ಗೌರಿ ಲಂಕೇಶ್ ಮತ್ತು ಎಂ.ಎಂ ಕಲ್ಬುರ್ಗಿ ಅವರ ಹತ್ಯೆಗಳ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳವು (ಎಸ್‌ಐಟಿ) ಗೌರಿ ಲಂಕೇಶ್ ಕೊಲೆ ಪ್ರಕರಣದಲ್ಲಿ ಪರಾರಿಯಾಗಿದ್ದ ಇಬ್ಬರು ಪ್ರಮುಖ ಆರೋಪಿಗಳಲ್ಲಿ ಒಬ್ಬರಾದ ರುಶಿಕೇಶ್ ದಿಯೋಡಿಕರ್‌ನನ್ನು ಗುರುವಾರ ಬಂಧಿಸಿದೆ.

ಇಬ್ಬರು ಆರೋಪಿಗಳಿಗಾಗಿ ಹುಡುಕುತ್ತಿದ್ದ ಎಸ್‌ಐಟಿ, 2019 ರ ಡಿಸೆಂಬರ್‌ನಲ್ಲಿ ರುಶಿಕೇಶ ದಿಯೋಡಿಕರ್‌ನ ಜಾಡು ಹಿಡಿದು ಕೊನೆಗೂ ಗುರುವಾರ ಬಂಧಿಸಲಾಯಿತು. ಜಾರ್ಖಂಡ್‌ನ ಧನ್‌ಬಾದ್ ಬಳಿಯ ಸಣ್ಣ ಪಟ್ಟಣವಾದ ಕಟ್ರಾಸ್‌‌ನಲ್ಲಿ ರುಶಿಕೇಶ್ ತಲೆಮರೆಸಿಕೊಂಡು ಪುಸ್ತಕದಂಗಡಿಯಲ್ಲಿ ಕೆಲಸ ಮಾಡುತ್ತಿದ್ದ.

ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯ 44 ವರ್ಷದ ರುಶಿಕೇಶ್ ದಿಯೋಡಿಕರ್, ಮುರಳಿ ಮತ್ತು ಶಿವ ಎಂಬ ಹೆಸರಿನಿಂದ ತಪ್ಪಿಸಿಕೊಂಡಿದ್ದ. 2013 ಮತ್ತು 2017 ರ ನಡುವೆ ಹತ್ಯೆಯಾದ ಡಾ. ನರೇಂದ್ರ ದಾಬೋಲ್ಕರ್, ಗೋವಿಂದ್ ಪನ್ಸರೆ, ಎಂಎಂ ಕಲ್ಬುರ್ಗಿ ಮತ್ತು ಗೌರಿ ಲಂಕೇಶ್ ಅವರ ಕೇಸುಗಳಲ್ಲಿ ಈತನದು ಪ್ರಧಾನ ಪಾತ್ರವಿತ್ತು.

ಗೌರಿ ಲಂಕೇಶ್ ಕೊಲೆ ಪ್ರಕರಣದ ಚಾರ್ಜ್‌ಶೀಟ್‌ನಲ್ಲಿ ಆತನ ಪಾತ್ರದ ಬಗ್ಗೆ ಹಲವಾರು ಉಲ್ಲೇಖಗಳಿವೆ. ಈ ಪ್ರಕರಣದ ಬಹು ಪ್ರಮುಖ ಆರೋಪಿಗಳಾದ ಶರದ್ ಕಲಾಸ್ಕರ್, ವಾಸುದೇವ್ ಸೂರ್ಯವಂಶಿ, ಕರ್ನಾಟಕದ ಗ್ಯಾಂಗ್‌ಗೆ ನೇಮಕಾತಿಯಾದ ಸುಜಿತ್ ಕುಮಾರ್ ಮತ್ತು ಮನೋಹರ್ ಎಡಾವ್‌ಗೆ ದಿಯೋಡಿಕರ್ ಸೈದ್ಧಾಂತಿಕ ಪ್ರೇರಕನಾಗಿದ್ದ ಮತ್ತು ನೇಮಕಾತಿ ಮಾಡಿದ್ದ ಎಂದು ತಿಳಿದುಬಂದಿದೆ.

ವಿಚಾರವಾದಿಗಳನ್ನು ಕೊಲ್ಲುವ ಗ್ಯಾಂಗ್‌ನಲ್ಲಿ ಡಾ. ವೀರೇಂದ್ರ ತಾವ್ಡೆ ಮತ್ತು ಅಮೋಲ್ ಕೇಲ್ ನಂತರದ ಸ್ಥಾನದಲ್ಲಿ ದಿಯೋಡಿಕರ್‌ ಇದ್ದ. ಈತ ನಾಲ್ಕು ಕೊಲೆಗಳ ಪಿತೂರಿ ಮತ್ತು ಮರಣಕ್ಕೆ ಕಾರಣವಾದವ. ಈ ಕೇಸುಗಳಲ್ಲಿ ಅಷ್ಟೆಲ್ಲಾ ಬಂಧನಗಳ ನಂತರವೂ ಸಹ ಗ್ಯಾಂಗ್ ಅನ್ನು ಮರುರೂಪಿಸಲು ಮತ್ತು  ವಿಚಾರವಾದಿಗಳನ್ನು ಕೊಲ್ಲುವ ಗುರಿಯನ್ನು ಮುಂದುವರೆಸುವ ಸಾಮರ್ಥ್ಯವನ್ನು ಈತ ಹೊಂದಿದ್ದರಿಂದ ದಿಯೋಡಿಕರ್ ಬಂಧನ ಬಹಳ ಮುಖ್ಯದ್ದಾಗಿದೆ ಎಂದು ಎಂದು ಎಸ್‌ಐಟಿಯ ಹಿರಿಯ ಅಧಿಕಾರಿಯೊಬ್ಬರು ದಿ ಹಿಂದೂ ಪತ್ರಿಕೆಗೆ ತಿಳಿಸಿದ್ದಾರೆ.

ರುಶಿಕೇಶ ದಿಯೋಡಿಕರ್‌ನನ್ನು ಜಾರ್ಖಂಡ್‌ನ ಕತ್ರಾಸ್‌ನ ಸ್ಥಳೀಯ ನ್ಯಾಯಾಲಯದಲ್ಲಿ ಶುಕ್ರವಾರ ಹಾಜರುಪಡಿಸಲಾಗುವುದು ಮತ್ತು ಸಾರಿಗೆ ವಾರಂಟ್‌ನಲ್ಲಿ ಶನಿವಾರದೊಳಗೆ ಬೆಂಗಳೂರಿಗೆ ಕರೆತರಲಾಗುವುದು. ಶನಿವಾರ ನಗರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಎಸ್‌ಐಟಿ ಅಧಿಕಾರಿಗಳು ತಿಳಿಸಿದ್ದಾರೆ.

ಡಿಯೋಡಿಕರ್ ಬಂಧನದೊಂದಿಗೆ, ಎಸ್‌ಐಟಿಯ ಮುಂದಿನ ಬೇಟೆ ವಿಕಾಸ್ ಪಾಟೀಲ್ ಅಲಿಯಾಸ್ ನಿಹಾಲ್ ಅಲಿಯಾಸ್ ದಾದಾ ಆಗಿದ್ದು ಆತ ಇನ್ನೊಬ್ಬ ಪ್ರಮುಖ ಆರೋಪಿಯಾಗಿದ್ದರೂ ಇನ್ನೂ ಸಿಕ್ಕಿಲ್ಲ.