ಕೊರೋನ ಸಾಂಕ್ರಾಮಿಕ: ಇಸ್ರೇಲಿ ಪ್ರಧಾನಿ ಭ್ರಷ್ಟಾಚಾರ ಆರೋಪ ವಿಚಾರಣೆ ಮುಂದಕ್ಕೆ
ಇಸ್ರೇಲಿ ಪ್ರಧಾನಿ ಬೆಂಜಮಿನ್ ನೇತನ್ಯಾಹು ಅವರ ಮೂರು ಭ್ರಷ್ಟಾಚಾರ ಪ್ರಕರಣಗಳ ವಿಚಾರಣೆ ಮಾರ್ಚ್ 17ರಂದು ಆರಂಭವಾಗಬೇಕಿತ್ತು. ಆದರೆ ಈಗ ವಿಚಾರಣೆಯನ್ನು ಕೊರೋನ ಸಾಂಕ್ರಾಮಿಕ ಕಾರಣಕ್ಕೆ ಸುಮಾರು ಎರಡು ತಿಂಗಳುಗಳ ಕಾಲ ಮುಂದೂಡಲಾಗಿದೆ. ಮೇ 24ಕ್ಕೆ ವಿಚಾರಣೆ ಪ್ರಾರಂಭವಾಗಲಿದೆ.
ನೇತನ್ಯಾಹು ಅವರ ಆಪ್ತರಾದ ನ್ಯಾಯ ಸಚಿವ ಅಮೀರ್ ಒಹಾನ ಅವರು ಭಾನುವಾರ ಕೊರೋನ ತಡೆಗೆ ತೆಗೆದುಕೊಳ್ಳುತ್ತಿರುವ ತುರ್ತು ಕ್ರಮಗಳ ಬಗ್ಗೆ ವಿವರಿಸಿ, ಇದು ಇಸ್ರೇಲಿ ಕೋರ್ಟ್ ಗಳ ಕಾರ್ಯಕ್ಕೂ ತಡೆಯಾಗಲಿದೆ ಎಂದಿದ್ದರು. ನಂತರ ಇದನ್ನು ಸ್ಪಷ್ಟಪಡಿಸಿದ್ದ ಒಹಾನ, ಸಮಿತಿಯಲ್ಲಿ ಇದ್ದ ನ್ಯಾಯಧೀಶರ ನಿರ್ದೇಶನದಂತೆ ವಿಚಾರಣೆಯನ್ನು ಮುಂದೂಡಲಾಗಿದೆ, ಯಾವುದೇ ರಾಜಕಾರಣಿಗಳ ಹಸ್ತಕ್ಷೇಪ ಇಲ್ಲ ಎಂದಿದ್ದರು.
ಈಗಿನ ಘೋಷಣೆಯಂತೆ, ತುರ್ತು ವಿಚಾರಣೆ ಹೊರತುಪಡಿಸಿ ಕೋರ್ಟ್ ನ ಎಲ್ಲ ಚಟುವಟಿಕೆಗಳು ಸ್ಥಗಿತಗೊಳ್ಳಲಿವೆ. ಪ್ರಧಾನಿಯವರ ವಿಚಾರಣೆ ಮುಂದೂಡಲಾಗಿರುವುದಕ್ಕೆ ಪರ ವಿರೋಧ ಅಭಿಪ್ರಾಯಗಲೂ ವ್ಯಕ್ತವಾಗಿವೆ.

