ಆಶಾ ಕಾರ್ಯಕರ್ತರಿಗೆ ಸಂಪೂರ್ಣ ಸಹಕಾರ ಕೊಡುವಂತೆ ಮುಸ್ಲಿಂ ಸಮುದಾಯಕ್ಕೆ ಪಾಪ್ಯುಲರ್ ಫ್ರಂಟ್ ಕರೆ

ಕರ್ನಾಟಕದಾದ್ಯಂತ ಕೊರೊನ ಸೋಂಕಿತ ಪ್ರಕರಣಗಳು ಹೆಚ್ಚುತ್ತಿವೆ. ಶನಿವಾರದವರೆಗೆ ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ ಒಟ್ಟು 371 ಇದ್ದು 13 ಜನ ಮೃತಪಟ್ಟಿದ್ದಾರೆ. ದಕ್ಷಿಣ ಕನ್ನಡದಲ್ಲಿ ಈಗ ಸುಮಾರು 16 ಕೊರೊನ ಸೋಂಕಿನ ಪ್ರಕರಣಗಳು ದಾಖಲಾಗಿವೆ.

ದಕ್ಷಿಣ ಕನ್ನಡ ಜಿಲ್ಲೆಯನ್ನು ಈಗಾಗಲೇ ಕೊರೋನ ಹಾಟ್ ಸ್ಪಾಟ್ ಜಿಲ್ಲೆಯಾಗಿ ಪರಿಗಣಿಸಲಾಗಿದೆ. ಸಾಂಕ್ರಾಮಿಕವನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿತವು ಆರೋಗ್ಯ ಸಮೀಕ್ಷೆಗೆ ಮುಂದಾಗಿದ್ದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌ರವರು ಸಮೀಕ್ಷೆಯನ್ನು ಯಶಸ್ವಿಗೊಳಿಸುವಂತೆ ಕೋರಿಕೊಂಡಿದ್ದಾರೆ.

ಈ ಸಮೀಕ್ಷೆಗೆ ಬರುವ ಆರೋಗ್ಯ ಕಾರ್ಯಕರ್ತರಿಗೆ ಸಂಪೂರ್ಣ ಸಹಕಾರ ನೀಡಬೇಕೆಂದು ದಕ್ಷಿಣ ಕನ್ನಡ ಜಿಲ್ಲೆಯ ಪಾಪ್ಯುಲರ್ ಫ್ರಂಟ್ ಬಳಗ ಮುಸ್ಲಿಂ ಸಮುದಾಯಕ್ಕೆ ಕರೆ ಕೊಟ್ಟಿದೆ “ಎನ್‌ಪಿಆರ್ ಸಮೀಕ್ಷೆಯನ್ನು ಎಪ್ರಿಲ್ 15ರಂದು ಪ್ರಾರಂಭಿಸುವ ಬಗ್ಗೆ ಈ ಹಿಂದೆ ಸರಕಾರವು ಅಧಿಕೃತ ಆದೇಶ ಹೊರಡಿಸಿತ್ತು. ಆದರೆ ಕೊರೋನದ ಸನ್ನಿವೇಶದಲ್ಲಿ ಅದನ್ನು ಮುಂದೂಡಲಾಗಿದ್ದು, ಇದರ ದಿನಾಂಕವನ್ನು ಇನ್ನೂ ನಿಗದಿಪಡಿಸಲಾಗಿಲ್ಲ. ಎನ್‌ಪಿಆರ್‌ ಪ್ರಕ್ರಿಯೆಗೂ, ಈ  ಸಮೀಕ್ಷೆಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂಬುದನ್ನು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ.

ಈ ಆರೋಗ್ಯ ಸಮೀಕ್ಷೆಯ ವೇಳೆ ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿಗೊಡಬಾರದು ಮತ್ತು ಯಾವುದೇ ಗೊಂದಲ ಹಾಗೂ ತಪ್ಪುಗ್ರಹಿಕೆಗಳಿಗೆ ಒಳಗಾಗಿ ಕಾನೂನು ಕೈಗೆತ್ತಿಕೊಳ್ಳಬಾರದು. ಈ ಸಮೀಕ್ಷೆಯಲ್ಲಿ ಕೇಳಲಾಗುವ ಮಾಹಿತಿಗಳ ಕುರಿತು ಬಹಳ ಸ್ಪಷ್ಟವಾಗಿ ವಿವರಿಸಲಾಗಿದೆ. ಮನೆಯ ಯಜಮಾನರ ಹೆಸರು, ಮೊಬೈಲ್ ನಂಬರ್, ಮನೆಯಲ್ಲಿ ಪ್ರಸ್ತುತವಿರುವ ಒಟ್ಟು ಸದಸ್ಯರ ಸಂಖ್ಯೆ ಮತ್ತು ಮನೆಮಂದಿಗೆ ಯಾವುದಾದರೂ ರೋಗ ಲಕ್ಷಣಗಳಿರುವ ಕುರಿತ ಆರೋಗ್ಯ ಸಂಬಂಧಿ ಮಾಹಿತಿಗಳನ್ನಷ್ಟೇ ಕೇಳಲಾಗುತ್ತದೆ.

ಈ ಆರೋಗ್ಯ ಸಮೀಕ್ಷೆಗೆ ಎಲ್ಲರೂ ಸಹಕಾರ ನೀಡಿ ಜಿಲ್ಲಾಡಳಿತದೊಂದಿಗೆ ಸಂಪೂರ್ಣವಾಗಿ ಸಹಕರಿಸಬೇಕು” ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ, ದಕ್ಷಿಣ ಕನ್ನಡದ ಜಿಲ್ಲಾಧ್ಯಕ್ಷ ಇಜಾಝಝ್ ಅಹ್ಮದ್ ಪ್ರಕಟಣೆಯಲ್ಲಿ ಹೇಳಿದ್ದಾರೆ.

“ಅದೇ ರೀತಿ ನಮ್ಮ ದೇಶದ, ಸಮಾಜದ ಒಳಿತಿಗಾಗಿ ಮತ್ತು ನಮ್ಮ ಆರೋಗ್ಯದ ಹಿತದಷ್ಟಿಯಿಂದ ದುಡಿಯುತ್ತಿರುವ ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಸ್ವಯಂ ಸೇವಕರ ಸೇವೆಯನ್ನು ನಾವು ಈ ಸಂದರ್ಭದಲ್ಲಿ ಶ್ಲಾಘಿಸಬೇಕು ಮತ್ತು ಅವರನ್ನು ಗೌರವಿಸಬೇಕು. ಈ ನಿಟ್ಟಿನಲ್ಲಿ ಮನೆ ಮನೆ ಭೇಟಿ ಕೊಡುವ ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಸ್ವಯಂ ಸೇವಕರಿಗೆ ಸಮರ್ಪಕ ಮಾಹಿತಿ ನೀಡಿ ಸಹಕರಿಸಬೇಕು” ಎಂದು ಕೂಡ ಪಾಪ್ಯುಲರ್ ಫ್ರಂಟ್ ಪ್ರಕಟಣೆ ತಿಳಿಸಿದೆ.

ಏಪ್ರಿಲ್ ಮೊದಲ ವಾರದಲ್ಲಿ ಬೆಂಗಳೂರಿನ ಸಾರಾಯಿಪಾಳ್ಯದ ಸಾದಿಕ್ ಲೇಔಟ್ ನಲ್ಲಿ ಕೊವಿಡ್-19 ತಪಾಸಣೆ ಮಾಡಲು ತೆರಳಿದ್ದ ಆಶಾ (ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತೆಯರು) ಕಾರ್ಯಕರ್ತೆಯರ ಮೇಲೆ ಹಲ್ಲೆಗೆ ಪ್ರಯತ್ನಿಸಲಾಗಿದೆ ಎಂಬ ಆರೋಪ ಕೋಮು ಬಣ್ಣ ಪಡೆದಿತ್ತು. ಏನ್ಸುದ್ದಿ ಬಳಗದೊಂದಿಗೆ ಅಲ್ಲಿನ ನಿವಾಸಿಗಳು ಹಂಚಿಕೊಂಡ ಮಾಹಿತಿಯ ಪ್ರಕಾರ, ಅಲ್ಲಿನ ಕೆಲವು ನಿವಾಸಿಗಳು ಕೊರೊನ ಆರೋಗ್ಯ ತಪಾಸಣೆಯನ್ನು, ಎನ್ ಪಿ ಆರ್ ಪ್ರಕ್ರಿಯೆಗೆ ಗೊಂದಲ ಮಾಡಿಕೊಂಡು ಆಗಿದ್ದ ಮಾತಿನ ಚಕಮಕಿಯಾಗಿತ್ತು. ನಂತರ ಸಮುದಾಯದ ಮುಖಂಡರು ಇದರ ಬಗ್ಗೆ ಸಾಮಾನ್ಯರಿಗೆ ತಿಳಿ ಹೇಳಿ ಅಗತ್ಯ ಮಾಹಿತಿ ನೀಡಲು ಕೇಳಿಕೊಂಡಿದ್ದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights