ಕೊರೊನಾ ಸಂಕಷ್ಟ: ಮೈಸೂರು ಜಂಬೂಸವಾರಿ ರದ್ದಾಗುವ ಸಾಧ್ಯತೆ!

ಜಗತ್ತಿನಾದ್ಯಂತ ವ್ಯಾಪಿಸಿರುವ ಕೊರೊನಾ ಸೋಂಕಿನಿಂದ ವಿಶ್ವದಾದ್ಯಂತ ಜನರು ಭಯ ಭೀತರಾಗಿದ್ದಾರೆ. ಕೊರೊನಾ ಸೋಂಕಿನ ನಿಯಂತ್ರಣಕ್ಕಾಗಿ ಜನರು ಗುಂಪು ಸೇರುವುದನ್ನು ನಿಚೇಧಿಸಲಾಗಿದ್ದು, ನೂರಕ್ಕೂ ಹೆಚ್ಚಿನ ಜನರು ಒಂದೆಡೆ ಸೇರುವಂತಿಲ್ಲ ಎಂದು ಹೇಳಲಾಗಿದೆ. ಈ ಕಾರಣದಿಂದ ಲಕ್ಷಾಂತರ ಜನರು ಸೇರುವ ವಿಶ್ವವಿಖ್ಯಾತ ಮೈಸೂರಿನ ದಸರಾ ಜಂಬೂಸವಾರಿ ಯನ್ನು ಈ ವರ್ಷ ರದ್ದುಗೊಳಿಸುವ ಸಾಧ್ಯತೆ ಇದೆ.

ಈ ವೇಳೆಗಾಗಲೇ ದಸರಾ ಉತ್ಸವದ ಕಸರತ್ತು ಮೈಸೂರಿನಲ್ಲಿ ಆರಂಭವಾಗಬೇಕಿತ್ತು. ಆದರೆ, ಕೊರೊನಾ ಕಾರಣದಿಂದಾಗಿ ಯಾವುದೇ ಸಿದ್ದತೆಗೂ ಜಿಲ್ಲಾಡಳಿತ ಮುಂದಾಗಿಲ್ಲ. ದಸರಾವನ್ನು ಸರಳವಾಗಿ ಆಚರಿಸಿದರೂ ಜಂಬೂ ಸವಾರಿಗೆ ಅಗತ್ಯವಿರುವ ಸಿದ್ದತೆ ಹೆಚ್ಚಿನ ಸಮಯಾವಕಾಶ ಬೇಕಾಗುತ್ತದೆ. ಹಾಗಾಗಿ, ಈ ವಿಚಾರವಾಗಿ ಜಿಲ್ಲಾಡಳಿತ ಮೌನವಾಗಿದ್ದು, ಜಂಬೂ ಸವಾರಿ ರದ್ದಾಗುವ ಸಾಧ್ಯತೆಯನ್ನು ಸೂಚಿಸಿದೆ.

ದಸರಾ ಉತ್ಸವದ ದಿನದಂದು ಮೈಸೂರು ಅರಮನೆಯಿಂದ ಬನ್ನಿ ಮಂಟಪದವರೆಗೆ ಅಂಬಾರಿಯನ್ನು ಹೊತ್ತ ಗಜಪಡೆ ಸಾಗಲಿದೆ. ಅದಕ್ಕಾಗಿ ಅಂಬಾರಿಯನ್ನು ಹೊರುವ ಆನೆ ಮತ್ತು ಅದಕ್ಕೆ ಸಾತ್‌ ಕೊಡುವ ಆನೆಗಳಿಗೆ ದಸರಾ ಮುನ್ನವೇ ತರಬೇತಿ ನೀಡಲಾಗುತ್ತದೆ. ಈ ತರಬೇತಿ ಆಗಸ್ಟ್‌ ವೇಳೆಗೆ ಆರಂಭವಾಗುತ್ತಿತ್ತು. ಅದಕ್ಕಾಗಿ ಆಗಸ್ಟ್‌ ಮೊದಲ ವಾರವೇ ವಿವಿಧ ಆನೆ ಬಿಡಾರಗಳಿಂದ ಆನೆಗಳು ಮೈಸೂರಿಗೆ ಕರೆತರಬೇಕಿತ್ತು. ಆದರೆ, ಇನ್ನೂ ಆನೆಗಳು ಮೈಸೂರಿಗೆ ಬಾರದೇ ಇರುವುದರಿಂದಾಗಿ ಜಂಬೂ ಸವಾರಿ ನಡೆಯುವ ಸಾಧ್ಯತೆ ಇಲ್ಲ ಎನ್ನಲಾಗಿದೆ.

ಆನೆಗಳಿಗೆ ತರಬೇತಿ ನೀಡಲು ನಮಗೆ 70 ದಿನ ಸಮಯಬೇಕು. ಅದಕ್ಕಾಗಿ ಆನೆಗಳನ್ನು ಮೈಸೂರಿಗೆ ಕರೆತರಲು ಮೈಸೂರು ಜಿಲ್ಲಾಧಿಕಾರಿಯವರು ಅರಣ್ಯ ಇಲಾಖೆಗೆ ಪತ್ರ ಬರೆಯಬೇಕು. ಆದರೆ ಇದುವರೆಗೂ ಮೈಸೂರು ಡಿಸಿಯಿಂದ ಇದೂವರೆಗೂ ಯಾವುದೇ ಪತ್ರ ಬಂದಿಲ್ಲ. ಹಾಗಾಗಿ ಆನೆಗಳನ್ನು ಮೈಸೂರಿಗೆ ಕರೆತರಲಾಗಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಬಾರಿಯ ದಸರಾ ಉತ್ಸವ ಅಕ್ಟೋಬರ್ 25ರಂದು ನಡೆಯಲಿದೆ. ಪ್ರತಿ ವರ್ಷವೂ ಜಂಬೂ ಸವಾರಿ ನೋಡಲು ಸುಮಾರು 35 ರಿಂದ 40 ಲಕ್ಷ ಜನರು ಮೈಸೂರಿಗೆ ಬರುತ್ತಾರೆ. ಈ ವರ್ಷ ಬರುವವರ ಸಂಖ್ಯೆಯಲ್ಲಿ ಕೊಂಚ ಇಳಿಕೆಯಾಗಬಹುದಾದರೂ ಬೃಹತ್ ಪ್ರಮಾಣದ ಜನಸಂಖ್ಯೆ ಸೇರುವ ಸಾಧ್ಯತೆ ಇದೆ. ಹೀಗಾಗಿ ಜಂಬೂ ಸವಾರಿ ನಡೆಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಬೇಕು ಎಂದು ಹಿರಿಯ ಐಎಫ್ ಎಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈಗಾಗಲೇ ದಸರಾದಲ್ಲಿ ನಡೆಯುವ ಜಾನಪದ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ. ಅಂತೆಯೇ ಜಂಬೂ ಸವಾರಿ ನಡೆಸುವುದನ್ನೂ ಈ ಬಾರಿ ಕೈಬಿಡಬೇಕು ಎಂದು ಹಲವರು ಹೇಳಿದ್ದಾರೆ.

04 ಶತಮಾನಗಳಿಂದ ನಿರಂತರವಾಗಿ ನಡೆಯುತ್ತಿರುವ ಜಂಬೂ ಸವಾರಿ ಉತ್ಸವವು, 1953ರಲ್ಲಿ  ಮೊದಲ ಬಾರಿಗೆ ರದ್ದಾಗಿತ್ತು. ಆ ಸಂದರ್ಭದಲ್ಲಿ ಅರಮನೆ ಹೊರಭಾಗ ದಲಿತ ಕುಸ್ತಿಪಟುಗಳು ಮತ್ತು ಮೇಲ್ಜಾತಿ ಸವರ್ಣಿಯರ ನಡುವೆ ನಡೆದ ಘರ್ಷಣೆಯಲ್ಲಿ ಕೆಲವರು ಸಾವನ್ನಪ್ಪಿದ್ದರು. ಹಾಗಾಗಿ ಅಂದು ಜಂಬೂ ಸವಾರಿ ರದ್ದಾಗಿತ್ತು. ಅದಾದ ನಂತರ ಈ ವರ್ಷ ಮತ್ತೊಮ್ಮೆ ರದ್ದಾಗುವ ಸಾಧ್ಯತೆಯಿದೆ.


Read Also:  ಒಂದೇ ತಿಂಗಳಿನಲ್ಲಿ 50 ಲಕ್ಷ ಉದ್ಯೋಗ ನಷ್ಟ: 4 ತಿಂಗಳಲ್ಲಿ ಉದ್ಯೋಗ ಕಳೆದುಕೊಂಡವರ ಸಂಖ್ಯೆ 1.89 ಕೋಟಿ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights