ಕಾಂಗ್ರೆಸ್ ಓಟ್ ಬ್ಯಾಂಕ್ ಭದ್ರತೆಗೆ ಸಿಎಎ ಕಾಯ್ದೆ ವಿರೋಧಿಸುತ್ತಿದೆ – ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್
ಪೌರತ್ವ ತಿದ್ದುಪರಿ ಕಾಯ್ದೆ ವಿಚಾರದ ಕುರಿತು ಪರ ಮತ್ತು ವಿರೋಧಿ ಹೋರಾಟ ನಡೆಯುತ್ತಿದೆ. ಈ ವಿಚಾರದಲ್ಲಿ ವಿರೋಧ ಮಾಡುವ ಪ್ರಮೇಯವೇ ಬರಬಾರದು. ನೆಹರು ಪ್ರಧಾನಿಯಾಗಿದ್ದ ಅವಧಿಯಲ್ಲೇ ಈ ಕಾಯ್ದೆ ಜಾರಿಗೆ ಬಂದಿತ್ತು. ಈ ಕಾಯ್ದೆ ಈಗಾಗಲೇ ನಾಲ್ಕು ಬಾರಿ ತಿದ್ದುಪಡಿ ಆಗಿದೆ ಎಂದು ಮೈಸೂರಿನಲ್ಲಿ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಹೇಳಿದ್ದಾರೆ.
ಆಗ ಕಾಯ್ದೆ ತಿದ್ದುಪಡಿ ಆದಾಗ ಯಾರೂ ವಿರೋಧ ಮಾಡಲಿಲ್ಲ. ಇಂದಿರಾಗಾಂಧಿ, ಪಿ.ವಿ ನರಸಿಂಹರಾವ್ ಮನಮೋಹನ್ ಸಿಂಗ್ ಕೂಡ ಸಿಎಎ ಕಾಯ್ದೆಯನ್ನು ಸ್ವಾಗತಿಸಿದ್ದರು. ಈಗ ಇದನ್ನು ವಿರೋಧಿಸುತ್ತಿರುವ ಕಾಂಗ್ರೆಸ್ ಪಕ್ಷ ದ್ವಿಮುಖ ನೀತಿ ಅನುಸರಿಸುತ್ತಿದೆ. ಹಾಗಾದರೆ ಬೇರೆ ದೇಶಗಳಿಂದ ಬರುವ ಎಲ್ಲರಿಗೂ ಪೌರತ್ವ ನೀಡಬೇಕೇ?.
ಕಾಂಗ್ರೆಸ್ನ ಎರಡು ನಾಲಿಗೆ ನೀತಿಯಿಂದ CAAಗೆ ವಿರೋಧ ವ್ಯಕ್ತಪಡಿಸುತ್ತಿದೆ. ತಮ್ಮ ಓಟ್ ಬ್ಯಾಂಕ್ ಭದ್ರಪಡಿಸಿಕೊಳ್ಳುವ ಸಲುವಾಗಿ ಸಿಎಎ ಕಾಯ್ದೆಯನ್ನು ವಿರೋಧಿಸುತ್ತಿವೆ. ಕಾಯ್ದೆಗೆ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಒಪ್ಪಿಗೆ ದೊರೆತಿದೆ. ಕಾಂಗ್ರೆಸ್ ಪಕ್ಷ ರಾಜಕೀಯ ದುರುದ್ದೇಶದಿಂದ ಈ ಕಾಯ್ದೆಯನ್ನು ವಿರೋಧಿಸುತ್ತಿದೆ. ಈ ಮೊದಲು ಸಿಪಿಐ, ಸಿಪಿಎಂ ಪಕ್ಷಗಳು ಪೌರತ್ವ ಕಾಯ್ದೆಯ ಪರವಾಗಿದ್ದವು. ಆದರೀಗ ಅವು ಕೂಡ ವಿರೋಧಿಸುತ್ತಿವೆ. ಈ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಲು ಬಿಜೆಪಿ ಅಭಿಯಾನ ನಡೆಸಲಿದೆ. ದೇಶಾಧ್ಯಾಂತ 3 ಕೋಟಿ ಮನೆಗಳಿಗೆ ಬಿಜೆಪಿ ಹೋಗಲಿದೆ. ಬಿಜೆಪಿ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಜನರ ಮನೆಗೆ ತೆರಳಿ ಮನವರಿಕೆ ಮಾಡಿಕೊಡಲಿದ್ದಾರೆ.
ಕರ್ನಾಟಕದಲ್ಲು 30 ಲಕ್ಷ ಮನೆಗಳಿಗೆ ಜಾಗೃತಿ ಕರಪತ್ರ ಹಂಚುತ್ತೇವೆ. ಕಾಂಗ್ರೆಸ್ ಕೊಡದೆ ಇದ್ದದ್ದನ್ನು ಇದೀಗ ಮೋದಿ ಕೊಟ್ಟಿದ್ದಾರೆ. ಈ ಬಗ್ಗೆ ರಾಜ್ಯಾದ್ಯಂತ 500 ಸಂವಾದ ನಡೆಸುತ್ತೇವೆ. ಇದರ ಜೊತೆಗೆ ತಾಲ್ಲೂಕು, ಜಿಲ್ಲಾ ಮಟ್ಟದಲ್ಲಿ ಸಮಾವೇಶ, ರ್ಯಾಲಿ ಆಯೋಜನೆ ಮೂಲಕ ಜನರಿಗೆ ಮನವರಿಕೆ ಮಾಡಿಕೊಡುತ್ತೇವೆ. ಇದಕ್ಕಾಗಿ ಜನವರಿ 1ರಿಂದ 15ರವರೆಗೆ ದೇಶಾದ್ಯಂತ ಅಭಿಯಾನ ನಡೆಯಲಿದೆ. ಇದೇ ರೀತಿ ರಾಜ್ಯದಲ್ಲೂ ನಾಳೆಯಿಂದ 15ರವರೆಗೆ ಬಿಜೆಪಿಯಿಂದ ಅಭಿಯಾನ ನಡೆಯಲಿದೆ. ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರನ್ನು ಓಟ್ ಬ್ಯಾಂಕ್ ಆಗಿ ಮಾತ್ರ ನೋಡುತ್ತಿದೆ. ಹಾಗಾಗಿ ಅಲ್ಪಸಂಖ್ಯಾತರು ಕಾಂಗ್ರೆಸ್ ನ ಓಟ್ ಬ್ಯಾಂಕ್ ಆಗುವ ಬದಲು ಭಾರತೀಯರಾಗಿ ಇದನ್ನು ಅರ್ಥ ಮಾಡಿಕೊಳ್ಳಬೇಕು.
ಪೌರತ್ವ ತಿದ್ದುಪಡಿ ಕಾಯ್ದೆ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಆಫ್ಘಾನಿಸ್ಥಾನದ ಮುಸ್ಲಿಮರಿಗೆ ಅನ್ವಯಿಸುವುದೇ ಇಲ್ಲ. ಇದು ಮುಸ್ಲಿಂರನ್ನು ಹೊರತುಪಡಿಸಿ ಇತರ ಧರ್ಮಗಳ ಜನರಿಗೆ ಇರುವ ಕಾಯ್ದೆ. ಭಾರತದಲ್ಲಿರುವ ಶರಣಾರ್ಥಿಗಳಿಗೆ ಮಾತ್ರ ಅನ್ವಯವಾಗಲಿದೆ. ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಾದರೇ ದೇಶದಲ್ಲಿ ನೆಲೆಸಿರುವ 130ಕೋಟಿ ಜನರ ಪೈಕಿ ಒಬ್ಬರನ್ನು ದೇಶದಿಂದ ಹೊರಹಾಕಲು ಸಾಧ್ಯವಿಲ್ಲ. ಈ ಬಗ್ಗೆ ಜನಜಾಗೃತಿ ಮೂಡಿಸುವಂತೆ ಯಾವುದೇ ಶಿಕ್ಷಣ ಸಂಸ್ಥೆಗಳಿಗೂ ಸರ್ಕಾರ ಆದೇಶ ನೀಡುವುದಿಲ್ಲ. ಆದ್ರೆ ಕೆಲವು ನಗರ ನಕ್ಸಲರು ಬೇಕಂತಲೆ ವಿರೋಧ ಮಾಡ್ತಿದ್ದಾರೆ. ಉದ್ದೇಶಪೂರಕವಾಗಿ ಸಮಾಜದ ಶಾಂತಿ ಕದಡಲು ಪ್ರಯತ್ನಿಸುವವರು ನಗರ ನಕ್ಸಲರು. ಕಾಯ್ದೆ ವಿರೋಧಿಸಿ ಪ್ರತಿಭಟನೆ ಎಬಿವಿಪಿ ಸಾರ್ವಜನಿಕ ಆಸ್ತಿ ಮಾಡಿಲ್ಲ. ಎಬಿವಿಪಿಗೆ ಆ ಸಂಸ್ಕೃತಿ ಇಲ್ಲ ಎಂದಿದ್ದಾರೆ.

