ಜಾರ್ಖಂಡ್: ಇಲ್ಲಿಯವರೆಗೂ 137 ಜನಕ್ಕೆ ಮಾತ್ರ ಕೊರೊನ ಸೋಂಕು ಪತ್ತೆ ಪರೀಕ್ಷೆ; ಒಂದೂ ಸೋಂಕಿತ ಪ್ರಕರಣ ಇಲ್ಲ

ಶನಿವಾರದವರೆಗೆ ಜಾರ್ಖಂಡ್ ರಾಜ್ಯದಲ್ಲಿ ಕೇವಲ 137 ಜನರಿಗೆ ಮಾತ್ರ ಕೊರೊನ ಸೋಂಕು ಪತ್ತೆ ಪರೀಕ್ಷೆ ಮಾಡಲಾಗಿದ್ದು ಇನ್ನೂ ಯಾವುದೇ ಪ್ರಕರಣ ದಾಖಲಾಗಿಲ್ಲ. 2011ರ ಪ್ರಕಾರ 3.2 ಕೋಟಿ ಜನಸಂಖ್ಯೆ ಇರುವ ರಾಜ್ಯದಲ್ಲಿ ಪರೀಕ್ಷೆಗಳ ಪ್ರಮಾಣ ಆತಂಕ ತರಿಸುತ್ತದೆ ಎನ್ನುತ್ತಾರೆ ಪರಿಣಿತರು.

“ಜಾರ್ಖಂಡ್ ಜನರು ಟೈಮ್ ಬಾಂಬ್ ಮೇಲೆ ಕುಳಿತಿರುವ ಸಾಧ್ಯತೆ ಇದೆ” ಎಂದು ಭಾರತ ಸರ್ಜನ್ ಗಳ ಸಂಘದ ಜಾರ್ಖಂಡ್ ವಿಭಾಗದ ಕಾರ್ಯದರ್ಶಿ ಡಾ. ಮೊಹಮದ್ ಆಜಾದ್ ಹೇಳಿರುವುದಾಗಿ ದ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ. “ರಾಜ್ಯಕ್ಕೆ ವಲಸೆ ಕಾರ್ಮಿಕರು ಹಿಂದಿರುಗಿತ್ತಿರುವ ಸಂಖ್ಯೆ ಮತ್ತು ಒಟ್ಟಾರೆ ಜನಸಂಖ್ಯೆಯನ್ನು ನೋಡಿದರೆ ಈಗ ಮಾಡುತ್ತಿರುವ ಪರೀಕ್ಷೆಗಳು ಅತೀವ ಕಡಿಮೆ. ನಾವು ಹೆಚ್ಚೆಚ್ಚು ಪರೀಕ್ಷೆ ಮಾಡಬೇಕು” ಎಂದು ಅವರು ಹೇಳಿದ್ದಾರೆ.

ಕಳೆದ ಕೆಲವು ದಿನಗಳಲ್ಲಿ ಸುಮಾರು 45,197 ವಲಸೆ ಕಾರ್ಮಿಕರು ರಾಜ್ಯಕ್ಕೆ ಹಿಂದಿರುಗಿದ್ದಾರೆ ಎಂದು ತಿಳಿದುಬಂದಿದೆ. ಕೆಲವರನ್ನು ಉಷ್ಣಾಂಶ ತಿಳಿಯುವ ಮಾಪಕಗಳಿಂದ ಪರೀಕ್ಷೆ ಮಾಡಿದ್ದರು ಬಹುತೇಕರನ್ನು ಯಾವುದೇ ರೀತಿಯ ಪರೀಕ್ಷೆಗೆ ಒಳಪಡಿಸಿಲ್ಲ ಎಂದು ತಿಳಿದುಬಂದಿದೆ. ಆರೋಗ್ಯ ಸಚಿವ ಬನ್ನಾ ಗುಪ್ತ ಈ ಬಗ್ಗೆ ಪ್ರತಿಕ್ರಿಯಿಸಿದ್ದು “ಮೊದಲೇ ವಿವಿಧ ಜಿಲ್ಲೆಗಳಲ್ಲಿ ಪರೀಕ್ಷೆ ಮಾಡಲು ಕೇಳಬೇಕಿತ್ತು. ಆಗ ಈ ಕಾರ್ಮಿಕರು ಎಲ್ಲ ಕಡೆಗೂ ಚದುರಿ ಹೋಗಿದ್ದಾರೆ. ಆದರೂ ನಾವು ಅವರನ್ನೆಲ್ಲ ಪತ್ತೆ ಹಚ್ಚಿ ಮಾಹಿತಿ ನೀಡಲು ಪ್ರಯತ್ನಿಸುತ್ತಿದ್ದೇವೆ. ಆದರೆ ಎಲ್ಲಿಯೂ ಕೊರೊನ ಕಾಣಿಸಿಕೊಂಡಿರುವ ಪ್ರಕರಣಗಳು ವರದಿಯಾಗಿಲ್ಲ” ಎಂದಿದ್ದಾರೆ.

ಮೂಲಗಳ ಪ್ರಕಾರ ಇಡೀ ಜಾರ್ಖಂಡ್ ರಾಜ್ಯದಲ್ಲಿ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳನ್ನು ಸೇರಿಸಿ ಕೆಲವಳ 200 ಕೃತಕ ಉಸಿರಾಟದ ಉಪಕರಣಗಳು ಲಭ್ಯವಿವೆ. ಅವುಗಳಲ್ಲಿ 100 ವೆಂಟಿಲೇಟರ್ ಗಳನ್ನು ದುರಸ್ತಿಗೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.

ಕೊರೊನ ಸೋಂಕಿತ ಗಂಭೀರ ಪ್ರಕರಣಗಳಲ್ಲಿ ಕೃತಕ ಉಸಿರಾಟದ ವ್ಯವಸ್ಥೆ ಅತ್ಯವಶ್ಯಕ. ಕೊರೊನ ಲಕ್ಷಣಗಳು ಕಂಡುಬಂದರೆ ಜನರು ವೈದ್ಯರನ್ನು ಸಂಪರ್ಕಿಸಲು ಉಚಿತ ಸಹಾಯವಾಣಿಗಳನ್ನು ತೆರೆದಿದ್ದೇವೆ. ಇಲ್ಲಿಯವರೆಗೂ 5 ಸಾವಿರಕ್ಕೂ ಹೆಚ್ಚು ಕರೆಗಳನ್ನು ಸ್ವೀಕರಿಸಿರುವುದಾಗಿ ಆರೋಗ್ಯ ಸಚಿವರು ತಿಳಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights