ಉ.ಪ್ರ.ದಲ್ಲಿ ಪ್ರತಿಭಟನಾಕಾರರು ಗಲಭೆಕೋರರೆಂದು ಸಾಬೀತಾಗದೇ ಆಸ್ತಿಪಾಸ್ತಿ ಜಪ್ತಿಗೆ ಭಾರೀ ವಿರೋಧ

ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ನಾಗರಿಕ ಪೌರತ್ವ ತಿದ್ದುಪಡಿ ವಿರುದ್ಧ ನಡೆದ ಪ್ರತಿಭಟನೆಗಳಲ್ಲಿ ಹಿಂಸಾಚಾರ ಮತ್ತು ಆಸ್ತಿಪಾಸ್ತಿ ನಷ್ಟ ಸಂಭವಿಸಿದ ನಂತರ ಅಲ್ಲಿನ ಸರ್ಕಾರ ‘ಗಲಭೆಕೋರರ’ ಆಸ್ತಿಪಾಸ್ತಿ ಮುಟ್ಟುಗೋಲು/ಜಪ್ತಿ ಮಾಡುವ ಕಾಯ್ದೆಯನ್ನು ಜಾರಿಗೆ ತಂದಿದೆ. ಗಲಭೆಕೋರರ ಆರೋಪ ಸಾಬೀತಾಗುವ ಮೊದಲೇ ಈ ಕ್ರಮ ಜರುಗಿಸಲು ಸಾಧ್ಯವೇ ಎಂಬ ಚರ್ಚೆಗಳೂ ಶುರುವಾಗಿವೆ. ವಕೀಲ ಸಮೂದಲ್ಲೇ ಈ ಕಾಯ್ದೆಯ ಪರ ಮತ್ತು ವಿರೋಧ ನಿಲುವುಗಳು ವ್ಯಕ್ತವಾಗುತ್ತಿವೆ. ಬಹುಪಾಲು ಹಿರಿಯ ವಕೀಲರು ಈ ಕಾಯ್ದೆಗೆ ಕಾನೂನು ಮಾನ್ಯತೆಯಿಲ್ಲ ಎಂದು ಪ್ರತಿಪಾದಿಸಿದ್ದಾರೆ.

ಮಂಗಳೂರು ಗಲಭೆಯ ನಂತರ ಕರ್ನಾಟಕದಲ್ಲೂ ಇಂತಹ ಕಾಯ್ದೆ ತರುವುದಾಗಿ ಕೆಲವು ಸಚಿವರು ಹೇಳಿದರಾದರೂ, ಅಂತಿಮದಲ್ಲಿ ಸದ್ಯಕ್ಕೆ ಅಂತಹ ಕಾಯ್ದೆಯನ್ನು ತರುವ ಉದ್ದೇಶ ಸರ್ಕಾರಕ್ಕಿಲ್ಲ ಎಂದು ಸಚಿವ ಮಾಧುಸ್ವಾಮಿ ಹೇಳಿದ್ದಾರೆ.

ಈ ನಡುವೆಯೇ ಗಲಭೆ ಸಂಭವಿಸಿದ ಉತ್ತರಪ್ರದೇಶದ ನಾಲ್ಕು ಜಿಲ್ಲೆಗಳ ಜಿಲ್ಲಾಧಿಕಾರಿಗಳು 138 ಗಲಭೆಕೋರ ಆರೋಪಿಗಳಿಗೆ 50 ಲಕ್ಷ ರೂಪಾಯಿಗಳ ದಂಡ ಪಾವತಿಸುವಂತೆ ನೋಟಿಸ್‌ಗಳನ್ನು ನೀಡಿದ್ದಾರೆ. ಇದೇ ಹೊತ್ತಲ್ಲಿ ಗಲಭೆಕೋರರ ಆಸ್ತಿ-ಪಾಸ್ತಿ ಜಪ್ತಿ ಮಾಡಿ ಎಂದು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಹೀಗಾಗಿ ಅಲ್ಲಿನ ಜಿಲ್ಲಾಡಳಿತಗಳು, ದಂಡ ಪಾವತಿಸಲು ವಿಫಲರಾದರೆ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

ಅಮನ್ ಲೇಖಿಯಂತಹ ಹಲವು ವಕೀಲರು ಈ ಕ್ರಮ ಸರಿಯಾಗಿದೆ ಎಂದು ಸಮರ್ಥಿಸುತ್ತಿದ್ದರೆ, ಬಹುಪಾಲು ವಕೀಲರು ಇದಕ್ಕೆ ಕಾನೂನಿನ ಮಾನ್ಯತೆ ಕಷ್ಟ ಎಂದು ಅಭಿಪ್ರಾಯಪಟ್ಟಿದ್ದಾರೆ. ಸುಪ್ರಿಂಕೋರ್ಟ್ ಹಿರಿಯ ವಕೀಲ ಸಂಜಯ ಹೆಗಡೆ ಪ್ರಕಾರ, ಆಸ್ತಿಪಾಸ್ತಿ ಹಾನಿ ಮಾಡಿದ ಆರೋಪ ಸಾಬೀತಾಗುವುದು ಕ್ರಿಮಿನಲ್ ವಿಚಾರಣೆಯ ಬಳಿಕವಷ್ಟೇ. ಕೇವಲ ಫೋಟೊ, ವಿಡಿಯೋ ತುಣುಕುಗಳ ಆಧಾರದಲ್ಲಿ ಗಲಭೆಕೋರ ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಕ್ರಮಕ್ಕೆ ಕಾನೂನು ಮಾನ್ಯತೆ ಸಿಗುವುದು ಸಂಶಯ. ಬಹುಷಃ ಸದ್ಯ ಜನರಲ್ಲಿ  ಪೌರತ್ವ ತಿದ್ದುಪಡಿ ಕಾಯ್ದೆ, ಎನ್‌ಆರ್‌ಸಿ ಮತ್ತು ಪೊಲೀಸ್ ಗೋಲಿಬಾರ್ ವಿರುದ್ಧ ಇರುವ ಅಸಹನೆ ಮತ್ತು ಭಿನ್ನಮತವನ್ನು ಶಮನ ಮಾಡಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇಂತಹ ದಾರಿ ತುಳಿದಿರಬೇಕು ಎನ್ನುತ್ತಾರೆ.

ಸುಪ್ರಿಂಕೋರ್ಟಿನ ಇನ್ನೊಬ್ಬ ಹಿರಿಯ ವಕೀಲ ಸಿ.ಯು. ಸಿಂಗ್, ಈ ಕಾಯ್ದೆ ಸಂಪೂರ್ಣ ಅಸಾಂವಿಧಾನಿಕ. ಇದಕ್ಕೆ ಕಾನೂನಿನ ಮಾನ್ಯತೆ ಸಿಗದು. ಆರೋಪಿಗಳಿಗೆ ಮುಕ್ತ ವಿಚಾರಣೆಯ ಅವಕಾಶಕ್ಕೆ ಆಸ್ಪದವೇ ಇಲ್ಲದಂತೆ ಪೂರ್ವಗ್ರಹಪೀಡಿತ ನಿರ್ಧಾರದ ಆಧಾರದಲ್ಲಿ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವುದ ಅಸಾಧ್ಯ ಎನ್ನುತ್ತಾರೆ. ಪೊಲೀಸರೇ ಗಲಭೆಗೆ ಪ್ರಚೋದಿಸಿದ ಮತ್ತು ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಮಾಡಿದ ವಿಡಿಯೋಗಳೂ ಯುಟ್ಯಬ್‌ನಲ್ಲಿ ಹರಿದಾಡುತ್ತಿವೆ. ಹೀಗಾಗಿ ಕ್ರಿಮಿನಲ್ ವಿಚಾರಣೆಯಿಲ್ಲದೇ ಜನರನ್ನು ಗಲಭೆಕೋರರು, ಆಸ್ತಿಪಾಸ್ತಿಗೆ ಹಾನಿ ಮಾಡಿದವರು ಎಂದು ಪೂರ್ವಗ್ರಹದಿಂದ ನಿರ್ಧರಿಸಿ ಕ್ರಮ ಕೈಗೊಳ್ಳುವುದು ಅರಣ್ಯನ್ಯಾಯವಾಗುತ್ತದೆ ಎಂದಿದ್ದಾರೆ.

‘ಗಲಭೆ ಮತ್ತು ಹಿಂಸಾಚಾರ ಸಂಭವಿಸಿದಾಗ ಅದರಲ್ಲಿ ಭಾಗಿಯಾದವರಿಗಿಂತ ಮೊದಲು ಆಯೋಜಕರನ್ನೂ ವಿಚಾರಣೆಗೆ ಒಳಪಡಿಸಿ ಕ್ರಮ ಕೈಗೊಳ್ಳಬೇಕು ಎಂದು ಸುಪ್ರಿಂಕೋರ್ಟು ಹೇಳಿದೆ. ಪದ್ಮಾವತಿ ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ಸಂಭವಿಸಿದ ಗಲಭೆ ಪ್ರಕರಣಗಳಲ್ಲಿ ಆಯೋಜಕರನ್ನು ಮೊದಲು ಆರೋಪಿಗಳನ್ನಾಗಿ ಪರಿಗಣಿಸಲಾಗಿತ್ತು’ ಎಂದು ಸಿಂಗ್ ವಿವರಿಸುತ್ತಾರೆ.

ಇನ್ನೊಬ್ಬ ಹಿರಿಯ ವಕೀಲ ಮಹಮ್ಮದ್ ಪಾಷರವರ ಪ್ರಕಾರ, ‘ಈ ಕ್ರಮವು ಸಂವಿಧಾನ ಮತ್ತು ರೂಲ್ ಆಫ್ ಲಾಗಳನ್ನು ನಾಶ ಮಾಡುವ ಆರೆಸ್ಸೆಸ್‌ನ ಸಿದ್ದಾಂತದ ಭಾಗವಾಗಿದೆ. ಪೊಲೀಸರು ಕೇವಲ ಲಭ್ಯವಿರುವ ವಿಡಿಯೋಗಳ ಆಧಾರದಲ್ಲಿ ಜನರನ್ನು ಅಪರಾಧಿಗಳು ಎಂದು ನಿರ್ಧರಿಸುತ್ತಿದ್ದಾರೆ. ವಿಡಿಯೋಗಳ ಅಸಲೀತನವನ್ನು ಪರೀಕ್ಷಿಸುತ್ತಲೇ ಇಲ್ಲ. ಗಲಭೆಕೋರರು ಮಾತ್ರವಲ್ಲದೇ ಅಮಾಯಕರನ್ನು ವಿಚಾರಣೆಯಿಲ್ಲದೇ ಸಂಶಯಾತ್ಮಕ ಆರೋಪಿಗಳನ್ನು ಅಪರಾಧಿಗಳೆಂದು ನಿರ್ಧರಿಸಿ ಶಿಕ್ಷೆ ವಿಧಿಸುವುದು ಕ್ರೂರ ಮತ್ತು ಅಸಂವಿಧಾನಿಕವಾಗಿದೆ’…

ಬಹುಪಾಲು ಹಿರಿಯ ವಕೀಲರು ಇಂಥಹುದ್ದೇ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಯೋಗಿ ಆದಿತ್ಯನಾಥರ ಹೊಸ ಕಾಯ್ದೆಗೆ ಕೋರ್ಟಿನಲ್ಲಿ ಮಾನ್ಯತೆ ಸಿಗಲಾರದು ಎನ್ನಲಾಗಿದೆ. ಸದ್ಯದ ಬಿಕ್ಕಟ್ಟು ಮತ್ತು ಜನರ ಪ್ರತಿರೋಧಗಳಿಂದ ಪಾರಾಗಲು ಈ ಕಾನೂನಾತ್ಮಕವಾಗಿ ಬೆನ್ನೆಲುಬಿಲ್ಲದ ಕಾಯ್ದೆಯನ್ನು ಜಾರಿಗೆ ತಂದು ಜನರ ಗಮನವನ್ನು ಬೇರೆಡೆ ಸೆಳೆಯಲು ಯತ್ನಿಸಲಾಗುತ್ತಿದೆಯೇ ಎಂಬ ಪ್ರಶ್ನೆಗಳು ಉದ್ಭವಿಸಿವೆ.
( ಆಧಾರ: ದಿ ವೈರ್)

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights