ಇವಿಎಂ ಹಟಾವೋ; ದೇಶ್‌ ಬಚಾವೋ’ : ಓಂಕಾರ್ ಸಿಂಗ್ ದಿಲ್ಹಾನ್ ಅಭಿಯಾನ

‘ಇವಿಎಂ ಹಟಾವೋ; ದೇಶ್‌ ಬಚಾವೋ’ ಎಂಬ ಆಗ್ರಹದೊಂದಿಗೆ ಉತ್ತರಾಖಂಡ್ ರಾಜ್ಯದ ರುದ್ರಪುರದಿಂದ ಪಾದಯಾತ್ರೆ ಮೂಲಕ ಹೊರಟಿರುವ ಸಾಮಾಜಿಕ ಕಾರ್ಯಕರ್ತ ಓಂಕಾರ್‌
ಸಿಂಗ್‌ ದಿಲ್ಹಾನ್‌ ಗುರುವಾರ ನಗರಕ್ಕೆ ಆಗಮಿಸಿದ್ದಾರೆ. ಸುಮಾರು 6500 ಕಿ.ಮೀ. ಪಾದಯಾತ್ರೆ ಹಮ್ಮಿಕೊಂಡಿರುವ ಸಿಂಗ್ ಅವರು ಈಗಾಗಲೇ 100 ದಿನಗಳನ್ನು ಪೂರೈಸಿ 3000 ಕಿ.ಮೀ. ದೂರ ಕ್ರಮಿಸಿ ಜನರಲ್ಲಿ ಇವಿಎಂ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿದ್ದಾರೆ.

ಆಗಸ್ಟ್ 18ರಂದು ಉತ್ತರಾಖಂಡ್ ರಾಜ್ಯದ ರುದ್ರಪುರದಿಂದ ಪಾದಯಾತ್ರೆ ಆರಂಭಿಸಿರುವ ಅವರು, ಈಗಾಗಲೇ ಉತ್ತರಾಖಂಡ, ದೆಹಲಿ, ಉತ್ತರ ಪ್ರದೇಶ, ಗುಜರಾತ, ರಾಜಸ್ತಾನ, ಮಹಾರಾಷ್ಟ್ರ  ರಾಜ್ಯಗಳಲ್ಲಿ ಕ್ರಮಿಸಿ ಇದೀಗ ಕರ್ನಾಟಕದ ಬೆಂಗಳೂರಿಗೆ ಆಗಮಿಸಿದ್ದಾರೆ. ಬೆಂಗಳೂರಿನಲ್ಲಿ ಇವಿಎಂ ಬಗ್ಗೆ ಜಾಗೃತಿ ಮೂಡಿಸಿ ಇಲ್ಲಿಂದ ತಮಿಳುನಾಡು, ಆಂಧ್ರಪ್ರದೇಶ, ಒಡಿಸ್ಸಾ, ಅಸ್ಸಾಂ, ಪಶ್ಚಿಮಬಂಗಾಳ, ಬಿಹಾರ, ಉತ್ತರಾಖಂಡ ಮೂಲಕ ದೆಹಲಿಗೆ ತೆರಳಿ ಅಲ್ಲಿ ತಮ್ಮ ಪಾದಯಾತ್ರೆ ಮುಕ್ತಾಯಗೊಳಿಸಲಿದ್ದಾರೆ.

ಬೆಂಗಳೂರಿಗೆ ಆಗಮಿಸಿದ ದಿಲ್ಹಾನ್ ಅವರನ್ನು ಸಾಮಾಜಿಕ ಕಾರ್ಯಕರ್ತರು, ಎನ್‌ಜಿಒಗಳು, ಮಾನವ ಹಕ್ಕುಗಳ ಕಾರ್ಯಕರ್ತರು ಸ್ವಾಗತಿಸಿ ಬರಮಾಡಿಕೊಂಡರು. ಈ ವೇಳೆ ಮಾತನಾಡಿದ ಸಿಂಗ್, ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿದ್ಯುನ್ಮಾನ ಮತಯಂತ್ರ (ಇವಿಎಂ) ಸರಿ ಹೊಂದುವುದಿಲ್ಲ. ದೊಡ್ಡ ದೊಡ್ಡ ಶ್ರೀಮಂತ ಹಾಗೂ ಮುಂದುವರಿದ ರಾಷ್ಟ್ರಗಳೇ ಈಗ ಇವಿಎಂ ಕೈಬಿಟ್ಟು ಹಳೆಯ ಪದ್ಧತಿಗೆ ಮರಳಿವೆ. ಆದ್ದರಿಂದ ನಮ್ಮ ದೇಶದಲ್ಲಿ ಇವಿಎಂ ಕೈಬಿಡಬೇಕು ಎಂದು ಚುನಾವಣಾ ಆಯೋಗವನ್ನು ಒತ್ತಾಯಿಸಿದರು.

ಈ ಹಿಂದೆ ಬ್ಯಾಲೆಟ್‌ ವೊಟಿಂಗ್‌ ವ್ಯವಸ್ಥೆ  ದೇಶದಲ್ಲಿ ಜಾರಿಯಲ್ಲಿತ್ತು. ಆಗ ಜನರಿಗೆ ಯಾವುದೇ ಸಂಶಯವಿರುತ್ತಿರಲಿಲ್ಲ. ಅದರಲ್ಲಿ ಅಕ್ರಮವೆಸಗಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಇವಿಎಂನಲ್ಲಿ ಅಕ್ರಮವೆಸಗಲು ಸಾಧ್ಯವಿದೆ ಎಂಬುದು ಹಲವು ತಜ್ಞರ ಅಭಿಪ್ರಾಯವಾಗಿದೆ. ಆದ್ದರಿಂದ ಜನರ ಸಂಶಯ ನಿವಾರಣೆಗಾಗಿ ಹಳೆಯ ಪದ್ಧತಿಯನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು.

ಮೋದಿ ನೇತೃತ್ವದ ಎನ್‌ಡಿಯ ಸರ್ಕಾರದಲ್ಲಿ ಯಾವುದೇ ಜನಪರ ಕೆಲಸಗಳು ಆಗದೇ ಇದಿದ್ದರೂ ಇವಿಎಂ ದುರ್ಬಳಕೆಯಿಂದ ಬಿಜೆಪಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಹುಮತ ಪಡೆದು, ಅಧಿಕಾರಕ್ಕೆ ಬರುವಂತೆ ಆಯಿತು. ವಿದ್ಯುನ್ಮಾನ ಮತಯಂತ್ರ ಬೇಡವೆಂದು ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಹಿರಿಯ ನಾಯಕ ಲಾಲ್‌ಕೃಷ್ಣ ಅಡ್ವಾಣಿ, ಸುಬ್ರಮಣಿಯನ್‌
ಸ್ವಾಮಿ ಅವರೇ ಆಕ್ಷೇಪ ಎತ್ತಿದ್ದರು. ಆದರೆ ಈಗ ಈ ಬಗ್ಗೆ  ಮೌನವಹಿಸಿದ್ದಾರೆ ಎಂದು ಅವರು ದೂರಿದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights