ಉಚಿತ ಕೋವಿಡ್-19 ಪರೀಕ್ಷೆ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ದೆಹಲಿ ವೈದ್ಯ
ಸರ್ಕಾರಿ ಆಗಲಿ ಖಾಸಗಿ ಪರೀಕ್ಷಾಲಯಗಳು ಆಗಲಿ ಕೋವಿಡ್-19 ಪರೀಕ್ಷೆಗಳನ್ನು ಉಚಿತವಾಗಿ ನಡೆಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಆದೇಶಿಸಿದ ಕೆಲವೇ ದಿನಗಳಲ್ಲಿ ಈಗ ದೆಹಲಿ ಮೂಲದ ವೈದ್ಯರು ಈ ಆದೇಶಕ್ಕೆ ತಿದ್ದುಪಡಿ ತರುವಂತೆ ಮತ್ತೆ ಕೋರ್ಟ್ ಮೊರೆ ಹೋಗಿದ್ದಾರೆ. ಈ ಆದೇಶ ಖಾಸಗಿ ಪರೀಕ್ಷಾಲಯಗಳ ಮೇಲೆ ಹೊರೆ ಹೊರಿಸುತ್ತದೆ ಮತ್ತು ಕೋವಿಡ್-19 ವ್ಯಾಪಕವಾಗಿ ಹರಡುತ್ತಿರುವ ಸಮಯದಲ್ಲಿ ಹೆಚ್ಚೆಚ್ಚು ಪರೀಕ್ಷೆ ಮಾಡಬೇಕಿದ್ದು ಈ ಆದೇಶ ಖಾಸಗಿ ಪರೀಕ್ಷಾಲಯಗಳಿಗೆ ಪ್ರೋತ್ಸಾಹ ಇಲ್ಲದಂತೆ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.
4500 ರೂ ಗರಿಷ್ಠ ದರಕ್ಕೆ ಹೆಚ್ಚಾಗದಂತೆ ಕೋವಿಡ್-19 ಪರೀಕ್ಷೆಗಳನ್ನು ಖಾಸಗಿ ಪರೀಕ್ಷಾಲಯಗಳು ನಡೆಸಬಹುದು ಎಂದು ಮಾರ್ಚ್ 17 ರಂದು ಐ ಸಿ ಎಂ ಆರ್ ಸೂಚನೆ ನೀಡಿತ್ತು. ಆದರೆ ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಉಚಿತವಾಗಿ ಪರೀಕ್ಷೆ ನಡೆಸಬೇಕೆಂದು ತಿಳಿಸಿ ಅದರ ವೆಚ್ಚವನ್ನು ತುರ್ತಾಗಿ ಸರ್ಕಾರ ಭರಿಸುವುದಾಗಿ ಹೇಳಿತ್ತು.
ಆದರೆ ಏಪ್ರಿಲ್ 8 ರಂದು ಇದನ್ನು ಪರಿಗಣಿಸಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಈ ವೆಚ್ಚವನ್ನು ಭರಿಸಲು ಭಾರತದ ಬಹುಸಂಖ್ಯಾತ ಜನರಿಗೆ ಸಾಧ್ಯವಿಲ್ಲ ಎಂದು ಹೇಳಿ ಎಲ್ಲಾ ಪರೀಕ್ಷೆಗಳು ಉಚಿತವಾಗಿ ನಡೆಸಬೇಕು ಎಂದು ಆದೆಶಿಸಿತ್ತು.
ಈಗ ದ ಹಿಂದೂ ವರದಿ ಮಾಡಿರುವಂತೆ ಕೌಶಲ್ ಕಾಂತ್ ಮಿಶ್ರ ಮತ್ತು ಅವರ ವಕೀಲರುಗಳಾದ ಗೋಪಾಲ್ ಶಂಕರನಾರಾಯಣನ್ ಮತ್ತು ಪೂಜ ಧರ್ ಅವರು ಐ ಸಿ ಎಂ ಆರ್ ಶುಲ್ಕದಂತೆಯೇ ಪರೀಕ್ಷೆ ನಡೆಸಲು ಅವಕಾಶ ನೀಡಲು ಕೋರ್ಟ್ ನನ್ನು ಕೋರಿವೆ. ಖಾಸಗಿ ಪರೀಕ್ಷಾಲಯಗಳು ನಡೆಸುವ ಪರೀಕ್ಷೆಗಳ ವೆಚ್ಚವನ್ನು ಯಾರು ಭರಿಸಬೇಕು ಎಂದು ಕೋರ್ಟ್ ಸ್ಪಷ್ಟನೆ ನೀಡಿಲ್ಲವಾದ್ದರಿಂದ “ಖಾಸಗಿ ಪರೀಕ್ಷಾಲಯಗಳಿಗೆ ಸರ್ಕಾರ ತುರ್ತು ಶುಲ್ಕ ಭರಿಸದೆ ಇದ್ದರೆ, ಅವುಗಳು ಕೋವಿಡ್-19 ಪರೀಕ್ಷೆಗಳನ್ನು ನಿಲ್ಲಿಸುವ ಅಪಾಯ ಇದೆ. ಇದು ಭಾರತದಾದ್ಯಂತ ಗೊತ್ತಿಲ್ಲದೇ ಹರಡಬಹುದಾದ ಈ ಸಾಂಕ್ರಾಮಿಕದ ಬಿಕ್ಕಟ್ಟಿಗೆ ನೇರವಾಗಿ ಇನ್ನಷ್ಟು ಅಪಾಯ ಒಡ್ಡುತ್ತದೆ” ಎಂದು ಅರ್ಜಿಯಲ್ಲಿ ಹೇಳಿದ್ದಾರೆ.
ಸರ್ಕಾರ ಮಧ್ಯ ಪ್ರವೇಶಿಸಿ ಪರೀಕ್ಷೆಯ ವೆಚ್ಚದ ಬಗ್ಗೆ ಇರುವ ಗೊಂದಲಗಳನ್ನು ನಿವಾರಿಸಬೇಕು ಎಂದು ಹಲವು ಖಾಸಗಿ ಪರೀಕ್ಷಾಲಯಗಳು ನಿರೀಕ್ಷಿಸುತ್ತಿವೆ.

