ಪಾದರಾಯನಪುರ ಪ್ರಕರಣ : ಬಿಎಸ್‌ವೈ ಹಣಿಯುವುದಕ್ಕೆ ಬಳಸಿದರೆ ಪಕ್ಷ ಬಾಂಧವರು?

ಭಾನುವಾರ ಸಂಜೆ ಬೆಂಗಳೂರಿನ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಪಾದರಾಯನಪುರ ವಾರ್ಡ್‌ನಲ್ಲಿ ಗಲಾಟೆ ನಡೆದಿದೆ. ಕೊರೊನಾ ಸೋಂಕು ತಗುಲಿದೆ ಶಂಕಿತರ ಕ್ವಾರಂಟೈನ್‌ಗಾಗಿ ಕರೆತರಲು ಆಶಾ ಕಾರ್ಯಕರ್ತರು, ಬಿಬಿಎಂಪಿ ಸಿಬ್ಬಂದಿ, ಪೊಲೀಸರು ವಾರ್ಡ್‌ಗೆ ಭೇಟಿ ನೀಡಿದ್ದರು. ಈ ವೇಳೆ ಅಲ್ಲಿ ಐವತ್ತು ಯುವಕರು ದಾಂಧಲೆ ಎಬ್ಬಿಸಿದ ಘಟನೆ ನಡೆದಿದೆ. ಆಶಾ ಕಾರ್ಯಕರ್ತರು, ವೈದ್ಯರ ಮೇಲೆ ಹಲ್ಲೆ ಯತ್ನ ನಡೆದಿದೆ ಎನ್ನಲಾಗಿದೆ.

ನಿನ್ನೆ ರಾತ್ರಿಯಿಂದ ಇಂದು ಈ ಸುದ್ದಿ ಬರೆಯುವವರೆಗೆ ಮಾಧ್ಯಮಗಳಲ್ಲಿ ಈ ಪ್ರಕರಣ ಪಡೆದಿರುವ ತಿರುವುಗಳು ಅಚ್ಚರಿ ಮತ್ತು ಆತಂಕ ಮೂಡಿಸುವಂತಹವು. ಕನ್ನಡ ಸುದ್ದಿವಾಹಿನಿಗಳು ಇದನ್ನೊಂದು ಕೋಮುಪ್ರಚೋದಿತ ಆಯಾಮದಲ್ಲೇ ನೋಡುತ್ತಿದ್ದು, ಉತ್ಪ್ರೇಕ್ಷಿತ, ವೈಭವೀಕೃತ ವರದಿಗಳನ್ನು ಬಿತ್ತರಿಸುತ್ತಿವೆ. ಇದನ್ನು ಜಿಹಾದ್‌ ಎಂದು, ನರಮೇಧ ಯತ್ನ ಎಂದು ಬಿಂಬಿಸುವ ಪ್ರಯತ್ನಗಳನ್ನು ಮಾಡಿವೆ.

ಸ್ಥಳೀಯ ಶಾಸಕ ಜಮೀರ್ ಅಹ್ಮದ್‌ ಖಾನ್‌, ವಾರ್ಡ್‌ನ ಕಾರ್ಪೋರೇಟ್ ಇಮ್ರಾನ್‌ ಪಾಷಾ ಅವರಿಗೆ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನವನ್ನು ಮಾಡುತ್ತಲೇ ಇವೆ. ಕೊರೊನಾ ಸೋಂಕಿಗೆ ಧರ್ಮದ ಲೇಪನ ಮಾಡಬೇಡಿ ಎಂದು ಸ್ವತಃ ಪ್ರಧಾನ ಮಂತ್ರಿಗಳು ಹೇಳಿದ್ದಾರೆ. ಗೊಂದಲ, ಆತಂಕ, ಮಾಹಿತಿಯ ಕೊರತೆಯಿಂದಾಗುತ್ತಿರುವ ಇಂತಹ ಬೆಳವಣಿಗೆಗಳನ್ನು ಸೂಕ್ತ ರೀತಿಯಲ್ಲಿ ನಿಭಾಯಿಸಬೇಕೆಂಬ ಅಭಿಪ್ರಾಯವೂ ವ್ಯಕ್ತವಾಗುತ್ತಲೇ ಇದೆ. ಆದರೆ ಹಾಲಿ ಶಾಸಕರು, ಮಂತ್ರಿಗಳು ರಾಜ್ಯದ ಮುಖ್ಯಮಂತ್ರಿಗಳ ನಿಲುವನ್ನಷ್ಟೇ ಅಲ್ಲ ಪ್ರಧಾನಿಗಳ ಮಾತುಗಳನ್ನು ಗಾಳಿ ತೂರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ.


ಎರಡು ವಾರಗಳ ಹಿಂದೆ ತಬ್ಲೀಗಿ ಸಮಾವೇಶದಿಂದ ಸೋಂಕು ಹೆಚ್ಚಿದ ಕುರಿತು ದೇಶ ವ್ಯಾಪಿ ಚರ್ಚೆ ನಡೆಯುತ್ತಿತ್ತು. ಈ ಪ್ರಕರಣವನ್ನೇ ನೆಪಮಾಡಿಕೊಂಡು ಮಾಧ್ಯಮಗಳೂ ಸೇರಿದಂತೆ ಸಮಾಜದ ಹಲವು ಸಂಘಟನೆಗಳು/ ಸಮುದಾಯಗಳು ಮುಸ್ಲಿಮರನ್ನು ಗುರಿ ಮಾಡಿಕೊಂಡು ಇದೊಂದು ಉದ್ದೇಶಿತ ಯೋಜನೆ ಎಂಬ ಅಭಿಪ್ರಾಯ ರೂಪಿಸುವ ಪ್ರಯತ್ನವನ್ನು ಮಾಡಿದ್ದವು. ಇದೇ ವೇಳೆ ಬೆಂಗಳೂರಿನಲ್ಲಿ ಸೋಂಕು ತಗುಲಿದವರ ವಿವರ ಕಲೆ ಹಾಕಲು ಹೋಗಿದ್ದ ವೈದ್ಯರು ಮತ್ತು ಆಶಾಕಾರ್ಯಕರ್ತೆಯರ ಮೇಲೆ ನಡೆದ ಹಲ್ಲೆ ಪ್ರಕರಣದ ಸಂದರ್ಭದಲ್ಲಿ ನಡೆದಿತ್ತು. ಆಗ ಕನ್ನಡದ ಪ್ರಮುಖ ಸುದ್ದಿ ವಾಹಿನಿಗಳಿಗೆ ಸಂದರ್ಶನ ನೀಡಿದ್ದ ಯಡಿಯೂರಪ್ಪನವರು ಖಡಕ್ಕಾಗಿ ಪ್ರತಿಕ್ರಿಯಿಸಿ, ಅಲ್ಪಸಂಖ್ಯಾತ ಮುಸ್ಲಿಮ್‌ ಬಾಂಧವರು ಸಹಕಾರ ಕೊಡುತ್ತಿದ್ದಾರೆ. ಅವರ ಬಗ್ಗೆ ಮಾತನಾಡಕೂಡದು’ ಎಂದು ಎಚ್ಚರಿಕೆ ನೀಡಿದ್ದರು. ಎಲ್ಲೋ ಒಂದು ಘಟನೆ ನಡೆದರೆ ಅದನ್ನು ಇಡೀ ಮುಸ್ಲಿಮ್‌ ಸಮುದಾಯಕ್ಕೆ ಆರೋಪಿಸಿದರೆ ಅಂತಹವರ ಕ್ರಮ ಕೈಗೊಳ್ಳುತ್ತೇನೆ ಎಂದಿದ್ದರು.
ಯಡಿಯೂರಪ್ಪನವರ ಈ ನಡೆಯಿಂದ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಾಚೆಗೂ ಯಡಿಯೂರಪ್ಪನವರಿಗೆ ಎಲ್ಲೆಡೆಯಿಂದ ಮೆಚ್ಚುಗೆ, ಬೆಂಬಲ ವ್ಯಕ್ತವಾಗಿತ್ತು. ಇನ್ನೊಂದೆಡೆ  ಆರ್ಥಿಕವಾಗಿ ಸಂಕಷ್ಟದಲ್ಲಿದ್ದರೂ ರಾಜ್ಯ ಸರ್ಕಾರ ಕೊರೊನಾ ಸೋಂಕು ನಿಯಂತ್ರಿಸುವಲ್ಲಿ ಕೇಂದ್ರದಿಂದ ಹೆಚ್ಚಿನ ಸಹಕಾರ ನಿರೀಕ್ಷಿಸದೆ, ಸಮರ್ಥವಾಗಿ ನಿಭಾಯಿಸಿದ್ದೂ ಮೆಚ್ಚುಗೆಗೆ ಕಾರಣವಾಗಿತ್ತು.

ಈಗ ಪಾದರಾಯನಪುರದಲ್ಲಿ ನಡೆದ ಘಟನೆ ಪಡೆದುಕೊಳ್ಳುತ್ತಿರುವ ಆಯಾಮ, ಯಡಿಯೂರಪ್ಪನವರ ನಡೆಯ ಬಗ್ಗೆ ಪಕ್ಷದೊಳಗೇ ಇರುವ ಅಸಮಾಧಾನವನ್ನು ಸ್ಪಷ್ಟವಾಗಿ ಬಿಚ್ಚಿಡುತ್ತಿದೆ.
ಮಾಧ್ಯಮಗಳಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಸಿಟಿ ರವಿ, ಶೋಭಾ ಕರಂದ್ಲಾಜೆ, ಯುವ ಭಾರತ್‌ನ ಚಕ್ರವರ್ತಿ ಸೂಲಿಬೆಲೆಯವರಿಂದ ಪ್ರತಿಕ್ರಿಯೆ ಬಿತ್ತರವಾಗುತ್ತದೆ. ಈ ಎಲ್ಲ ಹೇಳಿಕೆಗಳು ನೇರವಾಗಿ ಮುಸ್ಲಿಮ್‌ ಸಮುದಾಯವನ್ನೇ ಶಿಲುಬೆಗೇರಿಸುವ ಆಕ್ರೋಶದ ನುಡಿಗಳು.
ಬೆಳ್ತಂಗಡಿಯ ಶಾಸಕ ಹರೀಶ್‌ ಪೂಂಜಾ ತಮ್ಮ ಟ್ವೀಟ್‌ವೊಂದರಲ್ಲಿ ‘ಗುಂಡಿಟ್ಟು ಕೊಲ್ಲಬೇಕು’ ಎಂದು ಉಗ್ರವಾಗಿ ಆಗ್ರಹಿಸುತ್ತಾರೆ.

ಸಂಸದ, ಕೇಂದ್ರದಲ್ಲಿ ಸಚಿವರಾಗಿರುವ ಸುರೇಶ್‌ ಅಂಗಡಿ, ಬಸನಗೌಡಪಾಟೀಲ್‌ ಯತ್ನಾಳ್‌, ಎಂಪಿ ರೇಣುಕಾಚಾರ್ಯ, ಪ್ರಚೋದನಕಾರಿಯಾಗಿ ಹೇಳಿಕೆ ನೀಡುತ್ತಾರೆ.

https://twitter.com/CTRavi_BJP/status/1252098336263409673?s=20

ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ಡಿ ಕೆ ಶಿವಕುಮಾರ್‌ ಬಿಜೆಪಿ ನಾಯಕರ ಈ ಹೇಳಿಕೆಗಳ ಬಗ್ಗೆ ಕಟುವಾಗಿ ಟೀಕಿಸಿದ್ದೂ ಮಾಧ್ಯಮಗಳಲ್ಲಿ ವರದಿಯಾಗಿದೆ.

ಸಾರ್ವತ್ರಿಕವಾಗಿರುವ ಸೋಂಕು ಸಮಸ್ಯೆಗೆ ಕೋಮು ಬಣ್ಣ ಹಚ್ಚುವ ಪ್ರಯತ್ನವನ್ನು ಆಡಳಿತ ಪಕ್ಷದ ನಾಯಕರೇ ಮಾಡುತ್ತಿರುವುದು ಏನನ್ನು ಸೂಚಿಸುತ್ತದೆ? ಮುಖ್ಯಮಂತ್ರಿಗಳ ನಿಲುವಿಗೆ ವಿರುದ್ಧವಾದ ನಿಲುವನ್ನು ವ್ಯಕ್ತಪಡಿಸುವುದು ಏನನ್ನು ಹೇಳುತ್ತದೆ?
ಯಡಿಯೂರಪ್ಪನವರು ಆರ್ಥಿಕ ಸಂಕಷ್ಟ ಕಾಲದಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದವರು. ಅಧಿಕಾರ ಸ್ವೀಕರಿಸಿ ಮೂರು ತಿಂಗಳಲ್ಲಿ ಕೊರೊನಾ ಸೋಂಕು ರಾಜ್ಯವನ್ನೇ ಅಲುಗಾಡಿಸಲಾರಂಭಿಸಿತ್ತು. ಈ ಹೊತ್ತಿನಲ್ಲಿ ಮುಖ್ಯಮಂತ್ರಿಗೆ ಬೆಂಬಲವಾಗಿ ನಿಲ್ಲಬೇಕಾದ, ಇದೇ ನಾಯಕರು ಪ್ರಧಾನಮಂತ್ರಿಗಳ ನಿಧಿಗೆ ಹಣ ಕೇಳಿ ಪ್ರಚಾರ ನಡೆಸಿದ್ದು, ನಮ್ಮಗಳ ಕಣ್ಣ ಮುಂದೆಯೇ ಇದೆ.
ಇದೆಲ್ಲ ಏನು ಸೂಚಿಸುತ್ತದೆ? ಯಡಿಯೂರಪ್ಪನವರ ಬಗ್ಗೆ ಪಕ್ಷದೊಳಗೆ ಇರುವ ಅಸಹನೆಯನ್ನು. ಪಾದರಾಯನಪುರ ಪ್ರಕರಣದಲ್ಲಿ ನಾಯಕರು ನೀಡುತ್ತಿರುವ ಪ್ರಚೋದನಕಾರಿ ಹೇಳಿಕೆ ಯಡಿಯೂರಪ್ಪನವರನ್ನು ಇನ್ನಷ್ಟು ಇಕ್ಕಟ್ಟಿಗೆ ಸಿಲುಕಿಸುವ ಉದ್ದೇಶವನ್ನೇ ಹೊಂದಿರಬಹುದು ಎಂಬ ಅನುಮಾನ ಮೂಡಿಸದೇ ಇರುತ್ತವೆಯೇ?

    ಸುನೀಲ್ ಶಿರಸಂಗಿ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights