ಕೊರೊನಾ ವಿರುದ್ಧ ಗೆದ್ದ ಕೊಡಗು; ಸೋಂಕಿನ ವಿರುದ್ಧ ಹೋರಾಟವನ್ನು ಮುನ್ನಡೆಸಿದ ಅನ್ನೀಸ್ ಯಾರು ಗೊತ್ತೇ?
ಭಾರತ ದೇಶದ್ಯಂತ ಕೊರೊನಾ ವೈರಸ್ ಆಕ್ರಮಣಕಾರಿಯಾಗಿ ಹರಡುತ್ತಿದೆ. ಬೆರಳೆಣಿಕೆಯ ಒಂದೆರಡು ರಾಜ್ಯಗಳನ್ನು ಬಿಟ್ಟರೆ ಎಲ್ಲಾ ರಾಜ್ಯಗಳು ಕೊರೊನಾ ಸೋಂಕನ್ನು ನಿಯಂತ್ರಿಸಲಾಗದೆ ಪರದಾಡುತ್ತಿವೆ. ಅದರಲ್ಲಿ ಕರ್ನಾಟಕವೂ ಒಂದು. ಆದರೆ, ಕರ್ನಾಕಟದ ಕೊಡಗು ಜಿಲ್ಲೆ ಮಾತ್ರ ಸೋಂಕಿನ ಬಾದೆಯಿಂದ ಮುಕ್ತವಾಗಿ ಸಂತೋಷದ ನಗೆ ಬೀರುತ್ತಿದೆ.
ರಾಜ್ಯದಲ್ಲಿ ಕೊರೊನಾ ಸೋಂಕು ದಿನೇದಿನೇ ಹೆಚ್ಚುತ್ತಿರುವ ಸಂದರ್ಭದಲ್ಲಿಯೂ ಕೊಡಗಿನಲ್ಲಿ ಕಳೆದ ಐದು ವಾರಗಳಿಂದ ಒಂದೇ ಒಂದು ಹೊಸ ಕೊರೊನಾ ಸೋಂಕಿತ ಪ್ರಕರಣಗಳು ದಾಖಲಾಗಿಲ್ಲ. ಕೊಡಗನ್ನು ಕೊರೊನಾ ಸೋಂಕಿನಿಂದ ದೂರವಿಡಲು ಶ್ರಮಿಸುತ್ತಿರುವವರು ಕೇರಳ ಮೂಲದ ಅನ್ನೀಸ್ ಕಣ್ಮನಿ ಜಾಯ್.

ಕೇರಳದ ಬಡ ರೈತನ ಮಗಳಾಗಿದ್ದ ಅನ್ನೀಸ್ ಅವರು ತಮ್ಮ ಶಾಲಾ ದಿನಗಳಲ್ಲಿ ಪುಸ್ತಕಗಳನ್ನೂ ಖರೀದಿಸಲಾಗದಷ್ಟು ಬಡತನದಲ್ಲಿ ಬೆಳೆದವರು. ಆದರೆ, ಅವರು ಈಗ ಕೊಡಗು ಜಿಲ್ಲೆಯ ಜಿಲ್ಲಾಧಿಕಾರಿ. ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಕೊಡಗು ಜಿಲ್ಲೆಯನ್ನು ಮುನ್ನಡೆಸುತ್ತಿರುವ ಇವರ ಪ್ರಯತ್ನಕ್ಕೆ ಎಂದು ಸಾಮಾಜಿಕ ಜಾಲತಾಣಿಗರು ಪ್ರಶಂಸೆಯ ಮಳೆಗರೆಯುತ್ತಿದ್ದಾರೆ.
ಕೊರೊನಾ ನಿಯಂತ್ರಣದಲ್ಲಿ ಕೊಡಗಿನಲ್ಲಿನ ಅವರ ಪ್ರಯತ್ನ ರಾಷ್ಟ್ರಮಟ್ಟದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ. ಇಡೀ ದೇಶದಲ್ಲಿ ಕೊರೊನಾ ಮುಕ್ತವಾಗಿರುವ ಕೆಲವೇ ಜಿಲ್ಲೆಗಳಲ್ಲಿ ಕೊಡಗು ಕೂಡ ಒಂದು. ಕರ್ನಾಟಕವೂ ಸೇರಿದಂತೆ ಇತರ ರಾಜ್ಯಗಳಲ್ಲಿ ಕೊರೊನಾ ಸೋಂಕಿತರ ಪ್ರಮಾಣ ಗಗನಕ್ಕೇರುತ್ತಿರುವ ಸಂದರ್ಭದಲ್ಲಿ, ಕೊಡಗು ಜಿಲ್ಲೆಯಲ್ಲಿ ಕಳೆದ 28 ದಿನಗಳಿಂದ ಒಂದೂ ಕೊರೊನಾ ಪ್ರಕರಣ ಪತ್ತೆಯಾಗಿಲ್ಲ.
Covid19india.org ನಲ್ಲಿ ನವೀಕರಿಸಿದ ಸಂಖ್ಯೆಗಳ ಪ್ರಕಾರ, ಇಲ್ಲಿಯವರೆಗೆ ಕೊಡಗಿನಲ್ಲಿ ಮೂರು ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಮೂವರಲ್ಲಿ ಎರಡು ಪ್ರಕರಣಗಳು ಸಕ್ರಿಯವಾಗಿವೆ ಮತ್ತು ಒಬ್ಬರು ಗುಣಮುಖರಾಗಿದ್ದಾರೆ.

ದೇಶಾದ್ಯಂತ ಲಾಕ್‌ಡೌನ್ ಸಡಿಲಗೊಳಿಸಿ, ಅನೇಕ ಪ್ರವಾಸಿ ತಾಣಗಳನ್ನು ತೆರೆಯಲಾಗುತ್ತಿದೆ. ಆದರೆ, ಕೊಡಗಿನಲ್ಲಿ ಪ್ರವಾಸಿ ತಾಣಗಳನ್ನು ಇನ್ನೂ ಕೆಲವು ದಿನಗಳ ವರೆಗೆ ತೆರೆಯುವುದಿಲ್ಲ ಎಂದು ಅನ್ನೀಸ್ ಘೋಷಿಸಿದ್ದಾರೆ.
ನೊಂದಾಯಿಸಿಕೊಂಡಿರುವ ಹೋಂಸ್ಟೇಗಳನ್ನು ಮಾತ್ರ ತೆರೆಯಲು ಅನುಮತಿ ನೀಡಲಾಗಿದೆ. ಆದರೆ ಹೋಟೆಲ್‌ಗಳು ಮತ್ತು ರೆಸಾರ್ಟ್‌ಗಳಲ್ಲಿ ಬರುವ ಪ್ರವಾಸಗಳ ಪ್ರಯಾಣದ ಇತಿಹಾಸ, ಅವರ ವಿವರಗಳುಳ್ಳ ದಾಖಲೆಗಳನ್ನು ಪಡೆದುಕೊಳ್ಳಬೇಕು ಹಾಗೂ ಕ್ವಾರಂಟೈನ್‌ಗೆ ಒಳಪಟ್ಟಿದ್ದರೆ ಎಂದು ತಿಳಿದುಕೊಳ್ಳುವಂತೆ ಆದೇಶಿಸಲಾಗಿದೆ.
ಕೂರ್ಗ್ ಎಂದೇ ಖ್ಯಾತಿ ಪಡೆದಿರುವ ಪ್ರವಾಸಿ ತಾಣವಾದ ಕೊಡಗಿನಲ್ಲಿ ಇದೂವರೆಗೂ 3 ಕೊರೊನಾ ಪ್ರಕರಣಗಳು ಮಾತ್ರ ದಾಖಲಾಗಿದ್ದು, ಸೋಂಕನ್ನು ನಿಯಂತ್ರಸುವಲ್ಲಿ ಅಲ್ಲಿಯ ಜಿಲ್ಲಾಧಿಕಾರಿಯಾಗಿರುವ ಅನ್ನೀಸ್ ಪ್ರಯತ್ನ ಯಶಸ್ವಿಯಾಗಿದೆ. ಬಡತನದ ವಿರುದ್ಧ ಹೋರಾಡಿ ಸಾಧನೆ ಮಾಡಿರುವ ಅನ್ನೀಸ್ ಅವರು ಕೊರೊನಾ ವಿರುದ್ಧದ ಹೋರಾಟದಲ್ಲಿಯೂ ಸಾಧನೆ ಮಾಡಿ ಯಶಸ್ವಿಯಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆಗಳು ಕೇಳಿಬರುತ್ತಿವೆ.
ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಅನ್ನೀಸ್ ಅವರು ಬಡತನದ ವಿರುದ್ಧ ಹೇಗೆ ಹೋರಾಡಿದರು ಮತ್ತು ಹೇಗೆ ಕನಸನ್ನು ಸಾಧಿಸಿದರು ಎಂಬ ಕಥೆಯನ್ನು ಹಂಚಿಕೊಂಡಿದ್ದಾರೆ.
https://www.facebook.com/TheSochle/posts/2637421466577720

