“ಕಠಿಣ ನಿರ್ಧಾರಗಳಿಂದ ಅನಾನುಕೂಲಗಳಾಗಿವೆ ಕ್ಷಮಿಸಿ”: ಮನ್ ಕಿ ಬಾತ್‌ನಲ್ಲಿ ಮೋದಿ

ಮೂರು ವಾರಗಳ ಲಾಕ್‌ಡೌನ್‌ಗೆ ಏಳು ದಿನಗಳು ಕಳೆದಿವೆ. ಸರ್ಕಾರವು ತೆಗೆದುಕೊಂಡ “ಕಠಿಣ ನಿರ್ಧಾರ”ದಿಂದ ಅನಾನುಕೂಲಗಳು ಆಗಿವೆ ಅದಕ್ಕಾಗಿ ರಾಷ್ಟ್ರದ ಜನರಲ್ಲಿ ಕ್ಷಮೆಯಾಚಿಸುತ್ತೇನೆ ಎಂದು ಇಂದಿನ ಮನ್‌ ಕಿ ಬಾತ್‌ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಕ್ಷಮೆಯಾಚಿಸಿದರು.

ಕೊವಿಡ್‌-19 ವೈರಸ್‌ ಸೋಂಕಿತರ ಸಂಖ್ಯೆ 979 ಕ್ಕೆ ಏರಿದ್ದು, 61 ಹೊಸ ಪ್ರಕರಣಗಳು ಬರುತ್ತಿವೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. “ಸಾಮಾನ್ಯ ಜನರಿಗೆ ಅನಾನುಕೂಲತೆಯನ್ನುಂಟು ಮಾಡಿದ ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿದ್ದಕ್ಕಾಗಿ ನಾನು ರಾಷ್ಟ್ರಕ್ಕೆ ಕ್ಷಮೆಯಾಚಿಸುತ್ತೇನೆ. ಆದರೆ ನಿಮ್ಮ ಆರೋಗ್ಯ ರಕ್ಷಣೆಗಾಗಿ ನಾನು ಈ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿತ್ತು” ಎಂದು ಅವರು ಹೇಳಿದರು.

ನಮ್ಮ ಮುಂದೆ ಇರುವ ಏಕೈಕ ಪರಿಹಾರವೆಂದರೆ ಲಾಕ್‌ಡೌನ್. ಅನೇಕ ಜನರು ಇನ್ನೂ ಲಾಕ್‌ಡೌನ್ ಅನ್ನು ನಿರಾಕರಿಸುತ್ತಿದ್ದಾರೆ… ಲಾಕ್‌ಡೌನ್ ಅನ್ನು ಉಲ್ಲಂಘಿಸುತ್ತಿರುವವರು “ತಮ್ಮ ಜೀವನದೊಂದಿಗೆ ಆಡುತ್ತಿದ್ದಾರೆ”… ಇದು ದುಃಖಕರವಾಗಿದೆ… ಪ್ರಪಂಚದಾದ್ಯಂತ ಅನೇಕ ಜನರು ಇದೇ ತಪ್ಪನ್ನು ಮಾಡಿದ್ದಾರೆ,” ಎಂದು ಹೇಳಿದರು

ಮೋದಿಯವರ ಲಾಕ್‌ಡೌನ್ ಉದ್ದೇಶ ಸರಿಯಾಗಿದೆ ಎಂಬುದೇ ಎಲ್ಲರ ಅಭಿಪ್ರಾಯ. ಆದರೆ, ಲಾಕ್‌ಡೌನ್‌ಗೂ ಮುನ್ನ ಅವರು ದೇಶದ ಪ್ರಜೆಗಳ ಅನುಕೂಲಕ್ಕಾಗಿ ಅಗತ್ಯವಿದ್ದ ಯಾವುದೇ ಕ್ರಮಗಳನ್ನು ಯೋಚಿಸದೇ ಇರುವುದು ತಪ್ಪು ಎಂಬುದಷ್ಟೇ ಆರೋಪ. ಇಂದಿಗೂ ಸಾವಿರಾರು ಕೂಲಿ ಕಾರ್ಮಿಕರು, ಬಡವರು ಆಹಾರ-ವಸತಿ ಇಲ್ಲದೆ ಪೇಚಾಡುತ್ತಿದ್ದಾರೆ. ಕೆಲವು ತಮ್ಮ ಊರು ತಲುಪಲು ನಡೆದುಕೊಂಡೇ ಸಾಗುತ್ತಿದ್ದಾರೆ. ಅವರಿಗೂ ಆಹಾರ ಸಿಗುತ್ತಿಲ್ಲ. ಅಂತಹ ಜನರಿಗಾಗಿ ಯಾವುದೇ ಯೋಜನೆಯೂ ಇಲ್ಲದೆ. ಕೇವಲ ಜನರಲ್ಲಿ ಕ್ಷಮೆ ಕೇಳುವುದರಿಂದ ಜನರ ಸಮಸ್ಯೆಗಳು ಪರಿಹಾರವಾಗುವುದಿಲ್ಲ.

ಬೀದಿಯಲ್ಲಿರುವ ನಿರ್ಗತಿಕರಿಗೆ, ನಡೆದೇ ಸಾಗುತ್ತಿರುವ ಬಡವರಿಗೆ ಈಗಲಾದರೂ ಆಹಾರ, ವಾಹನ ಸೌಲಭ್ಯ ಕಲ್ಪಿಸಿ, ಜನರು ನೆಮ್ಮದಿಯಿಂದ ಊರು ಸೇರುವಂತೆ ಮಾಡಿದರೆ ಮಾತ್ರ ಮೋದಿಯವರ ಈ ನಿರ್ಧಾರಕ್ಕೂ, ಕ್ಷಮೆಯಾಚನೆಗೂ ಅರ್ಥ ಸಿಗುವುದು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights