ಇಂಪೋಷಿಸ್ ನಾರಾಯಣ ಮೂರ್ತಿಯವರ ಸಲಹೆ ಮಹಾ ಘಾತಕತನವಲ್ಲವೇ….?

ಕರ್ನಾಟಕದ ಒಂದು ವರ್ಗ ಇಂಪೋಷಿಸ್ ನಾರಾಯಣ ಮೂರ್ತಿಯವರನ್ನು ಒಂದು ಮಹಾನ್ ವ್ಯಕ್ತಿಯಾಗಿ ಗುರುತಿಸುತ್ತದೆ. ಕನ್ನಡದವನೊಬ್ಬ ಯಶಸ್ವಿ ಉದ್ಯಮಿಯಾಗಿ, ಸಾವಿರಾರು ಕೋಟಿ ರೂಗಳ ಓಡೆಯನಾಗಿ ಬೆಳೆದಿರುವುದನ್ನು ಕಂಡು ಹೆಮ್ಮೆ ಪಡುತ್ತಾರೆ. ಸಾವಿರಾರು ಜನರಿಗೆ ಉದ್ಯೋಗವನ್ನಿತ್ತಿರುವುದರಿಂದ ಅನ್ನದಾತ ಎಂದು ಗುರುತಿಸಿ ದೇವರನ್ನಾಗಿಯೂ ಕಾಣುತ್ತದೆ. ಅವರ ಕುರಿತು ಅಪಸ್ವರ ಎತ್ತಿದರೆ ಕೋಪಿಸಿಕೊಳ್ಳುವ ವರ್ಗವು ಇದೆ. ಇರಲಿ ಇದು ಅವರವರ ಅಂತರಂಗದ ವಿಷಯ. ಆದರೆ ಇಂತಹ ದೇವಸ್ವರೂಪಿ, ಉದ್ಯಮ ದಿಗ್ಗಜ ಕರೋನ ಕಾರಣದಿಂದ ಕುಸಿದಿರುವ ಆರ್ಥಿಕತೆಯನ್ನು ಪುನಃಶ್ಚೇತನಗೊಳಿಸಲು ಕಾರ್ಮಿಕರ ಹಕ್ಕುಗಳನ್ನು ಮೊಟಕುಗೊಳಿಸುವಂತಹ ಸಲಹೆ ನೀಡಿರುವುದು ಅವರೊಬ್ಬ ವಿಮರ್ಷಾತ್ಮಕ ವ್ಯಕ್ತಿಯಾಗಿ ಇಂದು ನಮ್ಮೆಲ್ಲರ ಮುಂದೆ ನಿಲ್ಲುತ್ತಾರೆ. ಕುಸಿದಿರುವ ಆರ್ಥಿಕತೆ ಪುನಃಶ್ಚೇತನಗೊಳಿಸಲು ಕಾರ್ಮಿಕರು ವಾರಕ್ಕೆ ಆರು ದಿನ 60 ಗಂಟೆ ಅಥವಾ ಐದು ದಿನ 60 ಗಂಟೆ ದುಡಿದ ಬೇಕು ಎಂದು ಇತ್ತಿರುವ ಸಲಹೆಗಾಗಿ ಅವರ ಕುರಿತು ಮಾತನಾಡ ಬೇಕಿದೆ ಮತ್ತು ಅವಲೋಕಿಸುತ್ತೇನೆ ಬೇಕಿದೆ. ಇದರ ಹಿಂದಿರುವ ನಾರಾಯಣ ಮೂರ್ತಿಯವರ ಆರ್ಥಿಕ ಹಿತಾಸಕ್ತಿಯನ್ನು ಅರಿಯಬೇಕಿದೆ.( ಈಗಾಗಲೆ ಸರ್ಕಾರಗಳು ಒಂದು ಹೆಜ್ಜೆ ಮುಂದೆ ಹೋಗಿ ಇಡೀ ಕಾರ್ಮಿಕ ಕಾಯ್ದೆಯನ್ನೇ ಅಮಾನತ್ತು ಮಾಡುವ ನಿರ್ಧಾರಕ್ಕೆ ಬರುತ್ತಿವೆ) ಅವರ ಸಲಹೆ ಅಥವಾ ನಿರೀಕ್ಷೆಯಂತೆ ಜನತೆ ಹೆಚ್ಚು ಸಮಯ ದುಡಿದ ಮಾತ್ರಕ್ಕೆ ಕುಸಿದಿರುವ ಆರ್ಥಿಕತೆ ಚೇತರಿಕೆ ಕಾಣುತ್ತದೆಯೇ…? ಮೇಲ್ನೋಟಕ್ಕೆ ಮಾತ್ರ ನಾರಾಯಣ ಮೂರ್ತಿಯವರ ಈ ಸಲಹೆ ಸರಿಯಿರುವಂತೆ ಕಾಣುತ್ತದೆ. ಆದರೆ ವಾಸ್ತವದಲ್ಲಿ ಈಗಾಗಲೇ ಕುಸಿದಿರುವ ಆರ್ಥಿಕತೆ ಮತ್ತಷ್ಟು ಕುಸಿಯಲು ಕೋರಣವಾಗುತ್ತದೆಯೇ ಹೊರತು ಯಾವುದೇ ಕಾರಣಕ್ಕೂ ಪುನಶ್ಚೇತನ ನೀಡಲಾರದು. ಇದನ್ನು ಆರ್ಥಿಕತೆಯ ಕುರಿತಾದ ಅರಿವಿರುವವರು ಗ್ರಹಿಸಿ ಬಲ್ಲರು, ಆದರೆ ಇದು ಇಡೀ ಸಮಾಜಕ್ಕೆ ಅರ್ಥವಾಗಬೇಕೆಂದರೆ ನಾವು ಮೊದಲು ಆರ್ಥಿಕತೆ ಎಂದರೆ ಏನು ಎಂಬುದನ್ನು ಚರ್ಚಿಸಬೇಕಿದೆ. ಆರ್ಥಿಕತೆಯ ಕುರಿತು ತಿಳಿದರೇನೆ ನಾರಾಯಣ ಮೂರ್ತಿಯವರ ಸಲಹೆಯ ಹೂರಣ ಹೊರತೆಗೆಯಲಾಗುವುದು. ಹಾಗಾಗಿ ಆರ್ಥಿಕತೆಯ ಕುರಿತು ಒಂದಿಷ್ಟು ಚರ್ಚಿಸಿ ಮುಂದಡಿಯಿಡೋಣ.!

ಸಾಮಾನ್ಯವಾಗಿ ನಮ್ಮ ಜನ ಆರ್ಥಿಕತೆಯೆಂದರೆ ಅದು ನಮ್ಮ ಶ್ರೀಮಂತಿಕೆ, ಬೆಳೆಯುತ್ತಿರುವ ಆರ್ಥಿಕತೆಯೆಂದರೆ ಅದು ಬೆಳೆಯುತ್ತಿರುವ ಶ್ರೀಮಂತಿಕೆ ಎಂದು ತಿಳಿದ್ದಾರೆ. ಆದರೆ ಇದು ಒಂದು ತಪ್ಪು ಗ್ರಹಿಕೆ. ಅಥಿಕತೆಯೆಂದರೆ ನಮ್ಮಗಳ ಬ್ಯಾಂಕ್ ಬ್ಯಾಲೆನ್ಸ್ ಗಳಲ್ಲ. ಧನಿಕರ ತುಂಬಿ ತುಳುಕುತ್ತಿರುವ ತಿಜೋರಿಗಳಲ್ಲ.


ಆರ್ಥಿಕತೆ( GDP)ಯೆಂದರೆ ಜನರು ಮಾರುಕಟ್ಟೆಯಲ್ಲಿ ನಡೆಸುವ ನಿತ್ಯದ ವಹಿವಾಟು. ಖರೀದಿಯಲ್ಲಿ ತೊಡಗಿಸಿಕೊಳ್ಳುವಿಕೆ. ಮನೆ ಬಳಕೆಯ ವಸ್ತುಗಳನ್ನು ನಾವೇ ಸ್ವತಃ ತಯಾರಿಸಿಕೊಂಡರೆ ಅದು ಆರ್ಥಿಕತೆಯಾಗಲಾರದು. ಮೋರ್, ಬಿಗ್ ಬಜಾರ್, ರಿಲಯನ್ಸ್ ಫ್ರೆಶ್ ಗಳಂತಹ ಮಾಲ್ ಗಳಿಂದ ಖರೀದಿಸದೇ ನಮ್ಮ ಮನೆ ಹಿತ್ತಲು- ಓಣಿಗಳಲ್ಲಿ ಬೆಳೆದಿರುವ ಸೊಪ್ಪುಬಳಸಿದರೆ ಅದು ಆರ್ಥಿಕತೆ ಎನಿಸಿಕೊಳ್ಳಲಾರದು. ಅರ್ಥಾತ್ ಜನರು ನಡೆಸುವ ಕೊಳ್ಳುವ ಪ್ರಕ್ರಿಯೆಯನ್ನು ಆರ್ಥಿಕತೆ ಎಂದೆನಿಸಿಕೊಳ್ಳತ್ತದೆ. ಆರ್ಥಿಕತೆಯೆಂದರೆ ಅದು ನಮ್ಮ ಬ್ಯಾಂಕ್ ಬ್ಯಾಲೆನ್ಸ್, ಅಥವಾ ಶ್ರೀಮಂತರ ತುಂಬಿತುಳುಕುವ ತಿಜೋರಿಗಳಲ್ಲ. ಈ ಕೊಳ್ಳುವ ಪ್ರಕ್ರಿಯೆ ಸರಾಗವಾಗಿ ನಡೆಯ ಬೇಕೆಂದರೆ ಜನರ ಕೊಳ್ಳುವ ಶಕ್ತಿ ಚನ್ನಾಗಿರಬೇಕು. ಆದರೆ ನಾರಾಯಣ ಮೂರ್ತಿಯವರ ಸಲಹೆ ಉತ್ಪಾದನೆ ಹೆಚ್ಚಿಸುದೆಯೇ ಹೊರತು ಜನರ ಕೊಳ್ಳುವ ಶಕ್ತಿ ಹೆಚ್ಚಿಸುವುದಿಲ್ಲ. ಅವರ ಸಲಹೆಯಂತೆ ಹಾಲಿ ಇರುವ 8 ಗಂಟೆಯ ಅವಧಿಯನ್ನು 12 ಗಂಟೆಗೆ ಹೆಚ್ಚಿಸಿದರೆಂದರೆ ಪ್ರತಿ ಮೂವರಿಗೆ ಒಬ್ಬ ಕೆಲಸ ಕಳೆದುಕೊಳ್ಳುತ್ತಾನೆ. ಮೂವರು ಮಾಡಬಹುದಾದ ಕೆಲಸ ಇಬ್ಬರೇ ಮಾಡಬಲ್ಲರು, ಮೂವರು ತೆಗೆಯಬಲ್ಲ ಉತ್ಪನ್ನವನ್ನು ಇಬ್ಬರೇ ತೆಗೆಯಬಲ್ಲರು. ಅಂದರೆ 24 ಗಂಟೆಯನ್ನು ಎಂಟುಗಂಟೆಯಂತೆ ತೆಗೆದುಕೊಂಡರೆ ಅದು ಮೂರು ಮಾನವ ದಿನಗಳಾಗುತ್ತದೆ. ಅದೇ 12 ಗಂಟೆಯದ್ದಾದರೆ ಎರಡು ಮಾನವ ದಿನಗಳಾಗುತ್ತದೆ. ಅರ್ಥಾತ್ ಮೂವರಿಗೆ ಒಂದು ಮಾನವ ದಿನ ನಷ್ಟವಾಗುತ್ತದೆ. ಅಂದರೆ ಮೂರನೇ ಒಂದು ಭಾಗ ಉದ್ಯೋಗ ನಷ್ಟ. ಶೇಕಡಾವಾರು ಲೆಕ್ಕದಲ್ಲಿ ಹೇಳಬೇಕೆಂದರೆ ಪ್ರತಿಶತ 33 ರಷ್ಟು ಉದ್ಯೋಗ ನಷ್ಟವಾಗುತ್ತದೆ. ಪ್ರತಿ ನೂರ ಜನರಲ್ಲಿ 33 ಮಂದಿ ಉದ್ಯೋಗದಿಂದ ವಂಚಿಸಲ್ಪಡುತ್ತಾನೆ. ಇಷ್ಟು ದೊಡ್ಡ ಮಟ್ಟದ ಜನ ನಿರುದ್ಯೋಗಿಯಾಗುತ್ತಾರೆ ಅದು ಸಾಮಾನ್ಯ ವಿಚಾರವಲ್ಲ. ಉದ್ಯೋಗ ದಿಂದ ಹೀಗೆ ವಂಚಿತನಾಗುವುದೆಂದರೆ ಆತನನ್ನು ನೇರವಾಗಿ ಬಡತನಕ್ಕೆ ತಳ್ಳುವುದಾಗಿರುತ್ತದೆ ಮತ್ತು ಆತನ ಕೊಳ್ಳುವ ಶಕ್ತಿಯನ್ನು ಕುಂದುವುದು ಆಗಿರುತ್ತದೆ.ಜನ ಸಾಮಾನ್ಯರ ಕೊಳ್ಳುವ ಶಕ್ತಿಕುಂದಿಸುವವಂತಹ ಸಲಹೆಯೊಂದು ಆರ್ಥಿಕತೆಗೆ ಯಾವುದೇ ಕಾರಣಕ್ಕೂ ಪುನಃಶ್ಚೇತನ ನೀಡಲಾರದು ಬದಲಾಗಿ ದೇಶಿಆರ್ಥಿಕತೆ ಕತ್ತು ಹಿಸುಕುತ್ತದೆ. ಇದರ ಹೊರತಾಗಿ ಅವರು ಇಂತಹ ಸಲಹೆ ನೀಡುತ್ತಾರೆ ಎಂದರೆ ಮನೆಗೆ ಬೆಂಕಿ ಬಿದ್ದಿರುವಾಗ ಬೆನ್ನು ಕಾಯಿಸಿಕೊಳ್ಳುವ ಅವಕಾಶವಾದಿತನ. ಇಂಪೋಷಿಸ್ ನಾರಾಯಣಮೂರ್ತಿಯವರಿಗೆ ಭಾರತದ ಆರ್ಥಿಕತೆಯೊಂದಿಗೆ ಇರಬಹುದಾದ ಸಂಬಂಧ ಅರಿತರೆ ಅದರ ಸ್ಪಷ್ಟತೆ ನಿಚ್ಚಳವಾತ್ತದೆ. ಜಾಗತೀಕರಣವನ್ನು ಸಮರ್ಥವಾಗಿ ಬಳಸಿಕೊಂಡ ಅಗ್ರಗಣ್ಯರಲ್ಲಿ ನಾರಾಯಣ ಮೂರ್ತಿಯವರು. ಅವರು ಜಾಗತೀಕರಣದ ಲಾಭ ಪಡೆದೇ ಅಗರ್ಭ ಶ್ರೀಮಂತಿಕೆ ಗಳಿಸಿಕೊಂಡಿದ್ದರೂ ಅದು ಬಂದಿರುವುದು ಇಲ್ಲಿನ ಮಾರುಕಟ್ಟೆ ಅರ್ಥಾತ್ ಆರ್ಥಿಕತೆಯಿಂದಲ್ಲ. ಇಲ್ಲಿಯ ಜನರ ಶ್ರಮ ದೋಚುವುದರ ಮೂಲಕ. ಇಂತಹವರು ನೀಡುವ ಸಲಹೆಗಳೆಲ್ಲವೂ ಕಾರ್ಮಿಕರು ಅಗ್ಗದ ದರದಲ್ಲಿ ದೊರೆಯುವಂತೆ ಮಾಡುವುದು ಆಗಿರುತ್ತದೆ. ಈಗಾಗಲೇ ದೇಶದ ಸಂಪತ್ತೆಲ್ಲವೂ ಶ್ರೀಮಂತರ ಪಾಲಾಗಿ ದುಡಿಮೆಯೊಂದೆ ಬಡವರ ಆಸ್ತಿಯಾಗಿರುವಾಗ, ಅದಕ್ಕೂ ಸಂಚಕಾರ ತರುತ್ತಾರೆಯೆಂದರೆ ಇದು ಕ್ರೌರ್ಯದ ಪರಮಾವಧಿಯಾಗುತ್ತದೆ…?

ಸದ್ಯ ಭಾರತದ ಆರ್ಥಿಕತೆ ಪುನಃಶ್ಚೇತನ ಕಾಣಬೇಕೆಂದರೆ ಎಲ್ಲರಿಗೂ ಉದ್ಯೋಗ ದೊರೆಯುವಂತೆ ಮಾಡುವುದು ಮತ್ತು ಆ ಉದ್ಯೋಗದ ಭದ್ರತೆ ನೀಡುವುದು ಆಗಿದೆ. ಉದ್ಯೋಗ ಭದ್ರತೆ ಇದ್ದು ನಿಶ್ಚಿತ ಆದಾಯವಿದ್ದರೆ ಅಲ್ಲಿನ ಆರ್ಥಿಕತೆಯಲ್ಲಿ ಸ್ಥಿರತೆ ಇರುತ್ತದೆ. ಇದನ್ನು ಮಾಡದೆ ದುಡಿಮೆಯ ಅವಧಿ ಹೆಚ್ಚಿಸಿ ಉತ್ಪಾದನೆ ಹೆಚ್ಚಿರುವುದರಿಂದಾಗಲಿ ಅಥವಾ ತುಂಬಬಹುದಾದ ನಾರಾಯಣ ಮೂರ್ತಿಯವರ ತಿಜೋರಿಗಳಿಂದ ಆರ್ಥಿಕತೆ ಬೆಳೆಯಲಾರದು. ಬದಲಾಗಿ ಹಣದುಬ್ಬರ ತರುತ್ತದೆ. ಹೆಚ್ಚಬಹುದಾದ ಉತ್ಪಾದನೆಗೆ ತಕ್ಕಂತೆ ಗ್ರಾಹಕ ಶಕ್ತಿ ವೃದ್ದಿಯಾಗದಿದ್ದರೆ ಮಾರುಕಟ್ಟೆಯಲ್ಲಿ ಹಿಂಜರಿಕೆ ಉಂಟಾಗುತ್ತದೆ. ಅನಿವಾರ್ಯವಾಗಿ ಉತ್ಪಾದನೆ ಸ್ಥಗಿತ ಗೊಳ್ಳುತ್ತದೆ. ಪರಿಣಾಮ ಮತ್ತೆ ಉದ್ಯೋಗ ನಷ್ಟ. ನಾರಾಯಣ ಮೂರ್ತಿಯವರ ಸಲಹೆ ಭವಿಷ್ಯದಲ್ಲಿ ಇದನ್ನೇ ತರುವುದು.ಒಂದು ವೇಳೆ ಅವರ ಮಾರ್ಗದರ್ಶನ ಅನುಷ್ಟಾನಗೊಂಡರೆ ದೇಶವನ್ನು ಗಂಡಾಂತರದೆಡೆಗೆ ಸಾಗುವುದು ನಿಶ್ಚಿತ.

– ಆಲುವಳ್ಳಿ ಆರ್ ಅಣ್ಣಪ್ಪ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights