ಪಶುವೈದ್ಯೆ ಕೊಲೆ ಆರೋಪಿಗಳ ಎನ್‌ಕೌಂಟರ್‌ ಮಾಡಿದ್ದು ತಪ್ಪಿಸಿಕೊಂಡಿದ್ದಕ್ಕಾ..? ಅತ್ಯಾಚಾರದ ಆರೋಪ ಇರೋದಕ್ಕಾ..?

ಇಡೀ ದೇಶವನ್ನೇ ತಲ್ಲಣಗೊಳಿಸಿದ್ದ ಹೈದರಾಬಾದ್ ಪಶುವೈದ್ಯೆ ಸಾಮೂಹಿಕ ಅತ್ಯಾಚಾರ ಕೊಲೆ ಪ್ರಕರಣದ ನಾಲ್ವರು ಆರೋಪಿಗಳನ್ನು ಪೊಲೀಸರು ಇಂದು ಬೆಳಿಗ್ಗೆ 3:30ರ ಸುಮಾರಿಗೆ ಎನ್‍ಕೌಂಟರ್ ಮಾಡಿ ಹತ್ಯೆಗೈದಿದ್ದಾರೆ.

ನಮ್ಮ ದೇಶದಲ್ಲಿ ನಾವು ಹೆಣ್ಣಿಗೆ ಅತ್ಯುನ್ನತವಾದ ಗೌರವ, ಸ್ಥಾನವನ್ನ ನೀಡಿದ್ದೇವೆ. ಆಕೆಯ ಗೌರವಕ್ಕೆ ಧಕ್ಕೆ ಬರುವಂತೆ ನಡೆದುಕೊಂಡರೆ ಅಂಥವರನ್ನ ಪ್ರಶ್ನಿಸುವ ಹಕ್ಕನ್ನ ಶಿಕ್ಷೆ ನೀಡುವ ಅಧಿಕಾರವನ್ನ ನ್ಯಾಯಾಲಯ ಹೊಂದಿದೆ. ಹೀಗಾಗಿ ನಮ್ಮ ದೇಶದ ಕಾನೂನಿನಲ್ಲಿ ಯಾರನ್ನ ಯಾರೂ ಕೂಡ ಹತ್ಯೆ ಮಾಡುವ ಅಧಿಕಾರವನ್ನ ಹೊಂದಿಲ್ಲ. ಹಾಗೊಂದುವೇಳೆ ಅತ್ಯಾಚಾರ, ಹತ್ಯೆಯಂಥಹ ಘೋರ ಅಪರಾಧ ಮಾಡಿದ್ದು ಸಾಬೀತಾದರೆ ಅಂಥವರನ್ನ ಗಲ್ಲಿಗೇರಿಸುವ ಅಧಿಕಾರ ನಮ್ಮ ದೇಶದ ಕಾನೂನಿಗಿದೆ.

ಹೀಗಿರುವಾಗ ಹೈದರಾಬಾದ್ ನ ಪಶುವೈದ್ಯೆಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದರು ಎನ್ನುವ ಆರೋಪಿಗಳನ್ನ ಅಪರಾಧಿಗಳು ಎಂದು ಸಾಬೀತಾಗದೇ ಎನ್ ಕೌಂಟರ್ ಮಾಡಿದ್ದು ಎಷ್ಟು ಸರಿ. ನಾವಿಲ್ಲಿ ಆರೋಪಿಗಳ ಪರವಾಗಿ ಮಾತನಾಡುತ್ತಿಲ್ಲ. ಬದಲಿಗೆ ವಾಸ್ತವವನ್ನ ತಾಳೆ ಹಾಕಿ ನೋಡುತ್ತಿದ್ದೇವೆ.

ಒಂದು ವೇಳೆ ಆರೋಪಿಗಳು ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದೇ ಆದರೆ ಅವರ ಮೇಲೆ ಫೈಯರಿಂಗ್ ಮಾಡಿದ್ದು ಸರಿ ಇರಬಹುದು. ಆದರೆ ಆ ಆರೋಪಿಗಳು ಅತ್ಯಾಚಾರಿಗಳು ಅವರನ್ನ ಎನ್ ಕೌಂಟರ್ ಮಾಡಬೇಕು ಎನ್ನುವ ಮನೋಭಾವನೆಯಿಂದ ಪೊಲೀಸರು ಎನ್ ಕೌಂಟರ್ ಮಾಡಿದ್ದರೆ, ಅದು ಕಾನೂನಿನ ಪ್ರಕಾರ ತಪ್ಪಾಗಬಹುದು. ಯಾಕೆಂದರೆ ಅತ್ಯಾಚಾರ ಮಾಡಿದ್ದರು ಎನ್ನುವ ಆರೋಪಿಗಳು ಕಾನೂನಿನ ಪ್ರಕಾರ ಅಪರಾಧಿಗಳಲ್ಲಾ. ಅವರು ಅಪರಾಧಿಗಳು ಎನ್ನುವುದಕ್ಕೆ ಕಾನೂನು ವಿಚಾರಣೆಯಾಗಬೇಕು. ಅದು ಸಾಬೀತಾದರೆ ಮಾತ್ರ ಅವರಿಗೆ ಕಾನೂನು ಪ್ರಕಾರ ಶಿಕ್ಷೆ ನೀಡಬೇಕು ಅಲ್ವಾ..?

ಆರೋಪಿಗಳನ್ನ ಅಪರಾಧಿಗಳು ಎಂದು ನಾವ್ಯಾರು ಕೂಡ ವಿಚಾರಣೆ ತನಿಖೆಯಾಗದೇ ಹೇಳಲು ಸಾಧ್ಯವೇ ಇಲ್ಲ. ಒಂದು ವೇಳೆ ನ್ಯಾಯಾಲಯ ವಿಚಾರಣೆಯಲ್ಲಿ ಆರೋಪಿಗಳು ನಿರಪರಾಧಿಗಳು ಆಗಿದ್ದರೆ ಎನ್ ಕೌಂಟರ್ ಮಾಡಿದ ಆರೋಪಿಗಳನ್ನು ಬದುಕುಳಿಸಲು ಸಾಧ್ಯವೇ..?

ನಮ್ಮಲ್ಲಿ ಒಂದು ಮಾತಿದೆ ತಪ್ಪಿಗೆ ಶಿಕ್ಷೆಯಾಗದೇ ಇದ್ದರೂ ಪರವಾಗಿಲ್ಲ. ಆದರೆ ನಿರಪರಾಧಿಗಳಿಗೆ ಮಾತ್ರ ಶಿಕ್ಷೆ ಆಗಕೂಡದು. ಹೀಗಾಗಿ ಪಶುವೈದ್ಯೆ ಅತ್ಯಾಚಾರ ಹಾಗೂ ಕೊಲೆ ಆರೋಪಿಗಳ ವಿಚಾರದಲ್ಲಿ ಹೀಗೇನಾದ್ರು  ನಿರಪರಾಧಿಗಳಿಗೆ ಶಿಕ್ಷೆ ಆಗಿಬಿಟ್ಟಿದ್ದರೆ ? ನಿರಪರಾಧಿಗಳನ್ನ ಕಳೆದುಕೊಂಡ ಪಾಲಕರು ಯಾರಿಗೆ ಶಾಪ ಹಾಕಬೇಕು..? ಯಾರನ್ನ ದೂಷಿಸಬೇಕು..? ಯಾರಿಗೆ ಕೇಳಬೇಕು..? ಇದು ವಿದ್ಯಾವಂತರಾದ ನಾವು ನೀವೆಲ್ಲಾ ಯೋಚನೆ ಮಾಡಬೇಕಾದ ವಿಚಾರ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights