ಗ್ರೀನ್ ಝೋನ್‌ನಲ್ಲಿರುವ ಜಿಲ್ಲೆಗೂ ಇಲ್ಲಾ ಲಾಕ್‍ಡೌನ್ ಸಡಿಲಿಕೆ!!
ಗ್ರೀನ್ ಝೋನ್‌ನಲ್ಲಿರುವ ಜಿಲ್ಲೆಗಳಲ್ಲಿ ಮೇ 04 ರಿಂದ ಲಾಕ್ ಡೌನ್ ಸಡಿಲಿಕೆ ಆಗುತ್ತೆ ಎಂದು ಸರ್ಕಾರ ಘೋಷಿಸಿದೆ. ಅನ್ಯ ಜಿಲ್ಲೆಗಳಿಗೆ ಪ್ರಯಾಣವನ್ನು ನಿರ್ಬಂಧಿಸಿ ಜಿಲ್ಲೆಯೊಳಗೆ ಕೆಎಸ್‌ಆರ್‌ಟಿಸಿ ಓಡಿಸಲು ಕೂಡ ಅವಕಾಶ ನೀಡಲಾಗಿದೆ. ಈ ಹಿನ್ನಲೆಯಲ್ಲಿ ನಾವಿನ್ನು ಸ್ವತಂತ್ರವಾಗಿರಬಹುದು ಎಂದು ಭಾವಿಸಿದ್ದ ಕೊಡಗು ಜಿಲ್ಲಾ ಜನರಿಗೆ ಕೊಡಗು ಜಿಲ್ಲಾಧಿಕಾರಿ ಶಾಕ್ ನೀಡಿದ್ದಾರೆ.
ಕೊಡಗು ಜಿಲ್ಲೆಗೆ ಮೂರುವರೆಯಿಂದ ನಾಲ್ಕು ಸಾವಿರ ಜನರು ಹೊರ ಜಿಲ್ಲೆ ಮತ್ತು ರಾಜ್ಯಗಳಿಂದ ಬರುವ ನಿರೀಕ್ಷೆ ಇರುವುದರಿಂದ ಕೊಡಗು ಜಿಲ್ಲೆಯಲ್ಲಿ ಎಂದಿನಂತೆ ಲಾಕ್ ಡೌನ್ ಮುಂದುವರೆಸುವುದಾಗಿ ಜಿಲ್ಲಾಧಿಕಾರಿ ಅನೀಸ್ ಕಣ್ಮಿಣಿ ಜಾಯ್ ತಿಳಿಸಿದ್ದಾರೆ.
ಲಾಕ್ ಡೌನ್ ಸಡಿಲಿಕೆ ಕುರಿತು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,ಹಿಂದಿನಂತೆ ನಾಲ್ಕು ದಿನಗಳು ಅಂದ್ರೆ ಭಾನುವಾರ, ಸೋಮವಾರ, ಬುಧವಾರ ಮತ್ತು ಶುಕ್ರವಾರ ಬೆಳಿಗ್ಗೆ ಆರರಿಂದ ಸಂಜೆ ನಾಲ್ಕು ಗಂಟೆವರೆಗೆ ವ್ಯಾಪಾರ ವಹಿವಾಟು ನಡೆಯಲಿದೆ. ಜ್ಯುವೆಲ್ಲರಿ ಶಾಪ್ ಗಳು ಕೂಡ ತೆರೆಯಲಿದ್ದು, ಈ ನಾಲ್ಕು ದಿನಗಳು ಮಾತ್ರವೇ ತೆರೆದಿರಲಿವೆ. ಲಿಕ್ಕರ್ ಶಾಪ್ಗಳಿಗೂ ಕೂಡ ನಾಲ್ಕು ದಿನಗಳು ಮಾತ್ರ ಅವಕಾಶ ನೀಡಲಾಗಿದೆ. ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆ ವರೆಗೆ ಮಾತ್ರವೇ ಅವಕಾಶವಿರುತ್ತದೆ ಎಂದು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಸರ್ಕಾರಿ ಅಥವಾ ಖಾಸಗೀ ಸೇರಿದಂತೆ ಯಾವುದೇ ಸಾರ್ವಜನಿಕ ಸಾರಿಗೆ ವ್ಯವಸ್ಥೆಯೂ ಇರುವುದಿಲ್ಲ. ಆದ್ರೆ ಬೇಡಿಕೆ ಮೇರೆಗೆ ಬೆಳಿಗ್ಗೆ 6 ರಿಂದ ಸಂಜೆ 4 ಗಂಟೆವರೆಗೆ ಆಟೋಗಳ ಓಡಾಟಕ್ಕೆ ಅನುವು ಮಾಡಿಕೊಡಲಾಗಿದೆ. ಉಳಿದಂತೆ ಎಲ್ಲವೂ ಹಿಂದಿನಂತೆ ಮುಂದುವರೆಯಲಿದೆ ಎಂದಿದ್ದಾರೆ.
ಹೊರ ಜಿಲ್ಲೆ ಮತ್ತು ರಾಜ್ಯಗಳಿಂದ ಜಿಲ್ಲೆಗೆ ಬರುತ್ತಿರುವವರಿಗೆ ಕೊಡಗಿನ ಚೆಕ್ಪೋಸ್ಟ್ ತೆರೆಯಲಾಗಿದೆ. ಈ ಸ್ಥಳಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಸಲಾಗುವುದು. ರೋಗ ಲಕ್ಷಣಗಳು ಇದ್ದಲ್ಲಿ ಅಲ್ಲಿಯೇ ಕ್ವಾರಂಟೈನ್ ಗೆ ಒಳಪಡಿಸಲಾಗುವುದು. ಯಾವುದೇ ರೋಗ ಲಕ್ಷಣಗಳು ಇಲ್ಲದಿದ್ದರೆ, ಅವರ ಮನೆಗಳಿಗೆ ತೆರಳಲು ಅವಕಾಶವಿದೆ. ಆದ್ರೆ ಮನೆಯಲ್ಲಿಯೇ ಕ್ವಾರಂಟೈನ್ ಗೆ ಒಳಗಾಗಬೇಕು ಎಂದು ತಿಳಿಸಿದ್ದಾರೆ.
ಮಾಸ್ಕ್ ಇಲ್ಲದಂತೆ ಮನೆಯಿಂದ ಹೊರಗೆ ಬಂದಲ್ಲಿ ನೂರು ರೂಪಾಯಿ ದಂಡ ವಿಧಿಸಲಾಗುವುದು. ಹಾಗೆ ಬೀದಿಯಲ್ಲಿ ಉಗುಳಿದರೂ ದಂಡ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ.

