವಿಯಲ್ಲದವ ವರ್ಗ ಇಲ್ಲಿಯ ಆರ್ಥಿಕತೆ ಚೇತರಿಕೆಯ ಕುರಿತಾದ ಯಾವುದೇ ರೀತಿಯ ಸಲಹೆ, ಸೂಚನೆ, ಮನವಿಯನ್ನು ಯಾವುದೇ ಕಾರಣಕ್ಕೂ ಸ್ವೀಕರಿಸಲಾರರು. ಸಂಬಳ ಕಡಿತಗೊಳಿಸುವ ಅವರ ಯತ್ನ ಪಕ್ಕಾ ಲೆಕ್ಕಾಚಾರದಿಂದ ಕೂಡಿರುವುದೇ ಆಗಿದೆ. ಆದುದರಿಂದ ಕಾರ್ಮಿಕರಿಗೂ, ಅವರಿಗೆ ಕೆಲಸ ನೀಡಿರುವ ಉದ್ದಿಮೆದಾರರಿಗೂ, ಪ್ರಸ್ತುತ ಭಾರತದ ಆರ್ಥಿಕತೆಗೂ ಇರಬಹುದಾದ ಸಂಬಂಧವನ್ನು ಅರಿತು ಅದಕ್ಕಣುಗುಣವಾಗಿ ಒಂದು ರಾಷ್ಟ್ರೀಯ ನೀತಿಯೊಂದನ್ನು ರೂಪಿಸಿಕೊಂಡು ಕಾರ್ಮಿಕರ ಸಂಘಟನೆಗೆ ಇಳಿಯಬೇಕಾದ ಅನಿವಾರ್ಯತೆಯನ್ನು ಮೇ ದಿನಾಚರಣೆಯ ಈ ಸಂದರ್ಭದಲ್ಲಿ ಕಾರ್ಮಿಕ ಸಂಘಟನೆಗಳು, ಕಾರ್ಮಿಕ ಮುಖಂಡರು ಮನಗಾಣಬೇಕಿದೆ.

 

| – ಆಲುವಳ್ಳಿ ಆರ್ ಅಣ್ಣಪ್ಪ |

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights